Connect with us

ಬೆಂಗಳೂರು

ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ : ಸಿಎಂ ಸಿದ್ದರಾಮಯ್ಯ – CM SIDDARAMAIAH

Published

on

ಬೆಂಗಳೂರು: ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಮುಖ್ಯಮಂತ್ರಿಗಳಾಗುವಂತೆ ಆಶಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ಈ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ ಎಂದರು.

ಬಿಜೆಪಿಯ ಆರೋಪಗಳು ರಾಜಕೀಯ ಪ್ರೇರಿತ : ನಿಗಮ ಹಾಗೂ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದರು.

ನನಗೆ ಮಾಹಿತಿ ಇಲ್ಲ : ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಕುಟುಂಬದವರಿಗೆ ಲೋಕಾಯುಕ್ತದವರು ಕ್ಲೀನ್ ಚಿಟ್ ನೀಡಿರುವ ಬಗ್ಗೆ ಮಾತನಾಡಿದ ಸಿಎಂ, ಈ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ತಿಳಿಸಿದರು.

ದಾವೋಸ್​ಗೆ ಹೋಗುತ್ತಿಲ್ಲ : ದಾವೋಸ್ ಶೃಂಗಸಭೆಯಲ್ಲಿ ಭಾಗವಹಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಸಾಲಿನ ಆಯವ್ಯಯದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದರಿಂದ 2025 ರ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಸುಭಾಷ್ ಚಂದ್ರ ಬೋಸ್ ಅಪ್ರತಿಮ‌ ದೇಶಭಕ್ತ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಅಂಗವಾಗಿ ವಿಧಾಮಸೌಧದಲ್ಲಿನ ಅವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಸಿಎಂ, ಸುಭಾಷ್ ಚಂದ್ರ ಬೋಸ್ ಅವರು ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಿ, ಭಾರತೀಯರನ್ನು ಬ್ರಿಟಿಷರ ಗುಲಾಮಗಿರಿಯಿಂದ ಸ್ವತಂತ್ರರಾಗಿಸುವ ಹೆಗ್ಗುರಿಯಿಂದ ಹೋರಾಡಿ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನ. ಅವರು ದೇಶದ ಬಗ್ಗೆ ಅಪಾರ ಗೌರವಾಭಿಮಾನ ಹೊಂದಿದ್ದ ಮಹಾನ್ ದೇಶಭಕ್ತ. ಈಗಿನ ಐಎಎಸ್​​ನಂತೆ ಬ್ರಿಟಿಷರ ಕಾಲದಲ್ಲಿದ್ದ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತಮ್ಮ ಉಜ್ವಲ ಭವಿಷ್ಯವನ್ನು ತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟರು. ಮಹಾತ್ಮ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ಭಾರತ ಸ್ವಾತಂತ್ರ್ಯ ಹೊಂದುವುದು ಕಷ್ಟಸಾಧ್ಯ ಎಂಬುದು ಸುಭಾಷರ ಅಭಿಪ್ರಾಯವಾಗಿತ್ತು. ಆದ್ದರಿಂದ ಶಸ್ತ್ರಾಸ್ತ್ರಗಳನ್ನು ಬಳಸಿಯೇ ಬ್ರಿಟಿಷರನ್ನು ಭಾರತದಿಂದ ಹೊರದೂಡುವ ಉದ್ದೇಶದಿಂದ ಐಎನ್​​ಎ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅವರ ಜೀವನ-ಸಾಧನೆಗಳನ್ನು ಸ್ಮರಿಸುವ ಜೊತೆಗೆ ಅವರ ಆದರ್ಶಗಳ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕಿದೆ. ಈ ದಿಸೆಯಲ್ಲಿ ಸರ್ಕಾರ ಈ ಮಹಾನ್ ನಾಯಕನಿಗೆ ಗೌರವ ಸಲ್ಲಿಸಿದೆ ಎಂದರು.

ದೇಶ

Bengaluru: ಸಚಿವ ಮುನಿಯಪ್ಪ ಮನೆ ಮುತ್ತಿಗೆ: ಆಟೋ ಚಾಲಕರ ಪ್ರತಿಭಟನೆ

Published

on

By

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಸಾವಿರಾರು ಆಟೋ ಚಾಲಕರ ಬದುಕು ಸಂಕಷ್ಟಕ್ಕೀಡಾಗಿದೆ. ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಗದೆ ಚಾಲಕರು ಬಂಕ್‌ಗಳ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗೆ ವಿರೋಧವಾಗಿ ಚಾಲಕರು ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. “ಗ್ಯಾಸ್ ಸಿಗುತ್ತಿಲ್ಲ, ಸಿಕ್ಕರೂ ಲೀಟರ್‌ಗೆ ₹90 ಬದಲು ₹135 ವರೆಗೆ ವಸೂಲಿ ಮಾಡುತ್ತಿದ್ದಾರೆ” ಎಂದು ಚಾಲಕರು ಆರೋಪಿಸಿದ್ದಾರೆ.

ಮಹಿಳಾ ಆಟೋ ಚಾಲಕರ ಸ್ಥಿತಿ ಮತ್ತಷ್ಟು ದುಃಖಕರವಾಗಿದೆ. “ಮಕ್ಕಳನ್ನು ಮನೆಯಲ್ಲಿ ಬಿಟ್ಟು ಗಂಟೆಗಳ ಕಾಲ ಗ್ಯಾಸ್‌ಗಾಗಿ ಕಾಯಬೇಕು” ಎಂದು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಬಂಕ್‌ಗಳಲ್ಲಿ ದಾಸ್ತಾನು ಕೊರತೆಯೇ ಪ್ರಮುಖ ಕಾರಣವಾಗಿದ್ದು, ಹಗಲು-ರಾತ್ರಿ ಎನ್ನದೆ ಚಾಲಕರು ರಸ್ತೆಯಲ್ಲೇ ಕಾಯುವಂತಾಗಿದೆ.

ಪ್ರತಿಭಟನೆಯ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೆ.ಎಚ್. ಮುನಿಯಪ್ಪ, “ಈ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ. ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಇಂಧನ ವಿತರಣೆ ಕೇಂದ್ರದ ನಿಯಂತ್ರಣದಲ್ಲಿ ಇದೆ. ಕರ್ನಾಟಕಕ್ಕೆ ಸಮರ್ಪಕ ಪೂರೈಕೆ ಆಗುತ್ತಿಲ್ಲ” ಎಂದು ಆರೋಪಿಸಿದರು. ಈ ಕುರಿತು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿ, ಏಪ್ರಿಲ್ 10 ನಂತರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಆದರೆ ಸಚಿವರ ಉತ್ತರದಿಂದ ಅಸಮಾಧಾನಗೊಂಡ ಚಾಲಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ನಾವು ರಸ್ತೆಯಲ್ಲೇ ಮಲಗುತ್ತಿದ್ದರೂ ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಇಂಧನ ಅಸ್ಥಿರತೆಯ ನಡುವೆ ಸ್ಥಳೀಯ ಮಟ್ಟದಲ್ಲಿ ಉಂಟಾದ ಈ ಎಲ್‌ಪಿಜಿ ಕೊರತೆ ಆಟೋ ಚಾಲಕರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ.

Continue Reading

ದೇಶ

ವೀರಕುಮಾರರ ತಪಸ್ಸು, ಭಕ್ತಿಯ ತೇಜಸ್ಸು: ಕೆಂಗೇರಿ ಕರಗದ ವೈಶಿಷ್ಟ್ಯ

Published

on

By

ಬೆಂಗಳೂರು: ನಗರದ ಕೆಂಗೇರಿಯಲ್ಲಿ ಕ್ಷತ್ರಿಯ (ತಿಗಳ ಕ್ಷತ್ರಿಯ) ಸಮುದಾಯದವರಿಂದ ಆಚರಿಸಲ್ಪಡುವ ದ್ರೌಪದಿ ಅಮ್ಮನವರ ಭವ್ಯ ಕರಗ ಶಕ್ತಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಸಂಪ್ರದಾಯಿಕ ಹಬ್ಬದಲ್ಲಿ ಭಕ್ತಿ, ಶಕ್ತಿ ಮತ್ತು ಸಂಸ್ಕೃತಿಯ ಸಮ್ಮಿಳನ ಕಂಡುಬರುತ್ತದೆ.

ಈ ಮಹೋತ್ಸವದ ಅಂಗವಾಗಿ ಹಸಿ ಕರಗವನ್ನು ಮುನ್ನಡೆಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಮುದಾಯದವರು Draupadi Amman ಅವರನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ಕರಗ ಪೂಜೆಯಲ್ಲಿ ಕುಲಪುರೋಹಿತರು, ವೀರಕುಮಾರರು ಮತ್ತು ಭಕ್ತರು ಭಾಗವಹಿಸಿ ವಿಶೇಷ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಹಬ್ಬದ ವಿಶೇಷವೆಂದರೆ ವೀರಕುಮಾರರು ಕೈಯಲ್ಲಿ ಖಡ್ಗಗಳನ್ನು ಹಿಡಿದು ಭಕ್ತಿಯ ಸಂಕೇತವಾಗಿ ತಮ್ಮ ಎದೆಗೆ ತಾವೇ ಪ್ರಹಾರ ಮಾಡಿಕೊಳ್ಳುವುದು. ಗಾಯವಾದಲ್ಲಿ ಔಷಧಿಯ ಬದಲು ಅರಿಶಿನವನ್ನು ಬಳಸಿ ದೇವಿಯ ಮೇಲಿನ ಭಕ್ತಿಯನ್ನು ತೋರಿಸುತ್ತಾರೆ.

ರಾತ್ರಿ ಸುಮಾರು ಮೂರು ಗಂಟೆಗೆ ಹೂವಿನ ಕರಗ ಸಿದ್ಧವಾಗುತ್ತಿದ್ದು, ಕೆಂಪು ವಸ್ತ್ರ ಮತ್ತು ಮಂಗಳ ದ್ರವ್ಯಗಳಿಂದ ಅಲಂಕರಿಸಲಾಗುತ್ತದೆ. ಪೂಜಾರಿ ಮಲ್ಲಿಗೆ ಹೂಗಳಿಂದ ಸಿಂಗರಿಸಿಕೊಂಡು ಕರಗವನ್ನು ಹೊತ್ತು ಭಕ್ತಿಭಾವದಿಂದ ನರ್ತನ ಮಾಡುತ್ತಾ ಸಾಗುತ್ತಾರೆ.

ಈ ಕರಗವು ಕೆಂಗೇರಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ, ನಂತರ ದೇವಸ್ಥಾನಕ್ಕೆ ಮರಳಿ ಪೂಜೆ ಸ್ವೀಕರಿಸುವ ಮೂಲಕ ಮಹೋತ್ಸವ ಮುಕ್ತಾಯಗೊಳ್ಳುತ್ತದೆ.

ಈ ಸಂದರ್ಭದಲ್ಲಿ ಸಮುದಾಯದ ಅನೇಕ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಉತ್ಸವಕ್ಕೆ ಭಕ್ತಿ ಭಾವ ತುಂಬಿದರು.

Continue Reading

ದೇಶ

ಬೆಂಗಳೂರಿನಲ್ಲಿ ಎಲ್‌ಪಿಜಿ ಸಂಕಷ್ಟ: ಆಟೊ ಚಾಲಕರ ಬದುಕು ಸಂಕಷ್ಟಕ್ಕೆ

Published

on

By

ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯಿಂದ ಆಟೊ ಚಾಲಕರ ಸಮಸ್ಯೆಗಳು ದಿನೇ ದಿನೇ ಗಂಭೀರವಾಗುತ್ತಿವೆ. ಗ್ಯಾಸ್‌ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಲಭ್ಯವಿರುವ ಬಂಕ್‌ಗಳ ಬಳಿ ಆಟೊ ಚಾಲಕರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಂಕ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದು, ಉಳಿದ ಬಂಕ್‌ಗಳಲ್ಲೂ ‘ನೋ ಸ್ಟಾಕ್’ ಫಲಕಗಳು ಸಾಮಾನ್ಯ ದೃಶ್ಯವಾಗಿವೆ.

ರಾಜಾಜಿನಗರ, ಮತ್ತೀಕೆರೆ, ದಾಸರಹಳ್ಳಿ, ಗುಟ್ಟಹಳ್ಳಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಬಂಕ್‌ಗಳ ಬಳಿ ಆಟೊಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ. ಎಲ್‌ಪಿಜಿ ಕೊರತೆಯಿಂದ ಸಾವಿರಾರು ಆಟೊಗಳು ರಸ್ತೆಗಿಳಿಯಲು ಸಾಧ್ಯವಾಗದೇ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್‌ ಪೂರೈಕೆಗೆ ತೀವ್ರ ಹೊಡೆತ ಬಿದ್ದಿದ್ದು, ಆಟೊ ಚಾಲಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಗ್ಯಾಸ್‌ ಬೆಲೆ ಏರಿಕೆಯಿಂದಾಗಿ ಚಾಲಕರು ಕಡಿಮೆ ದೂರಕ್ಕೂ ಪ್ರಯಾಣಿಕರಿಂದ ಹೆಚ್ಚು ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೂ ಹೆಚ್ಚುವರಿ ಹೊರೆ ಬೀಳುತ್ತಿದೆ.

ಗ್ಯಾಸ್‌ ಲಭ್ಯವಿರುವ ಮಾಹಿತಿ ಸಿಕ್ಕ ತಕ್ಷಣ ನೂರಾರು ಆಟೊಗಳು ಬಂಕ್‌ಗಳತ್ತ ಧಾವಿಸುತ್ತಿವೆ. ಪರಿಣಾಮ, ಕೆಲವೇ ಗಂಟೆಗಳಲ್ಲಿ ಸ್ಟಾಕ್‌ ಖಾಲಿಯಾಗುತ್ತಿದೆ. ಸಿಎನ್‌ಜಿ ಕೊರತೆಯೂ ಕಾಣಿಸಿಕೊಂಡಿರುವುದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿದೆ.

ಇದರಿಂದಾಗಿ ವಿದ್ಯುತ್‌ ಚಾಲಿತ ಆಟೊಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಇವುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಪರಿಸ್ಥಿತಿ ಮುಂದುವರಿದರೆ ಅನೇಕ ಆಟೊ ಚಾಲಕರು ವೃತ್ತಿ ತೊರೆಯುವ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

Continue Reading

Trending