ದೇಶ
ಚೆನ್ನೈ ಏರ್‌ಪೋರ್ಟ್‌ನಲ್ಲಿ ದಳಪತಿ ವಿಜಯ್ ಬಿದ್ದರು: ವೈರಲ್ ವಿಡಿಯೋ, ಸೆಲೆಬ್ರಿಟಿಗಳ ಭದ್ರತೆ ಕುರಿತು ಚರ್ಚೆ
ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಅವರು ಚಿತ್ರರಂಗವನ್ನು ಬಿಡುವ ಹಂತದಲ್ಲಿರುವ ನಡುವೆಯೇ, ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ‘ಜನ ನಾಯಗನ್’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾನುವಾರ ರಾತ್ರಿ ಚೆನ್ನೈಗೆ ವಾಪಸಾದ ವೇಳೆ, ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಏರ್‌ಪೋರ್ಟ್‌ಗೆ ಆಗಮಿಸಿದ್ದರು.
ಭಾರೀ ಭದ್ರತೆಯ ನಡುವೆಯೇ ವಿಜಯ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ, ಅಭಿಮಾನಿಗಳು ಇದ್ದಕ್ಕಿದ್ದಂತೆ ಅವರ ಕಡೆಗೆ ಧಾವಿಸಿದರು. ವಿಜಯ್ ತಮ್ಮ ಕಾರಿನ ಕಡೆಗೆ ಸಾಗುವಾಗ ಅಭಿಮಾನಿಗಳ ಒತ್ತಡದಿಂದ ಜಾರಿ ಬಿದ್ದು ನೆಲಕ್ಕುರುಳಿದರು. ತಕ್ಷಣ ಭದ್ರತಾ ಸಿಬ್ಬಂದಿ ಧಾವಿಸಿ ಅವರನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಕಾರಿಗೆ ಹತ್ತಿಸಿದರು. ಈ ಘಟನೆಯ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆ ಎತ್ತಿವೆ.
ಡಿಸೆಂಬರ್ 27ರಂದು ಕೌಲಾಲಂಪುರದಲ್ಲಿ ನಡೆದ ಜನ ನಾಯಗನ್ ಆಡಿಯೋ ಬಿಡುಗಡೆ ಸಮಾರಂಭ ಲಕ್ಷಾಂತರ ಅಭಿಮಾನಿಗಳನ್ನು ಆಕರ್ಷಿಸಿತ್ತು. ಇದೇ ವೇದಿಕೆಯಲ್ಲಿ ದಳಪತಿ ವಿಜಯ್, “ನಾನು ಸಿನಿಮಾರಂಗದಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿದ್ದೇನೆ. ಇನ್ನು ಮುಂದೆ ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ” ಎಂದು ಘೋಷಿಸಿದ್ದರು. ಈ ಮಾತು ಕೇಳಿ ಅಭಿಮಾನಿಗಳು ಭಾವುಕರಾದರು.
“ಸಿನಿಮಾರಂಗ ಪ್ರವೇಶಿಸಿದಾಗ ಒಂದು ಸಣ್ಣ ಮನೆ ಕಟ್ಟಬೇಕೆಂದು ಬಯಸಿದ್ದೆ. ಆದರೆ ಅಭಿಮಾನಿಗಳು ನನಗೆ ಅರಮನೆ ಕಟ್ಟಿದರು. ಕೋಟೆಯಂತೆ ಬೆಂಬಲ ನೀಡಿದರು. ಅದಕ್ಕಾಗಿಯೇ ಅವರ ಪರವಾಗಿ ನಿಲ್ಲಲು ನಿರ್ಧರಿಸಿದ್ದೇನೆ” ಎಂದು ವಿಜಯ್ ಹೇಳಿದ್ದರು.
ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದ ಈ ಘಟನೆ, ಸೆಲೆಬ್ರಿಟಿಗಳ ಭದ್ರತೆ ಎಷ್ಟು ಅಗತ್ಯ ಎಂಬ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಇತ್ತೀಚೆಗೆ ನಟಿಯರಾದ ನಿಧಿ ಅಗರ್ವಾಲ್ ಮತ್ತು ಸಮಂತಾ ಕೂಡ ಇದೇ ರೀತಿಯ ಅನುಭವಗಳನ್ನು ಎದುರಿಸಿದ್ದರು ಎಂಬುದು ಚರ್ಚೆಗೆ ಗ್ರಾಸವಾಗಿದೆ.