Connect with us

ರಾಜಕೀಯ

ಜನತಾದರ್ಶನ ಅಲ್ಲ, ಇದು ಬೋಗಸ್ ದರ್ಶನ: ಆರ್. ಅಶೋಕ್ ಲೇವಡಿ

Published

on

ಜನತಾದರ್ಶನ ಅಲ್ಲ, ಇದು ಬೋಗಸ್ ದರ್ಶನ: ಆರ್. ಅಶೋಕ್ ಲೇವಡಿ
ಜನತಾದರ್ಶನ ಅಲ್ಲ, ಇದು ಬೋಗಸ್ ದರ್ಶನ: ಆರ್. ಅಶೋಕ್ ಲೇವಡಿ

ಬೆಂಗಳೂರು: ರಾಜ್ಯ ಸರಕಾರ ಸಂಪೂರ್ಣ ದಿವಾಳಿಯಾಗಿದ್ದು, ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುವುದಾಗಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಗ್ಯಾರೆಂಟಿ ಯೋಜನೆಗಳ ಅರೆಬರೆ ಜಾರಿಯಿಂದ ಬೊಕ್ಕಸ ಬರಿದಾಗಿದೆ. ಹೀಗಾಗಿ ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದೆ ಕೇಂದ್ರದತ್ತ ಬೊಟ್ಟು ತೋರಿಸುತ್ತಿದ್ದಾರೆ. ಇದು ಸಂವೇದನಾ ರಹಿತ ಎಡಬಿಡಂಗಿ ಸರಕಾರ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹರಿಹಾಯ್ದರು. ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅನೇಕ ಜಿಲ್ಲೆಗಳಲ್ಲಿ ಬರಗಾಲದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸರ್ಕಾರದ ಬಣ್ಣ ಬಯಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದರೂ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದರು. 

ಲೆಕ್ಕಪತ್ರ ಮಂಡಿಸಲಿ
ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಮೊದಲು ರಾಜ್ಯ ಸರ್ಕಾರದ ಪಾತ್ರ, ಹೊಣೆಗಾರಿಕೆ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಮೊದಲು ರೈತರ ಸಂಕಷ್ಟಕ್ಕೆ ಧಾವಿಸಿದ್ದೆವು. ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದೆವು. ನಂತರ ಕೇಂದ್ರದ ನೆರವು ಖಜಾನೆಗೆ ಬಂತು. ಆ ಕೆಲಸ ಮಾಡಲು ಇವರಿಗೇನು ದಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಳವೆ ಬಾವಿ ಕೊರೆಸಲು, ಜಾನುವಾರುಗಳಿಗೆ ಮೇವು ಖರೀದಿಸಲು ಆದೇಶವನ್ನು ಹೊರಡಿಸಿಲ್ಲ. ಕನಿಷ್ಟಪಕ್ಷ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಕೇಳಿದರೆ ಎಲ್ಲದಕ್ಕೂ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ ಎಂದರು.

ಬರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ, ಅದು ನಿಜವೇ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಇವರು ಮಾಡಿರುವ ಖರ್ಚು ವೆಚ್ಚ ಮತ್ತು ಹಣಕಾಸಿನ ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆಗ್ರಹಿಸಲಾಗುವುದು ಎಂದರು. 

ಬೋಗಸ್ ದರ್ಶನ
ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯವನ್ನು ಬೋಗಸ್ ದರ್ಶನ ಎಂದು ಲೇವಡಿ ಮಾಡಿದ ಅಶೋಕ್ ಅವರು, ನೆಟ್ಟಗೆ ಕೆಲಸ ಮಾಡದ ಮಂತ್ರಿಗಳನ್ನು ಕರೆಯಿಸಿ ಮೊದಲು ಅವರ ದರ್ಶನ ಮಾಡಬೇಕಿತ್ತು. ಯಾರ್ಯಾರು ಏನು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಖುರ್ಚಿ, ಮೇಜು ಹಾಕಿಸಿ ಮನವಿ ಪತ್ರ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಸಿಎಂ ಸೇರಿದಂತೆ ಎಲ್ಲ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಜನತಾದರ್ಶನ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದಿದ್ದರೆ ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಅದನ್ನು ಬಿಟ್ಟು ಸಿಎಂ ಅವರು ಸೀಮಿತ ಸಂಖ್ಯೆ ಜನರ ಅಹವಾಲು ಕೇಳಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ನಿದ್ದೆಯಿಂದ ಇವತ್ತು ಎದ್ದಿದೆ                                                                                                                          

ದಿಢೀರ್ ಎಂದು ಸಿಎಂ ಅವರು ಜನತಾದರ್ಶನ ಮಾಡುತ್ತಿದ್ದಾರೆ ಎಂದರೆ ಇವತ್ತು ದೀರ್ಘ ಕಾಲದ ನಿದ್ದೆಯಿಂದ ಎದ್ದಿದ್ದಾರೆ ಎಂದು ಅರ್ಥ. ಏಕೆಂದರೆ ಆಡಳಿತ ಸಂಪೂರ್ಣ ನೆಲಕಚ್ಚಿದ್ದು ಅಧಿಕಾರಶಾಹಿ ಜನರ ಶೋಷಣೆಯಲ್ಲಿ ನಿರತವಾಗಿದೆ. ಇದನ್ನು ಗಮನಿಸಿ ಸರಿಪಡಿಸಬೇಕಿದ್ದ ಸಚಿವರು ತೆಲಂಗಾಣ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಕ್ರಾಂತಿ ಆಗಿದೆ ಎಂದು ಬುರುಡೆ ಭಾಷಣ ಬಿಗಿಯುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಡಿದಿರುವ ಬರಗಾಲ ನಿವಾರಣೆಗಾಗಿ ಸಿದ್ದರಾಮಯ್ಯ ಎಲ್ಲಾ ಸಚಿವರನ್ನು ಅಲ್ಲಿಗೆ ನಿಯೋಜಿಸಿದ್ದಾರೆ. ಇಲ್ಲಿ ಜನ ತತ್ತರಿಸುತ್ತಿದ್ದರೂ ಕೇಳುವವರು ದಿಕ್ಕಿಲ್ಲ ಎಂದು ಕಿಡಿಕಾರಿದರು.

ದೇಶ

ಜಮೀರ್ ಅಹ್ಮದ್‌ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!

Published

on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರಿಯ ನಾಯಕನಾಗಿ ಹೊರಹೊಮ್ಮುತ್ತಿರುವ ವಸತಿ ಸಚಿವ Zameer Ahmed Khan ಅವರಿಗೆ ಎಐಸಿಸಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಅವರ ಪ್ರಭಾವವನ್ನು ಗಮನಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಸ್ತುತ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಜಮೀರ್ ಅಹ್ಮದ್, ರಾಜ್ಯದ ಉಪಚುನಾವಣೆಗಳ ಪ್ರಚಾರಕ್ಕೆ ಬರಲು ಸಾಧ್ಯವಾಗದೇ ಬ್ಯುಸಿಯಾಗಿದ್ದಾರೆ. ಕೇರಳದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಅಲ್ಲಿಯೇ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾಗವಹಿಸಲು ಜಮೀರ್ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಕೇರಳದ ಪ್ರಚಾರ ಕಾರ್ಯದಿಂದ ಬಿಡುವಿಲ್ಲ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ Siddaramaiah ಸೂಚನೆ ಇದ್ದರೂ, ಎಐಸಿಸಿ ನಾಯಕತ್ವದಿಂದಲೇ ತಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೂ ನಡುವೆ, ಎಐಸಿಸಿ ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನ ಸದಸ್ಯರಾಗಿ ಜಮೀರ್ ಅಹ್ಮದ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿಗೆ ಕೇರಳದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ನಾಯಕತ್ವದ ಮಟ್ಟದಲ್ಲೂ ಬದಲಾವಣೆ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ.

ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಈ ನೇಮಕಾತಿ ನಡೆದಿದ್ದು, ಜಮೀರ್ ಅವರ ಜನಪ್ರಿಯತೆ ದಿನೇದಿನೇ ಏರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲೂ ಉಪಚುನಾವಣೆಗಳ ನಡುವೆ ಅವರ ಗೈರುಹಾಜರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ಸೋಮಣ್ಣ ವಿರುದ್ಧ ಸಿಎಂ ಸಿಡಿತ: “ಕೆಲಸವಿಲ್ಲದ ಮಂತ್ರಿ!”

Published

on

By

ಬಾಗಲಕೋಟೆ: ಬಿಜೆಪಿ ನಾಯಕ V. Somanna ವಿರುದ್ಧ ಮುಖ್ಯಮಂತ್ರಿ Siddaramaiah ತೀವ್ರ ವಾಗ್ದಾಳಿ ನಡೆಸಿದ್ದು, “ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ, ಅವರಿಗೆ ಯಾವುದೇ ಕಡತ ಹೋಗುವುದಿಲ್ಲ” ಎಂದು ಟೀಕಿಸಿದರು.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ನಾವು ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯವಿಲ್ಲ” ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳ ಸ್ಥಾನ ಕುರಿತು ಬಿಜೆಪಿ ನಾಯಕರು ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ, ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದರು.

ಬಿಜೆಪಿಯ ಮೇಲೆ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, “ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಾತಿನಲ್ಲಿ ಸತ್ಯವಿಲ್ಲ, ನಡೆದಲ್ಲಿ ನಂಬಿಕೆ ಇಲ್ಲ” ಎಂದು ಟೀಕಿಸಿದರು. ಜೊತೆಗೆ, ಪಕ್ಷದಿಂದ ಉಚ್ಛಾಟನೆಯಾದ Basanagouda Patil Yatnal ಅವರನ್ನು ಮತ್ತೆ ಪ್ರಚಾರಕ್ಕೆ ಕರೆತಂದು ಬಳಸಿಕೊಳ್ಳುತ್ತಿರುವುದು ಬಿಜೆಪಿ ದ್ವಂದ್ವ ನೀತಿಗೆ ಉದಾಹರಣೆ ಎಂದು ಹೇಳಿದರು.

ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಮಾತನಾಡಿದ ಅವರು, “ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇವಲ ವಿತರಣೆಯನ್ನು ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ Narendra Modi ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂಬ ಹೇಳಿಕೆಯನ್ನೂ ನೀಡಿದರು.

ಇನ್ನೂ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, Rahul Gandhi, Sonia Gandhi, Mallikarjun Kharge ಮತ್ತು Priyanka Gandhi ಅವರೇ ಪಕ್ಷದ ಹೈಕಮಾಂಡ್ ಎಂದು ಹೇಳಿದರು.

ಒಟ್ಟಿನಲ್ಲಿ, ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.

Continue Reading

ದೇಶ

ಟೂಲ್‌ಕಿಟ್ ದಾಳಿ ಆರೋಪ: ಖರ್ಗೆ ಎಕ್ಸ್ ವಿರುದ್ಧ ಗಂಭೀರ ಪ್ರಶ್ನೆ

Published

on

By

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದ ನಾಯಕರ ಖಾತೆಗಳ ವಿರುದ್ಧ ಟೂಲ್‌ಕಿಟ್ ಮೂಲಕ ಸಂಘಟಿತವಾಗಿ ರಿಪೋರ್ಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಚಿವ Priyank Kharge ಮಾಡಿದ್ದಾರೆ. ಈ ಕುರಿತು ಅವರು X (ಹಳೆಯ ಟ್ವಿಟ್ಟರ್) ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ನನ್ನನ್ನೂ ಒಳಗೊಂಡಂತೆ ಅನೇಕ ವಿರೋಧ ಪಕ್ಷದ ನಾಯಕರ ಖಾತೆಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಟೂಲ್‌ಕಿಟ್ ಮೂಲಕ ಪೋಸ್ಟ್‌ಗಳ ಮೇಲೆ ಸಾಮೂಹಿಕವಾಗಿ ರಿಪೋರ್ಟ್ ಮಾಡುವುದರಿಂದ ಅವುಗಳ ರೀಚ್ ಕಡಿಮೆಯಾಗುತ್ತಿದೆ. ಫೀಡ್‌ಗಳಲ್ಲಿ ಗೋಚರತೆ ಕುಸಿಯುತ್ತಿದೆ” ಎಂದು ಖರ್ಗೆ ಆರೋಪಿಸಿದ್ದಾರೆ. ಜೊತೆಗೆ, ಎಕ್ಸ್ ಪ್ಲಾಟ್‌ಫಾರ್ಮ್ ಸ್ವಯಂ ಅಥವಾ ಹೊರಗಿನ ಒತ್ತಡದಿಂದ ಈ ರೀತಿಯ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಈ ಆರೋಪಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕ Shashi Tharoor ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ಸುಮಾರು ಆರು ವರ್ಷಗಳ ಹಿಂದೆ ನನ್ನ ಫಾಲೋವರ್ಸ್ ಸಂಖ್ಯೆ 8.4 ಮಿಲಿಯನ್ ತಲುಪಿತ್ತು. ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರುತ್ತಿದ್ದರೂ, ಒಟ್ಟು ಸಂಖ್ಯೆ ಕುಸಿಯುತ್ತಿತ್ತು” ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಟ್ವೀಟ್‌ಗಳು ತಮ್ಮ ಫಾಲೋವರ್ಸ್‌ಗಳಿಗೆ ತಲುಪುತ್ತಿಲ್ಲ, ಹೊಸ ಖಾತೆ ತೆರೆದರೂ ರಿಕಮೆಂಡ್ ಆಗುವುದಿಲ್ಲ ಎಂಬ ಗಂಭೀರ ತಾಂತ್ರಿಕ ಸಮಸ್ಯೆಗಳನ್ನೂ ತರೂರ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಆರೋಪಗಳು ಸಾಮಾಜಿಕ ಜಾಲತಾಣಗಳ ನಿಷ್ಪಕ್ಷಪಾತತೆ ಕುರಿತು ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ನೆಟ್ಟಿಗರೂ ಈ ವಿಷಯದ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ವಿಪಕ್ಷಗಳು ತಕ್ಕ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Continue Reading

Trending