Connect with us

ರಾಜ್ಯ

ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ

Published

on

ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ
ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ  ಅವರು ಎಲ್ಲರಿಗೂ ಚಿರಪರಿಚಿತ. ಖಡಕ್ ಪೊಲೀಸ್ ಅಧಿಕಾರಿಯಾಗಿರುವ ರೂಪಾ ಅವರು ಒಂದು ಫೋಟೋಶೂಟ್ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.

ಹೌದು. ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಂತೆಯೇ ಹಬ್ಬದ ಪ್ರಯುಕ್ತ ಕೆಲವರು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇಂದು ಖಡಕ್ ಅಧಿಕಾರಿ ಕೂಡ ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪೊಲೀಸ್ ಯೂನಿಫಾರ್ಮ್‍ನಲ್ಲಿ ಇರುತ್ತಿದ್ದ ರೂಪಾ ಅವರು ಇದೀಗ ಕೈಯಲ್ಲಿ ಖಡ್ಗ ಹಿಡಿದು, ಕೆಂಪು ಸೀರೆ, ಹಸಿರು ಬಣ್ಣ ಬ್ಲೌಸ್, ಮೈತುಂಬಾ ಆಭರಣ ತೊಟ್ಟು ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ. ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬುದಕ್ಕೆ ಡಿ ರೂಪಾ ಉತ್ತಮ ನಿದರ್ಶನ ಎಂದು ಫೋಟೋ ಅಪ್ಲೋಡ್ ಮಾಡಿರುವ ಭಾರ್ಗವಿ ಕೆ. ಆರ್ ಎಂಬವರು ಬರೆದುಕೊಂಡಿದ್ದಾರೆ. ರೂಪ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಹಲವಾರು ಕಾಮೆಂಟ್‍ಗಳು ಬರತೊಡಗಿದವು. ಕೆಲವರು ಹ್ಯಾಟ್ಸಾಫ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಅಂದ್ರೆ ಇನ್ನೂ ಕೆಲವರು ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಹಾಗೂ ಜೈ ದುರ್ಗಿ ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

Continue Reading

ಅಪರಾಧ

ವೈರಲ್ ವಿಡಿಯೋ: ಲಾರಿ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ

Published

on

ತುಮಕೂರು: ಜಿಲ್ಲೆಯ ತಿಪಟೂರು ನಗರದ ಐಬಿ ಸರ್ಕಲ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಿಯಂತ್ರಣ ತಪ್ಪಿದ ಲಾರಿಯೊಂದು ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಗುದ್ದಿದೆ. ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ವೇಗವಾಗಿ ಬಂದ ಲಾರಿಯು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ವಿದ್ಯಾರ್ಥಿನಿಯತ್ತ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ವಿದ್ಯಾರ್ಥಿನಿ ಲಾರಿಯ ಕೆಳಗೆ ಸಿಲುಕಿದ್ದರೂ, ಅದೃಷ್ಟವಶಾತ್ ವಾಹನದ ಚಕ್ರ ಆಕೆಯ ಮೇಲೆ ಹರಿಯದೆ ಮಧ್ಯಭಾಗದಲ್ಲಿ ಸಿಲುಕಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಅಪಘಾತ ಕಂಡ ಸ್ಥಳೀಯರು ಕೂಡಲೇ ಲಾರಿಯನ್ನು ನಿಲ್ಲಿಸಿ ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಗಾಯಗೊಂಡ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಆಕೆಯ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಿಪಟೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿಯನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಲಾರಿ ಕೆಳಗೆ ಸಿಲುಕಿದ್ದರೂ ವಿದ್ಯಾರ್ಥಿನಿ ಅದೃಷ್ಟವಶಾತ್ ಜೀವಂತವಾಗಿ ಪಾರಾಗಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ವಾಹನ ಚಾಲಕರು ವೇಗ ಮಿತಿಯನ್ನು ಪಾಲಿಸಬೇಕು ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂಬ ಒತ್ತಾಯವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Continue Reading

ದೇಶ

ಮದ್ಯಪ್ರಿಯರಿಂದ ಸರ್ಕಾರಕ್ಕೆ ಬಂಪರ್ ಆದಾಯ: ಬಿಯರ್ ಬೆಲೆ ಇಳಿಕೆ, ಮಾರಾಟ ಏರಿಕೆ

Published

on

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಆಲ್ಕೋಹಾಲ್ ಇನ್ ಬಿವರೇಜ್ (AIB)’ ಆಧಾರಿತ ಹೊಸ ತೆರಿಗೆ ವ್ಯವಸ್ಥೆಯು ಅಬಕಾರಿ ಇಲಾಖೆಯ ಆದಾಯದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ ಈ ಹೊಸ ನೀತಿಯ ಪರಿಣಾಮವಾಗಿ ಲಘು ಆಲ್ಕೋಹಾಲ್ ಹೊಂದಿರುವ ಬಿಯರ್‌ಗಳ ಮಾರಾಟ ಹೆಚ್ಚಾಗಿದ್ದು, ಸರ್ಕಾರದ ಆದಾಯವೂ ಹೊಸ ದಾಖಲೆ ಬರೆದಿದೆ.

ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲೇ ಸರ್ಕಾರಕ್ಕೆ ಒಟ್ಟು ₹10,599.29 ಕೋಟಿ ಅಬಕಾರಿ ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14.39ರಷ್ಟು ಹೆಚ್ಚಳವಾಗಿದೆ.

ಬಿಯರ್ ಮಾರಾಟದಿಂದ ಮಾತ್ರ ₹1,914.81 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ₹312.67 ಕೋಟಿ ಹೆಚ್ಚುವರಿ ಆದಾಯ ದಾಖಲಾಗಿದೆ. ಭಾರತೀಯ ಮದ್ಯ (IML) ಮಾರಾಟದಿಂದ ₹8,394.32 ಕೋಟಿ ಆದಾಯ ಹರಿದುಬಂದಿದೆ.

ಹೊಸ ತೆರಿಗೆ ವ್ಯವಸ್ಥೆಯಿಂದ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆ ಇಳಿಕೆಯಾಗಿರುವುದು ಗ್ರಾಹಕರ ಖರೀದಿ ಹೆಚ್ಚಲು ಕಾರಣವಾಗಿದೆ. ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ದಾಸ್ತಾನು ವೇಗವಾಗಿ ಖಾಲಿಯಾಗಿದೆ.

ರಾಜ್ಯ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹45,000 ಕೋಟಿ ಅಬಕಾರಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಬಳಕೆಯಾಗದೆ ಉಳಿದಿರುವ 483 ಚಿಲ್ಲರೆ ಮದ್ಯದ ಅಂಗಡಿ (CL-2A) ಹಾಗೂ 96 ಬಾರ್ (CL-9A) ಪರವಾನಗಿಗಳನ್ನು ಇದೇ ತಿಂಗಳ ಕೊನೆಯಲ್ಲಿ ಆನ್‌ಲೈನ್ ಹರಾಜು ಮೂಲಕ ವಿತರಿಸಲು ಇಲಾಖೆ ಯೋಜನೆ ರೂಪಿಸಿದೆ. ಈ ಪರವಾನಗಿಗಳನ್ನು ಐದು ವರ್ಷಗಳ ಅವಧಿಗೆ ನೀಡಲಾಗಲಿದ್ದು, ಇದರಿಂದ ಸರ್ಕಾರದ ಆದಾಯ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಹಣಕಾಸು ಇಲಾಖೆ ಅಧಿಕಾರಿಗಳ ಪ್ರಕಾರ, ಹೊಸ AIB ತೆರಿಗೆ ನೀತಿಯ ಉದ್ದೇಶ ಹೆಚ್ಚಿನ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಿ, ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಗೆ ಉತ್ತೇಜನ ನೀಡುವುದಾಗಿದೆ.

Continue Reading

ಅಪರಾಧ

ಆಸ್ಪತ್ರೆ ದೌರ್ಜನ್ಯ ಪ್ರಕರಣ: ವೈರಲ್ ದೃಶ್ಯಗಳ ನಡುವೆ ಕಾರ್ಪೊರೇಟರ್ ಸ್ಪಷ್ಟನೆ ಏನು?

Published

on

ನವದೆಹಲಿ: ಮುಂಬೈ ಸಮೀಪದ ಆಸ್ಪತ್ರೆಯೊಂದರಲ್ಲಿ ಮಹಿಳಾ ವೈದ್ಯೆ ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಹಾಗೂ ಅವರ ಬೆಂಬಲಿಗರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU)ದಲ್ಲಿ ಹಾಸಿಗೆಗಳ ಕೊರತೆಯ ವಿಚಾರದಿಂದ ಆರಂಭವಾದ ಮಾತಿನ ಚಕಮಕಿ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ವೈದ್ಯರು ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ಸದ್ಯ ಯಾವುದೇ NICU ಹಾಸಿಗೆ ಲಭ್ಯವಿಲ್ಲ ಎಂದು ತಿಳಿಸಿದ್ದಾಗಿ ವರದಿಯಾಗಿದೆ. ಬಳಿಕ ಈ ವಿಚಾರಕ್ಕೆ ಸಂಬಂಧಿಸಿ ಕಾರ್ಪೊರೇಟರ್ ಆಸ್ಪತ್ರೆಗೆ ಆಗಮಿಸಿದ್ದು, ಗಲಾಟೆ ನಡೆದಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ವೈದ್ಯೆಯೊಬ್ಬರು ತಮ್ಮ ಮೊಬೈಲ್ ಬಳಸಲು ಪ್ರಯತ್ನಿಸುವ ವೇಳೆ ಅವರತ್ತ ಧಾವಿಸುವ ವ್ಯಕ್ತಿ ಕಾಣಿಸಿಕೊಂಡಿದ್ದು, ಬಳಿಕ ಆಸ್ಪತ್ರೆಯ ಸಿಬ್ಬಂದಿ ಮತ್ತು ನರ್ಸ್‌ಗಳೊಂದಿಗೆ ತಳ್ಳಾಟ-ನೂಕಾಟ ನಡೆದಿರುವ ದೃಶ್ಯಗಳು ಗೋಚರಿಸುತ್ತವೆ. ಈ ವಿಡಿಯೋ ಆಧರಿಸಿ ವೈದ್ಯರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಮೇಶ್ ಮ್ಹಾತ್ರೆ, ಮಹಿಳಾ ವೈದ್ಯೆಯ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ. ವೈದ್ಯರು ತಮ್ಮ ದೂರುಗಳಿಗೆ ಸ್ಪಂದಿಸದ ಕಾರಣ ಅವರ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬೀಳುವಂತೆ ಮಾಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕ್ರಮದಿಂದ ರೋಗಿಯ ಜೀವ ಉಳಿದಿದೆ ಎಂಬ ವಾದವನ್ನೂ ಮುಂದಿಟ್ಟಿದ್ದಾರೆ.

ಈ ಘಟನೆ ವೈದ್ಯರ ಸುರಕ್ಷತೆ, ಆಸ್ಪತ್ರೆಗಳಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಸಾರ್ವಜನಿಕ ಪ್ರತಿನಿಧಿಗಳ ವರ್ತನೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ವೈರಲ್ ವಿಡಿಯೋ ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Continue Reading

Trending