Connect with us

ದೇಶ

2026 ಹೊಸ ವರ್ಷ ಸಂಭ್ರಮಕ್ಕೆ ಬೆಂಗಳೂರು ಸಜ್ಜು: ಪಬ್–ಬಾರ್‌ಗಳಿಗೆ ಕಠಿಣ ಮಾರ್ಗಸೂಚಿ

ಹೊಸ ವರ್ಷ 2026 ಸ್ವಾಗತಕ್ಕೆ ಸಜ್ಜು

ಬೆಂಗಳೂರು: ಹೊಸ ಕ್ಯಾಲೆಂಡರ್ ವರ್ಷ 2026ರ ಸ್ವಾಗತಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸಂಭ್ರಮಾಚರಣೆಗೆ ಸಜ್ಜಾಗಿವೆ. ಯಾವುದೇ ಅವಘಡ ಅಥವಾ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಬ್, ಬಾರ್, ಕ್ಲಬ್‌ಗಳಲ್ಲಿ ಶಿಸ್ತು, ಭದ್ರತೆ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಸಂಯುಕ್ತವಾಗಿ ಮಾರ್ಗಸೂಚಿ ಬಿಡುಗಡೆ ಮಾಡಿವೆ. ಈ ಸಂಬಂಧ ಸರ್ಕಾರದಿಂದಲೂ ಪಬ್–ಬಾರ್–ಕ್ಲಬ್‌ಗಳಿಗೆ ನೋಟಿಸ್ ನೀಡಲಾಗಿದೆ.

ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ ನಡೆಯುವ ಪ್ರಮುಖ ಪ್ರದೇಶಗಳಲ್ಲಿ ನೆಲಮಹಡಿ, ಬೇಸ್ಮೆಂಟ್ ಶಾಪ್‌ಗಳು ಹಾಗೂ ಅಂಡರ್‌ಪಾಸ್‌ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಕಾಲ್ತುಳಿತ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ರಿಗೇಡ್ ರಸ್ತೆ ಸಂಘಟನೆ ತಿಳಿಸಿದೆ.

ಹೊಸ ವರ್ಷಾಚರಣೆಗಾಗಿ ಕಾರ್ಯಕ್ರಮ ಆಯೋಜನೆಗೆ ಪೂರ್ವಾನುಮತಿ ಕಡ್ಡಾಯವಾಗಿದ್ದು, ಧ್ವನಿವರ್ಧಕ ಬಳಕೆಗೂ ಪರವಾನಗಿ ಅಗತ್ಯ. ಜನವಸತಿ ಪ್ರದೇಶಗಳಲ್ಲಿ ರಾತ್ರಿಯ ಸಮಯದಲ್ಲಿ ಧ್ವನಿವರ್ಧಕದ ತೀವ್ರತೆ 45 ಡೆಸಿಬೆಲ್ ಮಿತಿಯಲ್ಲಿ ಇರಬೇಕು. ಕಮರ್ಷಿಯಲ್ ಪ್ರದೇಶದಲ್ಲಿ 55 ಡಿಬಿ ಮತ್ತು ಇಂಡಸ್ಟ್ರಿಯಲ್ ಪ್ರದೇಶದಲ್ಲಿ 70 ಡಿಬಿ ಮಿತಿ ನಿಗದಿಯಾಗಿದೆ.

ಪಾರ್ಟಿಗಳ ವೇಳೆ ಗ್ರಾಹಕರ ಸ್ಕ್ರಿನಿಂಗ್, ಸಿಸಿ ಕ್ಯಾಮೆರಾ ಅಳವಡಿಕೆ, ಅಗ್ನಿ ನಿರೋಧಕ ಕ್ರಮ, ಮಾದಕ ವಸ್ತು ನಿಯಂತ್ರಣ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರ ರಕ್ಷಣೆಗಾಗಿ ಎಂಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗುತ್ತದೆ.

Continue Reading
Click to comment

Leave a Reply

Your email address will not be published. Required fields are marked *

ದೇಶ

LATEST NEWS “ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ”: ಅಮೆರಿಕಾ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಅಮೆರಿಕದೊಂದಿಗೆ ನಡೆದ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಭಾರತ ಯಾರಿಂದ ತೈಲ ಖರೀದಿಸಬೇಕು ಎಂಬುದನ್ನೂ ಅಮೆರಿಕ ನಿರ್ಧರಿಸುತ್ತಿದೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲವೇ?” ಎಂದು ಪ್ರಶ್ನಿಸಿದರು.

ಸಮಾನ ಪ್ರಯೋಜನಗಳನ್ನು ಪಡೆಯದೇ ಒಪ್ಪಂದ ಮಾಡಿಕೊಂಡಿರುವುದು ಸರ್ಕಾರದ ಶರಣಾಗತಿ ರಾಜಕೀಯ ಎಂದು ಅವರು ಆರೋಪಿಸಿದರು. ಈ ಹಿಂದೆ ಭಾರತದ ಉತ್ಪನ್ನಗಳಿಗೆ 3% ಟ್ಯಾರಿಫ್ ಇದ್ದದ್ದು, ಈಗ ಅದನ್ನು 18%ಕ್ಕೆ ಏರಿಸಲಾಗಿದೆ. ಇದನ್ನು ಸರ್ಕಾರ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ಟೀಕಿಸಿದರು.

ಟೆಕ್ಸ್‌ಟೈಲ್ ವಸ್ತುಗಳಿಗೆ ಭಾರತಕ್ಕೆ 18% ಟ್ಯಾರಿಫ್ ವಿಧಿಸಿರುವಾಗ, ಬಾಂಗ್ಲಾದೇಶಕ್ಕೆ 0% ಟ್ಯಾರಿಫ್ ನೀಡಲಾಗಿದೆ. “ಇದು ಭಾರತೀಯ ಕೈಗಾರಿಕೆಗಳಿಗೆ ಹಿನ್ನಡೆಯಾಗಿದೆ. ಟ್ರಂಪ್ ಮೋದಿ ಮೇಲೆ ಬಿಗಿಪಟ್ಟು ಹಾಕಿದ್ದಾರೆ” ಎಂದು ಹೇಳಿದರು.

ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಿದ ರಾಹುಲ್, “ಅಮೆರಿಕಕ್ಕೆ ಭಾರತದ ಬಗ್ಗೆ ಬದ್ಧತೆ ಇಲ್ಲ. ಆದರೆ ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿದೆ. ನಾವು ಮೂರ್ಖರಂತೆ ನಿಂತಿದ್ದೇವೆ” ಎಂದು ಕಿಡಿಕಾರಿದರು.

Continue Reading

ದೇಶ

BIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್‌, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.

600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಷ್ಕರದ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್‌, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಹಾಗೂ ವಿವಿಧ ಗುತ್ತಿಗೆ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಪ್ರತಿಭಟನೆಗಳಲ್ಲಿ ಭಾಗಿಯಾಗಲಿವೆ.

ನವೆಂಬರ್ 2025ರಲ್ಲಿ ಸೂಚಿಸಲಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ. ಒಡಿಶಾ ಮತ್ತು ಅಸ್ಸಾಂ ರಾಜ್ಯಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಾಲೆ-ಕಾಲೇಜುಗಳ ಮುಚ್ಚುವಿಕೆ ಕುರಿತು ಅಧಿಕೃತ ಘೋಷಣೆ ಇಲ್ಲದಿದ್ದರೂ, ಕೆಲವು ರಾಜ್ಯಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಸಾರ್ವಜನಿಕ ಸಾರಿಗೆ ಸೇವೆಗಳು ಅಸ್ತವ್ಯಸ್ತವಾಗಬಹುದು. ಆದರೆ ಹಾಲು, ಆಸ್ಪತ್ರೆ, ಮೆಡಿಕಲ್‌, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

Continue Reading

ದೇಶ

638 ಕನ್ನಡ ಶಾಲೆ ಮುಚ್ಚಿದ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ

ನವದೆಹಲಿ: ರಾಜ್ಯದಾದ್ಯಂತ 638 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿರುವುದು ಕನ್ನಡ ಮತ್ತು ಕನ್ನಡ ಶಿಕ್ಷಣದ ವಿರುದ್ಧದ ಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು. “ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ” ಎಂದು ಹೇಳಿದರು. ಈ ನಿರ್ಧಾರದಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ಬದ್ಧವಾಗಿರಬೇಕು. ಆದರೆ ಪ್ರಸ್ತುತ ಸರ್ಕಾರದ ನಡೆ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದ ಬೊಮ್ಮಾಯಿ, ಕೂಡಲೇ ಮುಚ್ಚಿರುವ ಎಲ್ಲಾ ಕನ್ನಡ ಶಾಲೆಗಳನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಜೊತೆಗೆ, ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ನಿರಂತರ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಹತಾಶಗೊಂಡಿದೆ” ಎಂದು ಹೇಳಿದರು. ಸಂಸತ್ತಿನಲ್ಲಿ ಬೆಂಚ್‌ಗಳ ಮೇಲೆ ನಿಂತು ಗದ್ದಲ ಮಾಡುವುದು, ಸ್ಪೀಕರ್ ವಿರುದ್ಧ ದಾಳಿ ನಡೆಸುವುದು ಹಾಗೂ ಪ್ರಧಾನಮಂತ್ರಿಯ ಆಸನದವರೆಗೆ ತೆರಳಿ ತಡೆ ಮಾಡುವ ಪ್ರಯತ್ನ ಮಿತಿಮೀರಿದ ವರ್ತನೆ ಎಂದು ಅವರು ಆರೋಪಿಸಿದರು.

ರಾಜಕೀಯದಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಗದ್ದಲ ಹಾಗೂ ಅಶಾಂತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.

Continue Reading

Trending