Connect with us

ರಾಜ್ಯ

ಗೀತಾ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

Published

on

ಗೀತಾ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
ಗೀತಾ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

 ಮಂಗಳೂರು: ಎಲ್ಲ ಮಕ್ಕಳಿಗೆ ಗೀತೆಯ ಆರಾಧನೆ ಮಾಡಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಗೀತಾ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಉಡುಪಿ ಭಾವಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಮಂಗಳೂರು ಕದ್ರಿ ಕಂಬಳದ ಮಂಜು ಪ್ರಾಸಾದ ನಿವಾಸದಲ್ಲಿ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರಿಂದ ಗುರುವಂದನಾ ಮತ್ತು ಪಟ್ಟದ  ದೇವರ ತುಲಾಭಾರಕ್ಕೆ ಮುನ್ನ ಪುತ್ತಿಗೆಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ಪರ್ಯಾಯ ಅವಧಿ ಜ.೧೮ರಿಂದ ಆರಂಭವಾಗಲಿದೆ. ಅಂದಿನಿಂದ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ನಿರಾತಂಕವಾಗಿ  ನೆರವೇರಿಸಲಾಗುವುದು. ಈ ಅವಧಿಯಲ್ಲಿ ಈಗಾಗಲೇ ಆರಂಭಿಸಿರುವ ಕೋಟಿ ಗೀತಾ ಲೇಖನ ಯಜ್ಞವನ್ನು ಸಮಾಪ್ತಿಗೊಳಿಸಲಾಗುವುದು. ಸುಮಾರು ಒಂದು ಕೋಟಿ ಜ ನತೆ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾವು ಬರೆದ ಭಗವದ್ಗೀತೆ ಶ್ಲೋಕವನ್ನು ಶ್ರೀಕೃಷ್ಣನಿಗೆ ಅರ್ಪಿಸಬೇಕು. ಬಳಿಕ ಅದನ್ನೇ ಪ್ರಸಾದ ರೂಪದಲ್ಲಿ ನೀಡಲಾಗುವುದು. ಆ  ಗೀತಾ ಲೇಖನ ಪುಸ್ತಕವನ್ನು ಮನೆಯ ಪೂಜಾ ಮಂದಿರದಲ್ಲಿ ಇರಿಸಿ ನಿತ್ಯವೂ ಶ್ಲೋಕ ಪಠಣ ಮೂಲಕ ಅರ್ಚಿಸಬೇಕು. ಪ್ರತಿ ಕುಟುಂಬವೂ ಭಗವದ್ಗೀತಾ ಯಜ್ಞದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪುತ್ತಿಗೆಶ್ರೀ ಹೇಳಿದರು.

ಪರ್ಯಾಯ ವೇಳೆ ಐದು ಯೋಜನೆ ಜಾರಿ:

ಈ ಬಾರಿ ನಮ್ಮದು ನಾಲ್ಕನೇ ಪರ್ಯಾಯವಾಗಿದ್ದು, ಇದನ್ನು ವಿಶ್ವ ಗೀತಾ ಪರ್ಯಾಯ ಎಂದು ಕರೆಯುತ್ತೇವೆ. ಈ ಪರ್ಯಾಯದಲ್ಲಿ ಭಗವದ್ಗೀತೆ ಬಗ್ಗೆ ಅರ್ಥಪೂರ್ಣ  ಜಾಗೃತಿ ಮೂಡಿಸಲಾಗುವುದು. ಉಡುಪಿ ಕೃಷ್ಣ ಮಠದ ಗೀತಾ ಮಂದಿರದಲ್ಲಿ ಅಖಂಡ ಗೀತಾ ಪಾರಾಯಣ ನಡೆಸಿ ಕೃಷ್ಣನಿಗೆ ಅರ್ಪಿಸಲಾಗುವುದು. ೭೦೦ ಶ್ಲೋಕಗಳಿಂದ  ಭಗವಗ್ದೀತಾ ಮಹಾಯಾಗ ನಡೆಸಲಾಗುವುದು. ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಆಯೋಜಿಸಲಾಗುವುದು. ಸನ್ಯಾಸ ಸ್ವೀಕರಿಸಿ ೫೦ ವರ್ಷ ಸಲ್ಲುವ ಹಿನ್ನೆಲೆಯಲ್ಲಿ  ಶ್ರೀಕೃಷ್ಣನಿಗೆ ಬಂಗಾರದ ರಥ ಸಮರ್ಪಿಸಲಾಗುವುದು. ಈ ರಥವನ್ನು ಶ್ರೀಕೃಷ್ಣನ ಗರ್ಭಗುಡಿಯ ಸುತ್ತಲೂ ಎಳೆಯಲು ಅವಕಾಶ ಇದೆ. ಮಳೆ ಬಂದರೂ ರಥೋತ್ಸವಕ್ಕೆ  ತೊಂದರೆಯಾಗದು. ಯಾತ್ರಿಗಳ ಅನುಕೂಲಕ್ಕೆ ಉಡುಪಿಯಲ್ಲಿ ೧೦೮ ಕೊಠಡಿಗಳ ಅಷ್ಟೋತ್ತರ ಭವನ ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದರು.

ವಿದೇಶಗಳಲ್ಲೂ ಪುತ್ತಿಗೆ ಮಠ ಶಾಖೆ: 

ದೇಶ, ವಿದೇಶ ಸೇರಿದಂತೆ ಒಟ್ಟು ೧೫ ಕಡೆಗಳಲ್ಲಿ ಪುತ್ತಿಗೆ ಮಠದ ಶಾಖೆ ಇದೆ. ಇದನ್ನು ೧೦೮ ಕಡೆಗಳಿಗೆ ವಿಸ್ತರಿಸಲು ಯೋಚನೆ ಮಾಡಲಾಗಿದೆ. ನಾವು ೨೮  ದೇಶಗಳಲ್ಲಿ ಸಂಚಾರ ಮಾಡಿದ್ದು, ಪ್ರಮುಖ ೬೦ ನಗರಗಳ ಪೈಕಿ ೧೧ ನಗರಗಳಲ್ಲಿ ಶಾಖೆ ಇದೆ. ವಿದ್ಯಾಪೀಠಗಳನ್ನು ತೆರೆದು ಅಲ್ಲಿ ಭಗವದ್ಗೀತೆ ಪ್ರಸಾರಕ್ಕೆ ಯೋಜನೆ  ರೂಪಿಸಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಸಂವಾದ, ಪ್ರವಚನ ಮೂಲಕ ಗೀತೆ ಪ್ರಸಾರ ಮಾಡಲಾಗುತ್ತದೆ ಎಂದರು.

ಮಂಗಳೂರಲ್ಲಿ ವಿಶ್ವಸಂಚಾರ ಸಮಾಪ್ತಿ: 

ಪರ್ಯಾಯ ಪೀಠಾರೋಹಣ ಪೂರ್ವಭಾವಿಯಾಗಿ ಕಳೆದ ಎರಡು ವರ್ಷಗಳಿಂದ ನಾವು ವಿಶ್ವ ಸಂಚಾರ ಕೈಗೊಳ್ಳಲಾಗಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಗಲ್ಫ್  ರಾಷ್ಟ್ರ, ಉತ್ತರ ಹಾಗೂ ದಕ್ಷಿಣ ಭಾರತದ ತೀರ್ಥ ಕ್ಷೇತ್ರಗಳನ್ನು ಸಂಚರಿಸಿ ಶನಿವಾರ ಮಂಗಳೂರಿನಲ್ಲಿ ವಿಶ್ವ ಸಂಚಾರಕ್ಕೆ ಮಂಗಳ ಹಾಡಲಾಗಿದೆ. ಜ.೭ರಂದು  ಮಂಗಳೂರಲ್ಲಿ ಪೌರ ಸನ್ಮಾನ ಸ್ವೀಕರಿಸಿ, ಅಲ್ಲಿಂದ ಜ.೮ರಂದು ಉಡುಪಿ ಪುರಪ್ರವೇಶ ಮಾಡಲಾಗುವುದು. ಬಳಿಕ ಪರ್ಯಾಯ ಮಹೋತ್ಸವದ ವಿಧಿವತ್ತಾದ  ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ಪುತ್ತಿಗೆಶ್ರೀ ಹೇಳಿದರು.

ಪರ್ಯಾಯಕ್ಕೆ ವಿದೇಶಿ ಗಣ್ಯರು:

ಜ.೧೭ರಂದು ನಡೆಯುವ ಪುತ್ತಿಗೆ ಪರ್ಯಾಯದಲ್ಲಿ ಪಾಲ್ಗೊಳ್ಳಲು ವಿದೇಶಿಯರಿಗೂ ಆಹ್ವಾನ ನೀಡಲಾಗಿದೆ. ನಾವು ವಿದೇಶಿ ಸಂಚಾರ ವೇಳೆ ಜಾಗತಿಕ ವಿಶ್ವಶಾಂತಿ ಸಂಘಟ ನೆಗೆ ಮೂರು ಬಾರಿ ಅಧ್ಯಕ್ಷರಾಗಿದ್ದು, ಪ್ಯಾರಿಸ್ ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ಪುತಿನ್, ಪೋಪ್ ಜತೆ ಸಹಿ ಹಾಕಲಾಗಿದೆ. ಹೀಗೆ ವಿದೇಶಗಳಲ್ಲಿ ಗೀತೆ ಪ್ರಸಾರಕ್ಕೆ ಹಲವು  ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಈ ಎಲ್ಲ ಕಾರಣಕ್ಕೆ ವಿದೇಶಿ ಗಣ್ಯರು ಕೂಡ ನಮ್ಮ ಪೀಠಾರೋಹಣಕ್ಕೆ ಸಾಕ್ಷಿಯಾಗಲಿದ್ದಾರೆ. ನಮ್ಮದು ಸಾವಯವ, ಹಸಿರು ಪರ್ಯಾಯ ಎಂದರು.

ಕಲ್ರೂಪ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರೊ.ಎಂ.ಬಿ.ಪುರಾಣಿಕ್, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ದಿವಾನ ಪ್ರಸನ್ನ ಇದ್ದರು.

ದೇಶ

UG CET 2026 ಫಲಿತಾಂಶ ಪ್ರಕಟ; ಇಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಕಾರ್ತಿಕ್‌ಗೆ ಮೊದಲ ರ‍್ಯಾಂಕ್

Published

on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ UG CET 2026 ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಏಪ್ರಿಲ್ 22, 23 ಮತ್ತು 24ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ RV PU College ವಿದ್ಯಾರ್ಥಿನಿ Tanisha Karthik ಮೊದಲ ರ‍್ಯಾಂಕ್ ಪಡೆದು ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಬೆಳ್ತಂಗಡಿಯ Sir M.V. PU College ವಿದ್ಯಾರ್ಥಿ Shrajan ದ್ವಿತೀಯ ರ‍್ಯಾಂಕ್ ಪಡೆದಿದ್ದು, ಬೆಂಗಳೂರಿನ ಜಯನಗರದ ಆರ್‌ವಿ ಪಿಯು ಕಾಲೇಜಿನ Ninad Vasishta ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ಇಂಜಿನಿಯರಿಂಗ್ ವಿಭಾಗದ ಟಾಪ್ 3 ರ‍್ಯಾಂಕ್‌ಗಳು

ರ‍್ಯಾಂಕ್ವಿದ್ಯಾರ್ಥಿ
1ತನಿಷಾ ಕಾರ್ತಿಕ್
2ಶ್ರಾಜನ್
3ನಿನಾದ್ ವಸಿಷ್ಠ

ವೆಟನರಿ ವಿಭಾಗದ ಟಾಪ್ 3

ವೆಟನರಿ ವಿಭಾಗದಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈ ವಿಭಾಗದ ಮೊದಲ ಮೂರು ರ‍್ಯಾಂಕ್‌ಗಳು ಈ ಕೆಳಗಿನಂತಿವೆ:

ರ‍್ಯಾಂಕ್ವಿದ್ಯಾರ್ಥಿ
1ನಯನಾ ಗೋಪಿ
2ಅಮೂಲ್ಯ
3ರಿತ್ವಿಕ್ ಕುಮಾರ್

UG CET ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. ಇಂಜಿನಿಯರಿಂಗ್, ಕೃಷಿ, ವೆಟನರಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಫಲಿತಾಂಶ ಪ್ರಮುಖವಾಗಿದ್ದು, ಮುಂದಿನ ಹಂತದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೀಘ್ರದಲ್ಲೇ ಕೌನ್ಸೆಲಿಂಗ್ ವೇಳಾಪಟ್ಟಿ ಹಾಗೂ ಸೀಟ್ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್ ಮತ್ತು ಅಂಕಗಳನ್ನು ಪರಿಶೀಲಿಸಿ ಮುಂದಿನ ಪ್ರವೇಶ ಪ್ರಕ್ರಿಯೆಗೆ ಸಿದ್ಧರಾಗಬಹುದು.

Continue Reading

ದೇಶ

ಎಸ್‌ಐಆರ್‌ಗೆ ಮುನ್ನ ಆತಂಕ: 2.06 ಲಕ್ಷ ಮತದಾರರ ವಿವರಗಳು ಇನ್ನೂ ದಾಖಲಾಗಿಲ್ಲ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಲು ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ, ಎರಡು ಲಕ್ಷಕ್ಕೂ ಅಧಿಕ ಮತದಾರರ ಮಾಹಿತಿ ಇನ್ನೂ ಮ್ಯಾಪಿಂಗ್ ಆಗದಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಜಿಲ್ಲೆಯ ಒಟ್ಟು 18,05,189 ಮತದಾರರ ಪೈಕಿ 15,98,723 ಮತದಾರರ ಮಾಹಿತಿ ಮಾತ್ರ ಮ್ಯಾಪಿಂಗ್ ಆಗಿದ್ದು, ಇನ್ನೂ 2,06,466 ಮತದಾರರ ಮಾಹಿತಿ ಡಿಜಿಟಲ್ ವ್ಯವಸ್ಥೆಗೆ ಜೋಡಣೆಯಾಗಿಲ್ಲ. ಜಿಲ್ಲಾಡಳಿತದ ಪ್ರಕಾರ, ಮ್ಯಾಪಿಂಗ್ ಕಾರ್ಯದಲ್ಲಿ ಶೇ.88.56ರಷ್ಟು ಪ್ರಗತಿ ಸಾಧನೆಯಾಗಿದೆ.

ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ಆಗದ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನ ಸೆಳೆದಿದೆ. ಮಂಗಳೂರು ದಕ್ಷಿಣದಲ್ಲಿ 63,853 ಹಾಗೂ ಮಂಗಳೂರು ಉತ್ತರದಲ್ಲಿ 50,558 ಮತದಾರರ ಮಾಹಿತಿ ಇನ್ನೂ ದಾಖಲಾಗಿಲ್ಲ. ಉಳಿದಂತೆ ಮೂಡುಬಿದಿರೆ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರಗಳಲ್ಲಿಯೂ ಸಾವಿರಾರು ಮತದಾರರ ಮಾಹಿತಿ ಬಾಕಿಯಿದೆ.

ಜಿಲ್ಲಾಡಳಿತದ ಸ್ಪಷ್ಟನೆ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ H. V. Darshan ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಮ್ಯಾಪಿಂಗ್ ಆಗದಿರುವುದರಿಂದ ಮತದಾರರ ಹೆಸರು ಪಟ್ಟಿಯಿಂದ ಅಳಿಸಲಾಗಿದೆ ಎಂಬ ಅರ್ಥವಲ್ಲ ಎಂದು ಹೇಳಿದ್ದಾರೆ.

ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸಲಿದ್ದಾರೆ. ಜುಲೈ 29ರವರೆಗೆ ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದ್ದು, ನಂತರ ಪರಿಶೀಲನೆ, ಆಕ್ಷೇಪಣೆ ಹಾಗೂ ತಿದ್ದುಪಡಿ ಪ್ರಕ್ರಿಯೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮತದಾರರ ಅನುಕೂಲಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದ್ದು, ಜಿಲ್ಲೆಯಲ್ಲಿ 206 ಬಿಎಲ್‌ಒಗಳು ಮತ್ತು 1,876 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಕಾಂಗ್ರೆಸ್ ಅನುಮಾನ, ಬಿಜೆಪಿ ಎಚ್ಚರಿಕೆ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ Harish Kumar ಅವರು ಈ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಎನ್ಯುಮರೇಷನ್ ಫಾರ್ಮ್ ಸಲ್ಲಿಸದ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಕಾಣಿಸದಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಬಿಜೆಪಿ ಜಿಲ್ಲಾ ಅಧ್ಯಕ್ಷ Satish Kumpala ಅವರು, ಜಿಲ್ಲಾಡಳಿತ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇನ್ನೂ ಉತ್ತರ ಸಿಗದ ಪ್ರಶ್ನೆ

ಪ್ರಸ್ತುತ ಚರ್ಚೆಯ ಕೇಂದ್ರಬಿಂದುವಾಗಿರುವ ಪ್ರಶ್ನೆ ಎಂದರೆ, ಮ್ಯಾಪಿಂಗ್ ಆಗದ 2,06,466 ಮತದಾರರು ಯಾರು? ಅವರು ವಿದೇಶ ಅಥವಾ ಹೊರರಾಜ್ಯಗಳಲ್ಲಿ ವಾಸಿಸುತ್ತಿರುವವರೇ, ಡುಪ್ಲಿಕೇಟ್ ನೋಂದಣಿದಾರರೇ ಅಥವಾ ಮಾಹಿತಿ ಸಂಗ್ರಹಣೆಯ ವೇಳೆ ಕೈತಪ್ಪಿದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಿಗುವ ಸಾಧ್ಯತೆ ಇದೆ.

Continue Reading

ದೇಶ

ಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ

Published

on

ಬೆಂಗಳೂರು: ಮೈಸೂರು ರಸ್ತೆಯ ಕೆಂಗೇರಿ ಎಜುಕೇಷನ್ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ.

ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಖಾಸಗಿ ಕಂಪನಿಯು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆದು ಉಗ್ರಾಣ ಮತ್ತು ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಸ್ಥಳೀಯ ನಿವಾಸಿಗಳಾದ ಎಂ. ಶ್ರೀಕಾಂತ್ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಹಾಗೂ ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜೊತೆಗೆ ಸರ್ಕಾರ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ, ಜಿಬಿಎ ಟ್ರಸ್ಟ್ ಅಧ್ಯಕ್ಷರು ಮತ್ತು ಟ್ರಸ್ಟಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪ್ರಕಾರ, 1957ರಲ್ಲಿ ಸ್ಥಾಪನೆಯಾದ ಕೆಂಗೇರಿ ಎಜುಕೇಷನ್ ಟ್ರಸ್ಟ್‌ಗೆ ಸ್ಥಳೀಯ ನಿವಾಸಿಗಳು ಸುಮಾರು 12 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಸ್ಥಾಪನೆಯಾದ ಕನ್ನಡ ಮಾಧ್ಯಮ ಶಾಲೆಗೆ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನೂ ನೀಡಿತ್ತು.

ಆದರೆ, ಪ್ರಸ್ತುತ ಟ್ರಸ್ಟ್‌ನ ಆಡಳಿತವು ಶಾಲೆಯ ಜಾಗವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಟ್ರಸ್ಟ್ ಭೂಮಿಯಲ್ಲಿ ವ್ಯಾಪಾರಿಗಳಿಗಾಗಿ ಉಗ್ರಾಣ ನಿರ್ಮಾಣ ಹಾಗೂ ಆಟದ ಮೈದಾನದಲ್ಲಿ ಸಾರಿಗೆ ಸಂಸ್ಥೆಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ಇದಲ್ಲದೆ, ಟ್ರಸ್ಟ್‌ನ ಹಣಕಾಸು ದುರ್ಬಳಕೆ ನಡೆಯುತ್ತಿದೆ ಎಂಬ ಆರೋಪವನ್ನೂ ಅರ್ಜಿದಾರರು ಮುಂದಿಟ್ಟಿದ್ದಾರೆ. ಶಿಕ್ಷಣಕ್ಕಾಗಿ ದಾನವಾಗಿ ದೊರೆತ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಯದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ವೇಳೆ ಸಂಬಂಧಪಟ್ಟ ಇಲಾಖೆಗಳಿಂದ ಸಲ್ಲಿಕೆಯಾಗುವ ವರದಿಯ ಆಧಾರದ ಮೇಲೆ ಹೈಕೋರ್ಟ್ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Continue Reading

Trending