ಲಕ್ಕುಂಡಿಗಿಂತ ಹೆಚ್ಚಿನ ಸಂಪತ್ತು ಮುದನೂರಿನಲ್ಲಿ ಇದೆ ಎನ್ನುವ ಗ್ರಾಮಸ್ಥರು | Hosa Suddi

ದೇಶ

ಲಕ್ಕುಂಡಿಗಿಂತ ಹೆಚ್ಚಿನ ಸಂಪತ್ತು ಮುದನೂರಿನಲ್ಲಿ ಇದೆ ಎನ್ನುವ ಗ್ರಾಮಸ್ಥರು

Published

on

ಯಾದಗಿರಿ, ಜನವರಿ 24: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿರುವ ಉತ್ಖನನದಿಂದ ಭೂಗರ್ಭ ಸಂಪತ್ತು ಪತ್ತೆಯಾಗುತ್ತಿರುವ ಬೆನ್ನಲ್ಲೇ, ಅದೇ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮದಲ್ಲಿರುವ ದೇವರ ದಾಸಿಮಯ್ಯ ಪುಣ್ಯಕ್ಷೇತ್ರದಲ್ಲಿಯೂ ಉತ್ಖನನ ನಡೆಸುವಂತೆ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಮುದನೂರು (ಬಿ) ಗ್ರಾಮವು ಪ್ರಥಮ ವಚನಕಾರ ದೇವರ ದಾಸಿಮಯ್ಯ ಅವರ ಪುಣ್ಯಕ್ಷೇತ್ರವಾಗಿದ್ದು, ಚಾಲುಕ್ಯರ ಕಾಲದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು ಎನ್ನಲಾಗುತ್ತಿದೆ. ಇತಿಹಾಸಕಾರರು ಹಾಗೂ ಗ್ರಾಮಸ್ಥರ ಪ್ರಕಾರ, ಆ ಕಾಲದಲ್ಲಿ ಇಲ್ಲಿ ವಜ್ರ, ಚಿನ್ನಾಭರಣ ಸೇರಿದಂತೆ ಅಪಾರ ಸಂಪತ್ತು ಬಳಕೆಯಾಗಿದ್ದು, ನಂತರ ಕಾಲಕ್ರಮೇಣ ಅವು ಭೂಗರ್ಭದಲ್ಲಿ ಮುಚ್ಚಲ್ಪಟ್ಟಿವೆ.


101 ಶಿವಲಿಂಗ, ನೂರಾರು ದೇಗುಲಗಳ ಕುರುಹು

ದಾಸಿಮಯ್ಯ ದೇವಾಲಯದ ಸುತ್ತಲೂ ಸುಮಾರು 101 ಶಿವಲಿಂಗ ದೇಗುಲಗಳು ಇದ್ದು, ಬಹುತೇಕ ದೇಗುಲಗಳು ಇಂದು ಹಾಳು ಕೊಂಪೆಯಾಗಿವೆ. ಇನ್ನೂ ಕೆಲವು ಶಿವಲಿಂಗ ಇರುವ ದೇವಸ್ಥಾನಗಳ ಮೇಲೆಯೇ ಮನೆಗಳನ್ನು ಕಟ್ಟಿಕೊಂಡು ಜನರು ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ಸದ್ಯ ಸುಮಾರು 160 ಮನೆಗಳು ದೇವಸ್ಥಾನಗಳ ಮೇಲೆ ನಿರ್ಮಾಣವಾಗಿವೆ.


ಮನೆಗಳ ಸ್ಥಳಾಂತರ – ಜಿಲ್ಲಾಡಳಿತ ಸಿದ್ಧತೆ

ಉತ್ಖನನಕ್ಕೆ ಅನುಕೂಲವಾಗುವಂತೆ 160 ಮನೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಈಗಾಗಲೇ ಗುರುತಿಸುವ ಕಾರ್ಯ ನಡೆಸಿದೆ. ಮನೆಗಳನ್ನು ಸ್ಥಳಾಂತರಿಸಿ ಸರ್ಕಾರ ಉತ್ಖನನ ಆರಂಭಿಸಿದರೆ, ಲಕ್ಕುಂಡಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತು ಹಾಗೂ ನೂರಾರು ಐತಿಹಾಸಿಕ ದೇಗುಲಗಳ ಅವಶೇಷಗಳು ಪತ್ತೆಯಾಗಲಿವೆ ಎಂಬುದು ಗ್ರಾಮಸ್ಥರ ವಿಶ್ವಾಸ.


ಸರ್ಕಾರಕ್ಕೆ ಗ್ರಾಮಸ್ಥರ ಆಗ್ರಹ

“ಲಕ್ಕುಂಡಿಯಲ್ಲಿ ಸಂಪತ್ತು ದೊರೆತಂತೆ, ದೇವರ ದಾಸಿಮಯ್ಯ ಪುಣ್ಯಕ್ಷೇತ್ರದಲ್ಲಿಯೂ ಭೂಗರ್ಭದಲ್ಲಿ ಅಪಾರ ಸಂಪತ್ತು ಇದೆ. ಕೂಡಲೇ ಉತ್ಖನನ ನಡೆಸಬೇಕು” ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದರಿಂದ ಯಾದಗಿರಿ ಜಿಲ್ಲೆಗೆ ಐತಿಹಾಸಿಕ ಹಾಗೂ ಪ್ರವಾಸೋದ್ಯಮದ ಮಹತ್ವ ಇನ್ನಷ್ಟು ಹೆಚ್ಚಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Trending

Exit mobile version