Connect with us

ದೇಶ

2027ರ ಜನಗಣತಿ: ಮನೆ ಪಟ್ಟಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ

ನವದೆಹಲಿ: ದೇಶದ ಮಹತ್ವದ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದ್ದು, 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಮತ್ತು ವಸತಿ ಗಣತಿ ಕಾರ್ಯಾಚರಣೆ 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈ ಕಾರ್ಯಾಚರಣೆ ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.

ಮನೆ ಪಟ್ಟಿ ಕಾರ್ಯ ಆರಂಭಕ್ಕೂ ಮೊದಲು, 15 ದಿನಗಳ ಸ್ವಯಂ ಗಣತಿ (Self Enumeration) ಆಯ್ಕೆಯನ್ನೂ ಸಾರ್ವಜನಿಕರಿಗೆ ನೀಡಲಾಗುವುದು. ಇದರಿಂದ ನಾಗರಿಕರು ತಮ್ಮ ಮಾಹಿತಿ ಸ್ವತಃ ಡಿಜಿಟಲ್ ಮೂಲಕ ದಾಖಲಿಸುವ ಅವಕಾಶ ಸಿಗಲಿದೆ.

ವಾಸ್ತವವಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿ, ಕೋವಿಡ್-19 ಸಾಂಕ್ರಾಮಿಕದ ಕಾರಣ ಮುಂದೂಡಲ್ಪಟ್ಟಿತ್ತು. ಇದೀಗ ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದ್ದು, ಜನಸಂಖ್ಯಾ ಎಣಿಕೆ 2027ರ ಫೆಬ್ರವರಿಯಿಂದ ಪ್ರಾರಂಭವಾಗಲಿದೆ.

ಈ ಜನಗಣತಿಯ ವಿಶೇಷ ಅಂಶವೆಂದರೆ, ಜಾತಿ ಗಣತಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸುವುದು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಸಂಪುಟ ಸಮಿತಿಯು ಈ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಸ್ವಾತಂತ್ರ್ಯ ನಂತರದ ಜನಗಣತಿಗಳಲ್ಲಿ ಜಾತಿ ದತ್ತಾಂಶವನ್ನು ಹೊರಗಿಟ್ಟಿದ್ದರೂ, ಈ ಬಾರಿ ಅದು ಮತ್ತೆ ಸೇರಿದೆ.

ಸುಮಾರು 30 ಲಕ್ಷ ಗಣತಿದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, ಮೊದಲ ಬಾರಿಗೆ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಂಪೂರ್ಣ ಡಿಜಿಟಲ್ ಜನಗಣತಿ ನಡೆಸಲಾಗುತ್ತದೆ.

2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆ 1,210.19 ಮಿಲಿಯನ್ ಆಗಿದ್ದು, ಪುರುಷರು 51.54% ಹಾಗೂ ಮಹಿಳೆಯರು 48.46% ಇದ್ದರು. 2027ರ ಜನಗಣತಿ ದೇಶದ ಭವಿಷ್ಯದ ನೀತಿಗಳಿಗೆ ಪ್ರಮುಖ ಆಧಾರವಾಗಲಿದೆ.

ದೇಶ

ಜೈರಾಮ್ ರಮೇಶ್‌ಗೆ ಸುಪ್ರೀಂಕೋರ್ಟ್ ಕಿಡಿ: “ಮಾಧ್ಯಮ ಪ್ರಚಾರಕ್ಕೇ ಅರ್ಜಿ?”

ಹೊಸದಿಲ್ಲಿ: ಪರಿಸರ ಪರವಾನಿಗೆಗೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ಇದೆಲ್ಲವನ್ನೂ ನೀವು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾಡುತ್ತಿದ್ದೀರಾ?” ಎಂದು ತ್ರಿಸದಸ್ಯ ಪೀಠ ಕಿಡಿಕಾರಿತು.

ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಲ್ಲಿ ನ್ಯಾ. ಸೂರ್ಯಕಾಂತ್, ನ್ಯಾ. ಜಾಯ್‌ಮಾಲ್ಯ ಬಾಗ್ಚಿ ಹಾಗೂ ನ್ಯಾ. ಉಜ್ಜಲ್ ಭುಯಾನ್ ಇದ್ದರು. ಪರಿಸರ ಪರವಾನಿಗೆಯನ್ನು ಪೂರ್ವ ಅನ್ವಯವಾಗುವಂತೆ (Retrospective Environmental Clearance) ನೀಡುವ ಕ್ರಮವನ್ನು ಪ್ರಶ್ನಿಸಿ ಜೈರಾಮ್ ರಮೇಶ್ ರಿಟ್ ಅರ್ಜಿ ಸಲ್ಲಿಸಿದ್ದರು.

ರಿಟ್ ಅರ್ಜಿ ಸ್ವೀಕರಿಸಲು ನಿರಾಕರಣೆ

ವಿಚಾರಣೆ ವೇಳೆ ಪೀಠ, ಈ ಅರ್ಜಿ ಕೇಂದ್ರ ಸರ್ಕಾರದ ಕುಂದುಕೊರತೆಯನ್ನು ಹೈಲೆಟ್ ಮಾಡುವ ಬದಲು ಸಾರ್ವಜನಿಕ ಗಮನ ಸೆಳೆಯಲು ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟಿತು. ನವೆಂಬರ್ 2025ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಫೆ.12) ಸ್ವೀಕರಿಸಲು ನಿರಾಕರಿಸಿತು.

“ದಂಡ ಎದುರಿಸಲು ಸಿದ್ದರಾಗಿ” ಎಚ್ಚರಿಕೆ

“ತೀರ್ಪಿನ ವಿರುದ್ಧ ರಿಟ್ ಅರ್ಜಿ ಯಾಕೆ? ಮರುಪರಿಶೀಲನಾ ಅರ್ಜಿ (Review Petition) ಸಲ್ಲಿಸಬಹುದು ಅಲ್ಲವೇ? ರಿಟ್ ಮೂಲಕ ಮರುಪರಿಶೀಲನೆ ಸಾಧ್ಯವಿಲ್ಲ ಎಂಬುದು ತಿಳಿದಿಲ್ಲವೇ? ದಂಡ ಎದುರಿಸಲು ಸಿದ್ದರಾಗಿ” ಎಂದು ನ್ಯಾ. ಸೂರ್ಯಕಾಂತ್ ಎಚ್ಚರಿಸಿದರು.

ನ್ಯಾಯಾಲಯದ ಎಚ್ಚರಿಕೆಯ ಬಳಿಕ ಜೈರಾಮ್ ರಮೇಶ್ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ವಿನಂತಿಸಿಕೊಂಡರು. ನ್ಯಾಯಪೀಠ ಅದಕ್ಕೆ ಅನುಮತಿ ನೀಡಿ, ಕಾನೂನಿನ ಪ್ರಕಾರ ಲಭ್ಯವಿರುವ ಪರಿಹಾರವನ್ನು ಪಡೆಯುವಂತೆ ಸೂಚಿಸಿತು.


ಪ್ರಕರಣದ ಹಿನ್ನೆಲೆ

ಜೈರಾಮ್ ರಮೇಶ್ ಯಾವುದೇ ಯೋಜನೆ ಆರಂಭವಾದ ನಂತರ ಪರಿಸರ ಪರವಾನಿಗೆ ನೀಡುವ ಕ್ರಮವನ್ನು ಪ್ರಶ್ನಿಸಿದ್ದರು. ಈ ರೀತಿಯ ಅನುಮತಿ ಕಾನೂನುಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ವಾದಿಸಿದ್ದರು.

ಕೇಂದ್ರ ಸರ್ಕಾರದ ನಿಯಮ ಏನು?

  • 2006ರಲ್ಲಿ ಯೋಜನೆ ಆರಂಭಿಸುವ ಮೊದಲು ಪರಿಸರ ಪರವಾನಿಗೆ ಕಡ್ಡಾಯಗೊಳಿಸಲಾಗಿತ್ತು.
  • 2017 ಮತ್ತು 2021ರ ಅಧಿಸೂಚನೆಗಳ ಮೂಲಕ ಕೆಲವು ಯೋಜನೆಗಳಿಗೆ ಷರತ್ತುಬದ್ದ ಪೂರ್ವಾನ್ವಯ ಅನುಮತಿ ಅವಕಾಶ ನೀಡಲಾಗಿತ್ತು.
  • ಮೇ 2025ರಲ್ಲಿ ಈ ಕ್ರಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
  • ಆದರೆ ನವೆಂಬರ್ 2025ರಲ್ಲಿ CREDAI ಅರ್ಜಿಯ ವಿಚಾರಣೆ ವೇಳೆ ಹಿಂದಿನ ತೀರ್ಪಿನಲ್ಲಿ ಸಡಿಲಿಕೆ ನೀಡಲಾಗಿತ್ತು.

ಈ ಮರುಪರಿಶೀಲಿತ ತೀರ್ಪನ್ನೇ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.

Continue Reading

ದೇಶ

HAL ಠಾಣೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?

ಬೆಂಗಳೂರು: ತನಗೆ ಹಾಗೂ ಸ್ನೇಹಿತೆಯಾಗಿರುವ ನಟಿಗೆ ಉದ್ಯಮಿ ಅರವಿಂದ್ ರೆಡ್ಡಿಯ ಕಾಲು ಹಿಡಿಯುವಂತೆ ಎಚ್‌ಎಎಲ್ ಠಾಣೆಯ ಇನ್ಸ್‌ಪೆಕ್ಟರ್ ಬೆದರಿಸಿದ್ದಾರೆ ಎಂದು ಆರೋಪಿಸಿ ಬಿ.ಕೆ. ವೈಶಾಕ್ ಕರ್ನಾಟಕ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿದ ಪ್ರಕರಣದಲ್ಲಿ ಎಚ್‌ಎಎಲ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಹಾಗೂ ಇನ್ಸ್‌ಪೆಕ್ಟರ್ ಅಜರುದ್ದೀನ್ ವಿರುದ್ಧ ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವೈಶಾಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಇನ್ಸ್‌ಪೆಕ್ಟರ್ ಅಜರುದ್ದೀನ್ ಹಾಗೂ ಅರವಿಂದ್ ರೆಡ್ಡಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಕಾಲಿಗೆ ಬೀಳುವಂತೆ ಸೂಚನೆ?

ಗುರುವಾರ ಅರ್ಜಿ ವಿಚಾರಣೆಗೆ ಬಂದಾಗ, ವೈಶಾಕ್ ಪರ ವಕೀಲರು ಹಾಜರಾಗಿ ಮಹತ್ವದ ಆರೋಪ ಮಂಡಿಸಿದರು. ಫೆಬ್ರವರಿ 6ರಂದು ಅರ್ಜಿದಾರರನ್ನು ಬಿಡುಗಡೆ ಮಾಡಲು ಹೈಕೋರ್ಟ್ ಸೂಚಿಸಿದ್ದರೂ, ಠಾಣೆಗೆ ಪ್ರಕರಣದಲ್ಲಿ ಹೆಸರು ಕೇಳಿಬಂದ ನಟಿಯನ್ನೂ ಕರೆಸಲಾಗಿತ್ತು. ಅಲ್ಲದೆ, ಅರವಿಂದ್ ರೆಡ್ಡಿಯ ಕಾಲಿಗೆ ಬೀಳುವಂತೆ ವೈಶಾಕ್‌ಗೆ ಸೂಚನೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಪ್ರಕರಣದ ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

ಜನವರಿಯಲ್ಲಿ ವೈಶಾಕ್ ಕೊರಿಯರ್ ಮೂಲಕ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ, ನಟಿಯೊಂದಿಗೆ ಇರುವ ಜಗಳ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ 6ರಿಂದ 7 ಕೋಟಿ ರೂ. ಹಣವನ್ನು ಕಳುಹಿಸಬೇಕು ಎಂದು ಒತ್ತಾಯಿಸಿದ್ದರು ಎಂಬ ಆರೋಪ ಇದೆ. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೂಚಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಅರವಿಂದ್ ರೆಡ್ಡಿ ದೂರು ನೀಡಿದ್ದು, ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಫೆಬ್ರವರಿ 2ರಂದು ನಟಿಯ ಮನೆಯಲ್ಲಿ ವೈಶಾಕ್ ಅವರನ್ನು ಬಂಧಿಸಲಾಗಿತ್ತು.

ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದೆ.

Continue Reading

ದೇಶ

Mumbai Musical Road: ‘ಜೈ ಹೋ’ ರಾಗ ಕೇಳಿಸುವ ಭಾರತದ ಮೊದಲ ಮ್ಯೂಸಿಕಲ್ ರಸ್ತೆ

ಮುಂಬೈ: ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ‘ಮ್ಯೂಸಿಕಲ್ ರೋಡ್’ ಅನ್ನು ಮುಂಬೈ ಕರಾವಳಿ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಈ ವಿಶೇಷ ರಸ್ತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವತಿಯಿಂದ ನಿರ್ಮಿಸಲಾದ ಈ ರಸ್ತೆ, ನಾರಿಮನ್ ಪಾಯಿಂಟ್‌ನಿಂದ ವರ್ಲಿ ಕಡೆಗೆ ಸಾಗುವ ಲೇನ್‌ನಲ್ಲಿ, ವರ್ಲಿ ಸುರಂಗದಿಂದ ಹೊರಬಂದ ಬಳಿಕ ಸುಮಾರು 500 ಮೀಟರ್ ದೂರದಲ್ಲಿ ಸ್ಥಾಪಿಸಲಾಗಿದೆ. ಈ ರಸ್ತೆಗೆ ‘ಛತ್ರಪತಿ ಸಂಭಾಜಿ ಮಹಾರಾಜ್’ ಹೆಸರು ಇಡಲಾಗಿದೆ.

70–80 ಕಿಮೀ ವೇಗದಲ್ಲಿ ‘ಜೈ ಹೋ’ ರಾಗ

ವಾಹನಗಳು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಸಂಚರಿಸಿದಾಗ, ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆಯಿಂದ ಶಬ್ದ ತರಂಗಗಳು ಉಂಟಾಗಿ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ‘ಜೈ ಹೋ’ ಹಾಡಿನ ರಾಗ ಕೇಳಿಸಿಕೊಳ್ಳುತ್ತದೆ ಎಂದು ಬಿಎಂಸಿ ತಿಳಿಸಿದೆ.

ಚಾಲಕರಿಗೆ ಸೂಚನೆ ನೀಡಲು 500 ಮೀಟರ್, 100 ಮೀಟರ್ ಹಾಗೂ 60 ಮೀಟರ್ ದೂರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ವಿಶ್ವದ ಐದನೇ ಮ್ಯೂಸಿಕಲ್ ರೋಡ್

ಈ ಕಲ್ಪನೆಯನ್ನು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದರು. 2007ರಲ್ಲಿ ಜಪಾನ್‌ನಲ್ಲಿ ಮೊದಲ ಬಾರಿಗೆ ಮ್ಯೂಸಿಕಲ್ ರಸ್ತೆ ಪರಿಚಯಿಸಲಾಯಿತು. ಬಳಿಕ ಹಂಗೇರಿ, ದಕ್ಷಿಣ ಕೊರಿಯಾ ಮತ್ತು ಯುಎಇ ದೇಶಗಳಲ್ಲಿ ಇಂತಹ ರಸ್ತೆಗಳನ್ನು ನಿರ್ಮಿಸಲಾಗಿದೆ. ಮುಂಬೈನಲ್ಲಿ ನಿರ್ಮಿತ ಈ ರಸ್ತೆ ವಿಶ್ವದ ಐದನೇ ಮತ್ತು ಭಾರತದ ಮೊದಲ ಮ್ಯೂಸಿಕಲ್ ರೋಡ್ ಎಂದು ಬಿಎಂಸಿ ಹೇಳಿದೆ.

ಈ ಹೊಸ ಪ್ರಯೋಗ ಪ್ರವಾಸಿಗರು ಮತ್ತು ವಾಹನ ಚಾಲಕರಿಗೆ ವಿಶಿಷ್ಟ ಅನುಭವ ನೀಡಲಿದ್ದು, ಮುಂಬೈ ನಗರದ ಮತ್ತೊಂದು ಆಕರ್ಷಣೆಯಾಗಿ ಹೊರಹೊಮ್ಮಲಿದೆ.

Continue Reading

Trending