Blog
Western Ghats ಉಳಿಸಿ: ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು: Western Ghats ದ ಪರಿಸರ, ನದಿಗಳು ಹಾಗೂ ವಿಶಿಷ್ಟ ಜೀವವೈವಿಧ್ಯವನ್ನು ಸಂರಕ್ಷಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಪ್ರತಿಭಟನೆ ನಡೆಯಲಿದ್ದು, ರೈತರು, ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳು, ಕಾರ್ಮಿಕರು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕರೆ ನೀಡಿದೆ.
ಬೇಡ್ತಿ, ಅಘನಾಶಿನಿ, ಗಂಗಾವಳಿ ನದಿಗಳ ರಕ್ಷಣೆಗೆ ಆಗ್ರಹ
ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನಜೀವನದ ಪ್ರಮುಖ ಆಧಾರವಾಗಿರುವ ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸ್ವಾಭಾವಿಕ ಹರಿವಿಗೆ ಧಕ್ಕೆ ಉಂಟುಮಾಡುವ ಯೋಜನೆಗಳ ವಿರುದ್ಧ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಪಶ್ಚಿಮ ಘಟ್ಟದ ಅರಣ್ಯ ಹಾಗೂ ನದಿಗಳ ಮೇಲೆ ಪರಿಣಾಮ ಬೀರುವ ಯೋಜನೆಗಳನ್ನು ತಡೆಯಲು ಬೃಹತ್ ಜನಾಂದೋಲನದ ಅಗತ್ಯವಿದೆ ಎಂದು ಪರಿಸರ ಸಂಘಟನೆಗಳು ಪ್ರತಿಪಾದಿಸಿವೆ.
ಈ ನದಿಗಳು ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಸೇರಿದಂತೆ ಗ್ರಾಮೀಣ ಜನರ ಜೀವನೋಪಾಯದೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ಹೀಗಾಗಿ ಅರಣ್ಯ ಮತ್ತು ನದಿಗಳನ್ನು ಪ್ರತ್ಯೇಕವಾಗಿ ನೋಡದೆ ಸಮಗ್ರ ಪರಿಸರದ ದೃಷ್ಟಿಕೋನದಲ್ಲಿ ಸಂರಕ್ಷಿಸಬೇಕು ಎಂದು ಸಂಘಟಕರು ಒತ್ತಾಯಿಸಿದ್ದಾರೆ.
ಮಲೆನಾಡು, ಕರಾವಳಿ ಯುವಜನರಿಗೆ ಕರೆ
ಬೆಂಗಳೂರಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ, ಮಲೆನಾಡು ಹಾಗೂ ಕರಾವಳಿ ಭಾಗದ ಯುವಕರು ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.
ಸಹಕಾರಿ ಕ್ಷೇತ್ರದ ಸದಸ್ಯರು ಹಾಗೂ ರೈತ ನಾಯಕರು ಹಸಿರು ಶಾಲು ಧರಿಸಿ ಭಾಗವಹಿಸುವಂತೆ ಕರೆ ನೀಡಲಾಗಿದ್ದು, ಮಹಿಳಾ ಸಂಘಟನೆಗಳು ಕುಟುಂಬದ ಭವಿಷ್ಯ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.
ವಿವಿಧ ಸಮುದಾಯಗಳ ಭಾಗವಹಿಸುವಿಕೆಗೆ ಮನವಿ
ಸಿದ್ಧಿ, ಕುಣಬಿ, ಮರಾಠಿ, ನಾಮಧಾರಿ ನಾಯಕ್, ಈಡಿಗ ಹಾಗೂ ರಾಮಕ್ಷತ್ರಿಯ ಸೇರಿದಂತೆ ವಿವಿಧ ಸಮುದಾಯಗಳು ತಮ್ಮ ಸಂಸ್ಕೃತಿ ಮತ್ತು ನಿಸರ್ಗದ ಸಂರಕ್ಷಣೆಗಾಗಿ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸಿ ಧ್ವನಿ ಎತ್ತುವಂತೆ ಸಂಘಟಕರು ಮನವಿ ಮಾಡಿದ್ದಾರೆ.