ಕ್ರೀಡೆ
7 ಗಂಟೆ 49 ನಿಮಿಷಗಳಲ್ಲಿ ಐರನ್‌ಮ್ಯಾನ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ
ಗೋವಾ: ರಾಜಕೀಯ ವೇದಿಕೆಯಲ್ಲಿ ಸದಾ ಚುರುಕುತನ ಮತ್ತು ಚಾತುರ್ಯದಿಂದ ಹೆಸರು ಮಾಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಇದೀಗ ಕ್ರೀಡಾ ಲೋಕದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಗೋವಾದಲ್ಲಿ ನಡೆದ ವಿಶ್ವದ ಅತ್ಯಂತ ಕಠಿಣ ತ್ರಿವಳಿ ಕ್ರೀಡಾ ಸ್ಪರ್ಧೆಗಳಲ್ಲಿ ಒಂದಾದ ‘ಐರನ್‌ಮ್ಯಾನ್ 70.3’ ಅನ್ನು ಸತತ ಎರಡನೇ ಬಾರಿ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಅವರು ಹೊಸ ದಾಖಲೆ ನಿರ್ಮಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ತೇಜಸ್ವಿ ಸೂರ್ಯ ತಮ್ಮ ಹಿಂದಿನ ವರ್ಷದ ಸಾಧನೆಯನ್ನು ಮೀರಿಸಿ, ಒಟ್ಟು 7 ಗಂಟೆ 49 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ. ಇದರಲ್ಲಿ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟವನ್ನು ಪೂರ್ಣಗೊಳಿಸಲಾಗಿದೆ.
ಅವರ ಪತ್ನಿ ಶಿವಶ್ರೀ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡು, “ನನ್ನ ‘ಮ್ಯಾನ್ ಆಫ್ ಸ್ಟೀಲ್’ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ನೀವು ನನ್ನ ಪ್ರೇರಣೆಯ ಮೂಲ,” ಎಂದು ಬರೆದುಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಸಹ ಪಾಲ್ಗೊಂಡಿದ್ದು, 8 ಗಂಟೆ 13 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರ ಸಾಧನೆಯನ್ನು ಶ್ಲಾಘಿಸಿ, “ನಮ್ಮ ಯುವ ಸಹೋದ್ಯೋಗಿಗಳಾದ ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ ಅವರ ಸಾಧನೆ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ. ಇಂತಹ ಕ್ರೀಡಾ ಕಾರ್ಯಕ್ರಮಗಳು #FitIndia ಆಂದೋಲನಕ್ಕೆ ಹೊಸ ಶಕ್ತಿ ನೀಡುತ್ತವೆ,” ಎಂದು ಟ್ವೀಟ್ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಅವರ ಈ ಕ್ರೀಡಾ ಸಾಧನೆ ರಾಜಕೀಯ ನಾಯಕರೂ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದಲ್ಲಿ ಯುವಜನತೆಗೆ ಮಾದರಿಯಾಗಬಹುದು ಎಂಬುದನ್ನು ತೋರಿಸಿದೆ.