ದೇಶ
“ದೇಶದ ಕೀರ್ತಿ ಹಾಳುಮಾಡ್ತಿದ್ದೀರಾ!” – ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ
ನವದೆಹಲಿ: ದೇಶಾದ್ಯಂತ ಬೀದಿ ನಾಯಿಗಳನ್ನು ಹಿಡಿದು, ಸಂತಾನಹರಣ ಮಾಡಿಸಿ, ಬಳಿಕ ಬಿಡುಗಡೆ ಮಾಡಲು ಆಗಸ್ಟ್ನಲ್ಲಿ ನೀಡಿದ ಆದೇಶವನ್ನು ರಾಜ್ಯ ಸರ್ಕಾರಗಳು ಪಾಲಿಸದಿರುವುದಕ್ಕೆ ಸುಪ್ರೀಂ ಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತ ಅಫಿಡವಿಟ್ ಸಲ್ಲಿಸದ ರಾಜ್ಯಗಳಿಗೆ ನ್ಯಾಯಾಲಯದಿಂದ ಕಠಿಣ ಎಚ್ಚರಿಕೆ ನೀಡಲಾಗಿದೆ.
ಕಳೆದ ಕೆಲವು ತಿಂಗಳಲ್ಲಿ ಬೀದಿ ನಾಯಿಗಳ ದಾಳಿಗಳು ಹೆಚ್ಚಾಗಿರುವುದನ್ನು ಕೋರ್ಟ್ ಗಮನಿಸಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಮಗುವಿನ ಮೇಲೆ, ಕೇರಳದಲ್ಲಿ ಬೀದಿ ನಾಟಕವಾಡುತ್ತಿದ್ದ ವ್ಯಕ್ತಿಯ ಮೇಲೆ ಹಾಗೂ ಉತ್ತರ ಪ್ರದೇಶದ ಲಕ್ನೋದಲ್ಲಿ ಕುಟುಂಬದ ಮೂವರು ಸದಸ್ಯರ ಮೇಲೆ ದಾಳಿ ನಡೆದಿವೆ. ಇತ್ತೀಚೆಗಷ್ಟೇ ತೆಲಂಗಾಣದ ವಾರಂಗಲ್ನಲ್ಲಿ ಸಹ ಇಂತಹ ಘಟನೆ ವರದಿಯಾಗಿದೆ.
“ನಿಮ್ಮ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಚಿತ್ರಿಸಲಾಗುತ್ತಿದೆ,” ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆಗಸ್ಟ್ನ ಆದೇಶದ ಪ್ರಕಾರ, ಪ್ರತಿ ನಗರ ಹಾಗೂ ವಾರ್ಡ್ನಲ್ಲಿ ಬೀದಿ ನಾಯಿಗಳಿಗೆ ಆಹಾರ ಕೇಂದ್ರಗಳನ್ನು ಗುರುತಿಸುವುದು, ಸಂತಾನಹರಣ, ಲಸಿಕೆ, ಕ್ರಿಮಿನಾಶಕ ಚಿಕಿತ್ಸೆ ನೀಡಿ ಅದೇ ಪ್ರದೇಶಕ್ಕೆ ಬಿಡುವುದು ಕಡ್ಡಾಯ. ಸ್ಥಳೀಯ ಸಂಸ್ಥೆಗಳು ಹಾಗೂ ಪ್ರಾಣಿ ಕಲ್ಯಾಣ ಸಂಘಟನೆಗಳ ಸಹಕಾರದಲ್ಲಿ ಈ ಕಾರ್ಯ ನಡೆಯಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಆದರೆ ಅನೇಕ ರಾಜ್ಯಗಳು ಈ ನಿಯಮದ ಅನುಸರಣೆಯಲ್ಲಿ ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ.