Connect with us

ದೇಶ

2028 ವಿಧಾನಸಭೆ: ರಾಮನಗರವನ್ನೇ ಬಿಡಲ್ಲ – ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಘೋಷಣೆ

2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯ ಇದ್ದರೂ, ಜೆಡಿಎಸ್ ನಾಯಕರು ಈಗಿಂದಲೇ ಸಜ್ಜಾಗುತ್ತಿರುವ ಸೂಚನೆಗಳು ಸ್ಪಷ್ಟವಾಗಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈಗಾಗಲೇ ಹಲವು ಸುತ್ತಿನ ರಾಜಕೀಯ ಸಭೆಗಳನ್ನು ನಡೆಸಿದ್ದು, ಪಕ್ಷದ ಮುಂದಿನ ತಂತ್ರ ರೂಪಿಸುವಲ್ಲಿ ತೊಡಗಿದ್ದಾರೆ.

ಈ ನಡುವೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ. ರಾಮನಗರವೇ ತಮ್ಮ ರಾಜಕೀಯ ಕರ್ಮಭೂಮಿ ಎಂದು ಘೋಷಿಸಿರುವ ಅವರು, “ತಂದೆ ಎಚ್.ಡಿ.ಕುಮಾರಸ್ವಾಮಿ ಅವರ ಕರ್ಮಭೂಮಿ ಹಾಗೂ ತಾತ ದೇವೇಗೌಡರಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿಯನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ” ಎಂದು ಹೇಳಿದ್ದಾರೆ. ಆ ಮೂಲಕ, 2028ರ ವಿಧಾನಸಭಾ ಚುನಾವಣೆಯನ್ನು ರಾಮನಗರದಿಂದಲೇ ಎದುರಿಸುವುದು ಖಚಿತ ಎಂದು ತಿಳಿಸಿದ್ದಾರೆ.

ಚುನಾವಣಾ ರಾಜಕೀಯದಲ್ಲಿ ಇದುವರೆಗೂ ನಿಖಿಲ್ ಅವರಿಗೆ ಯಶಸ್ಸು ಲಭಿಸಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸುಮಲತಾ ಅಂಬರೀಶ್ ವಿರುದ್ಧ ಸೋಲುಂಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್ ವಿರುದ್ಧ ಸೋಲು ಕಂಡಿದ್ದರು. ಬಳಿಕ ಚನ್ನಪಟ್ಟಣ ಉಪಚುನಾವಣೆಯಲ್ಲೂ ಸಿಪಿ ಯೋಗೇಶ್ವರ್ ಎದುರು ಪರಾಭವ ಅನುಭವಿಸಿದ್ದರು.

ಆದರೂ ರಾಜಕೀಯದಲ್ಲಿ ಏರಿಳಿತಗಳು ಸಹಜವೆಂದು ನಿಖಿಲ್ ಹೇಳಿದ್ದಾರೆ. “ನಾನು ಸ್ವತಃ ಸೋಲು ಅನುಭವಿಸಿದ್ದೇನೆ. ಸೋಲು–ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ನಮ್ಮ ಕುಟುಂಬವನ್ನು ಪ್ರೀತಿಸುವ ದೊಡ್ಡ ವರ್ಗ ಇಲ್ಲಿದೆ. ಅವರನ್ನು ಬಿಟ್ಟು ಬೇರೆ ಕ್ಷೇತ್ರ ಹುಡುಕುವುದು ನನ್ನ ಜಾಯಮಾನವಲ್ಲ” ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬದ ಕೊಡುಗೆ ಪ್ರಶ್ನಿಸುವವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಹೇಳಿದ ನಿಖಿಲ್, ನೀರಾವರಿ, ರಸ್ತೆ, ಮೂಲಭೂತ ಸೌಕರ್ಯಗಳಲ್ಲಿ ನಮ್ಮ ಕುಟುಂಬದ ಪರಿಶ್ರಮವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ರೀಡೆ

T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.

ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.

ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.

Continue Reading

ದೇಶ

POK-ಅಕ್ಸಾಯ್ ಚಿನ್ ಭಾರತದ ಭಾಗ ಎಂದ US… ನಂತರ ಡಿಲೀಟ್!

ವಾಷಿಂಗ್ಟನ್: ಪಿಒಕೆ (POK) ಹಾಗೂ ಅಕ್ಸಾಯ್ ಚಿನ್ ಕುರಿತು ದೀರ್ಘಕಾಲದಿಂದ ದ್ವಂದ್ವ ನಿಲುವು ಹೊಂದಿದ್ದ ಅಮೆರಿಕಾ ಇದೀಗ ಮತ್ತೆ ಯು-ಟರ್ನ್ ಹೊಡೆದಂತೆ ಕಾಣುತ್ತಿದೆ. ಇತ್ತೀಚೆಗೆ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ, ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ (USTR) ಕಚೇರಿ ತನ್ನ ಅಧಿಕೃತ X ಖಾತೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಪ್ರದೇಶವನ್ನು ಭಾರತದ ಭೂಭಾಗವೆಂದು ತೋರಿಸುವ ನಕ್ಷೆಯನ್ನು ಪೋಸ್ಟ್ ಮಾಡಿತ್ತು.

ಫೆಬ್ರವರಿ 7ರಂದು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ಘೋಷಣೆಯ ನಂತರ ಈ ನಕ್ಷೆ ಪ್ರಕಟವಾಗಿದ್ದು, ಜಾಗತಿಕ ಗಮನ ಸೆಳೆದಿತ್ತು. ವಿಶೇಷವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಮತ್ತು ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳನ್ನು ಸಹ ಭಾರತದ ಭಾಗವಾಗಿ ಗುರುತಿಸಿರುವುದು ಅಮೆರಿಕದ ಹಳೆಯ ನೀತಿಗೆ ವಿರುದ್ಧವಾಗಿತ್ತು. ಇದರಿಂದ ಇಂಡೋ-ಪೆಸಿಫಿಕ್ ರಾಜಕೀಯ ಸಮೀಕರಣದಲ್ಲಿ ಭಾರತಕ್ಕೆ ಅಮೆರಿಕಾ ಸ್ಪಷ್ಟ ಬೆಂಬಲ ನೀಡಿದೆಯೇ ಎಂಬ ಚರ್ಚೆ ಜೋರಾಗಿತ್ತು.

ಆದರೆ, ಕೆಲವೇ ದಿನಗಳಲ್ಲಿ USTR ತನ್ನ ಅಧಿಕೃತ ಖಾತೆಯಿಂದ ಈ ನಕ್ಷೆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಇದರಿಂದ ಅಮೆರಿಕಾ ತನ್ನ ನಿಲುವಿನಲ್ಲಿ ಸ್ಪಷ್ಟತೆ ಕಳೆದುಕೊಂಡಿತೇ ಎಂಬ ಪ್ರಶ್ನೆ ಮೂಡಿದೆ.

ಇದಕ್ಕೆ ಸಂಬಂಧಿಸಿದಂತೆ ಭಾರತ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಕ್ಸಾಯ್ ಚಿನ್ ಕೂಡ ಭಾರತದ ಭಾಗವೇ ಎಂದು ಪುನರುಚ್ಚರಿಸಿದೆ.

ಈ ಬೆಳವಣಿಗೆ ಭಾರತ-ಅಮೆರಿಕಾ-ಚೀನಾ-ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ.

Continue Reading

ದೇಶ

ಅಮೆರಿಕ ವಿರುದ್ಧ ಪಾಕ್‌ ರಕ್ಷಣಾ ಸಚಿವ ಖವಾಜಾ ಆಸಿಫ್‌ ಆಕ್ರೋಶ: “ಟಾಯ್ಲೆಟ್‌ ಪೇಪರ್‌ಗಿಂತ ಕೆಟ್ಟದಾಗಿ ಬಳಸಿಕೊಂಡರು”

ಇಸ್ಲಾಮಾಬಾದ್: ಪಾಕಿಸ್ತಾನವನ್ನು ಅಮೆರಿಕ “ಟಾಯ್ಲೆಟ್‌ ಪೇಪರ್‌ಗಿಂತ ಕೆಟ್ಟದಾಗಿ ಬಳಸಿಕೊಂಡಿದೆ” ಎಂದು ಪಾಕ್‌ ರಕ್ಷಣಾ ಸಚಿವ ಖವಾಜಾ ಆಸಿಫ್‌ (Khawaja Asif) ಸಂಸತ್ತಿನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಬೆಂಬಲವನ್ನು ಅಂಧವಾಗಿ ಅನುಸರಿಸುವುದು ಪಾಕಿಸ್ತಾನ ಮಾಡಿದ ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಆಸಿಫ್‌, 2001ರ ಬಳಿಕ ಅಮೆರಿಕ ನೇತೃತ್ವದಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರವಹಿಸಿತು. ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸಿದ ಪರಿಣಾಮ ದೇಶದ ಒಳಗಿನ ಭದ್ರತಾ ಪರಿಸ್ಥಿತಿ ಹದಗೆಟ್ಟಿತು. ಹಿಂಸಾಚಾರ, ಅತಿರೇಕವಾದ ಮತ್ತು ಆರ್ಥಿಕ ಒತ್ತಡದ ಸಂಕಷ್ಟವನ್ನು ಪಾಕಿಸ್ತಾನ ದಶಕಗಳ ಕಾಲ ಅನುಭವಿಸಬೇಕಾಯಿತು ಎಂದು ಹೇಳಿದರು.

“ಅಮೆರಿಕ ತನ್ನ ಉದ್ದೇಶ ಸಾಧಿಸಿದ ಬಳಿಕ ಹಿಂದೆ ಸರಿಯಿತು. ಆದರೆ ಅದರ ಪರಿಣಾಮಗಳನ್ನು ಪಾಕಿಸ್ತಾನ ಇನ್ನೂ ಭರಿಸುತ್ತಿದೆ. ನಾವು ಅನುಭವಿಸಿದ ನಷ್ಟಗಳನ್ನು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ,” ಎಂದು ಆಸಿಫ್‌ ಬೇಸರ ವ್ಯಕ್ತಪಡಿಸಿದರು.

ಇತರ ರಾಷ್ಟ್ರಗಳ ಸಂಘರ್ಷಗಳಲ್ಲಿ ತೊಡಗಿಸಿಕೊಂಡ ಪರಿಣಾಮ ಪಾಕಿಸ್ತಾನ ಒಂದು ಕೈಗೊಂಬೆಯಂತಾಗಿದೆ. ಆ ಕಾಲದ ನಿರ್ಧಾರಗಳು ಬದಲಾಯಿಸಲಾಗದ ತಪ್ಪುಗಳಾಗಿದ್ದು, ಈಗ ದೇಶದ ಆರ್ಥಿಕ ಮತ್ತು ಭದ್ರತಾ ಪರಿಸ್ಥಿತಿಗೆ ಹೊರೆ ಆಗಿವೆ ಎಂದು ಹೇಳಿದ್ದಾರೆ.

ಈ ಹೇಳಿಕೆ ಪಾಕಿಸ್ತಾನ-ಅಮೆರಿಕ ಸಂಬಂಧಗಳಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ. ಭವಿಷ್ಯದಲ್ಲಿ ವಿದೇಶಾಂಗ ನೀತಿಯಲ್ಲಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂಬ ಅಗತ್ಯವನ್ನೂ ಅವರು ಒತ್ತಿಹೇಳಿದ್ದಾರೆ.

Continue Reading

Trending