ದೇಶ
“ಅವನಿಗೆ ತಾಕತ್ ಇದ್ಯಾ?” – ರಾಜಕೀಯ ವೇದಿಕೆಯಲ್ಲಿ ಸಿಡಿದ ರೇವಣ್ಣ
ಹಾಸನ: “ಈ ಗಿರಾಕಿ ಎಲ್ಲಿದ್ದ? ಅವನು ಇಷ್ಟು ಮಾತನಾಡುತ್ತಾನಾ? ಇವನಿಗೆ ನಾನು ಹೆದರುತ್ತೀನಾ?” ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಅವರು ಅರಸೀಕೆರೆ ಶಾಸಕ ಶಿವಲಿಂಗೇಗೌಡ (Shivalinge Gowda) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅರಸೀಕೆರೆಯಿಂದ ಸ್ಪರ್ಧೆ ಮಾಡುವಂತೆ ಶಿವಲಿಂಗೇಗೌಡ ನೀಡಿದ ಪಂಥಾಹ್ವಾನಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಆಲೂರು ತಾಲ್ಲೂಕಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ಅವನಿಗೆ ತಾಕತ್ ಇದ್ಯಾ? ಒಂದು ಸಮಾಜದ ಹೆಸರಿನಲ್ಲಿ ಇಪ್ಪತ್ತು ವರ್ಷ ರಾಜಕೀಯ ಮಾಡಿದ್ದಾನೆ. ಅರಸೀಕೆರೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ” ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
“ನಾನು ಸವಾಲನ್ನು ಸ್ವೀಕರಿಸುತ್ತೇನೆ. ಆದರೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಅವನು ಈ ಮಟ್ಟಕ್ಕೆ ಬರಲು ನಾವು ಏನೇನು ಮಾಡಿದ್ದೇವೆ ಎನ್ನುವುದು ನನಗೆ ಗೊತ್ತಿದೆ” ಎಂದು ರೇವಣ್ಣ ಹೇಳಿದರು. ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನವನ್ನು ಉಲ್ಲೇಖಿಸಿ, “ಹಲವಾರು ಜನರ ಕಷ್ಟ ಪರಿಹಾರ ಮಾಡಿರುವ ದೇವಾಲಯ ಅವರ ಕ್ಷೇತ್ರದಲ್ಲೇ ಇದೆ. ಸತ್ಯ ಹೇಳಬೇಕು” ಎಂದು ಹೇಳಿದರು.
ಅಂದು ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ನೀಡುವ ಬೇಡಿಕೆ ಇದ್ದರೂ, ಕುರುಬ ಸಮುದಾಯದ ಬಿಳಿ ಚೌಡಯ್ಯ ಅವರನ್ನು ಜಿ.ಪಂ. ಉಪಾಧ್ಯಕ್ಷರನ್ನಾಗಿ ಮಾಡಿದ್ದಾಗಿ ತಿಳಿಸಿದರು. “ಇಂದು ವ್ಯಾಪಾರ ನಡೆಯುತ್ತಿದೆ. ನಾಲ್ಕು ಬಾರಿ ಗೆಲ್ಲಿಸಿದವರು ಯಾರು?” ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಸೋತ ದಿನ ಶಿವಲಿಂಗೇಗೌಡ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿಸಿದ್ದಾಗಿ ಹೇಳಿದ ರೇವಣ್ಣ, “ಲಿಂಗಾಯಿತ ಸಮುದಾಯಕ್ಕೆ ಅರಸೀಕೆರೆ ಕ್ಷೇತ್ರ ನೀಡಬೇಕು ಎಂದು ನನ್ನ ತಂದೆ ಹೇಳಿದ್ದರು. ಅವರ ಮಾತು ಮೀರಿ ತಪ್ಪು ಮಾಡಿ ಎಲ್ಲೋ ಇದ್ದ ಈ ಕೊಚ್ಚೆಗೆ ಸೀಟ್ ನೀಡಿದೆ” ಎಂದು ಸಿಟ್ಟು ಹೊರಹಾಕಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿಯೂ ನಾನು ಮತ್ತು ಕುಮಾರಸ್ವಾಮಿ ಸಹಿ ಹಾಕಿದ್ದೇವೆ ಎಂದು ಹೇಳಿದ ರೇವಣ್ಣ, ಹಾಸನ ರಾಜಕಾರಣದ ಒಳನೋಟವನ್ನು ಬಹಿರಂಗಪಡಿಸುವ ಮೂಲಕ ಪರೋಕ್ಷವಾಗಿ ಮಾಜಿ ಶಾಸಕ ಪ್ರೀತಂಗೌಡರನ್ನೂ ತಿವಿದರು.
ಕ್ರೀಡೆ
T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.
ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.
ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.
ದೇಶ
POK-ಅಕ್ಸಾಯ್ ಚಿನ್ ಭಾರತದ ಭಾಗ ಎಂದ US… ನಂತರ ಡಿಲೀಟ್!
ವಾಷಿಂಗ್ಟನ್: ಪಿಒಕೆ (POK) ಹಾಗೂ ಅಕ್ಸಾಯ್ ಚಿನ್ ಕುರಿತು ದೀರ್ಘಕಾಲದಿಂದ ದ್ವಂದ್ವ ನಿಲುವು ಹೊಂದಿದ್ದ ಅಮೆರಿಕಾ ಇದೀಗ ಮತ್ತೆ ಯು-ಟರ್ನ್ ಹೊಡೆದಂತೆ ಕಾಣುತ್ತಿದೆ. ಇತ್ತೀಚೆಗೆ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ, ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ (USTR) ಕಚೇರಿ ತನ್ನ ಅಧಿಕೃತ X ಖಾತೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಪ್ರದೇಶವನ್ನು ಭಾರತದ ಭೂಭಾಗವೆಂದು ತೋರಿಸುವ ನಕ್ಷೆಯನ್ನು ಪೋಸ್ಟ್ ಮಾಡಿತ್ತು.
ಫೆಬ್ರವರಿ 7ರಂದು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ಘೋಷಣೆಯ ನಂತರ ಈ ನಕ್ಷೆ ಪ್ರಕಟವಾಗಿದ್ದು, ಜಾಗತಿಕ ಗಮನ ಸೆಳೆದಿತ್ತು. ವಿಶೇಷವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಮತ್ತು ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳನ್ನು ಸಹ ಭಾರತದ ಭಾಗವಾಗಿ ಗುರುತಿಸಿರುವುದು ಅಮೆರಿಕದ ಹಳೆಯ ನೀತಿಗೆ ವಿರುದ್ಧವಾಗಿತ್ತು. ಇದರಿಂದ ಇಂಡೋ-ಪೆಸಿಫಿಕ್ ರಾಜಕೀಯ ಸಮೀಕರಣದಲ್ಲಿ ಭಾರತಕ್ಕೆ ಅಮೆರಿಕಾ ಸ್ಪಷ್ಟ ಬೆಂಬಲ ನೀಡಿದೆಯೇ ಎಂಬ ಚರ್ಚೆ ಜೋರಾಗಿತ್ತು.
ಆದರೆ, ಕೆಲವೇ ದಿನಗಳಲ್ಲಿ USTR ತನ್ನ ಅಧಿಕೃತ ಖಾತೆಯಿಂದ ಈ ನಕ್ಷೆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಇದರಿಂದ ಅಮೆರಿಕಾ ತನ್ನ ನಿಲುವಿನಲ್ಲಿ ಸ್ಪಷ್ಟತೆ ಕಳೆದುಕೊಂಡಿತೇ ಎಂಬ ಪ್ರಶ್ನೆ ಮೂಡಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಕ್ಸಾಯ್ ಚಿನ್ ಕೂಡ ಭಾರತದ ಭಾಗವೇ ಎಂದು ಪುನರುಚ್ಚರಿಸಿದೆ.
ಈ ಬೆಳವಣಿಗೆ ಭಾರತ-ಅಮೆರಿಕಾ-ಚೀನಾ-ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ.
ದೇಶ
ಅಮೆರಿಕ ವಿರುದ್ಧ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಆಕ್ರೋಶ: “ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಸಿಕೊಂಡರು”
ಇಸ್ಲಾಮಾಬಾದ್: ಪಾಕಿಸ್ತಾನವನ್ನು ಅಮೆರಿಕ “ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಸಿಕೊಂಡಿದೆ” ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಸಂಸತ್ತಿನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಬೆಂಬಲವನ್ನು ಅಂಧವಾಗಿ ಅನುಸರಿಸುವುದು ಪಾಕಿಸ್ತಾನ ಮಾಡಿದ ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಆಸಿಫ್, 2001ರ ಬಳಿಕ ಅಮೆರಿಕ ನೇತೃತ್ವದಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರವಹಿಸಿತು. ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸಿದ ಪರಿಣಾಮ ದೇಶದ ಒಳಗಿನ ಭದ್ರತಾ ಪರಿಸ್ಥಿತಿ ಹದಗೆಟ್ಟಿತು. ಹಿಂಸಾಚಾರ, ಅತಿರೇಕವಾದ ಮತ್ತು ಆರ್ಥಿಕ ಒತ್ತಡದ ಸಂಕಷ್ಟವನ್ನು ಪಾಕಿಸ್ತಾನ ದಶಕಗಳ ಕಾಲ ಅನುಭವಿಸಬೇಕಾಯಿತು ಎಂದು ಹೇಳಿದರು.
“ಅಮೆರಿಕ ತನ್ನ ಉದ್ದೇಶ ಸಾಧಿಸಿದ ಬಳಿಕ ಹಿಂದೆ ಸರಿಯಿತು. ಆದರೆ ಅದರ ಪರಿಣಾಮಗಳನ್ನು ಪಾಕಿಸ್ತಾನ ಇನ್ನೂ ಭರಿಸುತ್ತಿದೆ. ನಾವು ಅನುಭವಿಸಿದ ನಷ್ಟಗಳನ್ನು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ,” ಎಂದು ಆಸಿಫ್ ಬೇಸರ ವ್ಯಕ್ತಪಡಿಸಿದರು.
ಇತರ ರಾಷ್ಟ್ರಗಳ ಸಂಘರ್ಷಗಳಲ್ಲಿ ತೊಡಗಿಸಿಕೊಂಡ ಪರಿಣಾಮ ಪಾಕಿಸ್ತಾನ ಒಂದು ಕೈಗೊಂಬೆಯಂತಾಗಿದೆ. ಆ ಕಾಲದ ನಿರ್ಧಾರಗಳು ಬದಲಾಯಿಸಲಾಗದ ತಪ್ಪುಗಳಾಗಿದ್ದು, ಈಗ ದೇಶದ ಆರ್ಥಿಕ ಮತ್ತು ಭದ್ರತಾ ಪರಿಸ್ಥಿತಿಗೆ ಹೊರೆ ಆಗಿವೆ ಎಂದು ಹೇಳಿದ್ದಾರೆ.
ಈ ಹೇಳಿಕೆ ಪಾಕಿಸ್ತಾನ-ಅಮೆರಿಕ ಸಂಬಂಧಗಳಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ. ಭವಿಷ್ಯದಲ್ಲಿ ವಿದೇಶಾಂಗ ನೀತಿಯಲ್ಲಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂಬ ಅಗತ್ಯವನ್ನೂ ಅವರು ಒತ್ತಿಹೇಳಿದ್ದಾರೆ.
-
ಅಪರಾಧ24 hours agoಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
-
ಕ್ರೀಡೆ23 hours ago“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
-
ದೇಶ7 hours agoಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
-
Blog24 hours agoBIG NEWS : ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ: ಸಿಎಂ ಸಿದ್ದರಾಮಯ್ಯ
-
ಚುನಾವಣೆ7 hours agoBENGALURU : ವಾರ್ಡ್ ಮರುವಿಂಗಡಣೆ ವಿರೋಧಿಸಿ ಶಾಸಕ ಎಂ. ಕೃಷ್ಣಪ್ಪ ಹೈಕೋರ್ಟ್ ಅರ್ಜಿ
-
ಅಪರಾಧ24 hours agoಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಿಸಿದ ಯೂಟ್ಯೂಬರ್ ವಿರುದ್ಧ FIR
-
ದೇಶ7 hours agoDigital Services Tax: ಡಿಜಿಟಲ್ ತೆರಿಗೆಗೆ ಅಮೆರಿಕದ ವಿರೋಧ ಏಕೆ?
-
ದೇಶ7 hours agoಚರ್ಚೆ ಮುಗಿಯುವವರೆಗೆ ಸದನಕ್ಕೆ ಹಾಜರಾಗಲ್ಲ ಎಂದ ಲೋಕಸಭಾ ಸ್ಪೀಕರ್
