ದೇಶ
ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಕ್ಕೆ ವಿರೋಧ: ಕಾನೂನಾದರೆ ಹೋರಾಟ– ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಮಂಗಳೂರು, ಜ.11: ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಮಾತೃಭಾಷೆಯನ್ನು ಕಡ್ಡಾಯವಾಗಿ ಹೇರುವುದು ಸರಿಯಲ್ಲ ಎಂದು ಹೇಳಿದರು.
ಮಾತೃಭಾಷೆ ಮಾತನಾಡುವ ವಿದ್ಯಾರ್ಥಿಗಳಿಗೆ ಮಲಯಾಳಂ ಅನ್ನು ಮೊದಲ ಭಾಷೆಯಾಗಿ ಕಲಿಯುವಂತೆ ಒತ್ತಾಯಿಸುವುದು ಸಂವಿಧಾನಬಾಹಿರವಾಗಿದೆ. ಭಾಷೆ ಕಲಿಕೆ ಸ್ವಯಂ ಇಚ್ಛೆಯಿಂದ ಆಗಬೇಕೇ ಹೊರತು, ಬಲವಂತದಿಂದಲ್ಲ ಎಂದು ಸಿಎಂ ಅಭಿಪ್ರಾಯಪಟ್ಟರು. ಕನ್ನಡ ಶಾಲೆಗಳ ಸ್ವರೂಪ ಮತ್ತು ಭಾಷಾ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಒಂದು ವೇಳೆ ರಾಜ್ಯಪಾಲರು ಇಂತಹ ಮಸೂದೆಗೆ ಸಹಿ ಹಾಕಿ ಅದನ್ನು ಕಾನೂನಾಗಿಸಿದರೆ, ಕರ್ನಾಟಕ ಸರ್ಕಾರವು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಈ ವಿಚಾರದಲ್ಲಿ ಕೇವಲ ರಾಜ್ಯ ಮಟ್ಟಕ್ಕೆ ಸೀಮಿತವಾಗದೆ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೂ ಮನವಿ ಸಲ್ಲಿಸಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಭಾಷಾ ವೈವಿಧ್ಯತೆ ಇದ್ದರೂ, ಕನ್ನಡದ ಸ್ಥಾನಮಾನ ಮತ್ತು ಕನ್ನಡ ಶಾಲೆಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಭಾಷಾ ವಿಚಾರದಲ್ಲಿ ಯಾವುದೇ ರೀತಿಯ ಒತ್ತಡ ಅಥವಾ ಬಲವಂತವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಿಎಂ ಪುನರುಚ್ಚರಿಸಿದರು.