ಮೋದಿ ಸರ್ಕಾರದ ಮತ್ತೊಂದು ರೈತಪರ ನಿರ್ಧಾರ | Hosa Suddi

ದೇಶ

ಮೋದಿ ಸರ್ಕಾರದ ಮತ್ತೊಂದು ರೈತಪರ ನಿರ್ಧಾರ

Published

on

ನವದೆಹಲಿ / ಬೆಂಗಳೂರು: ದೇಶದ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ದೊಡ್ಡ ನೆರವು ಲಭಿಸಿದೆ. 2026-27ನೇ ಹಂಗಾಮಿಗೆ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (FRP) ಅನ್ನು ಪ್ರತಿ ಕ್ವಿಂಟಲ್‌ಗೆ ₹365ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ಈ ನಿರ್ಧಾರದಿಂದ ಕರ್ನಾಟಕದ ಸುಮಾರು 8ರಿಂದ 10 ಲಕ್ಷ ರೈತರಿಗೆ ನೇರ ಲಾಭ ಸಿಗಲಿದೆ. 10.25% ಮೂಲ ರಿಕವರಿ ದರದ ಮೇಲೆ ಈ FRP ನಿಗದಿಯಾಗಿದ್ದು, ರಿಕವರಿಯಲ್ಲಿ 0.1% ಏರಿಕೆಗೆ ಪ್ರತಿ ಕ್ವಿಂಟಲ್‌ಗೆ ₹3.56 ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಇದಲ್ಲದೆ, ರಿಕವರಿ ದರ 9.5% ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಯಾವುದೇ ಕಡಿತವಿಲ್ಲದೆ ಪ್ರತಿ ಕ್ವಿಂಟಲ್‌ಗೆ ₹338.3 ಕನಿಷ್ಠ ಬೆಲೆ ನೀಡಲಾಗುತ್ತದೆ. ಈ ಕ್ರಮದಿಂದ ದೇಶದ ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಹಾಗೂ ಅವರ ಕುಟುಂಬಗಳಿಗೆ ನೆರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಬೆಳಗಾವಿ, ಮಂಡ್ಯ, ಮೈಸೂರು, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳು ಕಬ್ಬು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇ.16ರಷ್ಟು ಪಾಲು ಹೊಂದಿವೆ. ಹೀಗಾಗಿ ಈ FRP ಹೆಚ್ಚಳ ರಾಜ್ಯದ ಕೃಷಿ ಆರ್ಥಿಕತೆಗೆ ಮಹತ್ವದ ಬಲ ನೀಡಲಿದೆ.

ಇದರೊಂದಿಗೆ, ಸೂರ್ಯಕಾಂತಿ ಬೆಳೆಗಾರರಿಗೂ ಕೇಂದ್ರ ಸರ್ಕಾರ ನೆರವು ನೀಡಿದ್ದು, ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮೋದನೆ ನೀಡಲಾಗಿದೆ. ಮಾರುಕಟ್ಟೆ ಬೆಲೆ ಕುಸಿತದ ನಡುವೆಯೂ ರೈತರಿಗೆ ಆಸರೆಯಾಗಲು ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವು ಕೃಷಿ ಕ್ಷೇತ್ರವನ್ನು ಮತ್ತಷ್ಟು ಸಶಕ್ತಗೊಳಿಸುವತ್ತ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

Trending

Exit mobile version