ಕ್ರೀಡೆ
ಭಾರತದ ನಂ.1 ಸ್ಥಾನ ಅಲಂಕರಿಸಿದ ಚೆಸ್ ಲೋಕದ ನವತಾರೆ! ಆರ್. ಪ್ರಜ್ಞಾನಂದ.

Tata Steel Masters 2024: ಭಾರತದ ಚೆಸ್ ಚತುರ ಆರ್. ಪ್ರಜ್ಞಾನಂದ ಅವರು 2024 ರ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸೋಲುಣಿಸಿದ್ದಾರೆ. ಈ ಗೆಲುವಿನೊಂದಿಗೆ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಆರ್. ಪ್ರಜ್ಞಾನಂದ ಭಾರತದ ಅಗ್ರ ಶ್ರೇಯಾಂಕಿತ ಚೆಸ್ ಪಟುವಾಗಿ ಹೊರಹೊಮ್ಮಿದ್ದಾರೆ.ಜನವರಿ 16 ರಂದು ನೆದರ್ಲೆಂಡ್ಸ್ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಸ್ಪರ್ಧೆಯಲ್ಲಿ ಆರ್. ಪ್ರಜ್ಞಾನಂದ ಜಾಣ ನಡೆಗಳ ಮೂಲಕ ಗಮನ ಸೆಳೆದರು. ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರ ತಂತ್ರಗಳಿಗೆ ಪ್ರತಿ ಹೆಣೆದ ಪ್ರಜ್ಞಾನಂದ ನಾಲ್ಕನೇ ಸುತ್ತಿನಲ್ಲಿ ಸೋಲುಣಿಸುವಲ್ಲಿ ಯಶಸ್ವಿಯಾದರು.ಈ ಮೂಲಕ ವರ್ಲ್ಡ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ನನ್ನು ಸೋಲಿಸಿದ ಎರಡನೇ ಭಾರತೀಯ ಎನಿಸಿಕೊಂಡರು. ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು. ಇದೀಗ ನಾಲ್ಕನೇ ಶ್ರೇಯಾಂಕಿತ ಚೀನಾದ ಲಿರೆನ್ ವಿರುದ್ಧ ಗೆಲ್ಲುವ ಮೂಲಕ ಆರ್. ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.
ನಂಬರ್-1 ಸ್ಥಾನಕ್ಕೇರಿದ ಪ್ರಜ್ಞಾನಂದ:
ಡಿಂಗ್ ಲಿರೆನ್ ವಿರುದ್ಧದ ಈ ಐತಿಹಾಸಿಕ ಗೆಲುವಿನೊಂದಿಗೆ ಆರ್. ಪ್ರಜ್ಞಾನಂದ FIDE ರ್ಯಾಂಕಿಂಗ್ನಲ್ಲಿ ಭಾರತದ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಆನಂದ್ ಅವರು ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ 2748 ರೇಟಿಂಗ್ನೊಂದಿಗೆ 11ನೇ ಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 2748.3 ರೇಟಿಂಗ್ನೊಂದಿಗೆ ಮೇಲೇರಿದ್ದಾರೆ.ಈ ಮೂಲಕ ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ನಂಬರ್ ಚೆಸ್ ಪಟುವಾಗಿ ಆರ್. ಪ್ರಜ್ಞಾನಂದ ಹೊರಹೊಮ್ಮಿದ್ದಾರೆ. ಇನ್ನು ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮ್ಯಾಗ್ನಸ್ ಕಾರ್ಲ್ಸೆನ್. ನಾರ್ವೆಯ ಚೆಸ್ ತಾರೆ ಒಟ್ಟು 2830 ರೇಟಿಂಗ್ ಪಡೆಯುವ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.