ಅಪರಾಧ

ಉಡುಪಿಯಲ್ಲಿ ತಲ್ವಾರ್ ದಾಳಿ: ಕಾಂಗ್ರೆಸ್ ಯುವ ನಾಯಕ ಶರತ್ ಕುಂದರ್ ಮೇಲೆ ಹತ್ಯೆ ಯತ್ನ, ನಗರದಲ್ಲಿ ಆತಂಕ

Published

on

ಉಡುಪಿ, ಫೆಬ್ರವರಿ 02: ಶಾಂತ ಕರಾವಳಿ ಜಿಲ್ಲೆ ಉಡುಪಿಯಲ್ಲಿ ತಲ್ವಾರ್‌ಗಳು ಝಳಪಿಸಿದ ಭೀಕರ ಘಟನೆ ನಗರವಾಸಿಗಳಲ್ಲಿ ಭಾರೀ ಆತಂಕ ಮೂಡಿಸಿದೆ. ನಗರದ ಪಿಪಿಸಿ ಕ್ರಾಸ್ ಸಮೀಪ ಕಾಂಗ್ರೆಸ್ ಯುವ ಮುಖಂಡ ಹಾಗೂ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ ಮೇಲೆ ದುಷ್ಕರ್ಮಿಗಳು ಹತ್ಯೆ ಯತ್ನ ನಡೆಸಿದ್ದಾರೆ. ಮಾತುಕತೆಗೆಂದು ಕರೆಸಿಕೊಂಡು ಪೂರ್ವನಿಯೋಜಿತವಾಗಿ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ಈ ಕೃತ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, 6–7 ಜನರ ತಂಡ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿ, ತಲ್ವಾರಿಗಳಿಂದ ಶರತ್ ಕುಂದರ್ ಮೇಲೆ ನಿರ್ದಯವಾಗಿ ದಾಳಿ ನಡೆಸಿದ್ದಾರೆ. ಈ ವೇಳೆ “ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ. ದಾಳಿಯಲ್ಲಿ ಶರತ್ ಕುಂದರ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಮಣಿಪಾಲದ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆಯ ಮುಂದುವರಿದ ಭಾಗವಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಹಳೆ ವೈಷಮ್ಯವೇ ಈ ಹಿಂಸಾಚಾರಕ್ಕೆ ಕಾರಣವಾಗಿದೆಯೇ ಅಥವಾ ರಾಜಕೀಯ ಹಿನ್ನೆಲೆ ಇದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಖಾಕಿ ಪಡೆ ತೀವ್ರ ಶೋಧ ಕಾರ್ಯ ಆರಂಭಿಸಿದೆ. ನಗರದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

Trending

Exit mobile version