Connect with us

ದೇಶ

ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

Published

on

ನವದೆಹಲಿ: 2023-24 ಹಣಕಾಸು ವರ್ಷದಲ್ಲಿ ಬಿಜೆಪಿ (BJP) ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್‌ (Congress) 289 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.

ಭಾರತೀಯ ಚುನಾವಣಾ ಆಯೋಗ (ECI) ತನ್ನ ವೆಬ್‌ಸೈಟ್‌ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ಅಪ್ಲೋಡ್‌ ಮಾಡಿದೆ. 2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್‌ 79.92 ಕೋಟಿ ರೂ. ಸ್ವೀಕರಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆಯಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಕೋಟಿ ರೂ.?
ಬಿಜೆಪಿ – 2244
* ಬಿಆರ್‌ಎಸ್‌ – 580
ಕಾಂಗ್ರೆಸ್‌ -289
*ವೈಎಸ್‌ಆರ್‌ಸಿಪಿ – 184
ಟಿಡಿಪಿ – 100
ಡಿಎಂಕೆ – 60
ಎಎಪಿ – 11
ಟಿಎಂಸಿ – 6.

ಬಿಜೆಪಿ ಪ್ರುಡೆಂಟ್ ಎಲೆಕ್ಟೋರಲ್‌ ಟ್ರಸ್ಟ್‌ನಿಂದ (Prudent Electoral Trust) 723.6 ಕೋಟಿ ರೂ. ದೇಣಿಗೆ ಪಡೆದಿದೆ. ಈ ಟ್ರಸ್ಟ್ ಕಾಂಗ್ರೆಸ್ ಪಕ್ಷಕ್ಕೆ 156.4 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಬಿಜೆಪಿ ಪಡೆದ ಒಟ್ಟು ದೇಣಿಗೆಯ ಮೂರನೇ ಒಂದರಷ್ಟು ಮತ್ತು ಕಾಂಗ್ರೆಸ್ ದೇಣಿಗೆಯ ಅರ್ಧದಷ್ಟು ಭಾಗ ಈ ಒಂದೇ ಟ್ರಸ್ಟ್‌ನಿಂದ ಬಂದಿರುವುದು ವಿಶೇಷ. ಪ್ರುಡೆಂಟ್ ಬಿಆರ್‌ಎಸ್‌ ಮತ್ತು ವೈಎಸ್‌ಆರ್‌ಪಿಸಿಗೆ ಕ್ರಮವಾಗಿ 85 ಕೋಟಿ ರೂ. ಮತ್ತು 62.5 ಕೋಟಿ ರೂ. ನೀಡಿದೆ. ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾ ಲಿಮಿಟೆಡ್, ಸೀರಂ ಇನ್‌ಸ್ಟಿಟ್ಯೂಟ್‌, ಆರ್ಸೆಲರ್ ಮಿತ್ತಲ್ ಗ್ರೂಪ್ ಮತ್ತು ಭಾರ್ತಿ ಏರ್‌ಟೆಲ್ ಸೇರಿವೆ. ‌ ಟ್ರಯಂಫ್ ಎಲೆಕ್ಟೋರಲ್ ಟ್ರಸ್ಟ್‌ 127 ಕೋಟಿ ರೂ., ಐಂಜಿಗಾರ್ಟಿಂಗ್ ಎಲೆಕ್ಟೋರಲ್ ಟ್ರಸ್ಟ್‌ 17.2 ಲಕ್ಷ ರೂ. ಹಣವನ್ನು ಬಿಜೆಪಿಗೆ ನೀಡಿದೆ.

ಭಾರತದ ‘ಲಾಟರಿ ಕಿಂಗ್’ ಎಂದೇ ಹೆಸರುವಾಸಿಯಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಕಂಪನಿಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ 2023-24ರಲ್ಲಿ ಬಿಜೆಪಿಗೆ 3 ಕೋಟಿ ರೂ. ದೇಣಿಗೆ ನೀಡಿದೆ. ಫ್ಯೂಚರ್ ಗೇಮಿಂಗ್ ಚುನಾವಣಾ ಬಾಂಡ್‌ಗಳ ಮಾರ್ಗದ ಟಿಎಂಸಿಗೆ 1,610 ಕೋಟಿ ರೂ. ದೇಣಿಗೆ ನೀಡಿತ್ತು. ಸದ್ಯ ಸ್ಯಾಂಟಿಯಾಗೋ ಮಾರ್ಟಿನ್‌ ಒಡೆತನದ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ತನಿಖೆ ನಡೆಯುತ್ತಿದೆ.

2019 ಲೋಕಸಭಾ ಚುನಾವಣೆಯ ಸಮಯದಲ್ಲೂ ಬಿಜೆಪಿಗೆ ಹೆಚ್ಚಿನ ದೇಣಿಗೆ ಸಿಕ್ಕಿತ್ತು. 2018-19ರ ಅವಧಿಯಲ್ಲಿ ಬಿಜೆಪಿ 742 ಕೋಟಿ ರೂ. ಮತ್ತು ಕಾಂಗ್ರೆಸ್‌ 146.8 ಕೋಟಿ ರೂ. ದೇಣಿಗೆ ಸಿಕ್ಕಿದೆ ಎಂದು ಘೋಷಿಸಿಕೊಂಡಿತ್ತು.

ರದ್ದಾಗಿತ್ತು ಚುನಾವಣಾ ಬಾಂಡ್‌:
2017–18ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ (Electoral Bonds)ಪರಿಚಯಿಸಿತ್ತು. ಚುನಾವಣಾ ಬಾಂಡ್‌ ಅಕ್ರಮ ಎಂದು ಹೇಳಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ 2024ರ ಫೆಬ್ರವರಿಯಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾಗಿದೆ. ಗಂಭೀರ ನ್ಯೂನತೆಗಳನ್ನು ಹೊಂದಿದ್ದು ಪಾರದರ್ಶಕತೆಯಿಂದಲೂ ಕೂಡಿಲ್ಲ ಎಂದು ಹೇಳಿ ರದ್ದುಗೊಳಿಸಿತ್ತು.

ಚುನಾವಣಾ ಆಯೋಗಕ್ಕೆ ವಾರ್ಷಿಕ ದೇಣಿಗೆಯ ಮಾಹಿತಿಯನ್ನು ಸಲ್ಲಿಸುವಾಗ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯ ರಾಜಕೀಯ ಪಕ್ಷಗಳಿಗೆ ಇರಲಿಲ್ಲ.

2018 ಹಾಗೂ ಮಾರ್ಚ್‌ 2023ರ ನಡುವೆ ಈ ಬಾಂಡ್‌ಗಳ ಮೂಲಕ ಬಿಜೆಪಿಗೆ 5,271 ಕೋಟಿ ರೂ. ಬಂದಿದ್ದರೆ ಕಾಂಗ್ರೆಸ್‌ಗೆ 952 ಕೋಟಿ ರೂ. ದೇಣಿಗೆ ಬಂದಿತ್ತು.

ದೇಶ

“ನರಕದಲ್ಲಿ ಬದುಕಬೇಕಾಗುತ್ತದೆ”: ಇರಾನ್‌ಗೆ ಟ್ರಂಪ್ ಎಚ್ಚರಿಕೆ

Published

on

By

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ Truth Social ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇರಾನ್ ಮೂಲಸೌಕರ್ಯಗಳ ಮೇಲೆ ಭಾರೀ ದಾಳಿ ನಡೆಯಬಹುದು. ಇತಿಹಾಸದಲ್ಲಿ ಕಾಣದ ರೀತಿಯ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ” ಎಂದು ಕಠಿಣ ಭಾಷೆಯಲ್ಲಿ ಹೇಳಿದ್ದಾರೆ.

ಇದರ ಬೆನ್ನಲ್ಲೇ, ಇರಾನ್ ಒಳಗೆ ಪತನಗೊಂಡಿದ್ದ ಎಫ್-15 ಯುದ್ಧವಿಮಾನ ಕಮಾಂಡರ್‌ರನ್ನು ಅಮೆರಿಕಾ ವಿಶೇಷ ಪಡೆಗಳು ಯಶಸ್ವಿಯಾಗಿ ರಕ್ಷಿಸಿರುವುದನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಶತ್ರು ಪ್ರದೇಶದಲ್ಲಿದ್ದ ಗಾಯಗೊಂಡ ಸೈನಿಕರನ್ನು ಸುರಕ್ಷಿತವಾಗಿ ಕರೆತಂದಿರುವುದು ಸಾಹಸಮಯ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದೀಗ ಹಾರ್ಮುಜ್ ಜಲಸಂಧಿ ವಿವಾದ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಯುರೋಪ್ ಮತ್ತು ಏಷ್ಯಾಕ್ಕೆ ತೈಲ ಸಾಗಾಣಿಕೆ ಮಾಡುವ ಪ್ರಮುಖ ಮಾರ್ಗವೇ ಇದು. ಇರಾನ್ ಈ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಜಾಗತಿಕ ತೈಲ ಬೆಲೆ ಏರಿಕೆಯ ಆತಂಕ ಎದುರಾಗಿದೆ.

ಇದರ ನಡುವೆ ಇರಾನ್ ಕೂಡ ತಿರುಗೇಟು ನೀಡಿದ್ದು, “ನಮ್ಮ ಮೇಲೆ ದಾಳಿ ಮಾಡಿದರೆ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸುತ್ತೇವೆ” ಎಂದು ಎಚ್ಚರಿಸಿದೆ.

ಒಟ್ಟಿನಲ್ಲಿ, ಅಮೆರಿಕಾ-ಇರಾನ್ ನಡುವಿನ ವಾಕ್ಸಮರ ಮತ್ತು ಯುದ್ಧದ ವಾತಾವರಣ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಜಾಗತಿಕ ಶಾಂತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

ಕ್ರೀಡೆ

ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!

Published

on

By

ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.

ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.

ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.

ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.

ಆರ್ಸಿಬಿ ಬ್ಯಾಟಿಂಗ್ ವಿವರ:

  • ವಿರಾಟ್ ಕೊಹ್ಲಿ – 28 (18)
  • ಫಿಲ್ ಸಾಲ್ಟ್ – 46 (30)
  • ದೇವದತ್ತ ಪಡಿಕಲ್ – 50 (29)
  • ರಜತ್ ಪಾಟೀದಾರ್ – 48* (19)
  • ಟಿಮ್ ಡೇವಿಡ್ – 70* (25)
Continue Reading

ದೇಶ

ಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ

Published

on

By

ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಕ್ಕೂ ಜಗಳ-ಕೇಸು ಸಾಮಾನ್ಯವಾಗಿರುವ ಸಂದರ್ಭದಲ್ಲೇ, ಬಿಹಾರದ ಒಂದು ಹಳ್ಳಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. ಕಲಿಯಾಚಕ್ ಗ್ರಾಮ ಕಳೆದ 118 ವರ್ಷಗಳಿಂದ ಯಾವುದೇ ಅಪರಾಧ ದಾಖಲಾಗದೇ ಶಾಂತಿಯುತ ಜೀವನ ನಡೆಸುತ್ತಿರುವುದು ವಿಶೇಷ.

ನಳಂದ ಜಿಲ್ಲೆಯ ಈ ಗ್ರಾಮದಲ್ಲಿ ಸ್ಥಾಪನೆಯಾದ ದಿನದಿಂದಲೂ ಗಂಭೀರ ಅಪರಾಧಗಳೇ ನಡೆದಿಲ್ಲ. ಅಷ್ಟೇ ಅಲ್ಲ, ಇಷ್ಟು ವರ್ಷಗಳಲ್ಲಿ ಪೊಲೀಸ್ ಸೈರನ್ ಕೂಡ ಕೇಳಿಸಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಗ್ರಾಮದಲ್ಲಿ ಯಾವುದೇ ಸಣ್ಣಪುಟ್ಟ ವಿವಾದಗಳು ಉಂಟಾದರೂ, ಹಿರಿಯರು ಕೂತು ಸಮಸ್ಯೆಯನ್ನು ಪರಿಹರಿಸುತ್ತಾರೆ.

ಈ ಗ್ರಾಮ ಹಿಲ್ಸಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆದರೆ ಪೊಲೀಸ್ ದಾಖಲೆಗಳಲ್ಲಿ ಈ ಗ್ರಾಮದಿಂದ ಒಂದೇ ಒಂದು ದೂರು ಕೂಡ ಇಲ್ಲದಿರುವುದು ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ.

ಗ್ರಾಮದಲ್ಲಿ ಸುಮಾರು 60 ಕುಟುಂಬಗಳು, 500 ಜನರು ವಾಸಿಸುತ್ತಿದ್ದು, ವಿವಿಧ ಜಾತಿ-ವರ್ಗಗಳ ಜನರು ಸಹೋದರತ್ವದಿಂದ ಬದುಕುತ್ತಿದ್ದಾರೆ. “ಗ್ರಾಮದ ಸಮಸ್ಯೆಗಳನ್ನು ಗ್ರಾಮದಲ್ಲೇ ಬಗೆಹರಿಸಬೇಕು” ಎಂಬುದು ಇವರ ಮೂಲ ತತ್ವವಾಗಿದೆ.

ಈ ಶಾಂತಿಯುತ ವಾತಾವರಣಕ್ಕೆ ಪ್ರಮುಖ ಕಾರಣ ಮಾಜಿ ಪಂಚಾಯಿತಿ ಅಧ್ಯಕ್ಷ ಸಾಧು ಶರಣ್ ಸಿಂಗ್ ಅವರ ಮಾರ್ಗದರ್ಶನ. ಅವರ ಪ್ರಯತ್ನದಿಂದ ಈ ಗ್ರಾಮ ಮಾದರಿಯಾಗಿ ರೂಪುಗೊಂಡಿದೆ.

ಇಲ್ಲಿನ ಯುವಕರು ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ.

ಗಮನಿಸಿ: ಮೇಲಿನ ವಿವರಗಳು ಬಿಹಾರದ ಕಲಿಯಾಚಕ್ ಗ್ರಾಮದ ಕುರಿತು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನು ಆಧರಿಸಿವೆ. ಇದು ಅಪರಾಧ ಮುಕ್ತ ಗ್ರಾಮವಾಗಿ ದೇಶದಲ್ಲಿ ವಿಶೇಷ ಮನ್ನಣೆಯನ್ನು ಗಳಿಸಿದೆ.

ಒಟ್ಟಿನಲ್ಲಿ, ಕಲಿಯಾಚಕ್ ಗ್ರಾಮವು ಒಗ್ಗಟ್ಟು, ಸಹೋದರತ್ವ ಮತ್ತು ಶಾಂತಿಯುತ ಬದುಕಿನ ನಿಜವಾದ ಮಾದರಿಯಾಗಿ ಇಡೀ ದೇಶಕ್ಕೆ ಪ್ರೇರಣೆಯಾಗಿದೆ.

Continue Reading

Trending