ಮಾಧ್ಯಮ ಸಂಸ್ಥೆಗೆ ಕೋಟಿ ಪಾವತಿ ಆರೋಪ: ರಾಜ್ಯ ಸರ್ಕಾರ ಕಟ್ಟುನಿಟ್ಟಿನ ತನಿಖೆ | Hosa Suddi

ಅಪರಾಧ

ಮಾಧ್ಯಮ ಸಂಸ್ಥೆಗೆ ಕೋಟಿ ಪಾವತಿ ಆರೋಪ: ರಾಜ್ಯ ಸರ್ಕಾರ ಕಟ್ಟುನಿಟ್ಟಿನ ತನಿಖೆ

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರ್‌ಎಸ್‌ಎಸ್ ವಿರುದ್ಧ ಸುರೇಶ್ ಗೌಡ ಅವರು ಮಾಡಿದ ಗಂಭೀರ ಆರೋಪಗಳ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ತನಿಖೆಗೆ ಆದೇಶಿಸಿದೆ. ಬುಧವಾರ ಮುಖ್ಯಮಂತ್ರಿ ಕಚೇರಿಯು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ತಕ್ಷಣದ ತನಿಖೆ ಆರಂಭಿಸುವಂತೆ ನಿರ್ದೇಶಿಸಿದೆ.

ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಅಧ್ಯಕ್ಷ ಎಚ್.ಜಿ. ರಮೇಶ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಸುರೇಶ್ ಗೌಡ ಅವರ ಆರೋಪಗಳನ್ನು ಸೂರಣವಾಗಿ ಪರಿಶೀಲಿಸುವಂತೆ ಕೇಳಿಕೊಂಡಿದ್ದರು. ನೀಡಿದ ಮನವಿಯಲ್ಲಿ, “ಯಡಿಯೂರಪ್ಪ ಒಂದು ಮಾಧ್ಯಮ ಸಂಸ್ಥೆಗೆ ₹5 ಕೋಟಿ ಪಾವತಿಸಿದ್ದಾರೆ, ಭೂ ಸಂಬಂಧಿತ ವಿಷಯದಲ್ಲಿ ಮತ್ತೊಂದು ಮಾಧ್ಯಮ ಸಂಸ್ಥೆಗೆ ಅಕ್ರಮ ರೀತಿಯಲ್ಲಿ ಹಣ ನೆರವು ನೀಡಿದ್ದಾರೆ” ಎಂದು ಆರೋಪಿಸಲಾಗಿದೆ. ಜೊತೆಗೆ, ಹಿಂದಿನ ಬಿಜೆಪಿ ಸರ್ಕಾರ ಅಧಿಕಾರಾವಧಿಯಲ್ಲಿ ಆರ್‌ಎಸ್‌ಎಸ್ ಗೆ ಹಲವು ಕಾನೂನುಬಾಹಿರ ಅನುಕೂಲಗಳನ್ನು ನೀಡಿದೆಯೆಂಬ ಆರೋಪವೂ ಮಾಡಲಾಗಿದೆ.

ಸರ್ಕಾರವು ಇವುಗಳನ್ನು ಸಾರ್ವಜನಿಕ ಪ್ರಾಮಾಣಿಕತೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳು ಎಂದು ಪರಿಗಣಿಸಿದ್ದು, ಗೃಹ ಇಲಾಖೆಗೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಸೂಕ್ತ ತನಿಖಾ ಸಂಸ್ಥೆಯ ಮೂಲಕ ವಿವರವಾದ ಪರಿಶೀಲನೆ ಕೈಗೊಳ್ಳಲು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಗೃಹ ಸಚಿವಾಲಯವು ಈ ಪ್ರಾಥಮಿಕ ತನಿಖೆಯನ್ನು ಯಾವ ವಿಭಾಗಕ್ಕೆ — ಎಸ್ಐಟಿ, ಸಿಐಡಿ ಅಥವಾ ಎಸಿಬಿ — ಹಸ್ತಾಂತರಿಸಲಿದೆ ಎಂಬುದೇ ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Trending

Exit mobile version