Connect with us

ಬೆಂಗಳೂರು

54 ನಿಗಮ–ಮಂಡಳಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ: ಸರ್ಕಾರದಿಂದ ದಿಢೀರನೆ ಬಂಪರ್ ಉಡುಗೊರೆ

ಬೆಂಗಳೂರು:
ರಾಜ್ಯ ಸರ್ಕಾರವು ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ದಿಢೀರನೆ ಮಹತ್ವದ ಆದೇಶ ಹೊರಡಿಸಿದೆ. ಇದುವರೆಗೆ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಕೆಲ ಶಾಸಕರಿಗಷ್ಟೇ ಸೀಮಿತವಾಗಿದ್ದ ಈ ಸೌಲಭ್ಯವನ್ನು, ಇದೀಗ ಪಕ್ಷದ ಮುಖಂಡರು ಸಾರಥ್ಯ ವಹಿಸಿರುವ ಎಲ್ಲ ಸಂಸ್ಥೆಗಳ ಅಧ್ಯಕ್ಷರಿಗೂ ವಿಸ್ತರಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗ ಹೊರಡಿಸಿರುವ ಆದೇಶದಂತೆ, ಈ ಸ್ಥಾನಮಾನ ತಕ್ಷಣದಿಂದಲೇ ಜಾರಿಗೆ ಬಂದಿದೆ. ರಾಜ್ಯ ಸಚಿವ ಸ್ಥಾನಮಾನಕ್ಕೆ ತಕ್ಕಂತೆ ವಾಹನ, ಭದ್ರತೆ, ಕಚೇರಿ ಹಾಗೂ ಇತರ ಸರ್ಕಾರಿ ಸೌಲಭ್ಯಗಳನ್ನು ಆಯಾ ಇಲಾಖೆಗಳು ಒದಗಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಪಟ್ಟಿಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಕ್ಫ್ ಮಂಡಳಿ, ಹಜ್ ಸಮಿತಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), BESCOM, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಮಹಿಳಾ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿಗಮ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಅಧ್ಯಕ್ಷರು ಸೇರಿದ್ದಾರೆ.

ಒಂದೇ ಆದೇಶದ ಮೂಲಕ 54 ಮಂದಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದನ್ನು ಸರ್ಕಾರದ ರಾಜಕೀಯ ಸಮತೋಲನದ ಲೆಕ್ಕಾಚಾರ ಹಾಗೂ ಪಕ್ಷದ ಒಳಗಿನ ಅಸಮಾಧಾನ ಶಮನದ ಪ್ರಯತ್ನವೆಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ. ಆದರೆ, ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ರಾಜ್ಯಕ್ಕೆ ಇದು ಹೆಚ್ಚುವರಿ ಹೊರೆ ಆಗಲಿದೆ ಎಂಬ ಟೀಕೆಗಳು ಕೂಡ ಕೇಳಿಬರುತ್ತಿವೆ.

ಈ ನಿರ್ಧಾರದಿಂದ ನಿಗಮ–ಮಂಡಳಿಗಳ ಅಧ್ಯಕ್ಷರ ಪ್ರಭಾವ ಮತ್ತು ಆಡಳಿತಾತ್ಮಕ ಶಕ್ತಿ ಹೆಚ್ಚಾಗುವ ನಿರೀಕ್ಷೆ ಇದ್ದರೂ, ಸೌಲಭ್ಯಗಳ ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅಪರಾಧ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಿಸಿದ ಯೂಟ್ಯೂಬರ್ ವಿರುದ್ಧ FIR

ಚಿಕ್ಕಬಳ್ಳಾಪುರ:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಿಯಮಬಾಹಿರವಾಗಿ ಡ್ರೋನ್ ಹಾರಿಸಿದ ಆರೋಪದಡಿ ನಗರದ ಯೂಟ್ಯೂಬರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ವಾಂಡರ್‌ಲಸ್ಟ್’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಯೂಟ್ಯೂಬರ್, ವಿಮಾನ ನಿಲ್ದಾಣದ ಟರ್ಮಿನಲ್–1 ಮುಂಭಾಗದಿಂದ ಯಲಹಂಕ ಮಾರ್ಗವಾಗಿ ಏರ್‌ಫೋರ್ಸ್ ಪ್ರದೇಶದವರೆಗೆ ಡ್ರೋನ್ ಹಾರಿಸಿದ್ದಾನೆ. ಸುಮಾರು 7–8 ನಿಮಿಷಗಳ ಕಾಲ ಡ್ರೋನ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎನ್ನಲಾಗಿದೆ.

ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳ ಮೇಲೆಯೂ ಡ್ರೋನ್ ಹಾರಿಸಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರದೇಶವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೆಡ್ ಝೋನ್ ವ್ಯಾಪ್ತಿಗೆ ಒಳಪಡುವುದರಿಂದ, ಇಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೋ–ಫ್ಲೈಯಿಂಗ್ ಝೋನ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿರುವುದರಿಂದ, ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಯೂಟ್ಯೂಬರ್ ವಿರುದ್ಧ ಎಯರ್‌ಕ್ರಾಫ್ಟ್ ಆಕ್ಟ್ 1943 (ಸೆಕ್ಷನ್ 10(1ಎ)) ಹಾಗೂ ಬಿಎನ್‌ಎಸ್ ಸೆಕ್ಷನ್ 125 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಸ್ತುತ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

ದೇಶ

BENGALURU : BCCI Centre of Excellence ಬೆಂಗಳೂರಿನಲ್ಲಿ 10 ಹುದ್ದೆಗಳ ನೇಮಕಾತಿ

ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ Centre of Excellence (CoE), ಬೆಂಗಳೂರು ಕೇಂದ್ರದಲ್ಲಿ ಬಹು ಕೋಚಿಂಗ್ ಹಾಗೂ ಕ್ರಿಕೆಟ್ ಕಾರ್ಯಕ್ಷಮತೆ ಸಂಬಂಧಿತ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕ್ರಿಕೆಟ್ ಕೋಚಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಇದು ಅಪರೂಪದ ಅವಕಾಶವಾಗಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 10 ಹುದ್ದೆಗಳು ಲಭ್ಯವಿವೆ. ಆಯ್ಕೆಯಾದ ಅಭ್ಯರ್ಥಿಗಳು ಹಿರಿಯ ರಾಷ್ಟ್ರ ತಂಡ, ಭಾರತ A, ವಯೋಮಾನದ ತಂಡಗಳು ಹಾಗೂ ರಾಜ್ಯ ಮಟ್ಟದ ಆಟಗಾರರೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ.

ಲಭ್ಯವಿರುವ ಹುದ್ದೆಗಳ ವಿವರ

  • ಬ್ಯಾಟಿಂಗ್ ಕೋಚ್ (2 ಹುದ್ದೆಗಳು): ಆಟಗಾರರ ಬ್ಯಾಟಿಂಗ್ ಕೌಶಲ್ಯ ವೃದ್ಧಿ, ತರಬೇತಿ ಯೋಜನೆ ರೂಪಣೆ ಹಾಗೂ ಕಾರ್ಯಕ್ಷಮತೆ ಮೇಲ್ವಿಚಾರಣೆ.
  • ವೇಗದ ಬೌಲಿಂಗ್ ಕೋಚ್ (3 ಹುದ್ದೆಗಳು): ವೇಗದ ಬೌಲರ್‌ಗಳ ತಾಂತ್ರಿಕ, ತಂತ್ರಜ್ಞಾನ ಮತ್ತು ದೈಹಿಕ ಅಭಿವೃದ್ಧಿಗೆ ಹೊಣೆ.
  • ಫೀಲ್ಡಿಂಗ್ ಕೋಚ್ (4 ಹುದ್ದೆಗಳು): 3 ಪುರುಷ ಮತ್ತು 1 ಮಹಿಳಾ ಹುದ್ದೆ. ಆಟಗಾರರ ಚುರುಕುತನ, ಕ್ಯಾಚಿಂಗ್ ಮತ್ತು ಒಟ್ಟಾರೆ ಫೀಲ್ಡಿಂಗ್ ಮಟ್ಟ ಸುಧಾರಣೆ.
  • ಕಾರ್ಯಕ್ಷಮತೆ ವಿಶ್ಲೇಷಕ (1 ಹುದ್ದೆ): ಪಂದ್ಯ ಮತ್ತು ತರಬೇತಿ ದತ್ತಾಂಶ ವಿಶ್ಲೇಷಣೆ ಮೂಲಕ ಕೋಚ್‌ಗಳಿಗೆ ತಂತ್ರಜ್ಞಾನ ಆಧಾರಿತ ಸಲಹೆ.

ಅರ್ಜಿ ಸಲ್ಲಿಕೆ ವಿವರ

  • ಕೊನೆಯ ದಿನಾಂಕ: ಫೆಬ್ರವರಿ 27, 2026 ಸಂಜೆ 5 ಗಂಟೆ
  • ಸ್ಥಳ: BCCI Centre of Excellence, ಬೆಂಗಳೂರು

BCCI ಮಾಹಿತಿ ಪ್ರಕಾರ, ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಅಥವಾ ಹೆಚ್ಚಿನ ಮೌಲ್ಯಮಾಪನಕ್ಕೆ ಕರೆಯಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಿದ್ಧರಾಗಿರಬೇಕು.

ಈ ನೇಮಕಾತಿ ಕ್ರಿಕೆಟ್ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವವರಿಗೆ ದೊಡ್ಡ ಅವಕಾಶವಾಗಿದೆ.

Continue Reading

ದೇಶ

DCM D K SHIVKUMAR ಖರ್ಗೆ ಸೂಚನೆ ಪಾಲಿಸಬೇಕು: ಡಿಕೆ ಶಿವಕುಮಾರ್

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಮಾತುಕತೆ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), “ನಾನು ಸಿದ್ದರಾಮಯ್ಯ ಅವರೊಂದಿಗೆ ಏನು ಮಾತನಾಡಿದ್ದೇವೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ನಾವು ಯಾವತ್ತೂ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ” ಎಂದು ಹೇಳಿದರು.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೊಂದಲ ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ನಮ್ಮ ವರಿಷ್ಠ ನಾಯಕರೊಂದಿಗೆ ಚರ್ಚೆ ಮಾಡಿಕೊಂಡಿದ್ದೇವೆ. ಇತರರು ಟೆನ್ಶನ್ ತೆಗೆದುಕೊಳ್ಳುವುದರಿಂದಲೋ ಅಥವಾ ಹೇಳಿಕೆ ನೀಡುವುದರಿಂದಲೋ ಯಾರಿಗೂ ಪ್ರಯೋಜನವಿಲ್ಲ” ಎಂದು ಹೇಳಿದರು.

ಶಾಸಕರು ಹಾಗೂ ಸಚಿವರು ಪರ–ವಿರುದ್ಧ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಆ ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಎಐಸಿಸಿಯವರು ಚರ್ಚೆಗೆ ಕರೆದಿದ್ದಾರೆ. ಕೇರಳ ಪ್ರವಾಸ ಮುಗಿಸಿಕೊಂಡು ಅಸ್ಸಾಂಗೆ ತೆರಳಬೇಕಿದೆ ಎಂದರು. ಬಜೆಟ್ ಸಭೆಗೆ ಗೈರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ದೆಹಲಿಯಿಂದ ವಾಪಸ್ಸಾದ ನಂತರ ಮತ್ತಷ್ಟು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ದೆಹಲಿಯಿಂದ ‘ಗುಡ್ ನ್ಯೂಸ್’ ತರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ಪ್ರತಿ ದಿನವೂ ಜೀವನದಲ್ಲಿ ಸಂತೋಷವೂ ಇದೆ, ಕಷ್ಟವೂ ಇದೆ. ಜನರ ಸಮಸ್ಯೆ ಬಗೆಹರಿಸಲು ಅನೇಕ ತೊಡಕುಗಳು ಬರುತ್ತವೆ. ಟೀಕೆಗಳನ್ನು ಎದುರಿಸುತ್ತಾ ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು” ಎಂದು ಮಾರ್ಮಿಕವಾಗಿ ಹೇಳಿದರು.

ಯತೀಂದ್ರಗೆ ನೋಟಿಸ್ ನೀಡದ ಕುರಿತು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಯ ಪ್ರಶ್ನೆಗೆ, “ಅದನ್ನು ಹೈಕಮಾಂಡ್ ಬಳಿ ಕೇಳೋಣ” ಎಂದು ಹೇಳಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದರು.

Continue Reading

Trending