ಕ್ರೀಡೆ
T20 WORLD CUP 2026 : ಭಾರತ–ಪಾಕ್ ಪಂದ್ಯಕ್ಕೆ ಹಸಿರು ನಿಶಾನೆ: ಬಹಿಷ್ಕಾರ ಹಿಂತೆಗೆದುಕೊಂಡ ಪಾಕಿಸ್ತಾನ
ನವದೆಹಲಿ:
ಬಾಂಗ್ಲಾದೇಶ ಮತ್ತು ಶ್ರೀಲಂಕಾದ ರಾಜತಾಂತ್ರಿಕ ಮನವೊಲಿಕೆಯ ಪರಿಣಾಮವಾಗಿ, ಪಾಕಿಸ್ತಾನ ಸರ್ಕಾರ ತನ್ನ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ ಭಾರತ–ಪಾಕಿಸ್ತಾನ ಪಂದ್ಯ ನಿಗದಿಯಂತೆ ನಡೆಯಲಿದೆ. ಇದರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಹೆಚ್ಚಾಗಿದ್ದು, ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
“ವಿವಿಧ ಮಟ್ಟದ ಚರ್ಚೆಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮೈದಾನಕ್ಕಿಳಿಸಲು ಸರ್ಕಾರ ತೀರ್ಮಾನಿಸಿದೆ” ಎಂದು ಪಾಕಿಸ್ತಾನ ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹೇಳಿಕೆ ಹೊರಬೀಳುತ್ತಿದ್ದಂತೆ ಬಹಿಷ್ಕಾರದ ಅನುಮಾನಗಳಿಗೆ ತೆರೆ ಬಿದ್ದಿದೆ.
ಈ ಬೆಳವಣಿಗೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ಅಮೀನುಲ್ ಇಸ್ಲಾಂ ಅವರ ಹೇಳಿಕೆ ಪ್ರಮುಖ ಪಾತ್ರವಹಿಸಿದೆ. ಅಲ್ಲದೆ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಕರೆ ಮಾಡಿ, ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಐಸಿಸಿ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಗಳ ವಿವರವನ್ನು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ವಿವರಿಸಿದ ನಂತರ ಸರ್ಕಾರದ ಅಂತಿಮ ನಿರ್ಧಾರ ಪ್ರಕಟವಾಗಿದೆ. ಇದಕ್ಕೂ ಮೊದಲು ನಿರ್ಧಾರಕ್ಕೆ ಇನ್ನೊಂದು ದಿನ ಬೇಕು ಎಂದು ನಖ್ವಿ ಹೇಳಿದ್ದರು.
ಇದರ ನಡುವೆ ಭಾರತ–ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಪುನರಾರಂಭ ಹಾಗೂ ಬಾಂಗ್ಲಾದೇಶವನ್ನು ಒಳಗೊಂಡ ತ್ರಿಕೋನ ಸರಣಿಯ ಬೇಡಿಕೆಯನ್ನು ಪಾಕ್ ಮುಂದಿಟ್ಟಿತ್ತು. ಆದರೆ, ದ್ವಿಪಕ್ಷೀಯ ಸರಣಿಗಳು ಐಸಿಸಿ ವ್ಯಾಪ್ತಿಗೆ ಸೇರದ ಕಾರಣ ತ್ರಿಕೋನ ಸರಣಿಯ ಬೇಡಿಕೆ ತಿರಸ್ಕೃತಗೊಂಡಿದೆ. ಭಾರತವು ಕಳೆದ ದಶಕಕ್ಕೂ ಹೆಚ್ಚು ಕಾಲ ಪಾಕ್ ವಿರುದ್ಧ ತ್ರಿಕೋನ ಪಂದ್ಯಾವಳಿಗಳನ್ನು ಆಡಿಲ್ಲ.
ಕ್ರೀಡೆ
“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
ಇಸ್ಲಾಮಾಬಾದ್:
ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.
ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.
“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.
ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕ್ರೀಡೆ
T20 WORLD CUP : ಪಾಕ್‌ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
ನವದೆಹಲಿ:
ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳಿಗಿಂತ ಇದೀಗ ನಡೆಯುತ್ತಿರುವ ಗೊಂದಲ, ವಿವಾದಗಳೇ ಭಾರೀ ಸದ್ದು ಮಾಡುತ್ತಿವೆ. ಫೆಬ್ರವರಿ 15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಅಹಂಕಾರದ ಮಾತುಗಳು ಇದೀಗ ಸಂಪೂರ್ಣವಾಗಿ ಹಿನ್ನಡೆ ಕಂಡಿವೆ. ಐಸಿಸಿ ತಿರಸ್ಕಾರ ಹಾಗೂ ಬಿಸಿಸಿಐ ಮನವಿಯ ಬಳಿಕ, ಟೀಮ್ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಆಡಲು ಪಾಕಿಸ್ತಾನ ಒಪ್ಪಿಗೆ ನೀಡಿದೆ.
ಈ ಮಧ್ಯೆ, ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ (ಫೆ.10) ಕೊಲಂಬೊದಲ್ಲಿ ಪಾಕಿಸ್ತಾನ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (USA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಯುಎಸ್ಎ ತಂಡದ ಆಟಗಾರ ಮೊಹಮ್ಮದ್ ಮೊಹ್ಸಿನ್ ನೀಡಿರುವ ಖಡಕ್ ಎಚ್ಚರಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಖಡಕ್ ಎಚ್ಚರಿಕೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಮೊಹ್ಸಿನ್,
“ನಮ್ಮ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ಎಲ್ಲಾ ಒತ್ತಡ ಇರುವುದು ಪಾಕಿಸ್ತಾನ ತಂಡದ ಮೇಲೇ. ಕಳೆದ ಕೆಲ ವರ್ಷಗಳಲ್ಲಿ ಯುಎಸ್ಎ ಆಟಗಾರರ ಕೌಶಲ್ಯಗಳು ಸಾಕಷ್ಟು ಸುಧಾರಿಸಿಕೊಂಡಿವೆ. ಈ ಕಾರಣಕ್ಕೆ ಮತ್ತೊಮ್ಮೆ ಪಾಕಿಸ್ತಾನ ವಿರುದ್ಧ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದ್ದಾರೆ.
“2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಆಗ ಮತ್ತು ಈಗಿನ ನಡುವಿನ ವ್ಯತ್ಯಾಸವೆಂದರೆ – ನಮ್ಮ ಶಕ್ತಿ ಈಗ ದ್ವಿಗುಣವಾಗಿದೆ. ಈ ಪಂದ್ಯದಲ್ಲೂ ನಾವು ಗೆಲುವು ಸಾಧಿಸುತ್ತೇವೆ” ಎಂದು ಮೊಹ್ಸಿನ್ ಸ್ಪಷ್ಟಪಡಿಸಿದರು.
2024ರ ವಿಶ್ವಕಪ್: ಸೂಪರ್ ಓವರ್‌ನಲ್ಲಿ ಯುಎಸ್ಎ ರೋಚಕ ಗೆಲುವು
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಯುಎಸ್ಎ, ಆ ಪಂದ್ಯವನ್ನು ಟೈಗೆ ತಲುಪಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಯುಎಸ್ಎ ಕೂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ 18 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 13 ರನ್ ಗಳಿಸುವ ಮೂಲಕ ಸೋಲು ಕಂಡಿತು. ಈ ಐತಿಹಾಸಿಕ ಗೆಲುವನ್ನೇ ಮುಂದಿಟ್ಟುಕೊಂಡು ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸವನ್ನು ಮೊಹಮ್ಮದ್ ಮೊಹ್ಸಿನ್ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಕ್ರೀಡೆ
CRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್
ನವದೆಹಲಿ, ಫೆ.10:
ಭಾರತೀಯ ತಂಡದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಬೇಕೆಂಬ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಬೇಡಿಕೆಯನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ತಿರಸ್ಕರಿಸಿದೆ. 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಆಡಲು ಅನುಮತಿ ನೀಡದಿರುವುದಾಗಿ ಪಾಕಿಸ್ತಾನ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ನಡೆದ ಸಭೆಯಲ್ಲಿ ಪಿಸಿಬಿ ಈ ಬೇಡಿಕೆ ಮುಂದಿಟ್ಟಿತ್ತು.
ಟಿ20 ವಿಶ್ವಕಪ್ ಬಹಿಷ್ಕಾರ ವಿವಾದದ ಹಿನ್ನೆಲೆಯಲ್ಲಿ ಪಿಸಿಬಿ ಐಸಿಸಿಗೆ ಮೂರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿತ್ತು. ಭಾರತ–ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಪುನರಾರಂಭಿಸಬೇಕು, ಭಾರತ–ಬಾಂಗ್ಲಾದೇಶ–ಪಾಕಿಸ್ತಾನ ನಡುವೆ ತ್ರಿಕೋನ ಸರಣಿ ಆಯೋಜಿಸಬೇಕು ಹಾಗೂ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವಿತ ಸರಣಿಗಾಗಿ ಭಾರತ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕು ಎಂಬುದು ಆ ಬೇಡಿಕೆಗಳಾಗಿದ್ದವು.
ಆದರೆ ಈ ಎಲ್ಲಾ ಬೇಡಿಕೆಗಳನ್ನು ಐಸಿಸಿ ಸ್ಪಷ್ಟವಾಗಿ ತಿರಸ್ಕರಿಸಿದೆ. ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲು ಟೀಮ್ ಇಂಡಿಯಾಗೆ ಅನುಮತಿ ನೀಡುವ ಅಧಿಕಾರ ನಮ್ಮದಲ್ಲ. ಆ ನಿರ್ಧಾರ ಸಂಪೂರ್ಣವಾಗಿ ಬಿಸಿಸಿಐ ಮತ್ತು ಭಾರತ ಸರ್ಕಾರದ ಅಧೀನದಲ್ಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.
ಲಾಹೋರ್‌ನಲ್ಲಿ ನಡೆದ ಸಭೆಯ ಬಳಿಕ, ಫೆಬ್ರವರಿ 15ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ ಪಿಸಿಬಿಗೆ ಒಂದು ದಿನ ಕಾಲಾವಕಾಶ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಸಿಬಿ ಅಧ್ಯಕ್ಷ ನಖ್ವಿ, “ನಾವು ಐಸಿಸಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಅವರ ಪ್ರತಿಕ್ರಿಯೆ ಸಿಕ್ಕ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಐಸಿಸಿ ಉತ್ತರ ಬಂದ ನಂತರ ನಮ್ಮ ಪ್ರಧಾನಿ ಶೆಹಬಾಜ್ ಶರೀಫ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು” ಎಂದಿದ್ದಾರೆ.
-
Blog15 hours agoS T SOMASHEKHAR : ಜಿಬಿಎ ಚುನಾವಣೆಗೆ ಸ್ಪಷ್ಟ ನಿಯಮ: ಸ್ಥಳೀಯರಿಗೆ ಮಾತ್ರ ಟಿಕೆಟ್
-
ಕ್ರೀಡೆ12 hours agoT20 WORLD CUP : ಪಾಕ್‌ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
-
ಅಪರಾಧ11 hours agoVIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
-
ದೇಶ14 hours agoಮಂಡ್ಯದಲ್ಲಿ ಎಆರ್ಎಐ ಸ್ಥಾವರ ಸ್ಥಾಪನೆಗೆ 105 ಎಕರೆ ಸರ್ಕಾರಿ ಭೂಮಿ ಸಿದ್ಧ
-
ದೇಶ11 hours agoBENGALURU : BCCI Centre of Excellence ಬೆಂಗಳೂರಿನಲ್ಲಿ 10 ಹುದ್ದೆಗಳ ನೇಮಕಾತಿ
-
ಕ್ರೀಡೆ13 hours agoCRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್
-
ದೇಶ15 hours agoMAITHILLI TAKUR : ತಮ್ಮದೇ ಸರ್ಕಾರದ ಸಚಿವರನ್ನು ಪ್ರಶ್ನಿಸಲು ಹಿಂಜರಿಯದ ಯುವ ಶಾಸಕಿ
-
ಅಪರಾಧ9 hours agoಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
