ಅಪರಾಧ
ಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ನೊಂದ ಮಹಿಳೆಯರಿಂದ ಅಭಿಯಾನ! – MICRO FINANCE TORTURE
ಹಾವೇರಿ/ಬೆಂಗಳೂರು: ರಾಜ್ಯದ ವಿವಿಧೆಡೆ ಮೈಕ್ರೋ ಫೈನಾನ್ಸ್ಗಳ ಸಾಲ ವಸೂಲಾತಿ ಕಾಟಕ್ಕೆ ಜನರು ಬೇಸತ್ತಿದ್ದು, ಕೆಲವು ಕಡೆ ಗ್ರಾಮವನ್ನೇ ತೊರೆದು ಬೇರೆಡೆ ದುಡಿಯಲು ಹೋಗಿದ್ದಾರೆ. ರಾಣೆಬೆನ್ನೂರಿನ ಮಹಿಳೆಯರು ಮೈಕ್ರೋ ಫೈನಾನ್ಸ್ ವಿರುದ್ಧ ವಿಭಿನ್ನ ರೀತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ.
ಹೌದು.. ಮೈಕ್ರೋ ಫೈನಾನ್ಸ್ನಿಂದ ತಮ್ಮ ಮಾಂಗಲ್ಯಕ್ಕೆ ಕುತ್ತು ಬಂದಿದ್ದು, ಮಾಂಗಲ್ಯ ಸರವನ್ನು ಉಳಿಸಿ ಎಂದು ಮಹಿಳೆಯರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಅಂಚೆ ಮೂಲಕ ಮಾಂಗಲ್ಯ ಮತ್ತು ಪತ್ರವನ್ನು ಸಿಎಂ ಸಿದ್ದರಾಮಯ್ಯರಿಗೆ ಪೋಸ್ಟ್ ಮಾಡಿ, ನಮ್ಮ ಮಾಂಗಲ್ಯವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬಳಿಕ ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿಗೂ ಸಹ ಮಾಂಗಲ್ಯ ಪತ್ರವನ್ನು ನೀಡಿದ್ದಾರೆ. ವಿನಾಕಾರಣ ನಿತ್ಯ ಮನೆಗೆ ಬಂದು ಕಿರಕುಳ ನೀಡುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಹಿಳೆಯರು ಒತ್ತಾಯಿಸಿ, ಅವರ ಕಾಟದಿಂದ ಮುಕ್ತಿ ಕೊಡುವಂತೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿರುವ ಜಿಲ್ಲಾಡಳಿತ, ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.
ಮೈಕ್ರೋ ಫೈನಾನ್ಸ್ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು-ಹೆಚ್ಡಿಕೆ:
ರಾಜ್ಯದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಡ, ಮಧ್ಯಮ ವರ್ಗದ ಜನರ ರಕ್ತ ಹಿಂಡುತ್ತಿರುವ ಮೈಕ್ರೋ ಫೈನಾನ್ಸ್ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು” ಎಂದು ರಾಜ್ಯ ಸರ್ಕಾರವನ್ನು ಹೆಚ್ಡಿಕೆ ಆಗ್ರಹಿಸಿದ್ದಾರೆ.
“ಇದನ್ನು ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಸರ್ಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ನಾಗರಿಕ ಸರ್ಕಾರ, ಗೃಹ ಸಚಿವರು ಎನ್ನುವವರು ಇದ್ದಾರೆಯೇ?. 2018ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಕಿಡಿಗೇಡಿ ಫೈನಾನ್ಸ್ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ‘ಋಣಮುಕ್ತ ಕಾಯ್ದೆ’ ಜಾರಿಗೆ ತಂದೆ. ನನ್ನ ಸರ್ಕಾರ ಹೋಯಿತು, ಆ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿದರು” ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಅಷ್ಟೇ ಅಲ್ಲ, ಜನರು ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಪರಿಹಾರೋಪಾಯ ಏನು? ಎಂಬ ಬಗ್ಗೆ ನಾನು ಆಗ ಆಲೋಚನೆ ಮಾಡಿದ್ದೆ. ಆ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಆ ಮಾಹಿತಿ ನನಗಿತ್ತು. ಕೇರಳಕ್ಕೆ ತೆರಳಿ ಖುದ್ದು ಆ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ನಾನು ಅಂದಿನ ನನ್ನ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ನೇತೃತ್ವದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದೆ. ಆಮೇಲೆ ಅದು ಏನಾಯಿತು?” ಎಂದು ಅವರು ಪ್ರಶ್ನಿಸಿದರು.
“ನನ್ನ ಸರ್ಕಾರ ಹೋದ ನಂತರ ಬಂದ ಸರ್ಕಾರಗಳು ಈ ಕಾಯ್ದೆಯ ಮಹತ್ವವನ್ನೇ ಅರಿತುಕೊಳ್ಳಲಿಲ್ಲ. ಅದರ ಪರಿಣಾಮವೇ ಮೈಕ್ರೋ ಫೈನಾನ್ಸ್ಗಳ ಉಪಟಳ ಜಾಸ್ತಿ ಆಗಿರುವುದು. ಖಾಸಗಿ ಹಣಕಾಸು ಸಂಸ್ಥೆಗಳು ಯಾವುದೇ ಪರವಾನಗಿ ಅಥವಾ ಅನುಮತಿಯನ್ನೇ ಪಡೆಯದೇ ಕಾನೂನುಬಾಹಿರವಾಗಿ ಈ ರೀತಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಾಳಲಾರದೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ, ಊರನ್ನೇ ಖಾಲಿ ಮಾಡಿ ಹೋಗುವ ದುಸ್ಥಿತಿ ಸೃಷ್ಟಿಯಾಗಿದೆ” ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
“ಚಾಮರಾಜನಗರ ಜಿಲ್ಲೆಯಲ್ಲಿ ಜನರು ಹಳ್ಳಿಗಳನ್ನು ಬಿಟ್ಟಿದ್ದರು. ಮನೆಗಳಿಗೆ ಬೀಗ ಹಾಕಿ ಸಾಲಗಾರರಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಭೀತಿಗೆ ಸಿಲುಕಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೆ ಹೇಳುತ್ತಾರೆ, ನಾನು ಇಪ್ಪತ್ತು ಸಲವೋ ಮೂವತ್ತು ಸಲವೋ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ನನ್ನ ಅಧಿಕಾರ ಹೋಗಿಲ್ಲ, ಗಟ್ಟಿಯಾಗಿದ್ದೇನೆ ಎಂದು ಹೇಳುತ್ತಾರೆ. ಅವರೇನೋ ಗಟ್ಟಿಯಾಗಿದ್ದಾರೆ. ಆದರೆ, ನಿಮ್ಮನ್ನು ಮುಖ್ಯಮಂತ್ರಿ ಜಾಗದಲ್ಲಿ ಕೂರಿಸಿರುವ ಆ ಜನ ಏನಾಗಿದ್ದಾರೆ? ಅವರನ್ನು ಗಟ್ಟಿ ಮಾಡಲಿಕ್ಕೆ ಏನು ಮಾಡಿದ್ದೀರಿ?” ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಅಪರಾಧ
ಹಸಿ–ಒಣ ಕಸ ಬೇರ್ಪಡಿಸಲು ಸೂಚನೆ: ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ
ದಾವಣಗೆರೆ: ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ನೀಡಲು ತಿಳಿಸಿದ್ದ ಕಾರಣಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮೆಹಬೂಬ್ ನಗರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾದವರು ಕರಿಬಸಪ್ಪ ಎಂಬ ಪೌರ ಕಾರ್ಮಿಕ ಹಾಗೂ ವಾಹನ ಚಾಲಕ ಎಂದು ತಿಳಿದುಬಂದಿದೆ. ಪ್ರತಿದಿನ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ವೇಳೆ ಸ್ಥಳೀಯ ನಿವಾಸಿಯೊಬ್ಬರೊಂದಿಗೆ ವಾಗ್ವಾದ ಉಂಟಾಗಿ, ಅದು ಹಲ್ಲೆಗೆ ತಿರುಗಿದೆ.
ಘಟನೆ ಹೇಗೆ ನಡೆದಿದೆ?
ಪೌರ ಕಾರ್ಮಿಕರು ಬೆಳಗ್ಗೆ ಕಸ ಸಂಗ್ರಹಣೆಗೆ ಮೆಹಬೂಬ್ ನಗರಕ್ಕೆ ತೆರಳಿದ್ದರು. ಈ ವೇಳೆ ಒಬ್ಬ ನಿವಾಸಿ ಹಸಿ ಕಸ ಮತ್ತು ಒಣ ಕಸವನ್ನು ಒಂದೇ ಬಕೆಟ್ನಲ್ಲಿ ನೀಡಿದ್ದಾನೆ. ಜೊತೆಗೆ ಮಗುವಿನ ಡೈಪರ್ ಕೂಡ ಸೇರಿಸಿದ್ದಾನೆ.
“ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ” ಎಂದು ಪೌರ ಕಾರ್ಮಿಕರು ತಿಳಿಸಿದಾಗ ಮಾತಿನ ಚಕಮಕಿ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಸ್ಥಳೀಯರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಘಟನೆ ಖಂಡಿಸಿ ಪೌರ ಕಾರ್ಮಿಕರು ಮತ್ತು ಕಸ ಸಂಗ್ರಹಿಸುವ ವಾಹನ ಚಾಲಕರು Azad Nagar Police Station ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
“ನಮ್ಮ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿದೆ. ಕೆಲಸ ಮಾಡಲು ಭಯವಾಗುತ್ತಿದೆ. ನಮಗೆ ಭದ್ರತೆ ಒದಗಿಸಬೇಕು” ಎಂದು ಕಾರ್ಮಿಕರು ಆಗ್ರಹಿಸಿದರು.
ಮೆಹಬೂಬ್ ನಗರ, ಅಜಾದ್ ನಗರ, ಶಿವನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕೆಲಸ ಮಾಡಲು ಆತಂಕವಿದೆ ಎಂದು ತಿಳಿಸಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಪರಾಧ
KANPUR ಲ್ಯಾಂಬೋರ್ಗಿನಿ ಅಪಘಾತ: ಕೆಕೆ ಮಿಶ್ರಾ ಪುತ್ರ ಶಿವಂ ಬಂಧನ
ಲಕ್ನೋ: ಕಾನ್ಪುರದಲ್ಲಿ ಇತ್ತೀಚೆಗೆ ನಡೆದ ಲ್ಯಾಂಬೋರ್ಗಿನಿ (Lamborghini Revuelto) ಕಾರು ಅಪಘಾತ ಪ್ರಕರಣದಲ್ಲಿ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ರೆವೆಲ್ಟೊ ಕಾರು ಪಾದಚಾರಿಗಳು ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಿವಂ ಮಿಶ್ರಾ ಕುಡಿದ ಮತ್ತಿನಲ್ಲಿ ಅತಿ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ವೇಗವಾಗಿ ಬಂದ ಕಾರು ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು, ಬಳಿಕ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ಗೆ ಗುದ್ದಿತ್ತು. ಬೈಕ್ ಕಾರಿನ ಕೆಳಗೆ ಸಿಲುಕಿ ಕೆಲ ಅಂತರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಗಾಯಗೊಂಡವರಲ್ಲಿ ತೌಫಿಕ್ ಅಹ್ಮದ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಇತರರಿಗೆ ಮೂಳೆ ಮುರಿತ ಉಂಟಾಗಿದೆ.
ಪ್ರಾರಂಭದಲ್ಲಿ ಕುಟುಂಬದ ವಕೀಲರು ಡ್ರೈವರ್ ಮೋಹನ್ ಕಾರು ಚಲಾಯಿಸುತ್ತಿದ್ದರೆಂದು ಹೇಳಿದ್ದರೂ, ಸಿಸಿಟಿವಿ ದೃಶ್ಯಾವಳಿ ಚಾಲಕನ ಸೀಟಿನಲ್ಲಿ ಶಿವಂ ಮಿಶ್ರಾ ಇದ್ದುದನ್ನು ಸ್ಪಷ್ಟಪಡಿಸಿದೆ. ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಪರಾಧ
BAIRATHI BASAVARJU BREAKING NEWS : ಸಿಐಡಿ ಲುಕ್ಔಟ್ ನೋಟಿಸ್ ಜಾರಿ, ತನಿಖೆ ತೀವ್ರ
ಬೆಂಗಳೂರು: ರೌಡಿಶೀಟರ್ ಬಿಲ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರಿಗೆ ಮತ್ತೊಂದು ಕಾನೂನು ಹಿನ್ನಡೆ ಎದುರಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅವರ ಬಂಧನದ ಭೀತಿ ಮತ್ತಷ್ಟು ಗಟ್ಟಿಯಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದರ ನಂತರ ಬೈರತಿ ಬಸವರಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಸಹ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ವಿಚಾರಣೆ ವೇಳೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಗಮನಾರ್ಹ.
ಈ ಬೆಳವಣಿಗೆಯೊಂದಿಗೆ ತನಿಖಾ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈಗಾಗಲೇ ಸಿಐಡಿ ಪೊಲೀಸರು ಬೈರತಿ ಬಸವರಾಜ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳಿವೆ.
ರಾಜಕೀಯ ವಲಯದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರಕರಣ ಹೊಸ ತಿರುವು ಪಡೆದಿದೆ.
-
ಚುನಾವಣೆ3 hours agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ9 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ9 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ದೇಶ8 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ದೇಶ10 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ಕ್ರೀಡೆ7 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ5 hours agoBENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
-
ದೇಶ9 hours agoದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ
