ದೇಶ
ನಾಳೆ ಪ್ರತಿಭಟನೆಗೆ ಅಡ್ಡಿಯಿಲ್ಲ ಬಂದ್ಗೆ ಮಾಡೋ ಹಾಗಿಲ್ಲ ಡಿ.ಕೆ. ಶಿವಕುಮಾರ್ ವಾರ್ನಿಂಗ್
ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡ ಪರ ಸಂಘಟನೆಗಳು, ರೈತ ಹೋರಾಟಗಾರರು ಸೇರಿದಂತೆ ನಾಗರಿಕರು ಪ್ರತಿಭಟನೆ ಮಾಡಲು ನಾವು ಅಡ್ಡಿ ಮಾಡುವುದಿಲ್ಲ. ಆದರೆ, ಕರ್ನಾಟಕ ಬಂದ್ ಮಾಡಲು ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಆಗಿ ಹೇಳಿದ್ದಾರೆ. ಆದರೆ, ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂಬ ಆಕ್ರೋಶ ಸಂಘಟನೆಗಳು, ನಾಗರಿಕರಿಂದ ವ್ಯಕ್ತವಾಗಿದೆ.
ಮಾಧ್ಯಮದವರಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾಳೆ ಸಾರ್ವಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ್ , ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ, ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ, ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಅವರು ಮನವಿ ಮಾಡಿದರು.
ಶುಕ್ರವಾರ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗೆ ಆನ್ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ತಮಿಳುನಾಡಿನವರು 11,000 ಸಾವಿರ ಕ್ಯೂಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2,000 ಕ್ಯೂಸೆಕ್ ನೀರು ಹೋಗುತ್ತಿರಬಹುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಶುಕ್ರವಾರದ ಬೆಳವಣಿಗೆ ನೋಡಿಕೊಂಡು ನ್ಯಾಯಾಲಯಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಾಂತ್ರಿಕ ಸಮಿತಿಯವರು 3,000 ಕ್ಯೂಸೆಕ್ ನೀರು ಬಿಡುಗಡೆಗೆ ಶಿಫಾರಸು ಮಾಡಿದ್ದಾರೆ. ನಾಳೆ ಪ್ರಾಧಿಕಾರದವರು ಏನು ಸೂಚನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.