BREAKING ವಿಂಜೋ ಗೇಮಿಂಗ್ ಆ್ಯಪ್ ವಂಚನೆ: ಇ.ಡಿ ಚಾರ್ಜ್‌ಶೀಟ್ ಸಲ್ಲಿಕೆ | Hosa Suddi

ಅಪರಾಧ

BREAKING ವಿಂಜೋ ಗೇಮಿಂಗ್ ಆ್ಯಪ್ ವಂಚನೆ: ಇ.ಡಿ ಚಾರ್ಜ್‌ಶೀಟ್ ಸಲ್ಲಿಕೆ

Published

on

ಬೆಂಗಳೂರು, ಜನವರಿ 26: ವಿಂಜೋ ಗೇಮಿಂಗ್ ಆ್ಯಪ್‌ (WinZo Gaming App) ವಿರುದ್ಧದ ಅಕ್ರಮ ಹಣಕಾಸು ಮತ್ತು ಭಾರೀ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ. ತನಿಖೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣಕಾಸು ವಹಿವಾಟು, ಬಳಕೆದಾರರ ವಂಚನೆ ಹಾಗೂ ವಿದೇಶಗಳಿಗೆ ಹಣ ವರ್ಗಾವಣೆ ನಡೆದಿರುವ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

ಇ.ಡಿ ತನಿಖೆ ಪ್ರಕಾರ, 2021–22ರ ಸಾಲಿನಲ್ಲಿ ಮಾತ್ರವೇ ವಿಂಜೋ ಗೇಮಿಂಗ್ ಆ್ಯಪ್ ಮೂಲಕ ಸುಮಾರು ₹3,522 ಕೋಟಿ ಮೌಲ್ಯದ ಅಕ್ರಮ ಹಣಕಾಸು ವಹಿವಾಟು ನಡೆದಿದೆ. ಇದರಲ್ಲಿ ₹734 ಕೋಟಿ ಹಣವನ್ನು ನೇರವಾಗಿ ಬಳಕೆದಾರರಿಂದ ವಂಚಿಸಲಾಗಿದೆ ಎಂದು ತಿಳಿದುಬಂದಿದೆ. ಜನರನ್ನು ಸುಲಭ ಆದಾಯದ ಆಮಿಷ ತೋರಿಸಿ ವಂಚಿಸುವ ಉದ್ದೇಶದಿಂದಲೇ ಈ ಗೇಮಿಂಗ್ ಆ್ಯಪ್ ರೂಪಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆ, ರಾಜಸ್ಥಾನ, ನವದೆಹಲಿ ಹಾಗೂ ಗುರುಗ್ರಾಮ್‌ನಲ್ಲಿ ದಾಖಲಾಗಿತ್ತು. ಪ್ರಕರಣದ ಹಿನ್ನೆಲೆ ಇ.ಡಿ ಅಧಿಕಾರಿಗಳು 2025ರ ನವೆಂಬರ್ 18 ಮತ್ತು ಡಿಸೆಂಬರ್ 30ರಂದು ವಿಂಜೋಗೆ ಸಂಬಂಧಿಸಿದ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡರು. ಈ ವೇಳೆ ಬ್ಯಾಂಕ್ ಖಾತೆಗಳು, ಮ್ಯೂಚ್ಯುವಲ್ ಫಂಡ್ಸ್, ಸ್ಥಿರ ಠೇವಣಿಗಳು ಹಾಗೂ ಕ್ರಿಪ್ಟೋ ಕರೆನ್ಸಿ ವಾಲೆಟ್‌ಗಳನ್ನು ಸೇರಿಸಿ ₹690 ಕೋಟಿ ಮೌಲ್ಯದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ.

ತನಿಖೆಯ ವೇಳೆ, ವಿಂಜೋ ಆ್ಯಪ್‌ನಲ್ಲಿ 100ಕ್ಕೂ ಹೆಚ್ಚು ಆನ್‌ಲೈನ್ ಗೇಮಿಂಗ್ ಮಾದರಿಗಳನ್ನು ಪರಿಚಯಿಸಿ ಹೆಚ್ಚಿನ ಲಾಭದ ಭರವಸೆ ನೀಡಲಾಗುತ್ತಿತ್ತು. ದೇಶಾದ್ಯಂತ ಸುಮಾರು 25 ಕೋಟಿ ಬಳಕೆದಾರರನ್ನು ಎಐ ತಂತ್ರಜ್ಞಾನ ಬಳಸಿ ವ್ಯವಸ್ಥಿತವಾಗಿ ಸೋಲಿಸಿ ವಂಚಿಸಲಾಗಿದೆ ಎಂಬುದು ಬಹಿರಂಗವಾಗಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ಯುಎಸ್ ಮತ್ತು ಸಿಂಗಾಪುರ ಮೂಲದ ಶೆಲ್ ಕಂಪನಿಗಳ ಮೂಲಕ ವಿದೇಶಗಳಿಗೆ ವರ್ಗಾಯಿಸಲಾಗಿದೆ. ಸದ್ಯ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಪ್ರಕರಣದ ಮುಂದಿನ ವಿಚಾರಣೆ ಕೋರ್ಟ್‌ನಲ್ಲಿ ನಡೆಯಲಿದೆ.

Trending

Exit mobile version