Connect with us

ರಾಜ್ಯ

ಉಡುಪಿ: ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯ, 6ರಂದು ಬಾಳೆ ಮುಹೂರ್ತ

Published

on

ಉಡುಪಿ: ನಾಡಿನ ಪ್ರಸಿದ್ಧ ಧಾರ್ಮಿಕ ಆಚರಣೆಗಳೊಂದಾದ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸುಮಾರು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಈ ಪರ್ಯಾಯೋತ್ಸವದ ಸಂದರ್ಭದಲ್ಲಿ ಶ್ರೀ ಕೃಷ್ಣಮಠದ ಆಡಳಿತ ಮತ್ತು ಕೃಷ್ಣನ ಪೂಜೆಯ ಅಧಿಕಾರ ಒಂದು ಮಠದಿಂದ ಇನ್ನೊಂದು ಮಠಕ್ಕೆ ಸರದಿಪ್ರಕಾರ ಹಸ್ತಾಂತರವಾಗುತ್ತದೆ. ಅದರಂತೆ ಮುಂದಿನ 2026 ಜನವರಿ 18ರಂದು ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥರು, ಈಗಿನ ಪರ್ಯಾಯ ಪೀಠಾಧೀಶರಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಪೂಜಾಧಿಕಾರ ಪಡೆಯಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ 4 ಮುಹೂರ್ತಗಳು ನಡೆಯಲಿವೆ.

4 ಮುಹೂರ್ತಗಳು ಯಾವುದು? ಆಚರಣೆ ಹೇಗೆ?: ಸಂಪ್ರದಾಯದಂತೆ ಮೊದಲನೆಯದಾಗಿ ಬಾಳೆ ಮುಹೂರ್ತ, ನಂತರ ಕ್ರಮವಾಗಿ ಕಟ್ಟಿಗೆ ಮುಹೂರ್ತ, ಧಾನ್ಯ ಮುಹೂರ್ತ, ಅಕ್ಕಿ ಮುಹೂರ್ತಗಳು ನಡೆಯುತ್ತವೆ. ಅದರಂತೆ ಮೊದಲ ಮುಹೂರ್ತ ಬಾಳೆ ಮುಹೂರ್ತ ಡಿಸೆಂಬರ್ 6 ರಂದು ಸಂಪನ್ನಗೊಳ್ಳಲಿದೆ.

ಈ ಸಂದರ್ಭದಲ್ಲಿ ಮಠದ ರಥಬೀದಿಯಲ್ಲಿ ಬಾಳೆಗಿಡ, ತುಳಸಿಗಿಡ ಹಾಗೂ ಕಬ್ಬಿನ ಗಿಡಗಳನ್ನು ಮೆರವಣಿಗೆಯ ಮೂಲಕ ತಂದು ಶಿರೂರು ಮಠದ ಜಮೀನಿನಲ್ಲಿ ನೆಡುವ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತದೆ. ಕಟ್ಟಿಗೆ ಮುಹೂರ್ತದಲ್ಲಿ ಮನೆಗಳಿಂದ ಭಕ್ತರು ನೀಡುವ ಕಟ್ಟಿಗೆಗಳನ್ನು ರಥಬೀದಿಯಲ್ಲಿ ಭವ್ಯ ಮೆರವಣಿಗೆ ಮಾಡಿ, ಮಧ್ವಸರೋವರದ ಸಮೀಪ ರಥದ ರೂಪದಲ್ಲಿ ಅವುಗಳನ್ನು ಸಂಗ್ರಹಿಸಲಾಗುತ್ತದೆ. ಪರ್ಯಾಯೋತ್ಸವಕ್ಕೆ ಕೆಲವು ದಿನಗಳ ಮೊದಲು ಧಾನ್ಯ ಹಾಗೂ ಅಕ್ಕಿ ಮುಹೂರ್ತ ನಡೆಸಲಾಗುತ್ತದೆ. ಇದರಲ್ಲಿ ಧಾನ್ಯ ಮತ್ತು ಅಕ್ಕಿ ಮುಡಿಗಳನ್ನು ಭವ್ಯ ಮೆರವಣಿಗೆ ಶ್ರೀ ಕೃಷ್ಣನ ಮಠದಲ್ಲಿ ತಂದಿರಿಸಿ ಬಳಿಕ ಪೂಜೆ ಸಲ್ಲಿಕೆಯಾಗುತ್ತದೆ.

ಈ ಮುಹೂರ್ತಗಳ ಉದ್ದೇಶ: ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ದಿನವೂ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವವಿದೆ. ಅನ್ನ ದಾಸೋಹಕ್ಕೆ ಅಗತ್ಯವಾದ ಪರಿಕರಗಳನ್ನು ಸಂಗ್ರಹಿಸುವುದೇ ಈ ಮುಹೂರ್ತಗಳ ಉದ್ದೇಶ. ಪರ್ಯಾಯ ಮಠದ ಮುಂದಿನ 2 ವರ್ಷಗಳ ಕಾಲ ಕೃಷ್ಣ ಭಕ್ತರಿಗೆ ಕೃಷ್ಣನ ಪ್ರಸಾದದ ರೂಪದಲ್ಲಿ ಬಡಿಸುವ ಊಟಕ್ಕೆ ಅಗತ್ಯವಾದ ಬಾಳೆಎಲೆಗಾಗಿ ಬಾಳೆಯ ಗಿಡಗಳನ್ನು ನೆಡಲಾಗುತ್ತದೆ. ಅದೇ ರೀತಿ ಅನ್ನಪ್ರಸಾದ ತಯಾರಿಕೆಗೆ ಕಟ್ಟಿಗೆ, ದಾನ್ಯ ಮತ್ತು ಅಕ್ಕಿಯನ್ನು ಸಂಗ್ರಹಿಸಲಾಗುತ್ತದೆ.

ಡಿ.6ರಂದು ಬೆಳಗ್ಗೆ 7 ಗಂಟೆಗೆ ಬಾಳೆ ಮುಹೂರ್ತ ನಡೆಯಲಿದೆ. ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರು ಬಾಳೆ ಮುಹೂರ್ತದಲ್ಲಿ ಭಾಗವಹಿಸಲಿದ್ದಾರೆ. ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥರ ನಂತರ ಅವರ ಉತ್ತರಾಧಿಕಾರಿಯಾಗಿ ಶ್ರೀ ವೇದವರ್ಧನ ತೀರ್ಥರು ಶಿರೂರು ಪೀಠವನ್ನೇರಿದ್ದು, ತಮ್ಮ ಮೊದಲ ಪರ್ಯಾಯ ಮಹೋತ್ಸವವನ್ನು 2026 ಜನವರಿ 18 ರಂದು ನಡೆಸಲಿದ್ದಾರೆ. ಮುಂದೆ 2028ರ ಜ.18ರವರೆಗೆ ಅವರು ಕೃಷ್ಣಮಠದ ಆಡಳಿತ, ಕೃಷ್ಣನ ಪೂಜೆ, ಅನ್ನದಾಸೋಹ ಮತ್ತು ವೈವಿಧ್ಯಮಯ ಧಾರ್ಮಿಕ – ಸಾಂಸ್ಕೃತಿಕ – ಸಾಮಾಜಿಕ ಕಾರ್ಯಗಳನ್ನು ನಡೆಸಲಿದ್ದಾರೆ.

ಈ ಬಗ್ಗೆ ಈ ಟಿವಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪನ್ಯಾಸಕ ಅಶ್ವಥ್​ ಭಾರಧ್ವಾಜ್​ “ಬಾಳೆ ದೇವರ ಪೂಜೆಯ ಆರಾಧನೆಗೆ ಮಹತ್ವವನ್ನು ಪಡೆದುಕೊಂಡಿದೆ. ಮುಂದೆ ಬರುವ ಪರ್ಯಾಯ ಮಹೋತ್ಸವದಲ್ಲಿ ಮುಂದಿನ 2 ವರ್ಷಗಳ ಕಾಲ ಕೃಷ್ಣಭಕ್ತರಿಗೆ ಕೃಷ್ಣನ ಪ್ರಸಾದದ ರೂಪದಲ್ಲಿ ಬಡಿಸುವ ಊಟಕ್ಕೆ ಅಗತ್ಯವಾದ ಬಾಳೆ ಎಲೆಗಾಗಿ ಬಾಳೆಯ ಗಿಡಗಳನ್ನು ನೆಡಲಾಗುತ್ತದೆ. ಬಾಳೆ ಗಿಡದಲ್ಲಿ ಆತ್ಯಂತ ಆಯುರ್ವೇದ ಗುಣಗಳು ಸಹ ಇದೆ” ಎಂದು ತಿಳಿಸಿದರು.

ದೇಶ

ಬೆಂಗಳೂರು ಹೃದಯ ಸ್ಪರ್ಶಿ ಕಥೆ: ಯುವತಿಗೆ ನೆರವಾದ ಅಪರಿಚಿತರು

Published

on

By

ಬೆಂಗಳೂರು: ಸಿಲಿಕಾನ್ ಸಿಟಿಯ ಕತ್ತಲ ರಾತ್ರಿಯಲ್ಲಿ ಯುವತಿಯೊಬ್ಬಳಿಗೆ ರಕ್ಷೆಯಾಗಿ ನಿಂತ ಸಾರಿಗೆ ಸಿಬ್ಬಂದಿ ಹಾಗೂ ಬೈಕ್ ಟ್ಯಾಕ್ಸಿ ಚಾಲಕನ ಮಾನವೀಯತೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಗದ್ದಲದ ನಡುವೆ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಐಶ್ವರ್ಯ ಎಂಬ ಯುವತಿ Bangalore Metropolitan Transport Corporation ಬಸ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಕಾಡುಗೋಡಿಗೆ ಬಂದಿಳಿದಿದ್ದರು. ಆ ಸಮಯದಲ್ಲಿ ಸುತ್ತಮುತ್ತ ಸಂಪೂರ್ಣ ಕತ್ತಲು ಆವರಿಸಿಕೊಂಡಿದ್ದು, ರಸ್ತೆಗಳಲ್ಲಿ ಜನರ ಓಡಾಟವೂ ಇರಲಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಸಿಲುಕಿದ ಯುವತಿ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದರೂ ಯಾವುದೇ ವಾಹನ ಲಭ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಯುವತಿಯ ಸ್ಥಿತಿಯನ್ನು ಗಮನಿಸಿದ ಬಿಎಂಟಿಸಿ ಸಿಬ್ಬಂದಿ, ಆಕೆಯನ್ನು ಬಸ್ ಸ್ಟಾಪ್‌ನಲ್ಲಿ ಬಿಟ್ಟು ತೆರಳದೆ ಸುರಕ್ಷಿತ ವಾಹನ ಸಿಗುವವರೆಗೂ ಅಲ್ಲಿಯೇ ಉಳಿದುಕೊಂಡರು. ಅವರ ಈ ಕಾಳಜಿ ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ.

ಅದೇ ಸಮಯದಲ್ಲಿ ಆ ಮಾರ್ಗವಾಗಿ ಬಂದ Rapido ಚಾಲಕನೊಬ್ಬ ಯುವತಿಯ ನೆರವಿಗೆ ಧಾವಿಸಿದರು. ಬಿಎಂಟಿಸಿ ಸಿಬ್ಬಂದಿ ಚಾಲಕನ ವಿವರಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಯುವತಿಯನ್ನು ಅವರೊಂದಿಗೆ ಕಳುಹಿಸಿದರು. ವಿಶೇಷವೆಂದರೆ, ಆ ಚಾಲಕ ಯಾವುದೇ ಹಣ ಪಡೆಯದೆ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮಗೆ ನೆರವಾದ ಬಿಎಂಟಿಸಿ ಸಿಬ್ಬಂದಿ ಮತ್ತು ರ‍್ಯಾಪಿಡೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಈಗ ವೈರಲ್ ಆಗಿ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

ದೇಶ

12 ವರ್ಷದ ಗೊಂದಲಕ್ಕೆ ತೆರೆ: ಅಮರಾವತಿ ರಾಜಧಾನಿ ಘೋಷಣೆ

Published

on

By

ಅಮರಾವತಿ: ಆಂಧ್ರ ಪ್ರದೇಶದ ರಾಜಧಾನಿ ಕುರಿತಾಗಿ ಹನ್ನೆರಡು ವರ್ಷಗಳ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದ ಏಕೈಕ ರಾಜಧಾನಿಯಾಗಿ Amaravati ನಗರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ನಿರ್ಧಾರದಿಂದ ದೀರ್ಘಕಾಲದ ರಾಜಕೀಯ ಚರ್ಚೆಗಳಿಗೆ ಅಂತ್ಯ ಕಂಡಿದೆ.

2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಗಿ Telangana ಹುಟ್ಟಿಕೊಂಡ ನಂತರ, Hyderabad ಅನ್ನು ತಾತ್ಕಾಲಿಕ ಜಂಟಿ ರಾಜಧಾನಿಯಾಗಿ ಘೋಷಿಸಲಾಗಿತ್ತು. ಆ ಅವಧಿ ಮುಗಿದರೂ ಹೊಸ ರಾಜಧಾನಿ ಕುರಿತು ಸ್ಪಷ್ಟತೆ ಬರದೇ ಹನ್ನೆರಡು ವರ್ಷಗಳ ಕಾಲ ಗೊಂದಲ ಮುಂದುವರಿದಿತ್ತು.

ಹಿಂದಿನ ಮುಖ್ಯಮಂತ್ರಿ Y. S. Jagan Mohan Reddy ಮೂರು ರಾಜಧಾನಿಗಳ ಯೋಜನೆ (ಅಮರಾವತಿ – ಶಾಸನ, ಕರುನೂಲ್ – ನ್ಯಾಯಾಂಗ, ವಿಶಾಖಪಟ್ಟಣಂ – ಆಡಳಿತ) ಮುಂದಿಟ್ಟಿದ್ದು ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಯಿತು. ಈ ಪ್ರಸ್ತಾವನೆಗೆ ಕೇಂದ್ರದ ಅನುಮೋದನೆ ಸಿಗದೇ ಯೋಜನೆ ಮುಂದುವರಿಯಲಿಲ್ಲ.

ಇದಾದ ಬಳಿಕ 2024ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ N. Chandrababu Naidu ಅಮರಾವತಿಯನ್ನು ಏಕೈಕ ರಾಜಧಾನಿಯಾಗಿ ಘೋಷಿಸಿ, ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೊಂಡರು. ಜೊತೆಗೆ, ಭವಿಷ್ಯದಲ್ಲಿ ರಾಜಧಾನಿ ಬದಲಾವಣೆಗೆ ಅವಕಾಶವಿಲ್ಲದಂತೆ ಸಂಸತ್ತಿನಲ್ಲಿ ತಿದ್ದುಪಡಿ ಕಾಯಿದೆ ಅಂಗೀಕರಿಸಲಾಗಿದೆ.

ಈ ಕ್ರಮದೊಂದಿಗೆ ಆಂಧ್ರ ಪ್ರದೇಶ ಪುನರ್‌ವಿಂಗಡಣೆ (ತಿದ್ದುಪಡಿ) ಕಾಯಿದೆ–2026 ಅಂಗೀಕಾರಗೊಂಡಿದ್ದು, ರಾಜ್ಯದ ರಾಜಧಾನಿ ಪ್ರಶ್ನೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ರಾಜಕೀಯ ಪಕ್ಷಗಳ ನಡುವಿನ ಹಗ್ಗಜಗ್ಗಾಟ ಮತ್ತು ವಿಭಿನ್ನ ಪ್ರಸ್ತಾವನೆಗಳೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದವು.

ಒಟ್ಟಿನಲ್ಲಿ, ಅಮರಾವತಿ ಈಗ ಆಂಧ್ರ ಪ್ರದೇಶದ ಕಾನೂನಾತ್ಮಕ ಹಾಗೂ ಶಾಶ್ವತ ರಾಜಧಾನಿಯಾಗಿ ಘೋಷಣೆಗೊಂಡಿದೆ.

Continue Reading

Trending