ಅಪರಾಧ
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ಮನೆ ಬಳಿ ಮತ್ತೆ ಜಾಗ ವಿವಾದ – ವಾಗ್ವಾದ, ಪೊಲೀಸ್ ಹಸ್ತಕ್ಷೇಪ
ಹಾಸನ: ರಾಕಿಂಗ್ ಸ್ಟಾರ್ ಯಶ್ (Actor Yash) ಅವರ ತಾಯಿ ಪುಷ್ಪಾ ಅರುಣ್ಕುಮಾರ್ (Pushpa Arunkumar) ಅವರ ಮನೆ ಸಮೀಪದ ನಿವೇಶನ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಮತ್ತೆ ತೀವ್ರಗೊಂಡಿದೆ. ಹಿಂದೆ ಕೋರ್ಟ್ ಆದೇಶದಂತೆ ಧ್ವಂಸಗೊಳಿಸಲಾದ ಕಾಂಪೌಂಡ್ನ್ನು ಪುಷ್ಪಾ ಅವರು ಪುನರ್ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾಗದ ಮೂಲ ಮಾಲೀಕರೊಂದಿಗೆ ವಾಗ್ವಾದ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ನಿವೇಶನ ಮಾಲೀಕ ದೇವರಾಜು, ತಮ್ಮ ಬಳಿ ಇರುವ ದಾಖಲೆಗಳನ್ನು ಉಲ್ಲೇಖಿಸಿ, ಕೋರ್ಟ್ ಆದೇಶದಂತೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿದ್ದು, “ಜಡ್ಜ್ನ್ನೇ ಇಲ್ಲಿಗೆ ಕರೆಸಿ ತೀರ್ಮಾನ ಮಾಡಲಿ” ಎಂದು ಪುಷ್ಪಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೊತೆಗೆ, ಯಶ್ ಮನೆ ಮುಂದೆ ಕ್ಯಾಮೆರಾ ಹಿಡಿದು ಬಿಲ್ಡಪ್ ಮಾಡುತ್ತಿದ್ದೀರಾ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿದು ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇದೇ ವೇಳೆ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡದಂತೆ ಪುಷ್ಪಾ ಅವರು ಮನವಿ ಮಾಡಿದ ಘಟನೆ ಕೂಡ ನಡೆದಿದೆ.
ಏನಿದು ಪ್ರಕರಣ?
ಹಾಸನ ನಗರದ ವಿದ್ಯಾನಗರ ಪ್ರದೇಶದಲ್ಲಿರುವ ಪುಷ್ಪಾ ಅರುಣ್ಕುಮಾರ್ ಅವರ ಮನೆಯ ಸಮೀಪದಲ್ಲಿ, ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿಯ ಮೇರೆಗೆ ಜೆಸಿಬಿ ಮೂಲಕ ಕಾಂಪೌಂಡ್ನ್ನು ನೆಲಸಮಗೊಳಿಸಲಾಗಿತ್ತು. ಇದೀಗ ಅದೇ ಜಾಗದಲ್ಲಿ ಮತ್ತೆ ಕಾಂಪೌಂಡ್ ನಿರ್ಮಾಣ ಯತ್ನ ನಡೆದಿದೆ ಎಂಬ ಆರೋಪದಿಂದ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ.
ಪೊಲೀಸರು ಮತ್ತು ಕಾನೂನು ಪ್ರಾಧಿಕಾರಗಳು ಮುಂದಿನ ಕ್ರಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣವು ಮತ್ತೆ ಕೋರ್ಟ್ ಮೆಟ್ಟಿಲೇರಬಹುದೆಂಬ ಸಾಧ್ಯತೆ ಇದೆ.