ಬೆಂಗಳೂರು
“2028ರ ಚುನಾವಣೆ ಬಳಿಕ ನೋಡೋಣ!” – ಸತೀಶ್ ಜಾರಕಿಹೊಳಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸುಗಮವಾಗಿಲ್ಲ ಎಂಬ ರಾಜಕೀಯ ವಾತಾವರಣದ ನಡುವೆ, ನವೆಂಬರ್ ಕ್ರಾಂತಿ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
“ನವೆಂಬರ್ ಕ್ರಾಂತಿ ಎಲ್ಲ ಆಗಲ್ಲ. ಇನ್ನೂ 30 ದಿನ ಇದೆ, ಏನಾಗುತ್ತದೆ ನೋಡೋಣ. ಕ್ರಾಂತಿ ಆಗಬೇಕಾದರೆ ಹೈಕಮಾಂಡ್ ಅನುಮತಿ ಕೊಡಬೇಕಲ್ಲಾ? ಹೈಕಮಾಂಡ್ ಹಾಗೆಲ್ಲ ಬಿಡೋದಿಲ್ಲ. ಏಕನಾಥ್ ಶಿಂಧೆ ಅಥವಾ ಪವಾರ್ ಹಾಗೆ ಮತ್ತೊಬ್ಬ ಹುಟ್ಟಿಕೊಳ್ಳುವುದು ಸುಲಭವಲ್ಲ,” ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅವರು ಮುಂದುವರಿದು, “ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನುಭವಿಗಳದು. ಅವರು ಎಲ್ಲವನ್ನು ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಡಿಕೆ ಶಿವಕುಮಾರ್ ಡೆಡ್‍ಲೈನ್ ನೀಡಿದ್ದಾರೆಯೆಂಬ ಮಾಹಿತಿ ನನಗಿಲ್ಲ,” ಎಂದು ಸ್ಪಷ್ಟನೆ ನೀಡಿದರು.
ಅಹಿಂದ ನಾಯಕರ ವಿಚಾರದಲ್ಲಿ ಮಾತನಾಡಿದ ಅವರು, “ನಾನು 30 ವರ್ಷಗಳಿಂದ ಅಹಿಂದ ಭಾಗವಾಗಿದ್ದೇನೆ. ಪರಮೇಶ್ವರ್, ಮಹದೇವಪ್ಪ, ಯತೀಂದ್ರ ಎಲ್ಲರೂ ಅಹಿಂದ ಭಾಗವೇ. ಯತೀಂದ್ರ ಹೇಳಿದ್ದೇ ಬೇರೆ, ಸಿಎಂ ಸ್ಥಾನ ವಿಚಾರವೇ ಬೇರೆ,” ಎಂದು ಹೇಳಿದರು.
“ನಾವು ಸಿಎಂ ಸ್ಥಾನ ಕೇಳಿಲ್ಲ. ಅಹಿಂದ ಒಕ್ಕೂಟ ಹೋರಾಟ ಮೊದಲಿನಿಂದಲೂ ಇದೆ. 2028ರ ಚುನಾವಣೆಯ ವೇಳೆಯ ಸ್ಥಿತಿಗತಿಗಳ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದರು.