Connect with us

ಬೆಂಗಳೂರು

ಬಿಡದಿಯ ಖಾಸಗಿ ಕಂಪನಿಯ ಶೌಚಾಲಯದ ಗೋಡೆ ಮೇಲೆ ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದ ಬಳಕೆ: R ಅಶೋಕ್ ಆಕ್ರೋಶ – R ASHOK

Published

on

ಬೆಂಗಳೂರು : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಗೂಂಡಾ ರಾಜ್ಯದ ಅಪರಾವತಾರ ಆದಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕುರಿತು ನಿಲುವಳಿ ಸೂಚನೆಯನ್ನು ಸ್ಪೀಕರ್ ಯು. ಟಿ ಖಾದರ್ ಅವರು ನಿಯಮ 69ಕ್ಕೆ ಮಾರ್ಪಾಡು ಮಾಡಿ ಅವಕಾಶ ಮಾಡಿಕೊಟ್ಟಾಗ, ವಿಷಯ ಪ್ರಸ್ತಾಪಿಸಿದ ಅಶೋಕ್ ಅವರು, ರಾಜ್ಯದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಲಂಗುಲಗಾಮಿಲ್ಲ. ಬಿಡದಿ ಬಳಿಯ ಟೊಯೋಟಾ ಕಂಪನಿಯ ಗೋಡೆಯ ಮೇಲೆ ಪಾಕಿಸ್ತಾನಕ್ಕೆ ಜೈ ಎಂದು ಕಿಡಿಗೇಡಿಗಳು ಬರೆದಿದ್ದಾರೆ. ಅಲ್ಲದೇ ಶೌಚಾಲಯದಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದ ಬಳಸಿ ಬರೆದಿದ್ದಾರೆ. ಇದು ನಾವೆಲ್ಲರೂ ತಲೆತಗ್ಗಿಸುವಂತಹ ವಿಚಾರ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೂ ಕಾನೂನು ಮತ್ತು ಸುವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ತಾಳಮೇಳ ಇಲ್ಲದಂತಾಗಿದೆ. ಗೃಹ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ವಹಣೆ ಮಾಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು : ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಕನ್ನಡಿಗರನ್ನು ಅವಾಚ್ಯ ಶಬ್ದ ಬಳಸಿ ಬರೆದಿರುವ ಬಗ್ಗೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈಗಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲ ಕಿಡಿಗೇಡಿಗಳು ಈ ರೀತಿ ಮಾಡುವುದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಸಿಸಿಟಿವಿ ಪರಿಶೀಲನೆ ಮಾಡಿ ಸೆಕೆಂಡ್‌ನಲ್ಲಿ ಕಿಡಿಗೇಡಿಗಳನ್ನು ಸೆರೆ ಹಿಡಿಯಬಹುದಾಗಿತ್ತು. ಆದರೂ ಸರ್ಕಾರ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹೋರಿ ಹಬ್ಬದಲ್ಲಿ ಉಂಟಾದ ಸ್ನೇಹ ಲವ್ ಜಿಹಾದ್‌ನಲ್ಲಿ ಅಂತ್ಯವಾಗಿದೆ. ಸ್ವಾತಿ ಎಂಬ ನರ್ಸ್ ಹೋರಿ ಓಡಿಸುವ ಸ್ಪರ್ಧೆಗೆ ಹೋಗುವ ಅಭ್ಯಾಸ ಹೊಂದಿದ್ದರು. ಮಾರ್ಚ್ 6 ರಂದು ರಾಣೆಬೆನ್ನೂರಿಗೆ ಹೋಗಿದ್ದಾರೆ. 7 ರಂದು ಅವರ ತಾಯಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆಕೆಗೆ ನಯಾಜ್ ಎಂಬ ವ್ಯಕ್ತಿ ಪರಿಚಯವಾಗಿ ಪ್ರೀತಿ ಅಂಕುರವಾಗಿರುತ್ತದೆ. ಸ್ಥಳೀಯರಾದ ವಿನಯ್, ದುರ್ಗಾಚಾರಿ ಎಂಬುವರು ಕೂಡ ಅದಕ್ಕೆ ಸಹಕಾರ ನೀಡಿರುತ್ತಾರೆ ಎಂದು ಹೇಳಿದರು.

ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ತಿಳಿದು ಬಂದಿದೆ: ಸ್ವಾತಿ ಎಂಬಾಕೆಯನ್ನು ಇವರು ಪುಸಲಾಯಿಸಿ ಒಂದು ಸ್ಥಳಕ್ಕೆ ಬರಲು ಹೇಳಿ ಬೊಲೆರೊ ಕಾರಿನಲ್ಲಿ ಕರೆದೊಯ್ದು ಪಾಳು ಬಿದ್ದ ಶಾಲೆಯಲ್ಲಿ ಆಕೆಯ ಕುತ್ತಿಗೆಗೆ ಕೇಸರಿ ಟವಲ್‌ನಲ್ಲಿ ಹಿಸುಕಿ ಸಾಯಿಸಿದ್ದಾರೆ. ನಂತರ ತುಂಗಾ ನದಿಗೆ ಆಕೆಯನ್ನು ಬಿಸಾಕಿದ್ದಾರೆ. ಮೂರು ದಿನದ ನಂತರ ಆಕೆಯ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ತಿಳಿದು ಬಂದಿದೆ. ಆದರೆ, ಪೊಲೀಸರು ಆಕೆಯ ತಾಯಿಗೆ ವಿಷಯ ತಿಳಿಸದೇ ದೇಹವನ್ನು ಸುಟ್ಟುಹಾಕಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ನೇಹಾ ಎಂಬಾಕೆಯ ಹತ್ಯೆಯಾದಾಗ ಪೊಲೀಸರು ಎಚ್ಚರಿಕೆ ವಹಿಸಿ ಗಂಭೀರ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದರು.

ಮಲ್ಲೇಶ್, ಚೇತನ್‌ಸಾಯಿ, ಸಿಳ್ಳೇಕ್ಯಾತ ಎಂಬುವರು ಹಂಪಿ ಬಳಿಯ ಗಂಗಾವತಿ ತಾಲೂಕಿನ ಸಣಾಪುರ ಲೇಕ್ ಬಳಿ ತುಂಗಭದ್ರಾ ಎಡದಂಡೆ ಕಾಲುವೆಗೆ ವಿದೇಶಿಗ ಸೇರಿದಂತೆ ಮೂವರನ್ನು ದೂಡಿದ್ದರು. ಇದರಲ್ಲಿ ಇಬ್ಬರು ಈಜಿ ಪ್ರಾಣ ಉಳಿಸಿಕೊಂಡರೆ, ಒಡಿಶಾ ಮೂಲದ ಒಬ್ಬ ಮೃತಪಟ್ಟಿದ್ದ. ಇನ್ನೊಂದು ಕಡೆ ಹೋಂ ಸ್ಟೇ ಮಾಲೀಕರು ಹಾಗೂ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆರೋಪಿಗಳು ಪರಾರಿಯಾಗಿದ್ದರು ಎಂಬುದನ್ನು ಅವರು ಪ್ರಸ್ತಾಪಿಸಿದರು.

ಆಡಳಿತ ಪಕ್ಷಕ್ಕೆ ಸದನದ ಗಂಭೀರತೆ ಇಲ್ಲ : ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುನೀಲ್‌ ಕುಮಾರ್ ಮಧ್ಯಪ್ರವೇಶಿಸಿ ಮಾತನಾಡಿ, ರಾಜ್ಯ ಸರ್ಕಾರದ ಯೋಜನೆಗಳನ್ನು ವಿದೇಶಿಯರು ಮೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದ್ದರು. ಆದರೆ, ವಿದೇಶಿಯರ ಹಲ್ಲೆ, ದೌರ್ಜನ್ಯ, ಹತ್ಯೆ, ಅತ್ಯಾಚಾರವಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರವಾದರೆ ಯಾರಿಗೆ ಕೇಳಬೇಕು?. ಆಡಳಿತ ಪಕ್ಷಕ್ಕೆ ಸದನದ ಗಂಭೀರತೆ ಇಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಾರ್ಯಸೂಚಿಯಂತೆ ಸರ್ಕಾರಿ ಕಲಾಪಗಳು ನಡೆಯಲು ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ದೇಶ

ವೀರಕುಮಾರರ ತಪಸ್ಸು, ಭಕ್ತಿಯ ತೇಜಸ್ಸು: ಕೆಂಗೇರಿ ಕರಗದ ವೈಶಿಷ್ಟ್ಯ

Published

on

By

ಬೆಂಗಳೂರು: ನಗರದ ಕೆಂಗೇರಿಯಲ್ಲಿ ಕ್ಷತ್ರಿಯ (ತಿಗಳ ಕ್ಷತ್ರಿಯ) ಸಮುದಾಯದವರಿಂದ ಆಚರಿಸಲ್ಪಡುವ ದ್ರೌಪದಿ ಅಮ್ಮನವರ ಭವ್ಯ ಕರಗ ಶಕ್ತಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಸಂಪ್ರದಾಯಿಕ ಹಬ್ಬದಲ್ಲಿ ಭಕ್ತಿ, ಶಕ್ತಿ ಮತ್ತು ಸಂಸ್ಕೃತಿಯ ಸಮ್ಮಿಳನ ಕಂಡುಬರುತ್ತದೆ.

ಈ ಮಹೋತ್ಸವದ ಅಂಗವಾಗಿ ಹಸಿ ಕರಗವನ್ನು ಮುನ್ನಡೆಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಮುದಾಯದವರು Draupadi Amman ಅವರನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ಕರಗ ಪೂಜೆಯಲ್ಲಿ ಕುಲಪುರೋಹಿತರು, ವೀರಕುಮಾರರು ಮತ್ತು ಭಕ್ತರು ಭಾಗವಹಿಸಿ ವಿಶೇಷ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಹಬ್ಬದ ವಿಶೇಷವೆಂದರೆ ವೀರಕುಮಾರರು ಕೈಯಲ್ಲಿ ಖಡ್ಗಗಳನ್ನು ಹಿಡಿದು ಭಕ್ತಿಯ ಸಂಕೇತವಾಗಿ ತಮ್ಮ ಎದೆಗೆ ತಾವೇ ಪ್ರಹಾರ ಮಾಡಿಕೊಳ್ಳುವುದು. ಗಾಯವಾದಲ್ಲಿ ಔಷಧಿಯ ಬದಲು ಅರಿಶಿನವನ್ನು ಬಳಸಿ ದೇವಿಯ ಮೇಲಿನ ಭಕ್ತಿಯನ್ನು ತೋರಿಸುತ್ತಾರೆ.

ರಾತ್ರಿ ಸುಮಾರು ಮೂರು ಗಂಟೆಗೆ ಹೂವಿನ ಕರಗ ಸಿದ್ಧವಾಗುತ್ತಿದ್ದು, ಕೆಂಪು ವಸ್ತ್ರ ಮತ್ತು ಮಂಗಳ ದ್ರವ್ಯಗಳಿಂದ ಅಲಂಕರಿಸಲಾಗುತ್ತದೆ. ಪೂಜಾರಿ ಮಲ್ಲಿಗೆ ಹೂಗಳಿಂದ ಸಿಂಗರಿಸಿಕೊಂಡು ಕರಗವನ್ನು ಹೊತ್ತು ಭಕ್ತಿಭಾವದಿಂದ ನರ್ತನ ಮಾಡುತ್ತಾ ಸಾಗುತ್ತಾರೆ.

ಈ ಕರಗವು ಕೆಂಗೇರಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ, ನಂತರ ದೇವಸ್ಥಾನಕ್ಕೆ ಮರಳಿ ಪೂಜೆ ಸ್ವೀಕರಿಸುವ ಮೂಲಕ ಮಹೋತ್ಸವ ಮುಕ್ತಾಯಗೊಳ್ಳುತ್ತದೆ.

ಈ ಸಂದರ್ಭದಲ್ಲಿ ಸಮುದಾಯದ ಅನೇಕ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಉತ್ಸವಕ್ಕೆ ಭಕ್ತಿ ಭಾವ ತುಂಬಿದರು.

Continue Reading

ದೇಶ

ಬೆಂಗಳೂರಿನಲ್ಲಿ ಎಲ್‌ಪಿಜಿ ಸಂಕಷ್ಟ: ಆಟೊ ಚಾಲಕರ ಬದುಕು ಸಂಕಷ್ಟಕ್ಕೆ

Published

on

By

ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್‌ಪಿಜಿ ಕೊರತೆಯಿಂದ ಆಟೊ ಚಾಲಕರ ಸಮಸ್ಯೆಗಳು ದಿನೇ ದಿನೇ ಗಂಭೀರವಾಗುತ್ತಿವೆ. ಗ್ಯಾಸ್‌ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಲಭ್ಯವಿರುವ ಬಂಕ್‌ಗಳ ಬಳಿ ಆಟೊ ಚಾಲಕರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಂಕ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದು, ಉಳಿದ ಬಂಕ್‌ಗಳಲ್ಲೂ ‘ನೋ ಸ್ಟಾಕ್’ ಫಲಕಗಳು ಸಾಮಾನ್ಯ ದೃಶ್ಯವಾಗಿವೆ.

ರಾಜಾಜಿನಗರ, ಮತ್ತೀಕೆರೆ, ದಾಸರಹಳ್ಳಿ, ಗುಟ್ಟಹಳ್ಳಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಬಂಕ್‌ಗಳ ಬಳಿ ಆಟೊಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ. ಎಲ್‌ಪಿಜಿ ಕೊರತೆಯಿಂದ ಸಾವಿರಾರು ಆಟೊಗಳು ರಸ್ತೆಗಿಳಿಯಲು ಸಾಧ್ಯವಾಗದೇ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಒತ್ತಡ ಹೆಚ್ಚಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್‌ ಪೂರೈಕೆಗೆ ತೀವ್ರ ಹೊಡೆತ ಬಿದ್ದಿದ್ದು, ಆಟೊ ಚಾಲಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಗ್ಯಾಸ್‌ ಬೆಲೆ ಏರಿಕೆಯಿಂದಾಗಿ ಚಾಲಕರು ಕಡಿಮೆ ದೂರಕ್ಕೂ ಪ್ರಯಾಣಿಕರಿಂದ ಹೆಚ್ಚು ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೂ ಹೆಚ್ಚುವರಿ ಹೊರೆ ಬೀಳುತ್ತಿದೆ.

ಗ್ಯಾಸ್‌ ಲಭ್ಯವಿರುವ ಮಾಹಿತಿ ಸಿಕ್ಕ ತಕ್ಷಣ ನೂರಾರು ಆಟೊಗಳು ಬಂಕ್‌ಗಳತ್ತ ಧಾವಿಸುತ್ತಿವೆ. ಪರಿಣಾಮ, ಕೆಲವೇ ಗಂಟೆಗಳಲ್ಲಿ ಸ್ಟಾಕ್‌ ಖಾಲಿಯಾಗುತ್ತಿದೆ. ಸಿಎನ್‌ಜಿ ಕೊರತೆಯೂ ಕಾಣಿಸಿಕೊಂಡಿರುವುದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿದೆ.

ಇದರಿಂದಾಗಿ ವಿದ್ಯುತ್‌ ಚಾಲಿತ ಆಟೊಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಇವುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಪರಿಸ್ಥಿತಿ ಮುಂದುವರಿದರೆ ಅನೇಕ ಆಟೊ ಚಾಲಕರು ವೃತ್ತಿ ತೊರೆಯುವ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

Continue Reading

ದೇಶ

ಸುಪ್ರೀಂ ಕೋರ್ಟ್ ಆದೇಶ ಬಳಿಕ ಬೀದಿ ನಾಯಿಗಳ ಲೆಕ್ಕಾಚಾರ: ನಗರದಲ್ಲಿ ಆತಂಕ

Published

on

By

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿ ನಾಯಿಗಳ ಸಮಸ್ಯೆ ಗಂಭೀರವಾಗುತ್ತಿರುವ ಹಿನ್ನೆಲೆ, Bruhat Bengaluru Mahanagara Palike ಸರ್ವೆ ಕಾರ್ಯ ಆರಂಭಿಸಿದೆ. Supreme Court of India ನೀಡಿದ ನಿರ್ದೇಶನದಂತೆ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಶಾಲೆ, ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ಕ್ರೀಡಾಂಗಣ ಹಾಗೂ ಆಟದ ಮೈದಾನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 2,670 ಬೀದಿ ನಾಯಿಗಳು ಪತ್ತೆಯಾಗಿವೆ. ಕೇಂದ್ರ ವಲಯದಲ್ಲಿ 504, ಉತ್ತರ ವಲಯದಲ್ಲಿ 875, ಪಶ್ಚಿಮ ವಲಯದಲ್ಲಿ 591, ದಕ್ಷಿಣ ವಲಯದಲ್ಲಿ 331 ಹಾಗೂ ಪೂರ್ವ ವಲಯದಲ್ಲಿ 369 ನಾಯಿಗಳಿವೆ ಎಂದು ಮಾಹಿತಿ ನೀಡಲಾಗಿದೆ.

ಆದರೆ, ಈ ಅಂಕಿ-ಅಂಶಗಳ ನಿಖರತೆ ಬಗ್ಗೆ ಪ್ರಶ್ನೆಗಳು ಮೂಡಿವೆ. ಕೆಲವು ವಲಯಗಳಲ್ಲಿ ಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದ್ದು, ಕೆಲವು ಸಂಸ್ಥೆಗಳು ತಮ್ಮ ವ್ಯಾಪ್ತಿಯ ಲೆಕ್ಕ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೀದಿ ನಾಯಿಗಳ ಸ್ಥಳಾಂತರಕ್ಕಾಗಿ ಆನೇಕಲ್ ವ್ಯಾಪ್ತಿಯ ಬಿಂಗೀಪುರದಲ್ಲಿ 5 ಎಕರೆ ಜಾಗ ಗುರುತಿಸಲಾಗಿದ್ದು, ಸುಮಾರು 500 ನಾಯಿಗಳಿಗೆ ಆಶ್ರಯ ನೀಡುವ ಸಾಮರ್ಥ್ಯದ ಶೆಲ್ಟರ್ ನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.

ಇದೇ ವೇಳೆ, ಉತ್ತರ ಹಾಗೂ ಪಶ್ಚಿಮ ವಲಯಗಳಲ್ಲಿ ಹೆಚ್ಚುವರಿ ಆಶ್ರಯ ತಾಣ ನಿರ್ಮಾಣದ ಕಾರ್ಯ ಕೂಡ ಪ್ರಗತಿಯಲ್ಲಿದೆ.

ಒಟ್ಟಿನಲ್ಲಿ, ಬೀದಿ ನಾಯಿಗಳ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಅಂಕಿ-ಅಂಶಗಳ ಸ್ಪಷ್ಟತೆ ಹಾಗೂ ಅನುಷ್ಠಾನದ ಪರಿಣಾಮಕಾರಿತ್ವ ಬಗ್ಗೆ ಇನ್ನೂ ಅನುಮಾನಗಳು ಉಳಿದಿವೆ.

Continue Reading

Trending