Connect with us

ದೇಶ

ಮಂಡ್ಯದಲ್ಲಿ ರಾಜಕೀಯ ಕುಸ್ತಿಗೆ ಸಜ್ಜಾಗುತ್ತಿದೆಯಾ ‘ಲೋಕ’ ಅಖಾಡ?

ಮಂಡ್ಯದಲ್ಲಿ ರಾಜಕೀಯ ಕುಸ್ತಿಗೆ ಸಜ್ಜಾಗುತ್ತಿದೆಯಾ 'ಲೋಕ' ಅಖಾಡ?
ಮಂಡ್ಯದಲ್ಲಿ ರಾಜಕೀಯ ಕುಸ್ತಿಗೆ ಸಜ್ಜಾಗುತ್ತಿದೆಯಾ 'ಲೋಕ' ಅಖಾಡ?

ಮಂಡ್ಯ : ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಅಂತಹದ್ದೇ ರಾಜಕೀಯ ಸಮರ ನಡೆಯುತ್ತಾ? ಎಂಬ ಕುತೂಹಲ ಇದೀಗ ಕಾಡಲಾರಂಭಿಸಿದೆ. ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಒಮ್ಮತಕ್ಕೆ ಬಂದು ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಾರೆ? ಎಂಬುದರ ಮೇಲೆ ಮುಂದಿನ ರಾಜಕೀಯ ಆಟ ಶುರುವಾಗಲಿದೆ.
ಮಂಡ್ಯ ಚುನಾವಣೆಯೇ ಹಾಗೆ. ಅದು ಎಲ್ಲ ಕಡೆ ನಡೆಯುವ ಚುನಾವಣೆಗಿಂತ ಭಿನ್ನವಾಗಿರುತ್ತದೆ. ಕೊನೆಗಳಿಗೆಯಲ್ಲಿ ಆಗಬಹುದಾದ ಬದಲಾವಣೆಗಳು ಇಡೀ ಚುನಾವಣೆಯ ದಿಕ್ಕನ್ನು ಬದಲಾಯಿಸಿ ಬಿಡುತ್ತದೆ. ಇಲ್ಲಿ ರೈತರ ಹೆಸರಿನಲ್ಲಿ ಚುನಾವಣೆಗೆ ಹೋಗುವ ರಾಜಕೀಯ ನಾಯಕರು ರೈತರನ್ನು ಸೆಳೆಯಲು ಬೇಕಾದ ತಂತ್ರಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ರೈತ ನಾಯಕರ ನಡುವೆ ಸಿನಿಮಾ ನಾಯಕ, ನಾಯಕಿಯರು ಜನನಾಯಕರಾಗಿ ಹೊರಹೊಮ್ಮುವುದು ಅಚ್ಚರಿಯಾಗಿದೆ.
ರಾಜಕೀಯ ಇತಿಹಾಸವನ್ನು ನೋಡಿದರೆ ಸಿನಿಮಾ ನಾಯಕ, ನಾಯಕಿಯರು ಇಲ್ಲಿ ಸ್ಪರ್ಧಿಸಿ ರಾಜಕೀಯವಾಗಿ ಬದುಕು ಕಟ್ಟಿಕೊಂಡಿರುವ ನಿದರ್ಶನಗಳು ಬಹಳಷ್ಟು ಇವೆ. ಈ ಬಾರಿಯೂ ಅಂತಹದೊಂದು ಸ್ಟಾರ್ ವಾರ್‌ಗೆ ಮಂಡ್ಯ ಲೋಕ ಸಭಾ ಕ್ಷೇತ್ರ ಅಖಾಡವಾಗುತ್ತಾ? ಎಂಬ ವಿಚಾರಗಳು ರಾಜಕೀಯ ಪಡಸಾಲೆಯಲ್ಲಿ ಬಹು ಚರ್ಚೆಗೆ ಎಡೆಮಾಡಿಕೊಟ್ಟಿವೆ.
ಕಳೆದ 2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಮೌನವಾಗಿದ್ದ ದಳಪತಿಗಳು ಬಿಜೆಪಿಯೊಂದಿಗಿನ ಮೈತ್ರಿ ಮಾತುಕತೆ ಬಳಿಕ ದಾಳ ಉರುಳಿಸಲು ಆರಂಭಿಸಿರುವುದನ್ನು ನೋಡಿದರೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಟವೆಲ್ ಹಾಕಿ ಸೀಟು ಖಾತರಿ ಮಾಡಿಕೊಳ್ಳುವುದಕ್ಕೆ ಮುಂದಾಗಿರುವುದು ಖಚಿತವಾಗುತ್ತಿದೆ. ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಇರಾದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ಗೆ ರಾಜಕೀಯದಿಂದ ದೂರವಿರಲು ಹೇಳಿದ್ದೇನೆ ಎನ್ನುವಂತಹ ಹೇಳಿಕೆಗಳನ್ನು ನೀಡಿದರೂ ಕೂಡ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿಸಬೇಕೆನ್ನುವ ಮನದಾಸೆಯಂತು ಇದ್ದೇ ಇದೆ. ಆದರೆ ಅದು ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸಾಧ್ಯವಾಗಲಿಲ್ಲ ಎನ್ನುವುದು ಬೇರೆ ಮಾತು. ಈ ಬಾರಿ ಮತ್ತೆ ಪ್ರಯತ್ನ ಮುಂದುವರೆಸಿದರೂ ಅಚ್ಚರಿ ಪಡಬೇಕಾಗಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆಗೆ ಹೋಗುತ್ತಿರುವುದರಿಂದ ಗೆಲುವಿಗೆ ಪೂರಕ ವಾತಾವರಣವಿದೆ ಎನ್ನುವುದು ದಳಪತಿಗಳ ಲೆಕ್ಕಾಚಾರವಾಗಿದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಿಖಿಲ್ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂಬುದು ಕುಮಾರಸ್ವಾಮಿಯಾದಿಯಾಗಿ ಜೆಡಿಎಸ್ ಮುಖಂಡರ ಆಲೋಚನೆಯಾಗಿದೆ. ಸ್ಪರ್ಧಿಸುವಂತೆ ಒತ್ತಡ ತರಲಿರುವ ದಳಪತಿಗಳು ದಳಪತಿಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ದಿನದವರೆಗೂ ಲೋಕಸಭಾ ಚುನಾವಣಾ ಅಭ್ಯರ್ಥಿ ಬಗ್ಗೆ ಜೆಡಿಎಸ್ ಮುಖಂಡರು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರಲಿಲ್ಲ. ಕಾಂಗ್ರೆಸ್ ಕೂಡ ಆ ಬಗ್ಗೆ ಮಾತನಾಡಿರಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ನೀಡಿದ ಕಾರಣದಿಂದ ಮುಂದಿನ ಚುನಾವಣೆಗೂ ಅವರೇ ಅಭ್ಯರ್ಥಿ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದರು.


ದೇಶ

ಎಪ್ಸ್ಟೀನ್ ಫೈಲ್ಸ್‌ನಲ್ಲಿ ಹರ್ದೀಪ್ ಪುರಿ ಹೆಸರು? ಸಂಸತ್ತಿನಲ್ಲಿ ಗದ್ದಲ, ಸಚಿವರ ಸ್ಪಷ್ಟನೆ

ಹೊಸದಿಲ್ಲಿ: ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಜೆಫ್ರಿ ಎಪ್ಸ್ಟೀನ್‌ (Jeffrey Epstein) ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆಗೊಳಿಸಿರುವ ಮಿಲಿಯನ್‌ಗಟ್ಟಲೆ ಇಮೇಲ್‌ಗಳು ಮತ್ತು ದಾಖಲೆಗಳು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಈ ದಾಖಲೆಗಳಲ್ಲಿ ಕೆಲವು ಭಾರತೀಯರ ಹೆಸರುಗಳು ಕಾಣಿಸಿಕೊಂಡಿರುವುದು ಸಂಸತ್ತಿನಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಹೆಸರು ಉಲ್ಲೇಖವಾಗಿರುವುದಾಗಿ ವರದಿಯಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ತಿನೊಳಗೂ ಹೊರಗೂ ಮಾತನಾಡಿದ ಅವರು, ಎಪ್ಸ್ಟೀನ್ ಪ್ರಕರಣದ ಉಲ್ಲೇಖದೊಂದಿಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಹರ್ದೀಪ್ ಪುರಿ, “ನಾನು ಜೆಫ್ರಿ ಎಪ್ಸ್ಟೀನ್ ಅವರನ್ನು ಕೆಲವೇ ಬಾರಿ, ಅದೂ ಔಪಚಾರಿಕ ಸಂದರ್ಭಗಳಲ್ಲಿ ಮಾತ್ರ ಭೇಟಿ ಮಾಡಿದ್ದೇನೆ. ಅವರ ಅಕ್ರಮ ಚಟುವಟಿಕೆಗಳಿಗೆ ನನ್ನೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ಮೂರು ಮಿಲಿಯನ್‌ ಇಮೇಲ್‌ಗಳಲ್ಲಿ ತಮ್ಮ ಹೆಸರು ಕೇವಲ 3-4 ಬಾರಿ ಮಾತ್ರ ಉಲ್ಲೇಖವಾಗಿದೆ. ನಿಯೋಗದ ಭಾಗವಾಗಿ ಕೆಲ ಸಂದರ್ಭಗಳಲ್ಲಿ ಭೇಟಿಯಾಗಿದ್ದು, ಕೇವಲ ಒಂದು ಇಮೇಲ್ ವಿನಿಮಯ ಮಾಡಿಕೊಂಡಿದ್ದೇನೆ ಅಷ್ಟೇ ಹೊರತು, ಯಾವುದೇ ಅಕ್ರಮ ಸಂಬಂಧ ಇಲ್ಲ ಎಂದು ಹೇಳಿದರು.

ಇದೇ ವೇಳೆ, 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ಕುರಿತ ಉಲ್ಲೇಖಗಳನ್ನೂ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. “ಇದು ಅಧಿಕೃತ ಭೇಟಿಯೇ ಹೊರತು, ಉಳಿದ ಉಲ್ಲೇಖಗಳು ಶಿಕ್ಷೆಗೊಳಗಾದ ಅಪರಾಧಿಯ ವ್ಯರ್ಥ ಕಲ್ಪನೆಗಳಾಗಿವೆ” ಎಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಎಪ್ಸ್ಟೀನ್ ಫೈಲ್ಸ್ ಪ್ರಕರಣ ಇದೀಗ ಭಾರತೀಯ ರಾಜಕೀಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಪ್ರತಿಕ್ರಿಯೆಗಳು ಎದುರಾಗುವ ಸಾಧ್ಯತೆ ಇದೆ.

Continue Reading

ಕ್ರೀಡೆ

JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ

ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.

ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.

ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.

ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.

ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.

ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.

ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.

ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Continue Reading

ದೇಶ

LATEST : ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ? ರಿಜುಜು ಕಿಡಿ

ನವದೆಹಲಿ: ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹಕ್ಕುಚ್ಯುತಿ (Breach of Privilege) ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು (Kiren Rijiju) ತಿಳಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವು ‘ಭಾರತ ಮಾತೆಯನ್ನು ಮಾರಿಬಿಟ್ಟಿದೆ’ ಎಂದು ಆರೋಪಿಸಿದ್ದರು. ಭಾರತ–ಅಮೆರಿಕ ವಾಣಿಜ್ಯ ಒಪ್ಪಂದವನ್ನು ‘ಸಂಪೂರ್ಣ ಶರಣಾಗತಿ’ ಎಂದು ಟೀಕಿಸಿದ ಅವರು, ದೇಶದ ಶಕ್ತಿ ಸುರಕ್ಷತೆ ಅಮೆರಿಕಕ್ಕೆ ಒಪ್ಪಿಸಲಾಗಿದೆ ಹಾಗೂ ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಹೇಳಿಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಕಿರಣ್ ರಿಜುಜು, ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಮಂತ್ರಿ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು. “ಭಾರತವನ್ನು ಯಾರೂ ಮಾರಲಾರರು, ಖರೀದಿಸಲಾರರು. ಗಂಭೀರ ಆರೋಪ ಮಾಡಲು ನಿಯಮಾನುಸಾರ ಮುಂಚಿತ ನೋಟಿಸ್ ನೀಡಬೇಕು ಮತ್ತು ಪುರಾವೆ ಸಲ್ಲಿಸಬೇಕು. ಆದರೆ ರಾಹುಲ್ ಗಾಂಧಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡಿದ್ದಾರೆ,” ಎಂದು ರಿಜುಜು ಹೇಳಿದರು.

ಇದಲ್ಲದೆ, ರಾಹುಲ್ ಗಾಂಧಿ ಅವರ ಭಾಷಣದಲ್ಲಿ ದಾಖಲಾಗಿರುವ ತಪ್ಪು ಹೇಳಿಕೆಗಳು ಮತ್ತು ಅಸಭ್ಯ ಪದಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧವೂ ನೋಟಿಸ್ ಇಲ್ಲದೆ ಗಂಭೀರ ಆರೋಪ ಮಾಡಲಾಗಿದೆ ಎಂದು ರಿಜುಜು ತಿಳಿಸಿದರು.

ಈ ಬೆಳವಣಿಗೆಗಳ ನಡುವೆ ಸಂಸತ್ ಕಲಾಪದಲ್ಲಿ ಮತ್ತಷ್ಟು ರಾಜಕೀಯ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ.

Continue Reading

Trending