Connect with us

ಬೆಂಗಳೂರು

ಹೆಚ್ಚಿನ ವಿವರಣೆ ಕೇಳಿ 11 ಮಸೂದೆ ವಾಪಸು ಕಳುಹಿಸಿದ ರಾಜ್ಯಪಾಲರು! – Governor sent back 11 bills

Published

on

ಬೆಂಗಳೂರು: ಮುಡಾ ಪ್ರಕರಣದ ತನಿಖೆಗೆ ಸಿಎಂ ವಿರುದ್ಧ ಪೂರ್ವಾನುಮತಿ ನೀಡಿದ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ಈ ಮಧ್ಯೆ 11 ಮಸೂದೆಗಳಿಗೆ ರಾಜ್ಯಪಾಲರು ಹೆಚ್ಚಿನ ಸ್ಪಷ್ಟೀಕರಣ ನೀಡುವಂತೆ ಕೋರಿ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ಅಷ್ಟಕ್ಕೂ ರಾಜ್ಯಪಾಲರು ವಾಪಸು ಕಳುಹಿಸಿದ ಮಸೂದೆಗಳು ಯಾವುವು? ಕೇಳಿದ ಸ್ಪಷ್ಟೀಕರಣ ಏನು ಎಂಬ ವರದಿ ಇಲ್ಲಿದೆ.

ಮೂರು ಬಿಲ್​ಗಳು ಎರಡನೇ ಬಾರಿ ವಾಪಸು: ರಾಜ್ಯಪಾಲರು ಮೂರು ಬಿಲ್​ಗಳನ್ನು ಎರಡನೇ ಬಾರಿ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯುವ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ಡಿ.28, 2023ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಜ.16ಕ್ಕೆ ಹೆಚ್ಚಿನ ಮಾಹಿತಿ ಕೋರಿ ಈ ಬಿಲ್ ಅನ್ನು ಹಿಂತಿರುಗಿಸಿದ್ದರು. ಈಗ ಎರಡನೇ ಬಾರಿ ಬಿನ್ ​ಅನ್ನು ರಾಜ್ಯಪಾಲರು ವಾಪಸು ಕಳುಹಿಸಿದ್ದಾರೆ.

ಈ ವಿಧೇಯಕದ ಕಾರ್ಯ ವ್ಯಾಪ್ತಿಗೆ ಹಲವು ಪ್ರಾಧಿಕಾರಗಳು ಬರುತ್ತವೆ. ಹೀಗಾಗಿ ಸಂಬಂಧಿತ ಪ್ರಾಧಿಕಾರಿಗಳ ಸಲಹೆ, ಅಭಿಪ್ರಾಯ ಕೇಳುವುದು ಅಗತ್ಯ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಹೇಳಿತ್ತು. ಜೊತೆಗೆ ಸಿಎಂ ಈ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಕಡತ ಸಲ್ಲಿಸಲು ಸೂಚನೆ ನೀಡಿದ್ದರು. ಆದರೆ, ಸಂಬಂಧಿತ ಪ್ರಾಧಿಕಾರಗಳು ಹಾಗೂ ಕಾನೂನು ಇಲಾಖೆಯ ಅಭಿಪ್ರಾಯಗಳು ಕ್ಯಾಬಿನೆಟ್ ನೋಟ್​ನಲ್ಲಾಗಲಿ ಕಡತದಲ್ಲಾಗಲಿ ಲಭ್ಯವಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯ ಮತ್ತು ಸಂಬಂಧಿತ ಪ್ರಾಧಿಕಾರಿಗಳು ನೀಡಿರುವ ಸಲಹೆಗಳ ಮಾಹಿತಿಯನ್ನು ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2023: ಇದನ್ನು ರಾಜ್ಯಪಾಲರು ಎರಡನೇ ಬಾರಿಗೆ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ನ್ನು ಮತ್ತಷ್ಟು ತಿದ್ದುಪಡಿ ಮಾಡುವ ವಿಧೇಯಕ ಇದಾಗಿದೆ. ವಿಧಾನಮಂಡಲದಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ನೀಡಿ ಡಿ.28, 2023ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಈ ಮಸೂದೆಯನ್ನು ಅಂಕಿತ ಹಾಕದೇ ಜ.11ಕ್ಕೆ ರಾಜ್ಯಪಾಲರ ಕಚೇರಿಯಿಂದ ಮಸೂದೆಯನ್ನು ಹಿಂತಿರುಗಿಸಿದ್ದರು.

ಇದೀಗ ಮಾ.14ಕ್ಕೆ ಎರಡನೇ ಬಾರಿ ರಾಜ್ಯಪಾಲರು ಬಿಲ್ ಸಂಬಂಧ ಹೆಚ್ಚಿನ ಸ್ಪಷ್ಟೀಕರಣ ಕೋರಿ ವಾಪಸು ಕಳುಹಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ಹಾಗೂ ತಿದ್ದುಪಡಿಯನ್ನು 2011 ಹಾಗೂ 2012ರಲ್ಲಿ ಮಾಡಲಾಗಿತ್ತು.‌ ಆದರೆ ಹೈ ಕೋರ್ಟ್ ಧಾರವಾಡ ಪೀಠ ಆ ಕಾಯ್ದೆಯನ್ನು ತಿರಸ್ಕರಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪ್ರಕರಣದ ವಿಚಾರಣೆ ಕೊನೇ ಹಂತದಲ್ಲಿದೆ. ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ತಿದ್ದುಪಡಿ ಮಸೂದೆ ತರಬಹುದೇ ಎಂದು ರಾಜ್ಯಪಾಲರು ಸ್ಪಷ್ಟೀಕರಣ ಕೇಳಿದ್ದಾರೆ.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ, 2024: ಇದನ್ನು ರಾಜ್ಯಪಾಲರು ಎರಡನೇ ಬಾರಿ ವಾಪಸು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದು ಮಾರ್ಗದರ್ಶಿ ಮೌಲ್ಯದ 40% ಕ್ಕಿಂತ ಕಡಿಮೆಯಿಲ್ಲದ ದರವನ್ನು ಪಾವತಿಸುವ ಮೂಲಕ ಹೆಚ್ಚುವರಿ ನೆಲದ ವಿಸ್ತೀರ್ಣ ಅನುಪಾತವನ್ನು (ಎಫ್‌ಎಆರ್) ಪಡೆದುಕೊಳ್ಳಲು ಅನುವು ಮಾಡಿಕೊಡುವ ವಿಧೇಯಕವಾಗಿದೆ. ಫೆಬ್ರವರಿಯಲ್ಲಿ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷದ ಸದಸ್ಯರ ಧರಣಿಯ ನಡುವೆಯೇ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿತ್ತು. ಮಾ.3ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಮಸೂದೆಯನ್ನು ಹೆಚ್ಚುವರಿ ವಿವರಣೆ ಕೋರಿ ವಾಪಸು ಕಳುಹಿಸಿದ್ದರು. ಇದೀಗ ಮತ್ತೆ ಜು.26ಕ್ಕೆ ಸರ್ಕಾರಕ್ಕೆ ಬಿಲ್ ಹೆಚ್ಚಿನ ವಿವರಣೆ ಕೋರಿ ವಾಪಸು ಕಳುಹಿಸಿದ್ದಾರೆ.

ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2024: ಇ-ನೋಂದಣಿಯನ್ನು ಅನುಮತಿಸಲು ಮತ್ತು ಉಪ-ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಸರ್ಕಾರವು ಇ-ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024ನ್ನು ಫೆಬ್ರವರಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿತ್ತು. ಜು.8ಕ್ಕೆ ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಮಸೂದೆಯನ್ನು ಜು.26ಕ್ಕೆ ವಾಪಸು ಸರ್ಕಾರಕ್ಕೆ ಮರಳಿಸಿದ್ದಾರೆ. ಇ-ನೋಂದಣಿಯಿಂದ ವಂಚನೆ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಈ ಮಸೂದೆಯಿಂದಾಗುವ ಅನುಕೂಲಗಳ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ ಮತ್ತು ಇ-ನೋಂದಣಿಯ ಸುರಕ್ಷತೆ ಬಗ್ಗೆ ವಿವರಣೆ ಕೋರಿ ಬಿಲ್ ಅನ್ನು ವಾಪಸು ಕಳುಹಿಸಲಾಗಿದೆ.

ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, 2024: ತೆರಿಗೆ ಜಾಲವನ್ನು ವಿಸ್ತರಿಸಲು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದಾಯವನ್ನು ಗಳಿಸುವ ಸಲುವಾಗಿ, ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, 2024ನ್ನು ಮೊನ್ನೆ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಪುರಸಭೆಗಳು ಮತ್ತು ನಗರ ನಿಗಮಗಳು ಪ್ರತಿ ಕಟ್ಟಡ, ಖಾಲಿ ಭೂಮಿ ಅಥವಾ ಎರಡರ ಮೇಲೂ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅನುವು ಮಾಡಿಕೊಡುವ ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಆ.6ಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಈ ಮಸೂದೆಯನ್ನು ಆ.8ಕ್ಕೆ ಹೆಚ್ಚಿನ ವಿವರಣೆ ಕೇಳಿ ವಾಪಸು ಕಳುಹಿಸಿದ್ದಾರೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ನಿಯಮ‌ 2014 ಪ್ರಶ್ನಿಸಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಹೀಗಾಗಿ ಮಸೂದೆ ಕಾನೂನು ಬದ್ಧವಾಗುತ್ತೋ ಎಂಬ ಬಗ್ಗೆ ಕಾನೂನು ಅಭಿಪ್ರಾಯ ಲಗತ್ತಿಸುವಂತೆ ರಾಜಭವನ ಕೋರಿದೆ.

ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024: ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024ಯನ್ನು ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ವಾಪಸು ಕಳುಹಿಸಿದ್ದಾರೆ. ಚಿತ್ರಮಂದಿರಗಳು ಮಾರಾಟ ಮಾಡುವ ಟಿಕೆಟ್‌ ದರದ ಮೇಲೆ ಶೇಕಡಾ 1ರಿಂದ 2ರಷ್ಟು ಸೆಸ್ ಸಂಗ್ರಹಿಸಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಈ ವಿಧೇಯಕವನ್ನು ಆ.6ಕ್ಕೆ ರಾಜ್ಯಪಾಲರಕ್ಕೆ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ಆ.16ಕ್ಕೆ ರಾಜ್ಯಪಾಲರು ಜಿಎಸ್​ಟಿ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆಯೋ ಮತ್ತು ಈ ಬಿಲ್ ಸಂಬಂಧ ಭಾರತೀಯ ಪ್ರಸಾರ ಮತ್ತು ಡಿಜಿಟಲ್ ಫೌಂಡೇಷನ್ ಆಕ್ಷೇಪ ವ್ಯಕ್ತಪಡಿಸಿದ್ದು, ಹೆಚ್ಚಿನ ಸ್ಪಷ್ಟನೆ ಕೋರಿ ವಾಪಸು ಕಳುಹಿಸಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 2024: ಸಹಕಾರ ಸಂಘಗಳಿಗೆ ಮೀಸಲು ಆಧಾರಿತವಾಗಿ ಮೂವರನ್ನು ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲು ಅವಕಾಶ ಕಲ್ಪಿಸುವುದೂ ಸೇರಿದಂತೆ ಇತರೆ ಬದಲಾವಣೆಗಳನ್ನೊಳಗೊಂಡ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ-2024ವನ್ನು ಜುಲೈ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು.‌ ಪ್ರತಿಪಕ್ಷಗಳ ವಿರೋಧದ ಮಧ್ಯೆ ಬಿಲ್ ಅಂಗೀಕಾರಗೊಂಡಿತ್ತು. ಆ.2ಕ್ಕೆ ರಾಜ್ಯಪಸಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ಆ.17ಕ್ಕೆ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಬಿಲ್ ಅನ್ನು ವಾಪಸು ಕಳುಹಿಸಿದ್ದಾರೆ. ಹೈಕೋರ್ಟ್ ಆ.8ಕ್ಕೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ 2023ರ 128A ತಿದ್ದುಪಡಿಯನ್ನು ತಿರಸ್ಕರಿಸಿದೆ. ಪ್ರತಿಪಕ್ಷ ನಾಯಕರೂ ಈ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾನೂನು ಅಭಿಪ್ರಾಯದೊಂದಿಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2024: ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅವಕಾಶ ಕಲ್ಪಿಸುವ ಮತ್ತು ಮೀಸಲಾತಿಯನ್ನು ಒದಗಿಸುವ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2024’ಯನ್ನು ರಾಜ್ಯಪಾಲರು ಅಂಕಿತ ಹಾಕದೇ ಹೆಚ್ಚಿನ ಸ್ಪಷ್ಟನೆ ಕೇಳಿ ವಾಪಸು ಕಳುಹಿಸಿದ್ದಾರೆ. ಆ.2ಕ್ಕೆ ಈ ಬಿಲ್ ಅನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ಆ.17ಕ್ಕೆ ರಾಜ್ಯಪಾಲರು ವಿವರಣೆ ಕೇಳಿ ವಾಪಸು ಕಳುಹಿಸಿದ್ದಾರೆ. ಹೈಕೋರ್ಟ್ ಆ.8ಕ್ಕೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಕಾಯ್ದೆ 2023ರ 128A ತಿದ್ದುಪಡಿಯನ್ನು ತಿರಸ್ಕರಿಸಿದೆ. ಹೀಗಾಗಿ ಕಾನೂನು ಅಭಿಪ್ರಾಯದೊಂದಿಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ.

ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024: ಜುಲೈ ಅಧಿವೇಶನದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024ನ್ನು ಅಂಗೀಕರಿಸಿತ್ತು.‌ ದೇವಸ್ಥಾನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಅನುವು ಮಾಡುವ ಈ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಆ.6ಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಬಿಲ್ ಅನ್ನು ಆ.17ಗೆ ವಾಪಸು ಕಳುಹಿಸಿದ್ದಾರೆ. ಈಗಾಗಲೇ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾಯ್ದೆ 2023 ಜಾರಿಯಲ್ಲಿದೆ. ಅದೇ ಉದ್ದೇಶ ಹೊಂದಿರುವ ಹೊಸ ವಿದೇಯಕದ ಅಗತ್ಯತೆ ಏನಿದೆ? ಎಂದು ವಿವರಣೆ ಕೋರಿದ್ದಾರೆ.

ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣಾ) (ತಿದ್ದುಪಡಿ) ಮಸೂದೆ 2024: ಶಾಸಕರು ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಅವರು ಅನರ್ಹರಾಗದಂತೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ–2024’ನ್ನು ಬಿಜೆಪಿ, ಜೆಡಿಎಸ್‌ ಸದಸ್ಯರು ಆಕ್ಷೇಪದ ಮಧ್ಯೆ ಅಂಗೀಕರಿಸಿತ್ತು. ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ ಮಾ.2ಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ಆ.17ಕ್ಕೆ ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ.

ನಾನು ಈಗಾಗಲೇ ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣಾ) (ತಿದ್ದುಪಡಿ) ಸುಗ್ರೀವಾಜ್ಞೆ 2024 ಸಂಬಂಧ ಜ.29ಕ್ಕೆ ಕೆಲ ಸ್ಪಷ್ಟನೆ ಕೇಳಿದ್ದು, ಈವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.‌ ಡಿಸಿಎಂ ಸಲಹೆಗಾರ ಹುದ್ದೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದೆ. ಇದು ಕಾನೂನು, ಸಂವಿಧಾನ ಬದ್ಧವೋ ಎಂದು ಪ್ರಶ್ನಿಸಿ ಇತರ ಸ್ಪಷ್ಟನೆಗಳೊಂದಿಗೆ ವಿವರಣೆ ಕೇಳಿದ್ದಾರೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

Yathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ Yathindra Siddaramaiah ಅವರು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಸಕ್ರಿಯರಾಗುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಯತೀಂದ್ರ ಭೇಟಿ ಮಾಡಿರುವುದು ಇದೀಗ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಯತೀಂದ್ರ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಸೌಹಾರ್ದಯುತ ಭೇಟಿಯೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಬಗ್ಗೆ ಇದೀಗ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಆಪ್ತರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ?

ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಯತೀಂದ್ರ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ವಿಶೇಷವಾಗಿ, ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ಕೆಲವು ವಿಚಾರಗಳಲ್ಲಿ ಅಂತರ ಕಾಯ್ದುಕೊಂಡಿದ್ದ ನಾಯಕರೊಂದಿಗೂ ಯತೀಂದ್ರ ಮತ್ತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭೇಟಿಯನ್ನು ನೋಡಲಾಗುತ್ತಿದೆ.

ಇದಕ್ಕೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೂ ಯತೀಂದ್ರ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಖಾನ್ ಅವರಂತಹ ಪ್ರಮುಖ ನಾಯಕರನ್ನು ಯತೀಂದ್ರ ಸತತವಾಗಿ ಭೇಟಿ ಮಾಡುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ.

ಭೇಟಿಗಳ ಹಿಂದೆ ರಾಜಕೀಯ ಕಾರ್ಯತಂತ್ರ?

ಯತೀಂದ್ರ ಅವರ ಈ ಭೇಟಿಗಳನ್ನು ಸದ್ಯಕ್ಕೆ ಸಾಮಾನ್ಯ ಸೌಹಾರ್ದಯುತ ಭೇಟಿಗಳೆಂದು ಹೇಳಲಾಗುತ್ತಿದ್ದರೂ, ರಾಜಕೀಯ ಬೆಳವಣಿಗೆಗಳು ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಸಮೀಕರಣಗಳು ಹೇಗೆ ಬದಲಾಗಲಿವೆ ಎಂಬುದು ಕುತೂಹಲ ಮೂಡಿಸಿರುವ ಸಂದರ್ಭದಲ್ಲೇ ಯತೀಂದ್ರ ಅವರ ಚಟುವಟಿಕೆಗಳು ಹೆಚ್ಚಾಗಿವೆ.

ತಂದೆ ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಮತ್ತು ಪ್ರಭಾವವನ್ನು ಬಳಸಿಕೊಂಡು ಪಕ್ಷದ ಪ್ರಮುಖ ನಾಯಕರೊಂದಿಗೆ ಬಾಂಧವ್ಯ ಬಲಪಡಿಸುವ ಪ್ರಯತ್ನ ಇದಾಗಿರಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಆದರೆ, ಜಮೀರ್ ಅಹ್ಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗಿನ ಯತೀಂದ್ರ ಸಿದ್ದರಾಮಯ್ಯ ಅವರ ಭೇಟಿಗಳ ನಿಖರ ರಾಜಕೀಯ ಉದ್ದೇಶವೇನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಹೀಗಾಗಿ ಈ ಸರಣಿ ಭೇಟಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

ರಾಜ್ಯ

KRS ಡ್ಯಾಂಗೆ ಭಾರೀ ಶಾಕ್‌! ಒಳಹರಿವು ದಿಢೀರ್ ಕುಸಿತ; ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?

Published

on

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ (KRS) ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ದಿಢೀರ್ ಇಳಿಕೆಯಾಗಿದೆ. ಕೊಡಗು ಸೇರಿದಂತೆ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿರುವುದರಿಂದ ಜಲಾಶಯದ ಒಳಹರಿವು ಗಣನೀಯವಾಗಿ ಕುಸಿದಿದೆ.

ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟವೂ ವೇಗವಾಗಿ ಏರಿಕೆಯಾಗಿತ್ತು.

ಬುಧವಾರ ಬೆಳಿಗ್ಗೆ 9,438 ಕ್ಯೂಸೆಕ್ ಇದ್ದ ಕೆಆರ್‌ಎಸ್ ಜಲಾಶಯದ ಒಳಹರಿವು ಗುರುವಾರ ವೇಳೆಗೆ ಬರೋಬ್ಬರಿ 17,427 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಆದರೆ ಇದೀಗ ಕಾವೇರಿ ಕೊಳ್ಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದ ವೇಳೆಗೆ ಒಳಹರಿವು 10,028 ಕ್ಯೂಸೆಕ್‌ಗೆ ಕುಸಿದಿದೆ.

ಒಂದೇ ದಿನದಲ್ಲಿ ಒಳಹರಿವಿನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಜಲಾಶಯದ ನೀರಿನ ಲಭ್ಯತೆ ಕುರಿತು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಉತ್ತಮ ಮಳೆಯಾಗುತ್ತದೆಯೇ ಎಂಬುದರ ಮೇಲೆ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ ಅವಲಂಬಿತವಾಗಿರಲಿದೆ.

110 ಅಡಿ ದಾಟಿದ KRS ನೀರಿನ ಮಟ್ಟ

ಒಳಹರಿವು ಕಡಿಮೆಯಾಗಿದ್ದರೂ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110.20 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯದ ಮಟ್ಟ 124.80 ಅಡಿಯಾಗಿದೆ.

ಸದ್ಯ ಜಲಾಶಯದಲ್ಲಿ 31.923 ಟಿಎಂಸಿ ನೀರು ಸಂಗ್ರಹವಾಗಿದೆ. 110 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿರುವುದು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ಮಂಡ್ಯ, ಮೈಸೂರು ಸೇರಿದಂತೆ ಹಲವು ಪ್ರದೇಶಗಳ ಕುಡಿಯುವ ನೀರಿನ ಅಗತ್ಯಗಳಿಗೆ ಸದ್ಯಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.

ಕಳೆದ ಕೆಲವು ದಿನಗಳಲ್ಲಿ ಹೆಚ್ಚಾಗಿದ್ದ ಒಳಹರಿವು ಇದೀಗ ಇಳಿಕೆಯಾಗಿರುವುದರಿಂದ ಜಲಾಶಯದ ನೀರಿನ ಮಟ್ಟ ಮತ್ತು ಒಳಹರಿವಿನ ಮೇಲೆ ರೈತರು ಹಾಗೂ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಮುಂದಿನ ಮಳೆಯ ಪ್ರಮಾಣದ ಆಧಾರದ ಮೇಲೆ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಮತ್ತೆ ಏರಿಳಿತವಾಗುವ ಸಾಧ್ಯತೆಯಿದೆ.

Continue Reading

ದೇಶ

KPSC Recruitment Scam: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ; ನೇಮಕಾತಿ ದಂಧೆ ಬಯಲು ಎಂದ ಕೇಂದ್ರ ಸಚಿವ

Published

on

By

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ KPSC ದಲ್ಲಿ ಅಕ್ರಮ ಹಾಗೂ ನೇಮಕಾತಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. KPSC ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

KPSC ಸಂಸ್ಥೆಯ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿದೆ ಎಂದು ಆರೋಪಿಸಿದ ಎಚ್‌ಡಿಕೆ, ಉದ್ಯೋಗಾಕಾಂಕ್ಷಿಗಳಿಗೆ ಆಯೋಗದ ಬಗ್ಗೆ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದಾರೆ. KPSC ಸದಸ್ಯರ ನೇಮಕಾತಿಯಲ್ಲಿಯೇ ದೊಡ್ಡ ಮಟ್ಟದ ದಂಧೆ ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

KPSC ಸದಸ್ಯರ ನೇಮಕಕ್ಕೂ ರೇಟ್ ಫಿಕ್ಸ್?

KPSC ಸದಸ್ಯರನ್ನು ನೇಮಕ ಮಾಡುವಾಗ ನಿರ್ದಿಷ್ಟ ದರ ನಿಗದಿಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಜಾತಿಯ ಹೆಸರಿನಲ್ಲಿ ಹಾಗೂ ಹಣದ ಆಧಾರದ ಮೇಲೆ ಸದಸ್ಯರ ನೇಮಕಾತಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

KPSC ಮೇಲಿನ ಜನರ ನಂಬಿಕೆ ಕಳೆದುಹೋಗಲು ರಾಜ್ಯ ಸರ್ಕಾರವೇ ಕಾರಣ ಎಂದು ಟೀಕಿಸಿರುವ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

73 ಸಾವಿರ ಉದ್ಯೋಗ ಭರವಸೆ ಏನಾಯಿತು?

ರಾಜ್ಯದ ನಾಲ್ಕು ಇಲಾಖೆಗಳ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಎಚ್‌ಡಿಕೆ, ಕಾಂಗ್ರೆಸ್ ಸರ್ಕಾರ ನೀಡಿದ್ದ 73 ಸಾವಿರ ಉದ್ಯೋಗಗಳ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ ನೇಮಕಾತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಹೊಸ ತಿದ್ದುಪಡಿಗಳ ಹೆಸರಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರ್ಕಾರ ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಎಂಜಿನಿಯರ್ ನೇಮಕಾತಿಯಲ್ಲೂ ಅಕ್ರಮ ಆರೋಪ

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಾಲ್ವರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಇಲಾಖೆಯ ಸಚಿವರಾಗಿ ಹಿಂದೆ ಕಾರ್ಯನಿರ್ವಹಿಸಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ನೇಮಕಾತಿಯಲ್ಲಿನ ಅಕ್ರಮದ ಬಗ್ಗೆ ಮಾಹಿತಿ ಇದ್ದರೂ ನೇಮಕಾತಿ ಮಾಡಲಾಗಿದೆ ಎಂದು ಎಚ್‌ಡಿಕೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.

Continue Reading

Trending