ದೇಶ
GBA ELECTION ಗೂ ಮುನ್ನ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ: ಬೆಂಗಳೂರಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಕ್ರಿಯೆ ಆರಂಭ
ಜಿಬಿಎ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ: ಬೆಂಗಳೂರಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಕ್ರಿಯೆ ಆರಂಭ
ಬೆಂಗಳೂರು: ಜಿಬಿಎ (BBMP) ಚುನಾವಣೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಭಾರತದ ಚುನಾವಣಾ ಆಯೋಗ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯನ್ನು ಆರಂಭಿಸಿದೆ. ಇದರ ಭಾಗವಾಗಿ ಬೆಂಗಳೂರಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ 03-06-2025ರ ಅವಧಿಯಲ್ಲಿ ಬೆಂಗಳೂರು ಉತ್ತರ ಅಪರ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಕೆಳಕಂಡ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಮ್ಯಾಪಿಂಗ್ ನಡೆಯಲಿದೆ.
ಪರಿಷ್ಕರಣೆ ನಡೆಯುವ ವಿಧಾನಸಭಾ ಕ್ಷೇತ್ರಗಳು
- 151 – ಕೆ.ಆರ್. ಪುರಂ
- 156 – ಮಹಾಲಕ್ಷ್ಮಿ ಲೇಔಟ್
- 157 – ಮಲ್ಲೇಶ್ವರಂ
- 158 – ಹೆಬ್ಬಾಳ
- 159 – ಪುಲಕೇಶಿನಗರ
- 160 – ಸರ್ವಜ್ಞ ನಗರ
- 161 – ಸಿ.ವಿ. ರಾಮನ್ ನಗರ
ಈ ಕ್ಷೇತ್ರಗಳ 2025ರ ಮತದಾರರ ಪಟ್ಟಿಯನ್ನು 2002ರ ಮತದಾರರ ಪಟ್ಟಿಯೊಂದಿಗೆ ಪ್ರತಿಯೊಬ್ಬ ಮತದಾರರನ್ನು ಹೋಲಿಸಿ ಗುರುತಿಸುವಂತೆ ಚುನಾವಣಾ ಆಯುಕ್ತರು ಸೂಚಿಸಿದ್ದಾರೆ. ಮತದಾರರು ತಮ್ಮ ಹೆಸರುಗಳು ಸರಿಯಾಗಿ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಆಯುಕ್ತರು ಮನವಿ ಮಾಡಿದ್ದಾರೆ.
ಏನಿದು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ?
ಯಾವುದೇ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ವ್ಯಕ್ತಿಗಳು ಪಟ್ಟಿಗೆ ಸೇರದಂತೆ ನೋಡಿಕೊಳ್ಳುವುದೇ ಈ ವಿಶೇಷ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಅಧಿಸೂಚನೆಯ ಪ್ರಕಾರ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಪರಿಹರಿಸಿದ ನಂತರವೇ ಹೊಸ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಎಸ್‌ಐಆರ್ ಸಮೀಕ್ಷೆ ಹೇಗೆ ನಡೆಯಲಿದೆ?
ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮನೆಮನೆಗೆ ತೆರಳಿ ಗಣತಿ ನಡೆಸಲಾಗುತ್ತದೆ. ಗಣತಿದಾರರು ಪ್ರಸ್ತುತ ಮತದಾರರ ಪಟ್ಟಿಯನ್ನು ಮಾತ್ರ ಅವಲಂಬಿಸದೇ, ಪ್ರತಿ ಮನೆಗೆ ಭೇಟಿ ನೀಡಿ ಅರ್ಹ ದಿನಾಂಕದಂತೆ ಅರ್ಹ ಮತದಾರರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲಿದ್ದಾರೆ.
ಪಾಲಿಕೆ ಚುನಾವಣೆಗೆ ಸಿದ್ಧತೆ: ಬ್ಯಾಲೆಟ್ ಪೇಪರ್ ಬಳಕೆ
ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಪಾಲಿಕೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಪ್ರಕ್ರಿಯೆಗಳು ವೇಗ ಪಡೆದಿದ್ದು, 369 ವಾರ್ಡ್‌ಗಳು ಹಾಗೂ ಮೀಸಲಾತಿ ಈಗಾಗಲೇ ನಿಗದಿಯಾಗಿದೆ. ಈ ಬಾರಿ ಪಾಲಿಕೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಆಯೋಗ ನಿರ್ಧರಿಸಿದೆ. ಮತದಾರರ ಅಂತಿಮ ಪಟ್ಟಿ ಹಾಗೂ ಚುನಾವಣಾ ದಿನಾಂಕ ಘೋಷಣೆ ಮಾತ್ರ ಬಾಕಿಯಿದೆ.
ಕ್ರೀಡೆ
“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
ಇಸ್ಲಾಮಾಬಾದ್:
ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.
ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.
“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.
ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪರಾಧ
ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
ದಾಂಡೇಲಿ (ಉತ್ತರ ಕನ್ನಡ):
ಉತ್ತರ ಕನ್ನಡ ಜಿಲ್ಲೆಯ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ್ಯಾಯಾಲಯದ ಶರತ್ತುಬದ್ಧ ಮಧ್ಯಂತರ ಆದೇಶದ ಅಡಿಯಲ್ಲಿ ನಡೆದಿದ್ದರೂ, ಇದೀಗ ಮತ್ತೆ ತೀವ್ರ ವಿವಾದಗಳ ಕೇಂದ್ರಬಿಂದುವಾಗಿದೆ.
ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದ್ದು, ದಾಂಡೇಲಿ ನ್ಯಾಯಾಲಯವು ಅವರಿಗೆ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ (ಬಿ.ಎನ್. ವಾಸರೆ) ಮೊದಲ ಪ್ರತಿವಾದಿಯಾಗಿದ್ದು, ಕ.ಸಾ.ಪ. ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಎರಡನೇ ಪ್ರತಿವಾದಿಯಾಗಿದ್ದಾರೆ. ಫೆಬ್ರವರಿ 5ರಂದು ನಡೆದ ವಿಚಾರಣೆಗೆ ಆಡಳಿತಾಧಿಕಾರಿ ಹಾಜರಾಗದ ಹಿನ್ನೆಲೆ, ರಾಜ್ಯಾಧ್ಯಕ್ಷರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.
ಸಮ್ಮೇಳನ ಆಯೋಜನೆಗೆ ಸಂಬಂಧಿಸಿದ ವಿವಾದ
2025ರ ಡಿಸೆಂಬರ್‌ನಲ್ಲಿ ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಯೋಜಿಸಿದ್ದರು. ಆದರೆ, ಅಜೀವ ಸದಸ್ಯರಾದ ಅಕ್ರಂ ವುಲ್ಲಾ ಖಾನ್, ಪ್ರವೀಣ ಕೊಠಾರಿ ಮತ್ತು ಸಂದೀಪ ಬಂಡಾರಿ, ಹಣ ದುರುಪಯೋಗ ಪ್ರಕರಣ ತನಿಖೆಯ ನಡುವೆ ಸರ್ಕಾರದ ಅಗತ್ಯ ಅನುಮತಿ ಪಡೆಯದೇ ಸಾರ್ವಜನಿಕ ವಂತಿಕೆ ಸಂಗ್ರಹಿಸಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ತಹಶೀಲ್ದಾರ್ ಮತ್ತು ಪಿಎಸ್‌ಐ ಅನುಮತಿ ಹೊರತುಪಡಿಸಿ, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ, ಡಿವೈಎಸ್‌ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆಯಲಾಗಿಲ್ಲ ಎಂದು ಅವರು ದೂರಿದ್ದಾರೆ.
ನ್ಯಾಯಾಲಯದ ಮಹತ್ವದ ಆದೇಶ
O.S. No.216/25 ಪ್ರಕರಣದಲ್ಲಿ, ಸಮ್ಮೇಳನ ನಡೆಸಲು ಅಗತ್ಯವಿರುವ ಯಾವುದೇ ಅಧಿಕೃತ ಅನುಮತಿಗಳನ್ನು ಪ್ರತಿವಾದಿಗಳು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಹೆಚ್ಚಿನ ಜನರು ಸೇರುವ ಸಾಧ್ಯತೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆ, ಎಲ್ಲಾ ಇಲಾಖೆಗಳ ಅನುಮತಿ, ಆಡಳಿತಾಧಿಕಾರಿಯಿಂದ ಲಿಖಿತ ಆದೇಶ, ಹಾಗೂ ಅನುಮತಿ ಪಡೆದ ಬಳಿಕ ಮಾತ್ರ ಸಮ್ಮೇಳನ ನಡೆಸಬೇಕು ಎಂಬ ಶರತ್ತುಗಳೊಂದಿಗೆ ಡಿಸೆಂಬರ್ 12ರ ಸಂಜೆ 6 ಗಂಟೆಗೆ ಮಧ್ಯಂತರ ಆದೇಶ ನೀಡಲಾಗಿತ್ತು.
ರಾತ್ರಿ ಇ-ಮೇಲ್ ಅನುಮತಿಗೆ ಸಂಶಯ
ಆದರೆ, ಅದೇ ದಿನ ರಾತ್ರಿ 9 ಗಂಟೆಗೆ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಂದ ಇ-ಮೇಲ್ ಮೂಲಕ ಅನುಮತಿ ಬಂದಿದೆ ಎಂದು ಜಿಲ್ಲಾಧ್ಯಕ್ಷ ವಾಸರೆ ಉದ್ಘಾಟನಾ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ, ನ್ಯಾಯಾಲಯಕ್ಕೆ ಮೊರೆ ಹೋದ ಅಜೀವ ಸದಸ್ಯರ ವಿರುದ್ಧ ತೀವ್ರ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಇದೆ.
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಚೇರಿ ವೇಳೆಯಲ್ಲೇ ಕಡತ ಪರಿಶೀಲನೆ ನಡೆಯಬೇಕು. ರಾತ್ರಿ ವೇಳೆ ಇಂತಹ ಆದೇಶ ಸಂಶಯಾಸ್ಪದ ಎಂದು ವಾದಿಗಳ ಪರ ವಕೀಲ ರಾಘವೇಂದ್ರ ವಿ. ಗಡೆಪ್ಪನವರ ವಾದಿಸಿದ್ದಾರೆ.
RTI ಮೂಲಕ ಬಯಲಾದ ಅಂಶ
RTI ಮೂಲಕ ಲಭ್ಯವಾದ ಮಾಹಿತಿಯಲ್ಲಿ, ಆಡಳಿತಾಧಿಕಾರಿಗಳ ಅಧಿಕೃತ ಇ-ಮೇಲ್‌ನಲ್ಲಿ ಕೇವಲ ಎರಡು ಸಾಲಿನ ಉತ್ತರ ಮಾತ್ರ ಲಭ್ಯವಾಗಿದ್ದು, ಯಾವುದೇ ಡಿಜಿಟಲ್ ಸಹಿ, ಕಡತ, ಟಿಪ್ಪಣಿ ಅಥವಾ ಅಧಿಕೃತ ದಾಖಲೆಗಳು ಇಲ್ಲ ಎಂದು ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಆಡಳಿತ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು
ಡಿಸೆಂಬರ್ 12ರಂದು ಆಡಳಿತಾಧಿಕಾರಿ ಗಾಯತ್ರಿ ಅವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಹಾಜರಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಕಚೇರಿಯಿಂದ ಕಡತವಿಲ್ಲದೇ ಇ-ಮೇಲ್ ಆದೇಶ ನೀಡಿದರೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಇದೀಗ ಕೇಂದ್ರ ಕ.ಸಾ.ಪ. ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾದ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಪರಾಧ
ಮದುವೆ ವೇದಿಕೆಯಲ್ಲಿ ಗನ್ ಹಿಡಿದು ಕಾಂಗ್ರೆಸ್ ನಾಯಕ ಡ್ಯಾನ್ಸ್
ಕಲಬುರಗಿ: ಆಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಮದುವೆ ಕಾರ್ಯಕ್ರಮದಲ್ಲಿ ಕೈಯಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ‘ಧುರಂದರ್’ ಹಾಡಿನ ತಾಳಕ್ಕೆ ವೇದಿಕೆಯ ಮೇಲೆ ಕುಣಿದಿರುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಗೂ ಅತಿಥಿಗಳು ಉಪಸ್ಥಿತರಿದ್ದ ವೇಳೆ ಈ ಘಟನೆ ನಡೆದಿದೆ. ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋಗಳಲ್ಲಿ, ಸಂಗೀತದ ಮಧ್ಯೆ ಮತೀನ್ ಪಟೇಲ್ ಗನ್ ಹಿಡಿದು ಕುಣಿಯುತ್ತಿರುವುದು ಹಾಗೂ ಕೆಲವರು ಅವರೊಂದಿಗೆ ಫೋಟೋ ಮತ್ತು ವೀಡಿಯೋ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತವೆ.
ಇದಕ್ಕುಮೇಲೆ, ಮದುವೆ ಸಮಾರಂಭಕ್ಕೆ ಆಗಮಿಸುವ ವೇಳೆ ಕಾರಿನಿಂದ ಇಳಿಯುತ್ತಿದ್ದಂತೆಯೇ ಅವರ ಸಿಬ್ಬಂದಿಗಳು ಗನ್ ಹಿಡಿದು ‘ವೆಲ್ಕಂ’ ಮಾಡುವ ದೃಶ್ಯವೂ ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದ್ದು, ಅದು ಕೂಡಾ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿರುವುದು ಕಾನೂನು ಉಲ್ಲಂಘನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರು, “ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡುವುದು ಅಪರಾಧ. ಈ ಸಂಬಂಧ ಸುಮೊಟೊ ಕೇಸ್ ದಾಖಲಿಸಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಈ ಹಿಂದೆ ಏನಾಗಿತ್ತು?
ಸಾರ್ವಜನಿಕ ಜೀವನದಲ್ಲಿರುವ ನಾಯಕರು ಇಂತಹ ವಿವಾದಗಳಿಗೆ ಸಿಲುಕುವುದು ಇದೇ ಮೊದಲಲ್ಲ. 2022ರಲ್ಲಿ ಆಗಿನ ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಹೊಸಕೋಟೆಯಲ್ಲಿ ನಡೆದ ಬಿಜೆಪಿ ಅಲ್ಪಸಂಖ್ಯಾತರ ಸಭೆಯ ವಿಡಿಯೋವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಶಾಸಕರು ಹಾಗೂ ರಾಜಕೀಯ ನಾಯಕರು ಸಮಾಜಕ್ಕೆ ಮಾದರಿಯಾಗಬೇಕಾದವರು. ಅವರ ನಡೆ-ನುಡಿ ಅನೇಕರು ಅನುಸರಿಸುವುದರಿಂದ, ಇಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುವ ಆತಂಕವಿದೆ. ಇದೀಗ ಅಫಜಲಪುರ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಪ್ರಕರಣವೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳಿಗೆ ಗುರಿಯಾಗಿದೆ.
-
Blog17 hours agoS T SOMASHEKHAR : ಜಿಬಿಎ ಚುನಾವಣೆಗೆ ಸ್ಪಷ್ಟ ನಿಯಮ: ಸ್ಥಳೀಯರಿಗೆ ಮಾತ್ರ ಟಿಕೆಟ್
-
ಕ್ರೀಡೆ14 hours agoT20 WORLD CUP : ಪಾಕ್ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
-
ಅಪರಾಧ13 hours agoVIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
-
ದೇಶ15 hours agoಮಂಡ್ಯದಲ್ಲಿ ಎಆರ್ಎಐ ಸ್ಥಾವರ ಸ್ಥಾಪನೆಗೆ 105 ಎಕರೆ ಸರ್ಕಾರಿ ಭೂಮಿ ಸಿದ್ಧ
-
ದೇಶ12 hours agoBENGALURU : BCCI Centre of Excellence ಬೆಂಗಳೂರಿನಲ್ಲಿ 10 ಹುದ್ದೆಗಳ ನೇಮಕಾತಿ
-
ಕ್ರೀಡೆ14 hours agoCRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್
-
ಅಪರಾಧ11 hours agoಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
-
ದೇಶ17 hours agoMAITHILLI TAKUR : ತಮ್ಮದೇ ಸರ್ಕಾರದ ಸಚಿವರನ್ನು ಪ್ರಶ್ನಿಸಲು ಹಿಂಜರಿಯದ ಯುವ ಶಾಸಕಿ
