ಚುನಾವಣೆ
ಬಿಹಾರ ಚುನಾವಣೆ: ತೇಜಸ್ವಿಯ ‘ಮಾಯಿ ಬಹಿನ್ ಮಾನ್ ಯೋಜನೆ’ ಘೋಷಣೆ
ಪಾಟ್ನಾ: ಬಿಹಾರ (Bihar) ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕೇವಲ ಎರಡು ದಿನಗಳಷ್ಟೇ ಬಾಕಿಯಿರುವಾಗ, ರಾಜಕೀಯ ತಾಪಮಾನ ತೀವ್ರಗೊಂಡಿದೆ. ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav) ಮಹಿಳೆಯರ ಪರ ಬಂಪರ್ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಜೆಡಿ (RJD) ಸರ್ಕಾರ ರಚಿಸಿದ ತಕ್ಷಣ ‘ಮಾಯಿ ಬಹಿನ್ ಮಾನ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ವಾರ್ಷಿಕ ₹30,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಘೋಷಿಸಿದರು. ಈ ಯೋಜನೆಯನ್ನು ಸಂಕ್ರಾಂತಿ ಹಬ್ಬದಂದೇ (ಜನವರಿ 14) ಜಾರಿಗೆ ತಂದು ಪೂರ್ಣ ಮೊತ್ತ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಅವರ ಪ್ರಕಾರ, ಈಗಾಗಲೇ ಘೋಷಿಸಿರುವಂತೆ ರಾಜ್ಯದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ (Old Pension Scheme) ಮರುಜಾರಿಗೆ ಬರಲಿದೆ. ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರನ್ನು ತಮ್ಮ ತವರು ಜಿಲ್ಲೆಯಿಂದ 70 ಕಿಮೀ ವ್ಯಾಪ್ತಿಯೊಳಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು.
ಇದೇ ವೇಳೆ ಕೃಷಿ ಕ್ಷೇತ್ರಕ್ಕೂ ಬೋನಸ್ ಘೋಷಿಸಿರುವ ತೇಜಸ್ವಿ ಯಾದವ್, ಭತ್ತಕ್ಕೆ ಕ್ವಿಂಟಾಲ್‌ಗೆ ₹300 ರೂ. ಮತ್ತು ಗೋಧಿಗೆ ₹400 ರೂ. ಹೆಚ್ಚುವರಿ ಬೆಲೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಆರ್‌ಜೆಡಿ ಪ್ರತಿ ತಿಂಗಳು ಮಹಿಳೆಯರಿಗೆ ₹2,500 ರೂ. ನೀಡುವ ಗ್ಯಾರಂಟಿ ಘೋಷಿಸಿತ್ತು. ಇದೀಗ ವಾರ್ಷಿಕ ₹30,000 ರೂ. ನೀಡುವುದಾಗಿ ಘೋಷಣೆ ಮಾಡಿದ ಹಿನ್ನೆಲೆ, ಈ ಯೋಜನೆ ಬಿಹಾರ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.