Connect with us

ದೇಶ

ಎಲ್ಲ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಸರ್ಕಾರದ ಸ್ಪಷ್ಟ ನಿರ್ದೇಶನ

ಬೆಳಗಾವಿ (ಸುವರ್ಣಸೌಧ): ಐಸಿಎಸ್‌ಇ, ಸಿಬಿಎಸ್‌ಇ, ಐಬಿಐಜಿಸಿಎಸ್‌ ಸೇರಿದಂತೆ ಎಲ್ಲ ಪಠ್ಯಕ್ರಮಗಳನ್ನು ಬೋಧಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ ಎಂದು ರಾಜ್ಯ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕನ್ನಡ ಭಾಷಾ ಕಲಿಕಾ ಅಧಿನಿಯಮ–2015 ಅನ್ನು ರಾಜ್ಯಾದ್ಯಂತ ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ಅಧಿನಿಯಮಕ್ಕೆ ಸಂಬಂಧಿಸಿದ ನಿಯಮಗಳನ್ನು ಶಿಕ್ಷಣ ಇಲಾಖೆ 2017ರಲ್ಲಿ ರೂಪಿಸಿ ಜಾರಿಗೊಳಿಸಿದೆ ಎಂದರು.

ಅಧಿನಿಯಮವನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಉಪ ನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿರುವ ‘ದಿ ಬೆಂಗಳೂರು ಇಂಟರ್‌ನ್ಯಾಷನಲ್ ಶಾಲೆ’ ಮತ್ತು ದೊಡ್ಡಕಣ್ಣಹಳ್ಳಿಯ ‘ಇನೋವೇಟಿವ್ ಶಾಲೆ’ ಗಳಿಗೆ ನಿಯಮಾನುಸಾರ ದಂಡ ವಿಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೊಂದಣಿ ಹಾಗೂ ಮಾನ್ಯತೆ ನವೀಕರಣದ ವೇಳೆ, ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದು ಕಡ್ಡಾಯವಾಗಿದೆ. ಇದೇ ರೀತಿ, ರಾಜ್ಯ ಪಠ್ಯಕ್ರಮದ ಶಾಲೆಗಳು ಇತರೆ ಪಠ್ಯಕ್ರಮಗಳಿಗೆ ಸಂಯೋಜನೆ ಪಡೆಯಲು NOC ಕೋರಿ ಅರ್ಜಿ ಸಲ್ಲಿಸುವಾಗ, ಕನ್ನಡ ಕಲಿಕೆಯ ಬಗ್ಗೆ ಮುಚ್ಚಳಿಕೆ ಪತ್ರ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ರಾಜ್ಯದ ಭಾಷಾ-ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅಧಿನಿಯಮ ಉಲ್ಲಂಘನೆಗೆ ಯಾವುದೇ ಸಡಿಲಿಕೆ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ದೇಶ

ಎಪ್ಸ್ಟೀನ್ ಫೈಲ್ಸ್‌ನಲ್ಲಿ ಹರ್ದೀಪ್ ಪುರಿ ಹೆಸರು? ಸಂಸತ್ತಿನಲ್ಲಿ ಗದ್ದಲ, ಸಚಿವರ ಸ್ಪಷ್ಟನೆ

ಹೊಸದಿಲ್ಲಿ: ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಜೆಫ್ರಿ ಎಪ್ಸ್ಟೀನ್‌ (Jeffrey Epstein) ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆಗೊಳಿಸಿರುವ ಮಿಲಿಯನ್‌ಗಟ್ಟಲೆ ಇಮೇಲ್‌ಗಳು ಮತ್ತು ದಾಖಲೆಗಳು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಈ ದಾಖಲೆಗಳಲ್ಲಿ ಕೆಲವು ಭಾರತೀಯರ ಹೆಸರುಗಳು ಕಾಣಿಸಿಕೊಂಡಿರುವುದು ಸಂಸತ್ತಿನಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಹೆಸರು ಉಲ್ಲೇಖವಾಗಿರುವುದಾಗಿ ವರದಿಯಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ತಿನೊಳಗೂ ಹೊರಗೂ ಮಾತನಾಡಿದ ಅವರು, ಎಪ್ಸ್ಟೀನ್ ಪ್ರಕರಣದ ಉಲ್ಲೇಖದೊಂದಿಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಹರ್ದೀಪ್ ಪುರಿ, “ನಾನು ಜೆಫ್ರಿ ಎಪ್ಸ್ಟೀನ್ ಅವರನ್ನು ಕೆಲವೇ ಬಾರಿ, ಅದೂ ಔಪಚಾರಿಕ ಸಂದರ್ಭಗಳಲ್ಲಿ ಮಾತ್ರ ಭೇಟಿ ಮಾಡಿದ್ದೇನೆ. ಅವರ ಅಕ್ರಮ ಚಟುವಟಿಕೆಗಳಿಗೆ ನನ್ನೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ಮೂರು ಮಿಲಿಯನ್‌ ಇಮೇಲ್‌ಗಳಲ್ಲಿ ತಮ್ಮ ಹೆಸರು ಕೇವಲ 3-4 ಬಾರಿ ಮಾತ್ರ ಉಲ್ಲೇಖವಾಗಿದೆ. ನಿಯೋಗದ ಭಾಗವಾಗಿ ಕೆಲ ಸಂದರ್ಭಗಳಲ್ಲಿ ಭೇಟಿಯಾಗಿದ್ದು, ಕೇವಲ ಒಂದು ಇಮೇಲ್ ವಿನಿಮಯ ಮಾಡಿಕೊಂಡಿದ್ದೇನೆ ಅಷ್ಟೇ ಹೊರತು, ಯಾವುದೇ ಅಕ್ರಮ ಸಂಬಂಧ ಇಲ್ಲ ಎಂದು ಹೇಳಿದರು.

ಇದೇ ವೇಳೆ, 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ಕುರಿತ ಉಲ್ಲೇಖಗಳನ್ನೂ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. “ಇದು ಅಧಿಕೃತ ಭೇಟಿಯೇ ಹೊರತು, ಉಳಿದ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯ ವ್ಯರ್ಥ ಕಲ್ಪನೆಗಳಾಗಿವೆ” ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಎಪ್ಸ್ಟೀನ್ ಫೈಲ್ಸ್ ಪ್ರಕರಣ ಇದೀಗ ಭಾರತೀಯ ರಾಜಕೀಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಪ್ರತಿಕ್ರಿಯೆಗಳು ಎದುರಾಗುವ ಸಾಧ್ಯತೆ ಇದೆ.

Continue Reading

ಕ್ರೀಡೆ

JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ

ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.

ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.

ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.

ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.

ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.

ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.

ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.

ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

ದೇಶ

LATEST : ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ? ರಿಜುಜು ಕಿಡಿ

ನವದೆಹಲಿ: ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹಕ್ಕುಚ್ಯುತಿ (Breach of Privilege) ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು (Kiren Rijiju) ತಿಳಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವು ‘ಭಾರತ ಮಾತೆಯನ್ನು ಮಾರಿಬಿಟ್ಟಿದೆ’ ಎಂದು ಆರೋಪಿಸಿದ್ದರು. ಭಾರತ–ಅಮೆರಿಕ ವಾಣಿಜ್ಯ ಒಪ್ಪಂದವನ್ನು ‘ಸಂಪೂರ್ಣ ಶರಣಾಗತಿ’ ಎಂದು ಟೀಕಿಸಿದ ಅವರು, ದೇಶದ ಶಕ್ತಿ ಸುರಕ್ಷತೆ ಅಮೆರಿಕಕ್ಕೆ ಒಪ್ಪಿಸಲಾಗಿದೆ ಹಾಗೂ ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಕಿರಣ್ ರಿಜುಜು, ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಮಂತ್ರಿ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು. “ಭಾರತವನ್ನು ಯಾರೂ ಮಾರಲಾರರು, ಖರೀದಿಸಲಾರರು. ಗಂಭೀರ ಆರೋಪ ಮಾಡಲು ನಿಯಮಾನುಸಾರ ಮುಂಚಿತ ನೋಟಿಸ್ ನೀಡಬೇಕು ಮತ್ತು ಪುರಾವೆ ಸಲ್ಲಿಸಬೇಕು. ಆದರೆ ರಾಹುಲ್ ಗಾಂಧಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡಿದ್ದಾರೆ,” ಎಂದು ರಿಜುಜು ಹೇಳಿದರು.

ಇದಲ್ಲದೆ, ರಾಹುಲ್ ಗಾಂಧಿ ಅವರ ಭಾಷಣದಲ್ಲಿ ದಾಖಲಾಗಿರುವ ತಪ್ಪು ಹೇಳಿಕೆಗಳು ಮತ್ತು ಅಸಭ್ಯ ಪದಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧವೂ ನೋಟಿಸ್ ಇಲ್ಲದೆ ಗಂಭೀರ ಆರೋಪ ಮಾಡಲಾಗಿದೆ ಎಂದು ರಿಜುಜು ತಿಳಿಸಿದರು.

ಈ ಬೆಳವಣಿಗೆಗಳ ನಡುವೆ ಸಂಸತ್ ಕಲಾಪದಲ್ಲಿ ಮತ್ತಷ್ಟು ರಾಜಕೀಯ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ.

Continue Reading

Trending