ದೇಶ
BENGALURU POLICE : ಹೊಯ್ಸಳ ಪೊಲೀಸರ ಸಮಯೋಚಿತ ಕಾರ್ಯದಿಂದ ಅಮೂಲ್ಯ ಜೀವ ರಕ್ಷಣೆ
ಬೆಂಗಳೂರು: ಕರ್ನಾಟಕ ಪೊಲೀಸ್ ಎಂದರೆ ದೇಶದಾದ್ಯಂತ ಉತ್ತಮ ಹೆಸರು ಪಡೆದ ಪಡೆ. ಅದರಲ್ಲೂ ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಜೊತೆಗೆ ಮಾನವೀಯತೆಯಲ್ಲಿಯೂ ಸದಾ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ, ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಪೊಲೀಸರ ಕಾರ್ಯದಿಂದ ಒಂದು ಅಮೂಲ್ಯ ಜೀವ ಉಳಿದಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಬೆಂಗಳೂರು ಪೊಲೀಸರ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದೆ.
ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರ ಪ್ರದೇಶದಲ್ಲಿ ಜುಲೈ 20ರಂದು ಪಶ್ಚಿಮ ಬಂಗಾಳ ಮೂಲದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷ ಸೇವಿಸಿದ ನಂತರ ಆಕೆ ತನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಪುತ್ರಿಯ ಮಾತು ಕೇಳಿ ಆತಂಕಗೊಂಡ ತಂದೆ ಕೂಡಲೇ ತುರ್ತು ಸಹಾಯ ಸಂಖ್ಯೆ 112ಕ್ಕೆ ಕರೆ ಮಾಡಿ ನೆರವು ಕೋರಿದ್ದಾರೆ.
ಕರೆ ಸ್ವೀಕರಿಸಿದ ತಕ್ಷಣವೇ ಕೋಣನಕುಂಟೆ ಠಾಣೆಯ ಹೊಯ್ಸಳ ಪೊಲೀಸ್ ಸಿಬ್ಬಂದಿ ಕ್ಷಣಮಾತ್ರದಲ್ಲೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಯುವತಿಯನ್ನು ಪೊಲೀಸರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಪರಿಣಾಮ ಯುವತಿಯ ಜೀವ ಉಳಿದಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೋಣನಕುಂಟೆ ಠಾಣೆಯ ಎಎಸ್‌ಐ ಶ್ರೀನಿವಾಸ್ ಮೂರ್ತಿ ಹಾಗೂ ಕಾನ್ಸಟೇಬಲ್ ಮಂಜುನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ವೈದ್ಯರ ಮಾಹಿತಿ ಪ್ರಕಾರ, ಯುವತಿಯ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದ್ದು ಯಾವುದೇ ಪ್ರಾಣಾಪಾಯ ಇಲ್ಲ. ಆದರೆ ಆಕೆ ಆತ್ಮಹತ್ಯೆಗೆ ಯತ್ನಿಸಿದ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.
ಪೊಲೀಸರ ತಕ್ಷಣದ ಸ್ಪಂದನೆ ಹಾಗೂ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸೂಕ್ತ ಸಮಯಕ್ಕೆ ಆಗಮಿಸಿ ಸರಿಯಾದ ಕ್ರಮ ಕೈಗೊಂಡ ಬೆಂಗಳೂರು ಪೊಲೀಸರು ಮತ್ತೊಮ್ಮೆ ತಮ್ಮ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯನ್ನು ಸಾಬೀತುಪಡಿಸಿದ್ದಾರೆ.
ಅಪರಾಧ
ಮನುಷ್ಯತ್ವ ಹೂತುಹೋದ ಎಪ್‌ಸ್ಟೀನ್ ದ್ವೀಪ: ಜಗತ್ತಿನ ಎಲೈಟ್‌ಗಳನ್ನು ನಡುಗಿಸುತ್ತಿರುವ ‘ಲೋಲಿಟಾ ಎಕ್ಸ್‌ಪ್ರೆಸ್’ ರಹಸ್ಯ
ನವದೆಹಲಿ/ವಾಷಿಂಗ್ಟನ್:
ಮನುಷ್ಯತ್ವವೇ ಮರಳಲ್ಲಿ ಹೂತುಹೋದ ದ್ವೀಪವೊಂದು ವರ್ಷಗಳ ಕಾಲ ಜಗತ್ತಿನ ಕಣ್ಣು ತಪ್ಪಿಸಿ ಅನಾಚಾರದ ಸ್ವರ್ಗವಾಗಿ ಬೆಳೆದಿತ್ತು. ‘ಲೋಲಿಟಾ ಎಕ್ಸ್‌ಪ್ರೆಸ್’ ಎಂಬ ಖಾಸಗಿ ಜೆಟ್ ವಿಮಾನ ದಿನವೂ ಲಿಟಲ್ ಸೇಂಟ್ ಜೇಮ್ಸ್ ದ್ವೀಪಕ್ಕೆ ಹಾರಾಟ ನಡೆಸುತ್ತಿತ್ತು. ಹದಿಹರೆಯದ ಹುಡುಗಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಬಲಿಕೊಡುತ್ತಿದ್ದ ಈ ದ್ವೀಪವನ್ನು ಇಂದು ಜಗತ್ತು ‘ಎಪ್‌ಸ್ಟೀನ್ ದ್ವೀಪ’ ಅಥವಾ ‘ಪೆಡೋಪೈಲ್ ಐಲ್ಯಾಂಡ್’ ಎಂದೇ ಕರೆಯುತ್ತಿದೆ.
1998ರಲ್ಲಿ ಅಮೆರಿಕದ ಶತಕೋಟ್ಯಧಿಪತಿ ಜೆಫ್ರಿ ಎಪ್‌ಸ್ಟೀನ್ 8 ಮಿಲಿಯನ್ ಡಾಲರ್ ನೀಡಿ ಖರೀದಿಸಿದ 71 ಎಕರೆ ವಿಸ್ತೀರ್ಣದ ಈ ದ್ವೀಪದಲ್ಲಿ ಐಷಾರಾಮಿ ರೆಸಾರ್ಟ್‌ಗಳು, ವಿಲ್ಲಾಗಳು, ಹೆಲಿಪ್ಯಾಡ್‌ಗಳು ನಿರ್ಮಾಣವಾಗಿದ್ದವು. ಹೊರಜಗತ್ತಿನಿಂದ ಸಂಪೂರ್ಣ ಕಡಿದುಹಾಕಲ್ಪಟ್ಟ ಈ ಪ್ರದೇಶದಲ್ಲಿ ನೂರಾರು ಅಪ್ರಾಪ್ತ ಬಾಲಕಿಯರನ್ನು ಬಂಧಿಸಿ, ಜಗತ್ತಿನ ಎಲೈಟ್‌ಗಳಿಗೆ ಪೂರೈಸಲಾಗುತ್ತಿತ್ತು ಎಂಬ ಆರೋಪಗಳು ತನಿಖೆಯಲ್ಲಿ ಬಹಿರಂಗವಾದವು.
2005ರಲ್ಲಿ ಫ್ಲೋರಿಡಾದ 14 ವರ್ಷದ ಬಾಲಕಿಯ ತಾಯಿಯೊಬ್ಬರು ನೀಡಿದ ದೂರು ಈ ಮಹಾ ಲೈಂಗಿಕ ಹಗರಣದ ಮೊದಲ ಕಿಡಿಯಾಗಿತ್ತು. ಬಳಿಕ 50ಕ್ಕೂ ಹೆಚ್ಚು ಅಪ್ರಾಪ್ತೆಯರು ದೂರು ದಾಖಲಿಸಿದರು. 2008ರಲ್ಲಿ ಎಪ್‌ಸ್ಟೀನ್ ತಪ್ಪಿತಸ್ಥನಾಗಿದ್ದರೂ, ಕೇವಲ 13 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದನು. 2019ರಲ್ಲಿ ಪುನಃ ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಬಂಧನಕ್ಕೊಳಗಾದ ಎಪ್‌ಸ್ಟೀನ್, ವಿಚಾರಣೆಗೆ ಮುನ್ನವೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕ ಸರ್ಕಾರ ಘೋಷಿಸಿತು. ಆದರೆ, ಈ ಸಾವಿನ ಸುತ್ತ ಇನ್ನೂ ಹಲವು ಅನುಮಾನಗಳಿವೆ.
ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸುಮಾರು 30 ಲಕ್ಷ ಪುಟಗಳ ದಾಖಲೆಗಳು ಜಗತ್ತನ್ನೇ ಬೆಚ್ಚಿಬೀಳುವಂತೆ ಮಾಡಿವೆ. ರಾಜಕೀಯ ನಾಯಕರು, ಬಿಲಿಯನೇರ್‌ಗಳು, ರಾಜಮನೆತನದವರು, ವಿಜ್ಞಾನಿಗಳು, ಉದ್ಯಮಿಗಳೆಂದರೆ ಯಾರೂ ಹೊರತಲ್ಲ. 80ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ತನಿಖೆಗೆ ಒಳಗಾಗಿದ್ದು, ಯುರೋಪ್‌ನ ಹಲವೆಡೆ ರಾಜೀನಾಮೆ ಅಲೆ ಎದ್ದಿದೆ.
ಆದರೆ, ಎಪ್‌ಸ್ಟೀನ್ ಫೈಲ್‌ನಲ್ಲಿ ಹೆಸರು ಕಾಣಿಸಿಕೊಂಡ ಮಾತ್ರಕ್ಕೆ ಅಪರಾಧ ಸಾಬೀತಾಗುವುದಿಲ್ಲ ಎಂದು ಅಮೆರಿಕದ ನ್ಯಾಯಾಲಯ ಸ್ಪಷ್ಟಪಡಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಅಥವಾ ಹಣಕಾಸು ದಾಖಲೆಗಳಿದ್ದಾಗ ಮಾತ್ರ ಕಾನೂನು ಕ್ರಮ ಸಾಧ್ಯವೆಂದು ಹೇಳಿದೆ.
ಈ ಎಲ್ಲದ ನಡುವೆ, ಈ ಮಹಾ ಹಗರಣದ ನಿಜವಾದ ಬಲಿಪಶುಗಳು ನೂರಾರು ಅಪ್ರಾಪ್ತ ಬಾಲಕಿಯರು ಎಂಬ ಸತ್ಯ ಮಾತ್ರ ಬದಲಾಗಿಲ್ಲ. ಅಧಿಕಾರ, ಹಣ ಮತ್ತು ಪ್ರಭಾವದ ಅಡ್ಡೆಗೋಡೆಯ ಹಿಂದೆ ನಡೆದ ಈ ಅಮಾನುಷ ಕೃತ್ಯಗಳು ಇಂದು ಜಗತ್ತಿನ ಅಂತರಾತ್ಮವನ್ನೇ ಪ್ರಶ್ನಿಸುತ್ತಿವೆ.
ದೇಶ
ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮತ್ತೊಂದು ಸಂಕಷ್ಟ: ಕ್ರೈಸ್ತ ಧರ್ಮಕ್ಕೆ ಅಪಮಾನ ಆರೋಪ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು
ಬೆಂಗಳೂರು: ನಟ ಯಶ್ (Yash) ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ (Toxic Cinema) ಚಿತ್ರಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟೀಸರ್‌ನಲ್ಲಿನ ಅಶ್ಲೀಲ ದೃಶ್ಯಗಳನ್ನು ಖಂಡಿಸಿ ಮಹಿಳಾ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಟಾಕ್ಸಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಮುಜುಗರ ಉಂಟುಮಾಡಲಾಗಿದೆ ಎಂದು ಆರೋಪಿಸಿ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National Christian Federation) ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೆ ದೂರು ಸಲ್ಲಿಸಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್ ಅವರಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಆ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಸಂತ ಮಿಕಯೇಲ್ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದುಹಾಕಿ, ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಟಾಕ್ಸಿಕ್ ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳಾ ಒಕ್ಕೂಟಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ಟೀಸರ್‌ನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಮಾಡಲಾಗಿತ್ತು.
ಒಟ್ಟಾರೆ, ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭಾರೀ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಚಿತ್ರತಂಡದ ನಡೆ ಮಹತ್ವ ಪಡೆದುಕೊಂಡಿದೆ.
ದೇಶ
ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
ಬೆಂಗಳೂರು, ಫೆ.10: ಶೋಷಿತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಹಿಂದ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಹಾಗೂ ಕರ್ನಾಟಕ ರಾಜ್ಯ ಒಬಿಸಿ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಈ ಬೇಡಿಕೆ ಮುಂದಿಡಲಾಗಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ಬಿ.ಕೆ. ಹರಿಪ್ರಸಾದ್ ಅವರು ಕೇವಲ ರಾಜಕೀಯ ನಾಯಕನಲ್ಲ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದಾರೆ ಎಂದು ಬಣ್ಣಿಸಿದರು. ಜಾತಿ ಗಣತಿಯಂತಹ ಸಂವೇದನಾಶೀಲ ಹಾಗೂ ಐತಿಹಾಸಿಕ ಮಹತ್ವದ ವಿಷಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರವಾಗಿ ಅವರು ದಿಟ್ಟ ನಿಲುವು ತಳೆದಿದ್ದಾರೆ ಎಂದು ಹೇಳಿದರು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ರಾಜಕೀಯದ ಕೇಂದ್ರಬಿಂದುವಾಗಿಸಿಕೊಂಡು ನಡೆಸಿರುವ ಅವರ ಹೋರಾಟ ಅಹಿಂದ ಚಳವಳಿಗೆ ಹೊಸ ಬಲ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಆಡಳಿತಕ್ಕೆ ರಾಜಕೀಯ ಹಾಗೂ ನೈತಿಕವಾಗಿ ಬಲ ತುಂಬಿದ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಮುಖರು ಎಂದು ಹೇಳಿದರು. ಪಕ್ಷದ ಒಳಗೂ ಹೊರಗೂ ಅಹಿಂದ ಧ್ವನಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸಿರುವ ಇಂತಹ ನಾಯಕನನ್ನು ಸಂಪುಟಕ್ಕೆ ಸೇರಿಸುವುದರಿಂದ ಸರ್ಕಾರದ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಲಿದೆ ಎಂದರು.
ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ಸೇರಿದ್ದಲ್ಲಿ ಅಹಿಂದ ಸಂಘಟನೆಗಳಿಗೆ ಹೊಸ ಶಕ್ತಿ ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆಗಳು, ಚರ್ಚೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಾಯಕರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಬಿ. ಶಿವಣ್ಣ ಸೇರಿದಂತೆ ಅಹಿಂದ ಕಾರ್ಯಕರ್ತರು ಮತ್ತು ಬಿ.ಕೆ. ಹರಿಪ್ರಸಾದ್ ಬೆಂಬಲಿಗರು ಉಪಸ್ಥಿತರಿದ್ದರು.
-
ಕ್ರೀಡೆ22 hours agoT20 WORLD CUP : ಪಾಕ್ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
-
ಅಪರಾಧ21 hours agoVIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
-
ದೇಶ20 hours agoBENGALURU : BCCI Centre of Excellence ಬೆಂಗಳೂರಿನಲ್ಲಿ 10 ಹುದ್ದೆಗಳ ನೇಮಕಾತಿ
-
ದೇಶ23 hours agoಮಂಡ್ಯದಲ್ಲಿ ಎಆರ್ಎಐ ಸ್ಥಾವರ ಸ್ಥಾಪನೆಗೆ 105 ಎಕರೆ ಸರ್ಕಾರಿ ಭೂಮಿ ಸಿದ್ಧ
-
ಅಪರಾಧ18 hours agoಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
-
ಕ್ರೀಡೆ18 hours ago“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
-
ದೇಶ23 hours agoDCM D K SHIVKUMAR ಖರ್ಗೆ ಸೂಚನೆ ಪಾಲಿಸಬೇಕು: ಡಿಕೆ ಶಿವಕುಮಾರ್
-
ಕ್ರೀಡೆ22 hours agoCRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್
