ಚುನಾವಣೆ
ಭಾರತದಲ್ಲಿ ಚುನಾವಣೆ ಸ್ಪರ್ಧಿಸಲು ಎಷ್ಟು ಹಣ ಬೇಕು? ನಿರ್ಮಲಾ ಹೇಳಿಕೆಯಿಂದ ಮೂಡಿದ ಪ್ರಶ್ನೆಗೆ ಇಲ್ಲಿದೆ ಉತ್ತರ
ನವದೆಹಲಿ, ಮಾರ್ಚ್ 29: ‘ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸಲು ಬೇಕಾದಷ್ಟು ಹಣ ನನ್ನ ಬಳಿ ಇಲ್ಲ. ಹಾಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಡಿರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ದೇಶದ ಹಣಕಾಸು ಸಚಿವರೇ ಚುನಾವಣೆ ಎದುರಿಸಲು ಬೇಕಾದಷ್ಟು ಹಣವಿಲ್ಲ ಎಂದು ಹೇಳುತ್ತಾರೆ ಎಂದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ದುಡ್ಡು ಬೇಕಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.
ಹಣಕಾಸು ಖಾತೆಯನ್ನೇ ಹೊಂದಿರುವ ಕೇಂದ್ರ ಸಚಿವರ ಬಳಿ ಚುನಾವಣೆಯಲ್ಲಿ ಸೆಣಸಲು ಬೇಕಾದಷ್ಟು ಹಣವಿಲ್ಲದಿದ್ದರೆ, ಭಾರತದಲ್ಲಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯ ಬಳಿ ಎಷ್ಟು ಹಣ ಬೇಕಾಗುತ್ತದೆ? ಈ ಬಗ್ಗೆ ತಿಳಿಯುವ ಪ್ರಯತ್ನ ಇಲ್ಲಿದೆ.
ಚುನಾವಣೆಗೆ ಸ್ಪರ್ಧಿಸುವ ವೆಚ್ಚವು ಅಭ್ಯರ್ಥಿಯ ಸಂಪತ್ತಿನ ಮೇಲೆ ಅವಲಂಬಿತವಾಗಿರುವುದೇನೋ ನಿಜ. ಆದರೆ ಭಾರತದ ಚುನಾವಣಾ ಆಯೋಗದ ಕೂಡ ಚುನಾವಣಾ ವೆಚ್ಚದ ಮೇಲೆ ಮಿತಿ ನಿಗದಿಪಡಿಸಿದೆ.
ಲೋಕಸಭೆಗೆ ಚುನಾವಣೆಗೆ 95 ಲಕ್ಷ ರೂ. ಮಿತಿ
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರಗಳಲ್ಲಾದರೆ 95 ಲಕ್ಷ ರೂ.ವರೆಗೆ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚು ಮಾಡುವಂತಿಲ್ಲ. ಸಣ್ಣ ಕ್ಷೇತ್ರಗಳಲ್ಲಾದರೆ 75 ಲಕ್ಷ ರೂಪಾಯಿವರೆಗೆ ಖರ್ಚು ಮಾಡಬಹುದು.
ವಿಧಾನಸಭಾ ಚುನಾವಣೆ ವೇಳೆ ದೊಡ್ಡ ಕ್ಷೇತ್ರಗಳ ಅಭ್ಯರ್ಥಿಯ ಚುನಾವಣಾ ಖರ್ಚಿನ ಮಿತಿ 40 ಲಕ್ಷ ರೂ. ಇದ್ದರೆ, ಚಿಕ್ಕದಾದ ಮತ್ತು ಕಡಿಮೆ ಮತದಾರರಿರುವ ಕ್ಷೇತ್ರಗಳ ಅಭ್ಯರ್ಥಿಯ ಚುನಾವಣಾ ಖರ್ಚಿನ ಮಿತಿ 20 ಲಕ್ಷ ರೂ. ಆಗಿದೆ.
ಆದರೆ ವಾಸ್ತವದಲ್ಲಿ, ಈ ಮಿತಿಯನ್ನು ಅನುಸರಿಸುತ್ತಿರುವುದು ವಿರಳ ಎಂದೇ ಹೇಳಬೇಕಷ್ಟೆ. ಪ್ರಚಾರದ ವೆಚ್ಚದ ಹೊರತಾಗಿ, ಮತದಾರರಿಗೆ ಆಮಿಷವೊಡ್ಡಲು ಅಭ್ಯರ್ಥಿಗಳು ಉಚಿತ ಕೊಡುಗೆಗಳಿಗಾಗಿ ವಿಪರೀತ ಖರ್ಚು ಮಾಡುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣಾ ಸಂದರ್ಭದಲ್ಲಿ ಆಯೋಗದ ಅಧಿಕಾರಿಗಳು ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಳ್ಳುವ ನಗದು, ಆಭರಣ, ಗೃಹ ಬಳಕೆಯ ವಸ್ತುಗಳು ಹಾಗೂ ಇತರ ವಸ್ತುಗಳಿಂದ ಇದನ್ನು ತಿಳಿಯಬಹುದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಲೋಕಸಭೆ ಚುನಾವಣೆಯಷ್ಟು ಹಣ ಖರ್ಚು ಮಾಡಬೇಕಾಗಿ ಬರುವುದಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ನಿರ್ಮಲಾ ಸೀತಾರಾಮನ್ 2016 ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಫಿಡವಿಟ್‌ನಲ್ಲಿ ಸುಮಾರು 2.5 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯ ಘೋಷಿಸಿದ್ದರು.
ಡಿಕೆ ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಈವರೆಗೆ ಆಸ್ತಿ ವಿವರ ಘೋಷಿಸಿರುವವರಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ 593 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇವರು ಕಣದಲ್ಲಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಇನ್ನುಳಿದಂತೆ, ಈರೋಡ್ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಅಶೋಕ್ ಕುಮಾರ್ 583 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಪ್ರಸ್ತುತ ಚುನಾವಣೆಗಳು ಮತ್ತು ಹಣದ ನಡುವಣ ನಂಟು ಹೆಚ್ಚಾಗಿದೆ. ಅಭ್ಯರ್ಥಿಗಳು ಎಷ್ಟು ಶ್ರೀಮಂತರಾಗಿದ್ದಾರೆಯೋ, ಚುನಾವಣೆಯಲ್ಲಿ ಸ್ಪರ್ಧಿಸುವುದು ಅಷ್ಟು ಸುಲಭವಾಗುತ್ತದೆ. ಆದರೆ, ಶ್ರೀಮಂತರಾಗಿದ್ದ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲುವು ಖಾತರಿಯಾಗದು. ಕಳೆದ ಚುನಾವಣೆಯಲ್ಲಿ ಕೆಲವು ಶ್ರೀಮಂತ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವ ಉದಾಹರಣೆಗಳಿವೆ.
ಚುನಾವಣೆ
Bhabanipur Shock: 700 ಮತದಾರರ ಬೂತ್‌ನಲ್ಲಿ ಮಮತಾ ಬ್ಯಾನರ್ಜಿ ಪಡೆದದ್ದು ಕೇವಲ 28 ಮತ!
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಮುಖ್ಯಮಂತ್ರಿ Mamata Banerjee ಅವರಿಗೆ ಭಾರೀ ಹಿನ್ನಡೆಯಾಗಿದೆ. ಟಿಎಂಸಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ Suvendu Adhikari ಐತಿಹಾಸಿಕ ಜಯ ಸಾಧಿಸಿದ್ದು, ಮಮತಾ ಬ್ಯಾನರ್ಜಿ ಅವರ ಸ್ವಂತ ವಾರ್ಡ್‌ನಲ್ಲಿಯೇ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬೂತ್‌ವಾರು ಅಂಕಿ-ಅಂಶಗಳ ಪ್ರಕಾರ, ಭವಾನಿಪುರ ಕ್ಷೇತ್ರದ 267 ಬೂತ್‌ಗಳ ಪೈಕಿ 207 ಬೂತ್‌ಗಳಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸವಿರುವ ವಾರ್ಡ್ ನಂಬರ್ 73ರಲ್ಲಿ ಸುವೇಂದು ಅಧಿಕಾರಿ 8,932 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ ಕೇವಲ 4,284 ಮತಗಳಿಗೆ ಸೀಮಿತರಾಗಿದ್ದಾರೆ.
ಚುನಾವಣೆಗೆ ಮುನ್ನ Amit Shah ಬಿಜೆಪಿ ಕಾರ್ಯಕರ್ತರಿಗೆ “ಮಮತಾ ಬ್ಯಾನರ್ಜಿಯನ್ನು ಅವರದೇ ಕೋಟೆಯಲ್ಲಿ ಸೋಲಿಸಿ” ಎಂದು ಕರೆ ನೀಡಿದ್ದರು. ಇದೀಗ ಸುವೇಂದು ಅಧಿಕಾರಿ ಆ ಸವಾಲನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ ಎಂದು ಬಿಜೆಪಿ ಪಾಳಯದಲ್ಲಿ ಸಂಭ್ರಮ ವ್ಯಕ್ತವಾಗಿದೆ.
ಸುವೇಂದು ಅಧಿಕಾರಿಗೆ ದಕ್ಷಿಣ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಮೊದಲಿನಿಂದ ರಾಜಕೀಯ ನೆಲೆ ಕಡಿಮೆ ಇತ್ತು. ಆದರೂ ಕ್ಷೇತ್ರದಲ್ಲಿ ಶೇಕಡಾ 63 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮಮತಾ ಬ್ಯಾನರ್ಜಿ ಕೇವಲ ಶೇಕಡಾ 30 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.
ಇನ್ನು ಹಲವು ಬೂತ್‌ಗಳಲ್ಲಿ ಮಮತಾ ಬ್ಯಾನರ್ಜಿ 50 ಮತಗಳ ಗಡಿ ದಾಟಲೂ ವಿಫಲರಾಗಿರುವುದು ಟಿಎಂಸಿ ಪಾಳಯಕ್ಕೆ ದೊಡ್ಡ ಆಘಾತವಾಗಿದೆ. 2021ರ ಉಪಚುನಾವಣೆಯಲ್ಲಿ ಏಳು ವಾರ್ಡ್‌ಗಳಲ್ಲೂ ಗೆದ್ದಿದ್ದ ದೀದಿ, ಈ ಬಾರಿ ತಮ್ಮ ಹಿಡಿತವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅಂತಿಮವಾಗಿ ಮಮತಾ ಬ್ಯಾನರ್ಜಿ 58,812 ಮತಗಳನ್ನು ಪಡೆದರೆ, ಸುವೇಂದು ಅಧಿಕಾರಿ 73,917 ಮತಗಳನ್ನು ಪಡೆದು ಟಿಎಂಸಿ ಕೋಟೆಯನ್ನು ಧೂಳೀಪಟ ಮಾಡಿದ್ದಾರೆ.
ಚುನಾವಣೆ
ಜಿಬಿಎ ಚುನಾವಣೆಗೆ ಕೌಂಟ್‌ಡೌನ್ ಶುರು! ಜೂನ್‌ನಲ್ಲಿ ಡೇಟ್ ಫಿಕ್ಸ್
ಬೆಂಗಳೂರು: ಬಹುನಿರೀಕ್ಷಿತ Greater Bengaluru Authority (GBA) ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ G. A. Sangreshi ಸೂಚನೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ Maheshwar Rao ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಭೆಗೆ ಗೈರಾಗಿದ್ದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಎ ಸಂಗ್ರೇಶಿ, “ರಾಜ್ಯ ಚುನಾವಣಾ ಆಯೋಗ ಮತ್ತು ಜಿಬಿಎ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸುವುದು ಕಾನೂನುಬದ್ಧ ಪ್ರಕ್ರಿಯೆ. ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ದಿನಾಂಕ ನಿಗದಿ ಮಾತ್ರ ಬಾಕಿಯಿದೆ” ಎಂದು ತಿಳಿಸಿದರು.
ಜನಗಣತಿ, ಮನೆ ಸಮೀಕ್ಷೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆ ಸಮಯ ಪರಿಶೀಲಿಸಿ ದಿನಾಂಕ ಘೋಷಿಸುವಂತೆ ಜಿಬಿಎಗೆ ಸೂಚಿಸಲಾಗಿದೆ. ಆದರೆ ಜೂನ್ 30ರೊಳಗೆ ಚುನಾವಣೆ ದಿನಾಂಕ ನಿಗದಿಪಡಿಸಲೇಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಬೇಕಿರುವುದಾಗಿ ಆಯುಕ್ತರು ಹೇಳಿದರು.
ಇನ್ನೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು. ಚುನಾವಣಾ ಕಾರ್ಯಕ್ಕಾಗಿ RO, AERO ಮತ್ತು BLOಗಳ ನೇಮಕಾತಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚುನಾವಣೆ
‘ನೀವು ಸೋತಿಲ್ಲ, ಗೆದ್ದಿದ್ದೀರಿ’ – ಮಮತಾ ಭೇಟಿ ಬಳಿಕ ಅಖಿಲೇಶ್ ಯಾದವ್ ಹೇಳಿಕೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ Akhilesh Yadav ಕೋಲ್ಕತ್ತಾಗೆ ಭೇಟಿ ನೀಡಿ Mamata Banerjee ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಗುರುವಾರ ಕಾಲಿಘಾಟ್‌ನಲ್ಲಿರುವ ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಭೇಟಿಯ ವೇಳೆ ಅಖಿಲೇಶ್ ಯಾದವ್, “ನೀವು ಸೋತಿಲ್ಲ, ಗೆದ್ದಿದ್ದೀರಿ” ಎಂದು ಹೇಳಿ ಮಮತಾಗೆ ಸನ್ಮಾನ ಸಲ್ಲಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಬಂಗಾಳದಲ್ಲಿ ಚುನಾವಣೆಗಳನ್ನು ಉತ್ತರ ಪ್ರದೇಶ ಮಾದರಿಯಲ್ಲಿ ನಡೆಸಲಾಗಿದ್ದು, ಬೆದರಿಕೆ ಹಾಗೂ ಕುತಂತ್ರದ ರಾಜಕಾರಣ ಬಳಸಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ, ಚುನಾವಣಾ ಆಯೋಗ ಹಾಗೂ ಭೂಗತ ಶಕ್ತಿಗಳ ಸಂಚುಗಳಿಂದ ಚುನಾವಣೆ ಪ್ರಭಾವಿತವಾಗಿದೆ ಎಂದು ಆರೋಪಿಸಿದರು.
ಅಲ್ಲದೇ, ಮಮತಾ ಬ್ಯಾನರ್ಜಿ ಮತ್ತು Abhishek Banerjee ಅವರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎಂದು ಟೀಕಿಸಿದರು. ದೇಶದ ಪ್ರಜಾಪ್ರಭುತ್ವ ಶಕ್ತಿಗಳು ಒಂದಾಗಬೇಕೆಂದು ಕರೆ ನೀಡಿದರು.
ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ ಟಿಎಂಸಿ ಕೇವಲ 80 ಸ್ಥಾನಗಳಲ್ಲಿ ಜಯ ಸಾಧಿಸಿತು. ಬಿಜೆಪಿ 207 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ.
ಟಿಎಂಸಿ ಸೋಲಿನ ಬಳಿಕ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವುದು ಇದೀಗ ದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
-
ಅಪರಾಧ20 minutes agoಕಾರು ಓಡಿಸುವ ವಿಚಾರಕ್ಕೆ ಮಾರಾಮಾರಿ: ಕೃಷ್ಣ ಮಠದಲ್ಲಿ ಗಲಾಟೆ
-
ದೇಶ56 minutes ago4,399 ದಿನಗಳ ನಿರಂತರ ಆಡಳಿತ: ಮೋದಿ ಹೊಸ ದಾಖಲೆ ಸ್ಥಾಪನೆ
-
ದೇಶ4 hours agoಕನಕಪುರದಲ್ಲಿ ಡಿಕೆಶಿ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ
-
ಅಪರಾಧ4 hours agoಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
-
ಅಪರಾಧ4 hours agoಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
-
ಕ್ರೀಡೆ44 minutes agoಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್ಬಾಲ್ ಜ್ವರದಲ್ಲಿ
-
ದೇಶ4 hours agoಅಣ್ವಸ್ತ್ರ ಶಕ್ತಿಯಲ್ಲಿ ಭಾರತ ಹೊಸ ಮೈಲಿಗಲ್ಲು? ಅಂತಾರಾಷ್ಟ್ರೀಯ ವರದಿ ಬಹಿರಂಗ
