Connect with us

ಕ್ರೀಡೆ

ಮಹಿಳಾ ಕ್ರಿಕೆಟ್‌ಗೆ ಸಿಎಸ್ಎಕೆ ಎಂಟ್ರಿ? ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಮಹತ್ವದ ಘೋಷಣೆ

ಮಹಿಳಾ ಪ್ರೀಮಿಯರ್ ಲೀಗ್‌ (WPL) ನಾಲ್ಕು ಯಶಸ್ವಿ ಋತುಗಳನ್ನು ಪೂರೈಸಿರುವ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಮಹಿಳಾ ಕ್ರಿಕೆಟ್‌ಗೆ ಪ್ರವೇಶಿಸಲು ಸಿದ್ಧವಾಗಿದೆ ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ಕೆ, ಮುಂಬರುವ ವರ್ಷಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಮಹಿಳಾ ಕ್ರಿಕೆಟ್‌ಗೆ ಮೊದಲ ಆದ್ಯತೆ ನೀಡಲಿದೆ.

ಚೆನ್ನೈನಲ್ಲಿ ನಡೆದ ‘ಇನ್ವೆಸ್ಟ್ ಇನ್ ತಮಿಳುನಾಡು’ ಸಮಾವೇಶದಲ್ಲಿ ಮಾತನಾಡಿದ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿದರು. “ತಕ್ಷಣ ಅಲ್ಲ, ಆದರೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಸಿಎಸ್‌ಕೆ ಮಹಿಳಾ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲಿದೆ. ನಮ್ಮ ಮೊದಲ ಗುರಿ ಮಹಿಳಾ ಕ್ರಿಕೆಟ್. ನಂತರ ಇತರ ಕ್ರೀಡೆಗಳಲ್ಲಿಯೂ ಅವಕಾಶಗಳನ್ನು ಅನ್ವೇಷಿಸಬಹುದು” ಎಂದು ಅವರು ಹೇಳಿದರು.

ಸಿಎಸ್‌ಕೆ ಸೇರಿದಂತೆ ಇನ್ನೂ ಯಾವ ತಂಡಗಳಿಗೆ WPL ಫ್ರಾಂಚೈಸಿ ಇಲ್ಲ?

ಪ್ರಸ್ತುತ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ, ಬೆಂಗಳೂರು, ದೆಹಲಿ, ಗುಜರಾತ್ ಮತ್ತು ಯುಪಿ ತಂಡಗಳು ಮಾತ್ರ ಭಾಗವಹಿಸುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಹಲವು ದೊಡ್ಡ ಐಪಿಎಲ್ ಫ್ರಾಂಚೈಸಿಗಳು ಇನ್ನೂ WPL ಪ್ರವೇಶಿಸಿಲ್ಲ.

WPL ವಿಸ್ತರಣೆಗೆ ಬಿಸಿಸಿಐ ಚಿಂತನೆ

ಮಹಿಳಾ ಪ್ರೀಮಿಯರ್ ಲೀಗ್ ವಿಸ್ತರಣೆಯ ಬಗ್ಗೆ ಬಿಸಿಸಿಐ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್, WPL ಹರಾಜಿನ ವೇಳೆ ಲೀಗ್‌ಗೆ ಹೊಸ ತಂಡಗಳನ್ನು ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬಹಿರಂಗಪಡಿಸಿದ್ದರು. ಭವಿಷ್ಯದಲ್ಲಿ ಹೋಮ್-ಅಂಡ್-ಅವೇ ಮಾದರಿಯತ್ತ ಸಾಗುವುದು ದೀರ್ಘಾವಧಿಯ ಗುರಿಯಾಗಿದೆ.

ಪ್ರಸ್ತುತ WPL 2026 ಸೀಸನ್ ಅಂತಿಮ ಹಂತದಲ್ಲಿದ್ದು, ಫೈನಲ್ ಪಂದ್ಯ ಫೆಬ್ರವರಿ 5ರಂದು ನಡೆಯಲಿದೆ. ಸಿಎಸ್‌ಕೆ ಮಹಿಳಾ ತಂಡದ ಪ್ರವೇಶ ಮಹಿಳಾ ಕ್ರಿಕೆಟ್‌ಗೆ ಮತ್ತಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ.

ಕ್ರೀಡೆ

JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ

ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.

ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.

ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.

ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.

ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.

ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.

ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.

ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

ಕ್ರೀಡೆ

T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.

ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.

ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.

Continue Reading

ಕ್ರೀಡೆ

“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್

ಇಸ್ಲಾಮಾಬಾದ್:

ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.

ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.

ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.

“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.

ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.

ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Continue Reading

Trending