ಕ್ರೀಡೆ
T20 WORLD CUP 2026 ಆರಂಭಕ್ಕೆ ಕ್ಷಣಗಣನೆ: ಮಳೆ ಆತಂಕ, ಐಸಿಸಿ ಮಳೆ ನಿಯಮಗಳೇನು?
ನವದೆಹಲಿ, ಫೆ.5: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತಿಹಾಸದಲ್ಲಿ ಎರಡನೇ ಬಾರಿ 20 ತಂಡಗಳೊಂದಿಗೆ ನಡೆಯುತ್ತಿರುವ ಈ ಮಹಾ ಟೂರ್ನಿ ಫೆಬ್ರವರಿ 7ರಿಂದ ಆರಂಭವಾಗಲಿದೆ. ಮೊದಲ ದಿನವೇ ಮೂರು ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ.
ಟೂರ್ನಿ ಆರಂಭಕ್ಕೂ ಮುನ್ನ ಮಳೆ ಆತಂಕ ಪ್ರಮುಖ ಚರ್ಚೆಯ ವಿಷಯವಾಗಿದೆ. ಭಾರತದಲ್ಲಿ ಹವಾಮಾನ ಬಹುತೇಕ ಅನುಕೂಲಕರವಾಗಿದ್ದರೂ, ಶ್ರೀಲಂಕಾದಲ್ಲಿ ಮಳೆ ಪಂದ್ಯಗಳಿಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಕೊಲಂಬೊದಲ್ಲಿ ನಡೆದ ಪಾಕಿಸ್ತಾನ–ಐರ್ಲೆಂಡ್ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಗಿದ್ದು, ಆರಂಭಿಕ ಪಂದ್ಯಗಳ ಮೇಲೂ ಅದರ ಪ್ರಭಾವ ಬೀರುವ ಸಾಧ್ಯತೆ ಇದೆ. ಅಕ್ಯೂವೆದರ್ ವರದಿ ಪ್ರಕಾರ, ಶನಿವಾರ ನಡೆಯಲಿರುವ ಪಾಕಿಸ್ತಾನ–ನೆದರ್‌ಲ್ಯಾಂಡ್ಸ್ ಪಂದ್ಯಕ್ಕೆ 90% ಮಳೆ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಐಸಿಸಿ ತನ್ನ ಮಳೆ ನಿಯಮಗಳನ್ನು ಸ್ಪಷ್ಟಪಡಿಸಿದೆ. ಲೀಗ್ ಹಾಗೂ ಸೂಪರ್-8 ಹಂತದ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಮಳೆಯಿಂದ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ಅಂಕ ಹಂಚಿಕೆ ಮಾಡಲಾಗುತ್ತದೆ. ಫಲಿತಾಂಶ ನಿರ್ಣಯಕ್ಕೆ ಪ್ರತಿ ತಂಡ ಕನಿಷ್ಠ 5 ಓವರ್‌ಗಳ ಆಟ ಕಡ್ಡಾಯವಾಗಿದೆ.
ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಮೀಸಲು ದಿನದಲ್ಲೂ ಪಂದ್ಯ ಪೂರ್ಣಗೊಳ್ಳದಿದ್ದರೆ, ಸೆಮಿಯಲ್ಲಿ ಅಂಕಪಟ್ಟಿಯಲ್ಲಿ ಮೇಲಿರುವ ತಂಡ ಫೈನಲ್ ಪ್ರವೇಶಿಸಲಿದೆ. ಫೈನಲ್ ಕೂಡ ರದ್ದಾದರೆ ಜಂಟಿ ವಿಜೇತರನ್ನು ಘೋಷಿಸಲಾಗುತ್ತದೆ. ಓವರ್‌ಗಳು ಕಡಿಮೆಯಾದರೆ ಡಿಎಲ್‌ಎಸ್ ನಿಯಮ ಅನ್ವಯ ಪರಿಷ್ಕೃತ ಗುರಿ ನಿಗದಿಯಾಗಲಿದೆ.
ಇತ್ತ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು, ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಳೆ, ಗಾಯದ ಸಮಸ್ಯೆ ಮತ್ತು ತೀವ್ರ ಸ್ಪರ್ಧೆಯ ನಡುವೆ ಟಿ20 ವಿಶ್ವಕಪ್ 2026 ಕ್ರಿಕೆಟ್ ರಸಿಕರಿಗೆ ರೋಚಕತೆಯ ಭರವಸೆ ನೀಡುತ್ತಿದೆ.