Connect with us

ಆರೋಗ್ಯ

ವೈರಲ್ ಫೀವರ್ ಹಾಗೂ ಸುಸ್ತಿಗೆ ಮನೆ ಮದ್ದು

Published

on

ವೈರಲ್ ಫೀವರ್ ಹಾಗೂ ಸುಸ್ತಿಗೆ ಮನೆ ಮದ್ದು

ವೈರಲ್ ಫೀವರ್ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೆ ತಕ್ಕ ಮಟ್ಟಿಗೆ ಗುಣ ಕಾಣಬಹುದು. ಕೆಲವೊಂದು ರೀತಿಯ ಜ್ವರ ಕೇವಲ ಮಾತ್ರೆ, ಇಂಜೆಕ್ಷನ್, ಆಂಟಿ – ಬಯೋಟಿಕ್ ಔಷಧಿಗಳಿಗೆ ಹೊರಟು ಹೋದರೆ ಇನ್ನು ಕೆಲವು ವೈರಲ್ ಜ್ವರ ಹೋಗುವುದೇ ಇಲ್ಲ. ಏಕೆಂದರೆ ದೇಹದಲ್ಲಿ ಸೇರಿರುವ ವೈರಸ್ ಗಳು ಯಾವುದೇ ಕಾರಣಕ್ಕೂ, ಯಾವುದೇ ರೀತಿಯ ಆಂಟಿ – ಬಯೋಟಿಕ್ ಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಜ್ವರ , ಮೈಕೈ ನೋವು, ತಲೆ ನೋವು, ವಿಪರೀತ ಸುಸ್ತು ಸಾಮಾನ್ಯವಾಗಿ ವೈರಲ್ ಜ್ವರದ ಲಕ್ಷಣಗಳು. ವೈರಲ್ ಜ್ವರ ಭಯಪಡುವಂತಹದು ಅಲ್ಲ. ಆದರೂ ನಿರ್ಲಕ್ಷ್ಯ ಮಾಡಬಾರದು.ಮಳೆ ಪ್ರಮಾಣ ಅಧಿಕವಿರುವುದರಿಂದ ಶೀತ-ಜ್ವರ, ಕೆಮ್ಮು ಶೀತ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅಂತಹ ಸಮಯದಲ್ಲಿ ಕೆಲವೊಂದು ರೀತಿಯ ಮನೆ ಮದ್ದುಗಳು ಬಹಳ ಉಪಯೋಗಕ್ಕೆ ಬರುತ್ತದೆ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ತಿನ್ನುವುದರಿಂದ ಕಾಯಿಲೆ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು.

ಶುಂಠಿ ಮತ್ತು ಜೇನು ತುಪ್ಪ:ಶುಂಠಿ ಮತ್ತು ಜೇನು ತುಪ್ಪ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತವೆ. ಶುಂಠಿಯಲ್ಲಿ ಅನಲ್ಗೆಸಿಕ್, ಆಂಟಿ – ಇನ್ಫಾಮೇಟರಿ, ಮತ್ತು ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳಿದ್ದು ವೈರಲ್ ಜ್ವರ ಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಜೇನು ತುಪ್ಪದ ಜೊತೆ ಸೇರಿದರೆ ಇದರ ಶಕ್ತಿ ಇನ್ನಷ್ಟು ಉಜ್ವಲಗೊಳ್ಳುತ್ತದೆ. ಏಕೆಂದರೆ ಜೇನು ತುಪ್ಪದಲ್ಲಿ ಸಹ ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳಿದ್ದು, ನಮ್ಮ ದೇಹದಲ್ಲಿ ಸೇರಿರುವ ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರ ಹಾಕುತ್ತವೆ. ಇದರಿಂದಲೂ ಸಹ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಜ್ವರ ಜಾಸ್ತಿ ಆಗದಂತೆ ತಡೆಯುತ್ತದೆ.

ಚಕ್ಕೆ:ಮಸಾಲೆ ಪದಾರ್ಥಗಳಲ್ಲಿ ಬಹಳ ಹೆಸರು ಮಾಡಿರುವ ದಾಲ್ಚಿನ್ನಿ ಅಥವಾ ಚಕ್ಕೆ ಎಂದು ಕರೆಯಲ್ಪಡುವ ಈ ಮಸಾಲೆ ವಸ್ತು ವೈರಲ್ ಜ್ವರಗಳಿಗೆ ಒಳ್ಳೆಯ ಔಷಧಿ ಎಂದು ಸಾಬೀತು ಮಾಡಿದೆ. ಯಾವುದೇ ರೀತಿಯ ನೆಗಡಿ, ಶೀತ, ಕೆಮ್ಮು, ಗಂಟಲು ನೋವು, ಗಂಟಲು ಕೆರೆತ ಮತ್ತು ಗಂಟಲಿನಲ್ಲಿ ಕಫ ಇದ್ದಂತಹ ಸಂದರ್ಭದಲ್ಲಿ 1 ಟೀ ಸ್ಪೂನ್ ನಷ್ಟು ದಾಲ್ಚಿನ್ನಿ ಪುಡಿಯನ್ನು 2 ಏಲಕ್ಕಿ ಮೊಗ್ಗುಗಳ ಜೊತೆ ಚೆನ್ನಾಗಿ ನೀರಿನಲ್ಲಿ ಕುದಿಸಿ ನಂತರ ಅದನ್ನು ಸೋಸಿ ಕುಡಿದರೆ ಎಲ್ಲಾ ರೀತಿಯ ಸಮಸ್ಯೆಗಳಿಗೆ ಬಹಳ ಬೇಗನೆ ಮುಕ್ತಿ ಸಿಗುತ್ತದೆ.

ಅಮೃತಬಳ್ಳಿ:ಜ್ವರ ಮತ್ತು ನೋವನ್ನು ನಿವಾರಿಸಲು ಅಮೃತಬಳ್ಳಿ ಚೆನ್ನಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ, 4-6 ಮೀಟರ್ ಉದ್ದದ ಅಮೃತಬಳ್ಳಿ ಅನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು 3-4 ಬಾರಿ ಸಣ್ಣ ಪ್ರಮಾಣದಲ್ಲಿ ಸೇವಿಸಿ.

ತುಳಸಿ ಗಿಡ:ತುಳಸಿ ಗಿಡ ಎಂದರೆ ಸಾಕು ನಾವು ಭಕ್ತಿ ಪರವಶರಾಗುತ್ತೇವೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನ ಕೊಟ್ಟು ಲಕ್ಷ್ಮಿ ದೇವತೆಗೆ ಹೋಲಿಸಲಾಗಿದೆ. ದೈವೀ ಸ್ವರೂಪವಾದ ತುಳಸಿ ಗಿಡ ಕೇವಲ ಪೂಜೆಗೆ ಅಷ್ಟೇ ಸೀಮಿತವಾಗಿಲ್ಲ ವೈರಲ್ ಜ್ವರದಿಂದ ಮುಕ್ತಿ ಪಡೆಯಲು ತುಳಸಿ ಎಲೆಗಳು ಬಹಳಷ್ಟು ಸಹಾಯ ಮಾಡುತ್ತವೆ. ಇದಕ್ಕಾಗಿ 5-7 ತುಳಸಿ ಎಲೆಗಳು ಮತ್ತು ಒಂದು ಚಮಚ ಲವಂಗದ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಅರ್ಧ ಕಪ್ ಪ್ರಮಾಣದಲ್ಲಿ ಸೇವಿಸಿ.

ಮೆಂತ್ಯ ನೀರು:ಕೆಲವು ಮೆಂತ್ಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಮತ್ತು ರಾತ್ರಿಯಿಡೀ ಇರಿಸಿ. ಬೆಳಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ ಕುಡಿಯಿರಿ.

ಒಣದ್ರಾಕ್ಷಿ:ಒಣದ್ರಾಕ್ಷಿವೈರಲ್ ಜ್ವರದಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ನೀವು ಎರಡು ಚಮಚ ಗೋಡಂಬಿಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕೆಲವು ಗಂಟೆಗಳ ಕಾಲ ನೆನೆಸಿಡಿ. ನಂತರ ಒಣದ್ರಾಕ್ಷಿಗಳನ್ನು ಆ ನೀರಿನಲ್ಲಿಯೇ ಪುಡಿಮಾಡಿ. ನಂತರ ಅದರಲ್ಲಿ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಬೆರೆಸಿ ಎರಡು ಬಾರಿ ಕುಡಿಯಿರಿ.

ಸಾಮಾನ್ಯ ಶೀತ-ಜ್ವರ ಸಮಸ್ಯೆಯಿಂದ ಬಳಲುತ್ತಿರುವವರು ಈ ಆಹಾರ ಸೇವಿಸುವುದರಿಂದ ಸುಸ್ತು ಬೇಗನೆ ನಿವಾರಣೆಯಾಗುವುದು.
⦁ ಆ್ಯಪಲ್‌, ಕ್ಯಾರೆಟ್‌ ಮತ್ತು ಆರೇಂಜ್,ಮೂರನ್ನು ಮಿಕ್ಸ್ ಮಾಡಿ ಜ್ಯೂಸ್‌ ಮಾಡಿ ಕುಡಿಯಿರಿ.
⦁ ಕಿತ್ತಳೆ ಅಥವಾ ಮೂಸಂಬಿ ಜ್ಯೂಸ್‌ನಲ್ಲಿ ವಿಟಮಿನ್‌ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
⦁ ಬೀಟ್‌ರೂಟ್‌,ಕ್ಯಾರೆಟ್,ಅರಿಶಿಣ,ನಿಂಬೆರಸ ಜ್ಯೂಸ್‌,ಅರಿಶಿಣ,ಶುಂಠಿ,ಕಾಳುಮೆಣಸಿನ ಪುಡಿ,ಜ್ಯೂಸ್‌ ಮಾಡಿ ಕುಡಿಯಿರಿ.
⦁ ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್ ಜೊತೆ ಎರಡು ಪುದೀನಾ ಎಲೆ ಹಾಕಿ ಜ್ಯೂಸ್‌ ಮಾಡಿ ಕುಡಿಯಿರಿ.
⦁ ಕಿವಿಫ್ರೂಟ್‌ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.
⦁ ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುವುದು.

ಆರೋಗ್ಯ

Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?

Published

on

ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.

ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.

ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Continue Reading

ಆರೋಗ್ಯ

WHO ಎಚ್ಚರಿಕೆ ಬಳಿಕ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ; ವಿಜಯವಾಡದಲ್ಲಿ ಕ್ಯಾಂಪ್

Published

on

ವಿಜಯವಾಡ: ಜಾಗತಿಕ ಮಟ್ಟದಲ್ಲಿ ಎಬೋಲಾ ವೈರಸ್‌ ಕುರಿತ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ, ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ವಿಜಯವಾಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಎಬೋಲಾ ತಪಾಸಣಾ ಶಿಬಿರ ಆರಂಭಿಸಿದೆ. ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಆಂಧ್ರ ಸರ್ಕಾರ ನಿಯೋಜಿಸಿರುವ ವೈದ್ಯಕೀಯ ತಂಡಗಳು ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ, ಆರೋಗ್ಯ ಲಕ್ಷಣಗಳ ಪರಿಶೀಲನೆ ಹಾಗೂ ಶಂಕಿತ ಸೋಂಕಿನ ಗುರುತು ಪತ್ತೆ ಕಾರ್ಯ ನಡೆಸುತ್ತಿವೆ. ಜ್ವರ, ವಾಂತಿ, ದೌರ್ಬಲ್ಯ ಅಥವಾ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದು ಕೇವಲ ಮುನ್ನೆಚ್ಚರಿಕಾ ಕ್ರಮವಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಹೊರಡಿಸಿರುವ ಆರೋಗ್ಯ ಎಚ್ಚರಿಕೆ ಹಿನ್ನೆಲೆಯಲ್ಲಿ ನಿಗಾ ಕ್ರಮ ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಮಾಜಿ WHO ಮುಖ್ಯ ವಿಜ್ಞಾನಿ Soumya Swaminathan ಭಾರತವು ಎಬೋಲಾ ವಿರುದ್ಧದ ಸಂಶೋಧನೆ, ಲಸಿಕೆ ಅಭಿವೃದ್ಧಿ ಹಾಗೂ ರೋಗ ಪತ್ತೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದು ಹೇಳಿದ್ದಾರೆ. WHO ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಯೋಗದೊಂದಿಗೆ ಭಾರತ ಹೆಚ್ಚಿನ ಸಂಶೋಧನೆ ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದ ಕೆಲವು ಭಾಗಗಳಲ್ಲಿ ಎಬೋಲಾ ಸೋಂಕು ಹೆಚ್ಚಳ ಕಂಡುಬಂದಿದೆ. WHO ಮಹಾನಿರ್ದೇಶಕ Tedros Adhanom Ghebreyesus ನೀಡಿರುವ ಮಾಹಿತಿಯಂತೆ, ಕಾಂಗೋದಲ್ಲಿ ಈಗಾಗಲೇ 101 ಪ್ರಕರಣಗಳು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ನೂರಾರು ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ.

ಎಬೋಲಾ ವೈರಸ್‌ನ ‘ಬುಂಡಿಬುಗ್ಯೋ’ ರೂಪಾಂತರಿ ತಳಿಯು ಪತ್ತೆ ಹಾಗೂ ಚಿಕಿತ್ಸೆ ಕಾರ್ಯಕ್ಕೆ ಸವಾಲು ಎಸೆದಿರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿವೆ.

Continue Reading

ಆರೋಗ್ಯ

ಇನ್ಸುಲಿನ್‌ಗೆ ಗುಡ್‌ಬೈ? ಸಕ್ಕರೆ ನಿಯಂತ್ರಣಕ್ಕೆ ಬಂದಿದೆ ‘ಓಬೆಡಾ’ ಮಾತ್ರೆ!

Published

on

ಬೆಂಗಳೂರು: ಜಾಗತಿಕ ಖ್ಯಾತಿಯ ಔಷಧ ತಯಾರಿಕಾ ಸಂಸ್ಥೆಯಾದ Dr. Reddy’s Laboratories ಭಾರತದಲ್ಲಿ ಟೈಪ್-2 ಮಧುಮೇಹ ರೋಗಿಗಳಿಗಾಗಿ ‘ಓಬೆಡಾ’ (Obeda) ಎಂಬ ಹೊಸ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಈ ಹೊಸ ಔಷಧವು ‘ಓರಲ್ ಸೆಮಾಗ್ಲುಟೈಡ್ ಬಯೋಸಿಮಿಲರ್’ ರೂಪದಲ್ಲಿದ್ದು, ಬಾಯಿಯ ಮೂಲಕ ಸೇವಿಸಬಹುದಾದ ಮಧುಮೇಹ ನಿಯಂತ್ರಣ ಟ್ಯಾಬ್ಲೆಟ್ ಆಗಿದೆ.

ಇತ್ತೀಚೆಗೆ ಇದೇ ಸಂಸ್ಥೆ ಭಾರತ ಮತ್ತು ಕೆನಡಾದಲ್ಲಿ ಸೆಮಾಗ್ಲುಟೈಡ್ ಇಂಜೆಕ್ಷನ್ ಬಿಡುಗಡೆ ಮಾಡಿದ್ದರೆ, ಇದೀಗ ಅದೇ ಔಷಧಿಯನ್ನು ಮಾತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ರೋಗಿಗಳಿಗೆ ಹೆಚ್ಚು ಸುಲಭ ಮತ್ತು ಅನುಕೂಲಕರ ಚಿಕಿತ್ಸೆಯನ್ನು ಒದಗಿಸಲು ಮುಂದಾಗಿದೆ.

ಭಾರತದಲ್ಲಿ ಮಧುಮೇಹದ ಆತಂಕಕಾರಿ ಚಿತ್ರಣ

Indian Council of Medical Research ನಡೆಸಿದ ‘ಇಂಡಿಯಾಬ್’ ಅಧ್ಯಯನದ ಪ್ರಕಾರ, ಭಾರತದಲ್ಲಿ 10.1 ಕೋಟಿಗೂ ಅಧಿಕ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಜೊತೆಗೆ ಸುಮಾರು 13.6 ಕೋಟಿ ಜನರು ಪ್ರೀ-ಡಯಾಬಿಟಿಕ್ ಸ್ಥಿತಿಯಲ್ಲಿದ್ದು, ಭವಿಷ್ಯದಲ್ಲಿ ಮಧುಮೇಹಕ್ಕೆ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹೊಟ್ಟೆ ಬೊಜ್ಜು ಮತ್ತು ಜೀವನಶೈಲಿ ಬದಲಾವಣೆಗಳು ಮಧುಮೇಹ ಪ್ರಕರಣಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

‘ಓಬೆಡಾ’ ಮಾತ್ರೆ ಹೇಗೆ ಕೆಲಸ ಮಾಡುತ್ತದೆ?

‘ಓಬೆಡಾ’ ಔಷಧವು ಜಿಎಲ್‌ಪಿ-1 ಆರ್‌ಎ (GLP-1 RA) ವರ್ಗಕ್ಕೆ ಸೇರಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವೈದ್ಯರ ಸಲಹೆಯಂತೆ ಆಹಾರ ನಿಯಂತ್ರಣ ಮತ್ತು ವ್ಯಾಯಾಮದ ಜೊತೆಗೆ ಈ ಮಾತ್ರೆಯನ್ನು ಸೇವಿಸಿದರೆ:

  • ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ
  • ತೂಕ ಇಳಿಕೆಗೆ ಸಹಕಾರಿ
  • ದೀರ್ಘಕಾಲೀನ ಮಧುಮೇಹ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ
  • HbA1c ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ

ಕ್ಲಿನಿಕಲ್ ಟ್ರಯಲ್‌ನಲ್ಲಿ ಯಶಸ್ಸು

Central Drugs Standard Control Organisation ಅನುಮತಿಯೊಂದಿಗೆ 288 ಮಧುಮೇಹ ರೋಗಿಗಳ ಮೇಲೆ ನಡೆದ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳಲ್ಲಿ ‘ಓಬೆಡಾ’ ಉತ್ತಮ ಫಲಿತಾಂಶ ನೀಡಿದೆ ಎಂದು ಕಂಪನಿ ತಿಳಿಸಿದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ತೂಕ ಇಳಿಕೆ ಹಾಗೂ ಸುರಕ್ಷಿತ ಬಳಕೆಯಲ್ಲಿ ಈ ಔಷಧ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ.

ಬೆಲೆ ಎಷ್ಟು?

‘ಓಬೆಡಾ’ ದಿನಕ್ಕೊಮ್ಮೆ ಸೇವಿಸುವ ಮಾತ್ರೆಯಾಗಿದ್ದು, ಮೂರು ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದೆ:

  • 3 mg – ₹99
  • 7 mg – ₹135
  • 14 mg – ₹225

ಕಂಪನಿ ಹೇಳಿದ್ದೇನು?

M. V. Ramana ಮಾತನಾಡಿ, “ಮಧುಮೇಹ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸುಧಾರಿತ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶ. ಪ್ರತಿಯೊಬ್ಬ ರೋಗಿಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ಅವರಿಗೆ ಸೂಕ್ತ ಆಯ್ಕೆಯನ್ನು ಒದಗಿಸುವುದು ನಮ್ಮ ಆದ್ಯತೆ” ಎಂದು ತಿಳಿಸಿದ್ದಾರೆ.

1984ರಲ್ಲಿ ಸ್ಥಾಪನೆಯಾದ Dr. Reddy’s Laboratories ಜಠರ, ಹೃದಯ, ಮಧುಮೇಹ, ಕ್ಯಾನ್ಸರ್ ಮತ್ತು ಚರ್ಮರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಫಾರ್ಮಾ ಕಂಪನಿಯಾಗಿ ಗುರುತಿಸಿಕೊಂಡಿದೆ.

Continue Reading

Trending