ದೇಶ
H-1B ವೀಸಾ ಸಂದರ್ಶನಕ್ಕೆ ಅಮೆರಿಕದ ಹೊಸ ಅಡೆತಡೆ: ಭಾರತಕ್ಕೆ ದೊಡ್ಡ ಹೊಡೆತ
ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಇಲಾಖೆಯ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯ ಪರಿಣಾಮವಾಗಿ ಭಾರತದಿಂದ H-1B ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಭಾರಿ ಅಡೆತಡೆ ಉಂಟಾಗಿದೆ. ದೇಶದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಮಂಗಳವಾರ ರಾತ್ರಿ ವೀಸಾ ಅರ್ಜಿದಾರರಿಗೆ ತುರ್ತು ಸೂಚನೆ ನೀಡಿದ್ದು, ಅನೇಕ ಅಪಾಯಿಂಟ್ಮೆಂಟ್‌ಗಳನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.
ವೀಸಾ ಸಂದರ್ಶನ ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ ಎಂಬ ಇಮೇಲ್ ಪಡೆದಿದ್ದರೆ, ಹೊಸ ದಿನಾಂಕದಂದು ಹಾಜರಾಗಬೇಕೆಂದು ತಿಳಿಸಲಾಗಿದೆ. ಮರು ನಿಗದಿಪಡಿಸಿದ ನಂತರ ಹಳೆಯ ದಿನಾಂಕಕ್ಕೆ ರಾಯಭಾರ ಕಚೇರಿಗೆ ಬಂದರೆ ಪ್ರವೇಶವಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ ಮಧ್ಯದಿಂದ ಕೊನೆಯವರೆಗೆ ನಿಗದಿಯಾಗಿದ್ದ ಸಂದರ್ಶನಗಳನ್ನು ಮುಂದಿನ ವರ್ಷ ಮಾರ್ಚ್‌ಗೂ ಮುಂದೂಡಲಾಗಿದೆ.
ಹೊಸ ನಿಯಮಗಳ ಪ್ರಕಾರ, H-1B ವೀಸಾ ಅರ್ಜಿದಾರರು ಹಾಗೂ ಅವರ H-4 ಅವಲಂಬಿತರು ತಮ್ಮ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳ privacy settings ಅನ್ನು ‘Public’ ಗೆ ಬದಲಾಯಿಸಬೇಕು. ಡಿಸೆಂಬರ್ 15ರಿಂದ ಅಧಿಕಾರಿಗಳು ಅವರ ಆನ್‌ಲೈನ್ ಚಟುವಟಿಕೆ, ಪ್ರಕಟಣೆ, ಸಂಪರ್ಕಗಳು ಸೇರಿದಂತೆ ಪೂರ್ಣ ಡಿಜಿಟಲ್ ಹಿನ್ನಳಿಯನ್ನು ಪರಿಶೀಲಿಸಲಿದ್ದಾರೆ. ವಿದ್ಯಾರ್ಥಿಗಳು ಮತ್ತು ವಿನಿಮಯ ಸಂದರ್ಶಕರು ಈಗಾಗಲೇ ಇಂತಹ ಪರಿಶೀಲನೆಗೆ ಒಳಗಾಗಿದ್ದರು.
ಅಮೆರಿಕದ ವಿದೇಶಾಂಗ ಇಲಾಖೆ, “ಪ್ರತಿಯೊಂದು ವೀಸಾ ತೀರ್ಮಾನವೂ ರಾಷ್ಟ್ರೀಯ ಭದ್ರತೆ ಆಧಾರಿತ ನಿರ್ಧಾರವೇ” ಎಂದು ಹೇಳಿದೆ. ಅಫ್ಘಾನ್ ಮೂಲದ ವ್ಯಕ್ತಿಯೊಬ್ಬ ಯುಎಸ್ ನ್ಯಾಷನಲ್ ಗಾರ್ಡ್ ಸೈನಿಕರ ಹತ್ಯೆಯ ಪ್ರಕರಣದ ನಂತರ, 19 ಟಾರ್ಗೆಟ್ ಮಾಡಿದ ದೇಶಗಳ ನಾಗರಿಕರಿಗೆ ಗ್ರೀನ್ ಕಾರ್ಡ್ ಮತ್ತು ಇತರ ವಲಸೆ ಪ್ರಕ್ರಿಯೆಗಳನ್ನು ಅಮೆರಿಕಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.