ದೇಶ
ಉಕ್ರೇನ್‌ಗೆ ಶಾಂತಿ ಮಾತುಕತೆಗೆ ಆಹ್ವಾನಿಸಿದ ರಷ್ಯಾ
ಮಾಸ್ಕೋ: ಸುಮಾರು ನಾಲ್ಕು ವರ್ಷಗಳಿಂದ ಮುಂದುವರಿದಿರುವ ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಶಾಂತಿ ಮಾತುಕತೆಗೆ ಉಕ್ರೇನ್ ಅನ್ನು ರಷ್ಯಾ ಅಧಿಕೃತವಾಗಿ ಆಹ್ವಾನಿಸಿದೆ. ಈ ಹಿನ್ನೆಲೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಮಾತುಕತೆಗೆ ಆಹ್ವಾನ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಯುದ್ಧದಲ್ಲಿ ಮೃತಪಟ್ಟ ಸೈನಿಕರ ಮೃತದೇಹಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆ ಎರಡೂ ದೇಶಗಳ ನಡುವೆ ಮುಂದುವರಿದಿದೆ. ಇದರ ಜೊತೆಗೆ, ಪರಸ್ಪರ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಷ್ಯಾ ಸರ್ಕಾರ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಗಳು ಶಾಂತಿ ಒಪ್ಪಂದದ ಪ್ರಯತ್ನಗಳಿಗೆ ಹೊಸ ವೇಗವನ್ನು ನೀಡಿವೆ. ಆದರೂ, ಮಾತುಕತೆಗಳ ನಿಲುವಿನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಇನ್ನೂ ಭಿನ್ನಾಭಿಪ್ರಾಯಗಳು ಮುಂದುವರೆದಿವೆ.
ಅಮೆರಿಕದ ಮಧ್ಯಸ್ಥಿಕೆಯ ನಂತರ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನೇರ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, ರಷ್ಯಾ ಮತ್ತು ಉಕ್ರೇನ್ ಸಂಧಾನ ನಿಯೋಗಗಳ ನಡುವೆ ಅಬುಧಾಬಿಯಲ್ಲಿ ಹೊಸ ಸುತ್ತಿನ ಮಾತುಕತೆ ಭಾನುವಾರ ನಡೆಯಲಿದೆ.
ಇನ್ನೊಂದೆಡೆ, ಎರಡನೇ ಮಹಾಯುದ್ಧದ ನಂತರ ಯುರೋಪಿನ ಅತಿದೊಡ್ಡ ಸಂಘರ್ಷವನ್ನು ಕೊನೆಗೊಳಿಸಲು ಒತ್ತಾಯಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶಾಂತಿ ಪ್ರಕ್ರಿಯೆಯಲ್ಲಿ ಒಳ್ಳೆಯ ಬೆಳವಣಿಗೆಗಳು ಕಂಡುಬರುತ್ತಿವೆ ಎಂದು ಹೇಳಿದ್ದಾರೆ. ಆದರೆ, ಭೂಪ್ರದೇಶ ಹಂಚಿಕೆ, ಯುದ್ಧಾನಂತರ ಉಕ್ರೇನ್‌ನಲ್ಲಿ ಅಂತರರಾಷ್ಟ್ರೀಯ ಶಾಂತಿಪಾಲಕರ ನಿಯೋಜನೆ ಹಾಗೂ ರಷ್ಯಾ ನಿಯಂತ್ರಣದಲ್ಲಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಭವಿಷ್ಯ ಸೇರಿದಂತೆ ಹಲವು ವಿಷಯಗಳಲ್ಲಿ ಇನ್ನೂ ಗಂಭೀರ ಭಿನ್ನಾಭಿಪ್ರಾಯಗಳಿವೆ.