ಟಾಟಾನಗರ–ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಬೆಂಕಿ: ವೃದ್ಧ ಪ್ರಯಾಣಿಕ ಸಾವು | Hosa Suddi

ದೇಶ

ಟಾಟಾನಗರ–ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಬೆಂಕಿ: ವೃದ್ಧ ಪ್ರಯಾಣಿಕ ಸಾವು

Published

on

ವಿಶಾಖಪಟ್ಟಣಂ (ಆಂಧ್ರ ಪ್ರದೇಶ):
ವಿಶಾಖಪಟ್ಟಣಂನಿಂದ ಸುಮಾರು 66 ಕಿ.ಮೀ ದೂರದ ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿ ರೈಲು ನಿಲ್ದಾಣದ ಬಳಿ ಟಾಟಾನಗರ–ಎರ್ನಾಕುಲಂ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಭಾರೀ ಬೆಂಕಿ ಹೊತ್ತಿಕೊಂಡಿರುವ ದುರ್ಘಟನೆ ಸಂಭವಿಸಿದೆ. ಈ ಅನಾಹುತದಲ್ಲಿ ವೃದ್ಧ ಪ್ರಯಾಣಿಕರೊಬ್ಬರು ಸಜೀವ ದಹನಗೊಂಡು ಸಾವನ್ನಪ್ಪಿದ್ದಾರೆ.

ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ. ಸೋಮವಾರ (ಡಿ.29) ಬೆಳಗಿನ ಜಾವ ಸುಮಾರು 12:45ರ ವೇಳೆಗೆ ಘಟನೆ ನಡೆದಿದ್ದು, ರೈಲು ಸಂಖ್ಯೆ 18189ರ M2 ಮತ್ತು B1 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಂಕಿ ಕಾಣಿಸಿಕೊಂಡ ವೇಳೆ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಹಾಗೂ ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು. ಬೆಂಕಿ ವ್ಯಾಪಕವಾಗಿ ಹರಡಿದ ಪರಿಣಾಮ B1 ಬೋಗಿಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ಅನಾಹುತದ ಬಳಿಕ ತೀವ್ರವಾಗಿ ಹಾನಿಗೊಳಗಾದ M2 ಮತ್ತು B1 ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ನಂತರ ರೈಲು ಎರ್ನಾಕುಲಂ ಕಡೆಗೆ ಪ್ರಯಾಣ ಮುಂದುವರಿಸಿದೆ. ಹಾನಿಗೊಳಗಾದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ಕಳುಹಿಸಲು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಅನಕಪಲ್ಲಿ ಎಸ್‌ಪಿ ತುಹಿನ್ ಸಿನ್ಹಾ ಅವರು ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಎರಡು ವಿಧಿವಿಜ್ಞಾನ ತಂಡಗಳು ತನಿಖೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಬೆಂಕಿಗೆ ನಿಖರ ಕಾರಣ ತನಿಖೆಯ ನಂತರವೇ ತಿಳಿಯಲಿದೆ. ದಕ್ಷಿಣ ಮಧ್ಯ ರೈಲ್ವೆ ಕೂಡ ಕೋಚ್‌ಗಳು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ದೃಢಪಡಿಸಿದೆ.

Trending

Exit mobile version