Connect with us

ರಾಜ್ಯ

ಜಮೀರ್ ಖಾನ್–ಝೈದ್ ಖಾನ್ ಮಧ್ಯೆ ಯಾಕೆ ಜಗಳ?

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಇದೀಗ ‘ಕಲ್ಟ್’ ಹೆಸರಿನ ಹೊಸ ಸಿನಿಮಾದ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಜನವರಿ 23ರಂದು ಬಿಡುಗಡೆಯಾದ ಈ ಸಿನಿಮಾ ‘ಎ’ ಪ್ರಮಾಣಪತ್ರ ಪಡೆದಿದ್ದು, ಅದರ ರಾ ಕಂಟೆಂಟ್ ಇದಕ್ಕೆ ಕಾರಣವಾಗಿದೆ.

ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಮಾತನಾಡಿದ ಝೈದ್ ಖಾನ್, ತಮ್ಮ ತಂದೆಯೊಂದಿಗೆ ಆಗುವ ಭಿನ್ನಾಭಿಪ್ರಾಯಗಳು ಹಾಗೂ ಜಗಳಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರಬೇಕೆಂಬ ನಿರೀಕ್ಷೆ ಇರುತ್ತದೆ. ಆದರೆ, ಜಮೀರ್ ಅಹ್ಮದ್ ಖಾನ್ ಅವರಿಗೆ ಮಗ ರಾಜಕೀಯಕ್ಕೆ ಬರೋದು ಇಷ್ಟವಿಲ್ಲವಂತೆ. ಬದಲಾಗಿ ಬಿಸ್ನೆಸ್ ನೋಡಿಕೊಳ್ಳಬೇಕು ಎಂಬುದು ಅವರ ಆಸೆ.

ಈ ಕುರಿತು ಮಾತನಾಡಿದ ಝೈದ್ ಖಾನ್, “ಕೆಲಸ ಬಂದರೆ ನಾನು ರಾಕ್ಷಸನಂತೆ ಕೆಲಸ ಮಾಡುತ್ತೇನೆ. ನನ್ನ ಶೇ.100 ಶ್ರಮ ಹಾಕುತ್ತೇನೆ. ಆದರೆ ಕೆಲಸ ಇಲ್ಲದಾಗ ನನ್ನ ಖಾಸಗಿ ಜೀವನಕ್ಕೆ ಸಮಯ ಕೊಡುತ್ತೇನೆ. ಯಾವಾಗಲೂ ಸುದ್ದಿಯಲ್ಲಿ ಇರಬೇಕು ಎಂಬ ಆಸೆ ನನಗೆ ಇಲ್ಲ” ಎಂದು ಹೇಳಿದ್ದಾರೆ.

“ಸಿನಿಮಾ ಇಂಡಸ್ಟ್ರಿಗೆ ನಾನು ಪ್ಯಾಷನ್‌ನಿಂದ ಬಂದಿದ್ದೇನೆ. ಮನೆಯ ಬಿಸ್ನೆಸ್ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ತಂದೆ ದುಡ್ಡು ಕೊಡ್ತಾರೆ ಎಂದು ಬದುಕೋದು ಜೀವನ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಬರಲು ತಂದೆ ಬಿಸ್ನೆಸ್ ಮಾಡುವಂತೆ ಸಲಹೆ ನೀಡಿದ್ದರು. ಹಣದ ಸಹಾಯ ಕೊಡ್ತೀನಿ ಎಂದರೂ, ರಾಜಕೀಯಕ್ಕೆ ಬರೋದು ಅವರಿಗೆ ಇಷ್ಟವಿಲ್ಲ. ಈ ವಿಷಯದಲ್ಲೇ ತಮ್ಮಿಬ್ಬರ ನಡುವೆ ಸಾಕಷ್ಟು ಜಗಳಗಳಾಗಿವೆ ಎಂದು ಝೈದ್ ಖಾನ್ ಹೇಳಿದ್ದಾರೆ.

ಅಪರಾಧ

ಬಿಕ್ಲು ಶಿವ ಕೊಲೆ ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಾಸಕ ಬೈರತಿ ಬಸವರಾಜ್

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ (Bairati Basavaraj) ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆ ಮಾತ್ರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ನ್ಯಾಸುನೀಲ್ ದತ್ ಯಾದವ್ ಅವರು ಅರ್ಜಿಯನ್ನು ತಿರಸ್ಕರಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಕ್ಲು ಶಿವ ಭೀಕರ ಹತ್ಯೆ ಪ್ರಕರಣದಲ್ಲಿ ಈಗಾಗಲೇ 20 ಆರೋಪಿಗಳ ಪೈಕಿ ಎ-1 ಆರೋಪಿ ಜಗದೀಶ್ ಸೇರಿ 18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 42ನೇ ಎಸಿಎಂಎಂ ಕೋರ್ಟ್ ತಿರಸ್ಕರಿಸಿತ್ತು.

ಇದಕ್ಕೂ ಮುನ್ನ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಾಪತ್ತೆಯಾಗಿದ್ದ ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಂತರ ಜಾಮೀನು ಮಂಜೂರಾದರೂ, ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ರದ್ದುಪಡಿಸಿತ್ತು.

ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Continue Reading

ಅಪರಾಧ

BENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ

ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ (Bengaluru Accident) ಹೆಣ್ಣೂರು ಸಂಚಾರ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.

ಮೃತರನ್ನು ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರ ಮಕ್ಕಳಾದ ವರ್ಷ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ನಾಗನಗೌಡ ಅವರು ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ತೆರಳಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಬಳಿ ಎದುರುಗಡೆಯಿಂದ ಬಂದ ಅಜ್ ಮೋನಿ ಶಾಲೆಯ ಬಸ್ ಏಕಾಏಕಿ ತಿರುವು ಪಡೆದುಕೊಂಡಿದೆ. ಈ ವೇಳೆ ಸ್ಕೂಟರ್ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಪೊಲೀಸರು ಮಹಜರು ನಡೆಸಿ, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಅವಶ್ಯಕತೆ ಮತ್ತೆ ಒತ್ತಿ ಹೇಳಲಾಗಿದೆ.

Continue Reading

ದೇಶ

638 ಕನ್ನಡ ಶಾಲೆ ಮುಚ್ಚಿದ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ

ನವದೆಹಲಿ: ರಾಜ್ಯದಾದ್ಯಂತ 638 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿರುವುದು ಕನ್ನಡ ಮತ್ತು ಕನ್ನಡ ಶಿಕ್ಷಣದ ವಿರುದ್ಧದ ಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು. “ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ” ಎಂದು ಹೇಳಿದರು. ಈ ನಿರ್ಧಾರದಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ಬದ್ಧವಾಗಿರಬೇಕು. ಆದರೆ ಪ್ರಸ್ತುತ ಸರ್ಕಾರದ ನಡೆ ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದ ಬೊಮ್ಮಾಯಿ, ಕೂಡಲೇ ಮುಚ್ಚಿರುವ ಎಲ್ಲಾ ಕನ್ನಡ ಶಾಲೆಗಳನ್ನು ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಜೊತೆಗೆ, ಲೋಕಸಭೆ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ನಿರಂತರ ಚುನಾವಣಾ ಸೋಲುಗಳಿಂದ ಕಾಂಗ್ರೆಸ್ ಹತಾಶಗೊಂಡಿದೆ” ಎಂದು ಹೇಳಿದರು. ಸಂಸತ್ತಿನಲ್ಲಿ ಬೆಂಚ್‌ಗಳ ಮೇಲೆ ನಿಂತು ಗದ್ದಲ ಮಾಡುವುದು, ಸ್ಪೀಕರ್ ವಿರುದ್ಧ ದಾಳಿ ನಡೆಸುವುದು ಹಾಗೂ ಪ್ರಧಾನಮಂತ್ರಿಯ ಆಸನದವರೆಗೆ ತೆರಳಿ ತಡೆ ಮಾಡುವ ಪ್ರಯತ್ನ ಮಿತಿಮೀರಿದ ವರ್ತನೆ ಎಂದು ಅವರು ಆರೋಪಿಸಿದರು.

ರಾಜಕೀಯದಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಗದ್ದಲ ಹಾಗೂ ಅಶಾಂತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.

Continue Reading

Trending