Connect with us

ಅಪರಾಧ

ಹೋಟೆಲ್ ಪಾರ್ಟಿಗೆ ಪೊಲೀಸರ ದಾಳಿ; ಭಯದಿಂದ ಬಾಲ್ಕನಿಯಿಂದ ಹಾರಿದ ಯುವತಿ – ಗಂಭೀರ ಗಾಯ

ವೀಕೆಂಡ್‌ನಲ್ಲಿ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಪಾರ್ಟಿ ನಡೆಸುತ್ತಿದ್ದ ವೇಳೆ ಪೊಲೀಸರು ಧಿಡೀರ್ ಎಂಟ್ರಿ ನೀಡಿದ ಪರಿಣಾಮ ಭಯಗೊಂಡ ಯುವತಿ ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿದ ಘಟನೆ ಬೆಂಗಳೂರು ಹೆಚ್‌ಎಎಲ್ (HAL) ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಲೇಔಟ್‌ನ ಹೋಟೆಲ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಯುವತಿಗೆ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಸದ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ಏನು?

ಶನಿವಾರ ರಾತ್ರಿ ಯುವತಿ ಸೇರಿದಂತೆ ಎಂಟು ಮಂದಿ ಸ್ನೇಹಿತರು ಹೋಟೆಲ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗಾಗಿ ಮೂರು ಕೊಠಡಿಗಳನ್ನು ಬುಕ್ ಮಾಡಿದ್ದು, ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಶಬ್ದ ಹಾಗೂ ಪಾರ್ಟಿ ದೃಶ್ಯ ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ, ಕೆಲ ನಿಮಿಷಗಳಲ್ಲೇ ಹೊಯ್ಸಳ ಪೊಲೀಸ್ ಸಿಬ್ಬಂದಿ ಹೋಟೆಲ್‌ಗೆ ಆಗಮಿಸಿದ್ದಾರೆ.

ಪೊಲೀಸರು ಬಂದಿದ್ದಾರೆ ಎಂಬ ಮಾಹಿತಿ ತಿಳಿದ ಯುವತಿ ಬಾಲ್ಕನಿಗೆ ತೆರಳಿ ಭಯದಿಂದ ಕೆಳಗೆ ಹಾರಿದ್ದಾಳೆ. ಕಬ್ಬಿಣದ ಗ್ರಿಲ್‌ಗಳ ಮೇಲೆ ಬಿದ್ದು ಆಕೆಗೆ ತೀವ್ರ ಗಾಯಗಳಾಗಿವೆ. ನಂತರ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಣ ಕೇಳಿದ ಆರೋಪ

ಪಾರ್ಟಿ ಬಗ್ಗೆ ದೂರು ಬಂದಿದೆ ಎಂದು ಪೊಲೀಸರು ವೀಡಿಯೋ ತೋರಿಸಿದ್ದಾರೆ ಎಂದು ಯುವಕರೊಬ್ಬರು ಆರೋಪಿಸಿದ್ದಾರೆ. ಅಲ್ಲದೆ,

“ಪೊಲೀಸರು ಹಣ ಕೇಳಿದರು. ಫೋನ್ ಪೇ ಮಾಡುವುದಾಗಿ ಹೇಳಿದಾಗ, ಕ್ಯಾಶ್ ಕೊಡಬೇಕೆಂದು ಒತ್ತಾಯಿಸಿದರು”

ಎಂದು ಆರೋಪಿಸಲಾಗಿದೆ. ಎಟಿಎಂನಲ್ಲಿ ಹಣ ತರಲು ಯುವಕ ಹೊರಗೆ ಹೋದ ವೇಳೆ, ಯುವತಿ ಬಾಲ್ಕನಿಯಿಂದ ಹಾರಿರುವುದಾಗಿ ಹೇಳಲಾಗಿದೆ.

ಎಫ್‌ಐಆರ್ ದಾಖಲು – ತನಿಖೆ ಆರಂಭ

ಘಟನೆ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
👉 ಬಾಲ್ಕನಿಯಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಒದಗಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ದಾಖಲಿಸಲಾಗಿದೆ.

ಆದರೆ, ಪೊಲೀಸರ ಪಾತ್ರವನ್ನು ಮುಚ್ಚಿಡಲು ಹೋಟೆಲ್ ಮಾಲೀಕರ ಮೇಲೆ ಮಾತ್ರ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading
Click to comment

Leave a Reply

Your email address will not be published. Required fields are marked *

ಅಪರಾಧ

ಮನುಷ್ಯತ್ವ ಹೂತುಹೋದ ಎಪ್‌ಸ್ಟೀನ್ ದ್ವೀಪ: ಜಗತ್ತಿನ ಎಲೈಟ್‌ಗಳನ್ನು ನಡುಗಿಸುತ್ತಿರುವ ‘ಲೋಲಿಟಾ ಎಕ್ಸ್‌ಪ್ರೆಸ್’ ರಹಸ್ಯ

ನವದೆಹಲಿ/ವಾಷಿಂಗ್ಟನ್:
ಮನುಷ್ಯತ್ವವೇ ಮರಳಲ್ಲಿ ಹೂತುಹೋದ ದ್ವೀಪವೊಂದು ವರ್ಷಗಳ ಕಾಲ ಜಗತ್ತಿನ ಕಣ್ಣು ತಪ್ಪಿಸಿ ಅನಾಚಾರದ ಸ್ವರ್ಗವಾಗಿ ಬೆಳೆದಿತ್ತು. ‘ಲೋಲಿಟಾ ಎಕ್ಸ್‌ಪ್ರೆಸ್’ ಎಂಬ ಖಾಸಗಿ ಜೆಟ್‌ ವಿಮಾನ ದಿನವೂ ಲಿಟಲ್ ಸೇಂಟ್ ಜೇಮ್ಸ್ ದ್ವೀಪಕ್ಕೆ ಹಾರಾಟ ನಡೆಸುತ್ತಿತ್ತು. ಹದಿಹರೆಯದ ಹುಡುಗಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಬಲಿಕೊಡುತ್ತಿದ್ದ ಈ ದ್ವೀಪವನ್ನು ಇಂದು ಜಗತ್ತು ‘ಎಪ್‌ಸ್ಟೀನ್ ದ್ವೀಪ’ ಅಥವಾ ‘ಪೆಡೋಪೈಲ್ ಐಲ್ಯಾಂಡ್’ ಎಂದೇ ಕರೆಯುತ್ತಿದೆ.

1998ರಲ್ಲಿ ಅಮೆರಿಕದ ಶತಕೋಟ್ಯಧಿಪತಿ ಜೆಫ್ರಿ ಎಪ್‌ಸ್ಟೀನ್ 8 ಮಿಲಿಯನ್ ಡಾಲರ್ ನೀಡಿ ಖರೀದಿಸಿದ 71 ಎಕರೆ ವಿಸ್ತೀರ್ಣದ ಈ ದ್ವೀಪದಲ್ಲಿ ಐಷಾರಾಮಿ ರೆಸಾರ್ಟ್‌ಗಳು, ವಿಲ್ಲಾಗಳು, ಹೆಲಿಪ್ಯಾಡ್‌ಗಳು ನಿರ್ಮಾಣವಾಗಿದ್ದವು. ಹೊರಜಗತ್ತಿನಿಂದ ಸಂಪೂರ್ಣ ಕಡಿದುಹಾಕಲ್ಪಟ್ಟ ಈ ಪ್ರದೇಶದಲ್ಲಿ ನೂರಾರು ಅಪ್ರಾಪ್ತ ಬಾಲಕಿಯರನ್ನು ಬಂಧಿಸಿ, ಜಗತ್ತಿನ ಎಲೈಟ್‌ಗಳಿಗೆ ಪೂರೈಸಲಾಗುತ್ತಿತ್ತು ಎಂಬ ಆರೋಪಗಳು ತನಿಖೆಯಲ್ಲಿ ಬಹಿರಂಗವಾದವು.

2005ರಲ್ಲಿ ಫ್ಲೋರಿಡಾದ 14 ವರ್ಷದ ಬಾಲಕಿಯ ತಾಯಿಯೊಬ್ಬರು ನೀಡಿದ ದೂರು ಈ ಮಹಾ ಲೈಂಗಿಕ ಹಗರಣದ ಮೊದಲ ಕಿಡಿಯಾಗಿತ್ತು. ಬಳಿಕ 50ಕ್ಕೂ ಹೆಚ್ಚು ಅಪ್ರಾಪ್ತೆಯರು ದೂರು ದಾಖಲಿಸಿದರು. 2008ರಲ್ಲಿ ಎಪ್‌ಸ್ಟೀನ್ ತಪ್ಪಿತಸ್ಥನಾಗಿದ್ದರೂ, ಕೇವಲ 13 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದನು. 2019ರಲ್ಲಿ ಪುನಃ ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಬಂಧನಕ್ಕೊಳಗಾದ ಎಪ್‌ಸ್ಟೀನ್, ವಿಚಾರಣೆಗೆ ಮುನ್ನವೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕ ಸರ್ಕಾರ ಘೋಷಿಸಿತು. ಆದರೆ, ಈ ಸಾವಿನ ಸುತ್ತ ಇನ್ನೂ ಹಲವು ಅನುಮಾನಗಳಿವೆ.

ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸುಮಾರು 30 ಲಕ್ಷ ಪುಟಗಳ ದಾಖಲೆಗಳು ಜಗತ್ತನ್ನೇ ಬೆಚ್ಚಿಬೀಳುವಂತೆ ಮಾಡಿವೆ. ರಾಜಕೀಯ ನಾಯಕರು, ಬಿಲಿಯನೇರ್‌ಗಳು, ರಾಜಮನೆತನದವರು, ವಿಜ್ಞಾನಿಗಳು, ಉದ್ಯಮಿಗಳೆಂದರೆ ಯಾರೂ ಹೊರತಲ್ಲ. 80ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ತನಿಖೆಗೆ ಒಳಗಾಗಿದ್ದು, ಯುರೋಪ್‌ನ ಹಲವೆಡೆ ರಾಜೀನಾಮೆ ಅಲೆ ಎದ್ದಿದೆ.

ಆದರೆ, ಎಪ್‌ಸ್ಟೀನ್ ಫೈಲ್‌ನಲ್ಲಿ ಹೆಸರು ಕಾಣಿಸಿಕೊಂಡ ಮಾತ್ರಕ್ಕೆ ಅಪರಾಧ ಸಾಬೀತಾಗುವುದಿಲ್ಲ ಎಂದು ಅಮೆರಿಕದ ನ್ಯಾಯಾಲಯ ಸ್ಪಷ್ಟಪಡಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಅಥವಾ ಹಣಕಾಸು ದಾಖಲೆಗಳಿದ್ದಾಗ ಮಾತ್ರ ಕಾನೂನು ಕ್ರಮ ಸಾಧ್ಯವೆಂದು ಹೇಳಿದೆ.

ಈ ಎಲ್ಲದ ನಡುವೆ, ಈ ಮಹಾ ಹಗರಣದ ನಿಜವಾದ ಬಲಿಪಶುಗಳು ನೂರಾರು ಅಪ್ರಾಪ್ತ ಬಾಲಕಿಯರು ಎಂಬ ಸತ್ಯ ಮಾತ್ರ ಬದಲಾಗಿಲ್ಲ. ಅಧಿಕಾರ, ಹಣ ಮತ್ತು ಪ್ರಭಾವದ ಅಡ್ಡೆಗೋಡೆಯ ಹಿಂದೆ ನಡೆದ ಈ ಅಮಾನುಷ ಕೃತ್ಯಗಳು ಇಂದು ಜಗತ್ತಿನ ಅಂತರಾತ್ಮವನ್ನೇ ಪ್ರಶ್ನಿಸುತ್ತಿವೆ.

Continue Reading

ಅಪರಾಧ

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್

ದಾಂಡೇಲಿ (ಉತ್ತರ ಕನ್ನಡ):

ಉತ್ತರ ಕನ್ನಡ ಜಿಲ್ಲೆಯ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ್ಯಾಯಾಲಯದ ಶರತ್ತುಬದ್ಧ ಮಧ್ಯಂತರ ಆದೇಶದ ಅಡಿಯಲ್ಲಿ ನಡೆದಿದ್ದರೂ, ಇದೀಗ ಮತ್ತೆ ತೀವ್ರ ವಿವಾದಗಳ ಕೇಂದ್ರಬಿಂದುವಾಗಿದೆ.
ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದ್ದು, ದಾಂಡೇಲಿ ನ್ಯಾಯಾಲಯವು ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದಲ್ಲಿ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ (ಬಿ.ಎನ್. ವಾಸರೆ) ಮೊದಲ ಪ್ರತಿವಾದಿಯಾಗಿದ್ದು, ಕ.ಸಾ.ಪ. ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಎರಡನೇ ಪ್ರತಿವಾದಿಯಾಗಿದ್ದಾರೆ. ಫೆಬ್ರವರಿ 5ರಂದು ನಡೆದ ವಿಚಾರಣೆಗೆ ಆಡಳಿತಾಧಿಕಾರಿ ಹಾಜರಾಗದ ಹಿನ್ನೆಲೆ, ರಾಜ್ಯಾಧ್ಯಕ್ಷರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.

ಸಮ್ಮೇಳನ ಆಯೋಜನೆಗೆ ಸಂಬಂಧಿಸಿದ ವಿವಾದ

2025ರ ಡಿಸೆಂಬರ್‌ನಲ್ಲಿ ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಯೋಜಿಸಿದ್ದರು. ಆದರೆ, ಅಜೀವ ಸದಸ್ಯರಾದ ಅಕ್ರಂ ವುಲ್ಲಾ ಖಾನ್, ಪ್ರವೀಣ ಕೊಠಾರಿ ಮತ್ತು ಸಂದೀಪ ಬಂಡಾರಿ, ಹಣ ದುರುಪಯೋಗ ಪ್ರಕರಣ ತನಿಖೆಯ ನಡುವೆ ಸರ್ಕಾರದ ಅಗತ್ಯ ಅನುಮತಿ ಪಡೆಯದೇ ಸಾರ್ವಜನಿಕ ವಂತಿಕೆ ಸಂಗ್ರಹಿಸಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ತಹಶೀಲ್ದಾರ್ ಮತ್ತು ಪಿಎಸ್‌ಐ ಅನುಮತಿ ಹೊರತುಪಡಿಸಿ, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ, ಡಿವೈಎಸ್‌ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆಯಲಾಗಿಲ್ಲ ಎಂದು ಅವರು ದೂರಿದ್ದಾರೆ.

ನ್ಯಾಯಾಲಯದ ಮಹತ್ವದ ಆದೇಶ

O.S. No.216/25 ಪ್ರಕರಣದಲ್ಲಿ, ಸಮ್ಮೇಳನ ನಡೆಸಲು ಅಗತ್ಯವಿರುವ ಯಾವುದೇ ಅಧಿಕೃತ ಅನುಮತಿಗಳನ್ನು ಪ್ರತಿವಾದಿಗಳು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಹೆಚ್ಚಿನ ಜನರು ಸೇರುವ ಸಾಧ್ಯತೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆ, ಎಲ್ಲಾ ಇಲಾಖೆಗಳ ಅನುಮತಿ, ಆಡಳಿತಾಧಿಕಾರಿಯಿಂದ ಲಿಖಿತ ಆದೇಶ, ಹಾಗೂ ಅನುಮತಿ ಪಡೆದ ಬಳಿಕ ಮಾತ್ರ ಸಮ್ಮೇಳನ ನಡೆಸಬೇಕು ಎಂಬ ಶರತ್ತುಗಳೊಂದಿಗೆ ಡಿಸೆಂಬರ್ 12ರ ಸಂಜೆ 6 ಗಂಟೆಗೆ ಮಧ್ಯಂತರ ಆದೇಶ ನೀಡಲಾಗಿತ್ತು.

ರಾತ್ರಿ ಇ-ಮೇಲ್ ಅನುಮತಿಗೆ ಸಂಶಯ

ಆದರೆ, ಅದೇ ದಿನ ರಾತ್ರಿ 9 ಗಂಟೆಗೆ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಂದ ಇ-ಮೇಲ್ ಮೂಲಕ ಅನುಮತಿ ಬಂದಿದೆ ಎಂದು ಜಿಲ್ಲಾಧ್ಯಕ್ಷ ವಾಸರೆ ಉದ್ಘಾಟನಾ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ, ನ್ಯಾಯಾಲಯಕ್ಕೆ ಮೊರೆ ಹೋದ ಅಜೀವ ಸದಸ್ಯರ ವಿರುದ್ಧ ತೀವ್ರ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಇದೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಚೇರಿ ವೇಳೆಯಲ್ಲೇ ಕಡತ ಪರಿಶೀಲನೆ ನಡೆಯಬೇಕು. ರಾತ್ರಿ ವೇಳೆ ಇಂತಹ ಆದೇಶ ಸಂಶಯಾಸ್ಪದ ಎಂದು ವಾದಿಗಳ ಪರ ವಕೀಲ ರಾಘವೇಂದ್ರ ವಿ. ಗಡೆಪ್ಪನವರ ವಾದಿಸಿದ್ದಾರೆ.

RTI ಮೂಲಕ ಬಯಲಾದ ಅಂಶ

RTI ಮೂಲಕ ಲಭ್ಯವಾದ ಮಾಹಿತಿಯಲ್ಲಿ, ಆಡಳಿತಾಧಿಕಾರಿಗಳ ಅಧಿಕೃತ ಇ-ಮೇಲ್‌ನಲ್ಲಿ ಕೇವಲ ಎರಡು ಸಾಲಿನ ಉತ್ತರ ಮಾತ್ರ ಲಭ್ಯವಾಗಿದ್ದು, ಯಾವುದೇ ಡಿಜಿಟಲ್ ಸಹಿ, ಕಡತ, ಟಿಪ್ಪಣಿ ಅಥವಾ ಅಧಿಕೃತ ದಾಖಲೆಗಳು ಇಲ್ಲ ಎಂದು ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಆಡಳಿತ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು

ಡಿಸೆಂಬರ್ 12ರಂದು ಆಡಳಿತಾಧಿಕಾರಿ ಗಾಯತ್ರಿ ಅವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಹಾಜರಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಕಚೇರಿಯಿಂದ ಕಡತವಿಲ್ಲದೇ ಇ-ಮೇಲ್ ಆದೇಶ ನೀಡಿದರೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇದೀಗ ಕೇಂದ್ರ ಕ.ಸಾ.ಪ. ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾದ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

ಅಪರಾಧ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಿಸಿದ ಯೂಟ್ಯೂಬರ್ ವಿರುದ್ಧ FIR

ಚಿಕ್ಕಬಳ್ಳಾಪುರ:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಿಯಮಬಾಹಿರವಾಗಿ ಡ್ರೋನ್ ಹಾರಿಸಿದ ಆರೋಪದಡಿ ನಗರದ ಯೂಟ್ಯೂಬರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ವಾಂಡರ್‌ಲಸ್ಟ್’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಯೂಟ್ಯೂಬರ್, ವಿಮಾನ ನಿಲ್ದಾಣದ ಟರ್ಮಿನಲ್–1 ಮುಂಭಾಗದಿಂದ ಯಲಹಂಕ ಮಾರ್ಗವಾಗಿ ಏರ್‌ಫೋರ್ಸ್ ಪ್ರದೇಶದವರೆಗೆ ಡ್ರೋನ್ ಹಾರಿಸಿದ್ದಾನೆ. ಸುಮಾರು 7–8 ನಿಮಿಷಗಳ ಕಾಲ ಡ್ರೋನ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎನ್ನಲಾಗಿದೆ.

ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳ ಮೇಲೆಯೂ ಡ್ರೋನ್ ಹಾರಿಸಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರದೇಶವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೆಡ್ ಝೋನ್ ವ್ಯಾಪ್ತಿಗೆ ಒಳಪಡುವುದರಿಂದ, ಇಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೋ–ಫ್ಲೈಯಿಂಗ್ ಝೋನ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿರುವುದರಿಂದ, ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಯೂಟ್ಯೂಬರ್ ವಿರುದ್ಧ ಎಯರ್‌ಕ್ರಾಫ್ಟ್ ಆಕ್ಟ್ 1943 (ಸೆಕ್ಷನ್ 10(1ಎ)) ಹಾಗೂ ಬಿಎನ್‌ಎಸ್ ಸೆಕ್ಷನ್ 125 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಸ್ತುತ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

Trending