ದೇಶ

ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್‌ಗೆ ತೆರೆ? ಭೈರತಿ ಸುರೇಶ್ ರಿಯಾಕ್ಷನ್ ವೈರಲ್!

Published

on

ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ, ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. “ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ಅದು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ,” ಎಂದು ಅವರು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಒಂದಿಗೆ ಬ್ರೇಕ್‌ಫಾಸ್ಟ್ ಮಾಡಿರುವ ವಿಚಾರಕ್ಕೆ ಅನಗತ್ಯ ರಾಜಕೀಯ ಬಣ್ಣ ಕೊಡಬೇಡಿ ಎಂದು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.

“ಸಿಎಂ–ಡಿಸಿಎಂ ಇಬ್ಬರೂ ನಮ್ಮವರೇ. ನೂರಾರು ಬಾರಿ ಇಂತಹ ಊಟೋಪಚಾರಗಳು ನಡೆದಿವೆ. ಬ್ರೇಕ್‌ಫಾಸ್ಟ್‌ನಲ್ಲಿ ಯಾವುದೇ ರಾಜಕೀಯ ಅರ್ಥ ಹುಡುಕುವುದು ಸರಿಯಲ್ಲ,” ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅಥವಾ ಜೆಡಿಎಸ್ ನಾಯಕರ ಮನೆಗೆ ಹೋದಾಗ ಮಾತ್ರ ಚರ್ಚೆ ಮಾಡಬೇಕಾಗುತ್ತದೆ; ನಮ್ಮವರ ಮನೆಯಲ್ಲೇ ಊಟ ಮಾಡಿದರೆ ಅದು ಸಾಮಾನ್ಯ ವಿಷಯ ಎಂದು ವಿವರಣೆ ನೀಡಿದ ಅವರು, ತಮ್ಮಲ್ಲೂ ಹಲವು ಬಾರಿ ಸಿಎಂ ಮತ್ತು ಡಿಸಿಎಂ ಜೊತೆ ಊಟ ಮಾಡಿರುವುದಾಗಿ ಹೇಳಿದರು.

ಅಜಯ್ ಸಿಂಗ್ ಅವರ “ರಿಷಫಲ್” ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, “ಅವರ ಮಾತನ್ನು ಮಾಧ್ಯಮವೇ ತಪ್ಪಾಗಿ ಅರ್ಥ ಮಾಡಿಕೊಂಡಿದೆ. ಅವರು ಮಂತ್ರಿಯಾಗುವ ಆಸೆ ಹೊಂದಿದ್ದಾರೆ, ಅದಕ್ಕಾಗಿ ಹೀಗೆ ಹೇಳಿದ್ದಾರೆ,” ಎಂದರು.

ಮಂತ್ರಿಗಳ ಪುನರ್‍ರಚನೆ, ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ — ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಭೈರತಿ ಸುರೇಶ್, “ನಾನೂ ಸಹ ಸಿಎಂ ಸಿದ್ದರಾಮಯ್ಯನವರ ಅಪ್ತನೇ,” ಎಂದು ಹೇಳಿದ್ದಾರೆ.

ಸಭೆಯಲ್ಲಿ ಶಾಸಕರಾದ ಬಿ. ನಾಗೇಂದ್ರ ಮತ್ತು ಭರತರಡ್ಡಿ ಉಪಸ್ಥಿತರಿದ್ದರು.

Trending

Exit mobile version