ದೇಶ
ಮೆಕ್ಸಿಕೋದಲ್ಲಿ ಭೀಕರ ರೈಲು ಅಪಘಾತ: ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿ 13 ಮಂದಿ ಸಾವು, 98 ಗಾಯ
ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕೋದ ಓಕ್ಸಾಕಾ (Oaxaca) ರಾಜ್ಯದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿ 13 ಮಂದಿ ಮೃತಪಟ್ಟಿದ್ದು, 98 ಜನರು ಗಾಯಗೊಂಡಿದ್ದಾರೆ.
ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ಈ ರೈಲಿನಲ್ಲಿ 9 ಸಿಬ್ಬಂದಿ ಸೇರಿ ಒಟ್ಟು 250 ಮಂದಿ ಪ್ರಯಾಣಿಸುತ್ತಿದ್ದರು. ರೈಲು ಮೆಕ್ಸಿಕೋದ ಪೆಸಿಫಿಕ್ ಕರಾವಳಿಯ ಸಲೀನಾ ಕ್ರೂಜ್ ಬಂದರುನಿಂದ ಗಲ್ಫ್ ಕರಾವಳಿಯ ಕೋಟ್ಜಾಕೋಲ್ಕೋಸ್‌ಗೆ ತೆರಳುತ್ತಿತ್ತು. ಈ ವೇಳೆ ನಿಜಾಂಡಾ ಪಟ್ಟಣದ ಬಳಿ ರೈಲು ಹಳಿ ತಪ್ಪಿ ಭೀಕರ ಅಪಘಾತ ಸಂಭವಿಸಿದೆ.
ಗಾಯಾಳುಗಳಿಗೆ ಚಿಕಿತ್ಸೆ, ಹಲವರು ಪ್ರಾಣಾಪಾಯದಿಂದ ಪಾರು
ಅಪಘಾತದಲ್ಲಿ ಗಾಯಗೊಂಡ 98 ಮಂದಿಯಲ್ಲಿ 36 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 193 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ.
ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ದುಃಖ ವ್ಯಕ್ತ
ಈ ದುರ್ಘಟನೆಗೆ ಸಂಬಂಧಿಸಿ ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಸಾಮಾಜಿಕ ಜಾಲತಾಣ Xನಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಗಳಿಗೆ ಅಗತ್ಯ ಪರಿಹಾರ ಮತ್ತು ನೆರವು ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಮೆಕ್ಸಿಕೋದ ಅಟಾರ್ನಿ ಜನರಲ್ ಕಚೇರಿ ಅಪಘಾತದ ಕುರಿತು ತನಿಖೆ ಆರಂಭಿಸಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
2023ರಲ್ಲಿ ಉದ್ಘಾಟನೆಯಾದ ಮಹತ್ವದ ರೈಲು ಯೋಜನೆ
ಅಪಘಾತಕ್ಕೀಡಾದ ಈ ಇಂಟರ್ ಓಷಿಯಾನಿಕ್ ರೈಲು 2023ರಲ್ಲಿ ಉದ್ಘಾಟನೆಯಾಗಿತ್ತು. ಇದು ಮೆಕ್ಸಿಕೋದ ಮಹತ್ವಾಕಾಂಕ್ಷೆಯ ಇಂಟರ್ ಓಷಿಯಾನಿಕ್ ಕಾರಿಡಾರ್ ಯೋಜನೆಯ ಪ್ರಮುಖ ಭಾಗವಾಗಿದೆ.
ಈ ಯೋಜನೆಯ ಉದ್ದೇಶ ಪೆಸಿಫಿಕ್ ಮತ್ತು ಗಲ್ಫ್ ಕರಾವಳಿಗಳನ್ನು ಸಂಪರ್ಕಿಸಿ ವ್ಯಾಪಾರ ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ.