Connect with us

ದೇಶ

ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಶಾಂತಿ ಇರಲ್ಲ: ವಾಟಾಳ್ ನಾಗರಾಜ್ ಎಚ್ಚರಿಕೆ

ರಾಮನಗರ: ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಶಾಂತಿ ಉಳಿಯುವುದಿಲ್ಲ, ದೊಡ್ಡ ಮಟ್ಟದ ಹೋರಾಟ ನಡೆಯಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪ್ರಬುದ್ಧ ವ್ಯಕ್ತಿ ಹಾಗೂ ಅನುಭವಿ ರಾಜಕಾರಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರಾಗಿದ್ದು, ಅವರ ರಾಜಕೀಯ ಹಿನ್ನೆಲೆ ಬಲಿಷ್ಠವಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ದರೋಡೆಕೋರರು ಮತ್ತು ಹಣವಂತರೇ ಸಿಎಂ ಸ್ಥಾನಕ್ಕೆ ಬರುವ ಅಪಾಯವಿದೆ. ಕಾರ್ಪೋರೆಟ್ ಶಕ್ತಿಗಳು ಹಣ ಹೂಡಿ ತಮ್ಮ ಬೇಕಾದವರನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿವೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಬಾರದು ಎಂದು ವಾಟಾಳ್ ಎಚ್ಚರಿಸಿದರು.

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಶಾಂತಿ ಉಳಿಯುವುದಿಲ್ಲ. ಜನ ಬೀದಿಗೆ ಇಳಿಯುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ ಅಥವಾ ಬಿಜೆಪಿ ಯಾವ ಪಕ್ಷದಲ್ಲೂ ಸ್ಪಷ್ಟ ಸಿಎಂ ಅಭ್ಯರ್ಥಿಗಳಿಲ್ಲ ಎಂದು ಹೇಳಿದರು.

ಹೈಕಮಾಂಡ್ ಸಿದ್ದರಾಮಯ್ಯರನ್ನು ತೆಗೆದುಹಾಕಿದರೆ ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

ಅಪರಾಧ

ಬಿಕ್ಲು ಶಿವ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಾಸಕ ಬೈರತಿ ಬಸವರಾಜ್

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ (Bairati Basavaraj) ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆ ಮಾತ್ರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ನ್ಯಾಸುನೀಲ್ ದತ್ ಯಾದವ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಈಗಾಗಲೇ 20 ಆರೋಪಿಗಳ ಪೈಕಿ ಎ-1 ಆರೋಪಿ ಜಗದೀಶ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ತಿರಸ್ಕರಿಸಿತ್ತು.

ಇದಕ್ಕೂ ಮುನ್ನ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಾಪತ್ತೆಯಾಗಿದ್ದ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಂತರ ಜಾಮೀನು ಮಂಜೂರಾದರೂ, ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ರದ್ದುಪಡಿಸಿತ್ತು.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ದೇಶ

LATEST NEWS “ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ”: ಅಮೆರಿಕಾ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಅಮೆರಿಕದೊಂದಿಗೆ ನಡೆದ ವ್ಯಾಪಾರ ಒಪ್ಪಂದದ ಕುರಿತು ಲೋಕಸಭೆಯಲ್ಲಿ ಬಜೆಟ್ ಚರ್ಚೆಯ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಭಾರತ ಯಾರಿಂದ ತೈಲ ಖರೀದಿಸಬೇಕು ಎಂಬುದನ್ನೂ ಅಮೆರಿಕ ನಿರ್ಧರಿಸುತ್ತಿದೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲವೇ?” ಎಂದು ಪ್ರಶ್ನಿಸಿದರು.

ಸಮಾನ ಪ್ರಯೋಜನಗಳನ್ನು ಪಡೆಯದೇ ಒಪ್ಪಂದ ಮಾಡಿಕೊಂಡಿರುವುದು ಸರ್ಕಾರದ ಶರಣಾಗತಿ ರಾಜಕೀಯ ಎಂದು ಅವರು ಆರೋಪಿಸಿದರು. ಈ ಹಿಂದೆ ಭಾರತದ ಉತ್ಪನ್ನಗಳಿಗೆ 3% ಟ್ಯಾರಿಫ್ ಇದ್ದದ್ದು, ಈಗ ಅದನ್ನು 18%ಕ್ಕೆ ಏರಿಸಲಾಗಿದೆ. ಇದನ್ನು ಸರ್ಕಾರ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ಟೀಕಿಸಿದರು.

ಟೆಕ್ಸ್‌ಟೈಲ್ ವಸ್ತುಗಳಿಗೆ ಭಾರತಕ್ಕೆ 18% ಟ್ಯಾರಿಫ್ ವಿಧಿಸಿರುವಾಗ, ಬಾಂಗ್ಲಾದೇಶಕ್ಕೆ 0% ಟ್ಯಾರಿಫ್ ನೀಡಲಾಗಿದೆ. “ಇದು ಭಾರತೀಯ ಕೈಗಾರಿಕೆಗಳಿಗೆ ಹಿನ್ನಡೆಯಾಗಿದೆ. ಟ್ರಂಪ್ ಮೋದಿ ಮೇಲೆ ಬಿಗಿಪಟ್ಟು ಹಾಕಿದ್ದಾರೆ” ಎಂದು ಹೇಳಿದರು.

ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಿದ ರಾಹುಲ್, “ಅಮೆರಿಕಕ್ಕೆ ಭಾರತದ ಬಗ್ಗೆ ಬದ್ಧತೆ ಇಲ್ಲ. ಆದರೆ ಭಾರತ ಅಮೆರಿಕದ ಮೇಲೆ ಅವಲಂಬಿತವಾಗಿದೆ. ನಾವು ಮೂರ್ಖರಂತೆ ನಿಂತಿದ್ದೇವೆ” ಎಂದು ಕಿಡಿಕಾರಿದರು.

Continue Reading

ದೇಶ

BIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್‌, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ ಕಾರ್ಮಿಕ, ಕೃಷಿ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಲ್ಲಿ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.

600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಷ್ಕರದ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್‌, ವಿಮಾ, ರಕ್ಷಣಾ, ರೈಲ್ವೆ, ಬಂದರು, ವಿಮಾನಯಾನ ಹಾಗೂ ವಿವಿಧ ಗುತ್ತಿಗೆ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಸಹ ಪ್ರತಿಭಟನೆಗಳಲ್ಲಿ ಭಾಗಿಯಾಗಲಿವೆ.

ನವೆಂಬರ್ 2025ರಲ್ಲಿ ಸೂಚಿಸಲಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ. ಒಡಿಶಾ ಮತ್ತು ಅಸ್ಸಾಂ ರಾಜ್ಯಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶಾಲೆ-ಕಾಲೇಜುಗಳ ಮುಚ್ಚುವಿಕೆ ಕುರಿತು ಅಧಿಕೃತ ಘೋಷಣೆ ಇಲ್ಲದಿದ್ದರೂ, ಕೆಲವು ರಾಜ್ಯಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಸಾರ್ವಜನಿಕ ಸಾರಿಗೆ ಸೇವೆಗಳು ಅಸ್ತವ್ಯಸ್ತವಾಗಬಹುದು. ಆದರೆ ಹಾಲು, ಆಸ್ಪತ್ರೆ, ಮೆಡಿಕಲ್‌, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

Continue Reading

Trending