ದೇಶ
ಶಬರಿಮಲೆ ಯಾತ್ರೆಗೆ ಎಚ್ಚರಿಕೆ! ಮೆದುಳು ತಿನ್ನುವ ಅಮೀಬಾ ಭೀತಿ – ಕೇರಳ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಪಟ್ಟಣಂತಿಟ್ಟ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ (Naegleria fowleri) ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಬರಿಮಲೆ ಐಯಪ್ಪ ಸ್ವಾಮಿ ಯಾತ್ರೆಗೆ ಆಗಮಿಸುವ ಭಕ್ತರಿಗೆ ಕೇರಳ ಸರ್ಕಾರವು ಕಟ್ಟುನಿಟ್ಟಿನ ಆರೋಗ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ನವೆಂಬರ್ 17ರಿಂದ ಆರಂಭವಾಗಲಿರುವ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಂಪಾ ನದಿಯಲ್ಲಿ ಸ್ನಾನ ಮಾಡುವುದರಿಂದ, ಸೋಂಕಿನ ಅಪಾಯ ಹೆಚ್ಚುವ ಸಾಧ್ಯತೆಯನ್ನು ಆರೋಗ್ಯ ಇಲಾಖೆ ಎಚ್ಚರಿಸಿದೆ.
Naegleria fowleri ಎಂಬ ಏಕಕೋಶ ಜೀವಿ ತಾಪಮಾನ ಹೆಚ್ಚಿರುವ, ಕಲುಷಿತ ನೀರಿನಲ್ಲಿ ಬೆಳೆಯುತ್ತದೆ. ಇದು ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸಿ ಮೆದುಳಿಗೆ ತಲುಪುತ್ತಿದ್ದು, ಪ್ರಾಣಾಂತಿಕ ಮೆದುಳುಶೋಥ (PAM) ಉಂಟುಮಾಡುತ್ತದೆ. ಸೋಂಕಿನ ಮರಣ ಪ್ರಮಾಣ 95% ಇರುವುದರಿಂದ, ಮೂಗಿಗೆ ನೀರು ಒಳಬಾರದಂತೆ ಭಕ್ತರಿಗೆ ಕಟ್ಟುನಿಟ್ಟಾಗಿ ಸಲಹೆ ನೀಡಲಾಗಿದೆ. ಸ್ನಾನದ ವೇಳೆ ನೋಸ್ ಕ್ಲಿಪ್ ಬಳಸುವುದು ಅಥವಾ ಬೆರಳಿನಿಂದ ಮೂಗನ್ನು ಮುಚ್ಚಿಕೊಳ್ಳುವಂತೆ ಸೂಚಿಸಲಾಗಿದೆ.
ಯಾತ್ರಿಕರ ಸುರಕ್ಷತೆಗೆ ಸರ್ಕಾರವು ಇನ್ನೂ ಹಲವಾರು ಅಗತ್ಯ ಸಲಹೆಗಳನ್ನು ನೀಡಿದೆ. ಯಾತ್ರೆಗೆ 15-20 ದಿನಗಳ ಮೊದಲು ದಿನಕ್ಕೆ ಕನಿಷ್ಠ 5-10 ಕಿ.ಮೀ ನಡಿಗೆ ಅಭ್ಯಾಸ ಮಾಡಬೇಕು. ಹೃದಯ, ಮಧುಮೇಹ, ರಕ್ತದೊತ್ತಡ ಇರುವವರು ವೈದ್ಯರ ಸಲಹೆ ಪಡೆದು ಮಾತ್ರ ಯಾತ್ರೆಗೆ ಬರಬೇಕು. ಪ್ಯಾರಾಸಿಟಮಾಲ್, ORS, ಬ್ಯಾಂಡೇಜ್, ಆ್ಯಂಟಿಹಿಸ್ಟಮೈನ್ ಮತ್ತು ಅಗತ್ಯ ಔಷಧಗಳ ಕಿಟ್ ಕಡ್ಡಾಯವಾಗಿ ತರಬೇಕು.
ಅರಣ್ಯ ಪ್ರದೇಶದಲ್ಲಿ ಹಾವು ಕಡಿತದ ಸಂಭವ ಇರುವುದರಿಂದ, ಸಿಬ್ಬಂದಿಯ ಸೂಚನೆ ಅನುಸರಿಸಲು ಸಲಹೆ ನೀಡಲಾಗಿದೆ. ಕಡಿತ ಸ್ಥಳವನ್ನು ಸಾಬೂನು-ನೀರಿನಿಂದ ತೊಳೆಯಬೇಕು, ಬಿಗಿಯಾಗಿ ಕಟ್ಟಬಾರದು, ಔಷಧ ನೀಡಬಾರದು. ತಕ್ಷಣ ಸಿಬ್ಬಂದಿ ಅಥವಾ ವೈದ್ಯಕೀಯ ತಂಡಕ್ಕೆ ಮಾಹಿತಿಯನ್ನು ನೀಡಬೇಕು.
ಕೇವಲ ಕುದಿಸಿದ ನೀರು ಅಥವಾ ಬಾಟಲ್ ನೀರು ಕುಡಿಯುವುದು, ಶುಚಿತ್ವ ಇರುವ ಸ್ಥಳದಲ್ಲೇ ಆಹಾರ ಸೇವಿಸುವುದು, ನಿಗದಿತ ಶೌಚಾಲಯಗಳನ್ನು ಮಾತ್ರ ಬಳಸುವುದು ಅನಿವಾರ್ಯವಾಗಿದೆ. ಪಂಪಾ, ಸನ್ನಿಧಾನಂ ಮತ್ತು ನಿಲಕ್ಕಲ್ನಲ್ಲಿ 24×7 ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದ್ದು, ತುರ್ತು ಪರಿಸ್ಥಿತಿಗೆ 04735 203232 ಸಹಾಯವಾಣಿ ಸಿದ್ಧವಾಗಿದೆ.
ಈ ಬಾರಿ ಕೇರಳ ಸರ್ಕಾರವು ಡಿಜಿಟಲ್ ಹೆಲ್ತ್ ಪಾಸ್ ವ್ಯವಸ್ಥೆಯನ್ನೂ ಜಾರಿಗೆ ತಂದಿದ್ದು, ಯಾತ್ರಿಕರು ಆನ್ಲೈನ್ ನೋಂದಣಿ ಮೂಲಕ ಆರೋಗ್ಯ ಮಾಹಿತಿಯನ್ನು ನವೀಕರಿಸಬೇಕು. ಈ ಮಾರ್ಗಸೂಚಿಗಳನ್ನು ಪಾಲಿಸುವುದರಿಂದ ಭಕ್ತರಿಗೆ ಸುರಕ್ಷಿತ ಮತ್ತು ಆರೋಗ್ಯಕರ ಯಾತ್ರೆ ಸಾಧ್ಯವಾಗಲಿದೆ.