ರಾಜಕಾರಣ ಎಂದರೆ ಜನಸೇವೆ – ಸಿಎಂ ಸಿದ್ದರಾಮಯ್ಯ | Hosa Suddi

ದೇಶ

ರಾಜಕಾರಣ ಎಂದರೆ ಜನಸೇವೆ – ಸಿಎಂ ಸಿದ್ದರಾಮಯ್ಯ

Published

on

ಮೈಸೂರು: ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ದೇವರಾಜ ಅರಸು ಅವರು ಎಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರು ಎಂಬುದೂ ನನಗೆ ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ಅವರ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ದೇವರಾಜ ಅರಸು ಹಾಗೂ ನಾನು ಇಬ್ಬರೂ ಮೈಸೂರಿನವರೇ. ಇಬ್ಬರೂ ದೀರ್ಘಾವಧಿಗೆ ಮುಖ್ಯಮಂತ್ರಿಗಳಾಗಿದ್ದೇವೆ, ಆದರೆ ಕಾಲಘಟ್ಟಗಳು ವಿಭಿನ್ನ. ದೇವರಾಜ ಅರಸು ಅವರು 1972ರಿಂದ 1980ರವರೆಗೆ ಸಿಎಂ ಆಗಿದ್ದರು. ನಾನು ಈಗ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದೇನೆ ಎಂದು ತಿಳಿಸಿದರು.

ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕಿದೆ. ಆದರೂ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದರು. ಸಂಪುಟ ಪುನಾರಚನೆ ಕುರಿತು ದೆಹಲಿಯಿಂದ ಕರೆ ಬಂದಾಗ ಚರ್ಚೆ ಮಾಡುವುದಾಗಿ ಹೇಳಿದರು.

ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದು ಖುಷಿಯ ಸಂಗತಿ. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಪರ ಕೆಲಸ ಮಾಡುವುದೇ. ನಾನು ಶಾಸಕನಾಗಬೇಕೆಂದುಕೊಂಡಿದ್ದೆ, ಆದರೆ ಅವಕಾಶಗಳ ಕಾರಣದಿಂದ ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆಗಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ನಡೆದ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರಿನಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಲಾಗಿದೆ ಎಂದರು. ಬಜೆಟ್ ಕುರಿತು ಮಾತನಾಡುತ್ತಾ, ಘೋಷಣೆಗಳಿಗಾಗಿ ಬಜೆಟ್ ದಿನದವರೆಗೆ ಕಾಯಬೇಕು ಎಂದರು.

ಬಳ್ಳಾರಿ ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಮತ್ತು ಬಿಜೆಪಿ ಆರೋಪಗಳಿಗೆ ಕಾನೂನಿನ ಪ್ರಕಾರವಲ್ಲ, ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Trending

Exit mobile version