ಚುನಾವಣೆ
ಕಾಂಗ್ರೆಸ್‌ಗೆ ಆಘಾತ ನೀಡಿದ ಸಿವೋಟರ್ ಸಮೀಕ್ಷೆ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಅತಿಹೆಚ್ಚು ಸ್ಥಾನ
ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಳೆದ ಬಾರಿಯಂತೆಯೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಕಸರತ್ತು ನಡೆಸುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಏಕಾಂಕಿ ಹೋರಾಟಕ್ಕೆ ಮುಂದಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಕಾಂಗ್ರೆಸ್ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಕೂಡ ಒಂದೇ ಒಂದು ಸ್ಥಾನ ಗೆದ್ದುಕೊಂಡಿತ್ತು. ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದರು.
ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಇದ್ದು, ಚುನಾವಣಾ ಪೂರ್ವ ಸಿವೋಟರ್ ಸಮೀಕ್ಷೆಯು ಬಿಜೆಪಿಗೆ ಸಿಹಿಸುದ್ದಿ ನೀಡಿದ್ದು, ಕಾಂಗ್ರೆಸ್‌ಗೆ ಭಾರಿ ಆಘಾತ ಉಂಟಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 21, ಎನ್‌ಡಿಎ ಮೈತ್ರಿಕೂಟದ ಪಾಲುದಾರ ಜೆಡಿಎಸ್‌ಗೆ 2 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿದೆ.
ಈ ಮಧ್ಯೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್‌ಗೆ ಕೇವಲ 5 ಸ್ಥಾನಗಳು ಸಿಗಲಿದೆ ಎಂದು ಸಿವೋಟರ್‌ನ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ. ರಾಜ್ಯದ ಬಿಜೆಪಿ ನಾಯಕರು ಈ ಸಮೀಕ್ಷೆಯನ್ನು ಸಂಭ್ರಮಿಸಿದ್ದರೆ, ಕಾಂಗ್ರೆಸ್ ನಾಯಕರು ಇದನ್ನು ತಿರಸ್ಕರಿಸಿದ್ದಾರೆ.
‘ರಾಜ್ಯದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಜೆಡಿಎಸ್ ಜೊತೆಗಿನ ಮೈತ್ರಿ ಕರ್ನಾಟಕದಲ್ಲಿ ನಮ್ಮ ಬಲವನ್ನು ದ್ವಿಗುಣಗೊಳಿಸಿದೆ. ಆದಾಗ್ಯೂ, ನಮ್ಮ ನಿರೀಕ್ಷೆಯು ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಟಿಎನ್ಐಇಗೆ ತಿಳಿಸಿದ್ದಾರೆ.
ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಬಿಕೆ ಹರಿಪ್ರಸಾದ್ ಮಾತನಾಡಿ, ‘ಚುನಾವಣೆ ಪೂರ್ವ ಸಮೀಕ್ಷೆಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಏಕೆಂದರೆ, ಅನೇಕ ಸಂದರ್ಭಗಳಲ್ಲಿ ಅವುಗಳು ತಮ್ಮನ್ನು ನೇಮಿಸಿಕೊಳ್ಳುವ ಏಜೆನ್ಸಿಯತ್ತ ಒಲವು ತೋರಿರುತ್ತಾರೆ’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಮಾತನಾಡಿ, ಈ ಸಮೀಕ್ಷೆಯನ್ನು ನಾವು ಹೇಗೆ ನಂಬುವುದು? 2023ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಸಿವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 83ರಿಂದ 95 ಸ್ಥಾನಗಳನ್ನು ನೀಡಿತ್ತು. ಆದರೆ, ಬಿಜೆಪಿ ಕೇವಲ 66 ಸ್ಥಾನಗಳನ್ನು ಗಳಿಸಿದೆ ಎಂದು ಹೇಳಿದರು.
ಅದೇ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 110-112 ಸ್ಥಾನಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಬಾರಿ ಅದರ ಭವಿಷ್ಯ ನಿಜವಾಗಲಿಲ್ಲ. ಈ ಬಾರಿಯೂ ವಿಫಲವಾಗಲಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ತಿಳಿಸಿದರು.
ಈ ಸಮೀಕ್ಷೆ ವರದಿ ಕುರಿತು ಪ್ರತಿಕ್ರಿಯಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ನಿರಾಕರಿಸಿದ್ದಾರೆ.
ಚುನಾವಣೆ
Bhabanipur Shock: 700 ಮತದಾರರ ಬೂತ್‌ನಲ್ಲಿ ಮಮತಾ ಬ್ಯಾನರ್ಜಿ ಪಡೆದದ್ದು ಕೇವಲ 28 ಮತ!
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಮುಖ್ಯಮಂತ್ರಿ Mamata Banerjee ಅವರಿಗೆ ಭಾರೀ ಹಿನ್ನಡೆಯಾಗಿದೆ. ಟಿಎಂಸಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ Suvendu Adhikari ಐತಿಹಾಸಿಕ ಜಯ ಸಾಧಿಸಿದ್ದು, ಮಮತಾ ಬ್ಯಾನರ್ಜಿ ಅವರ ಸ್ವಂತ ವಾರ್ಡ್‌ನಲ್ಲಿಯೇ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬೂತ್‌ವಾರು ಅಂಕಿ-ಅಂಶಗಳ ಪ್ರಕಾರ, ಭವಾನಿಪುರ ಕ್ಷೇತ್ರದ 267 ಬೂತ್‌ಗಳ ಪೈಕಿ 207 ಬೂತ್‌ಗಳಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸವಿರುವ ವಾರ್ಡ್ ನಂಬರ್ 73ರಲ್ಲಿ ಸುವೇಂದು ಅಧಿಕಾರಿ 8,932 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ ಕೇವಲ 4,284 ಮತಗಳಿಗೆ ಸೀಮಿತರಾಗಿದ್ದಾರೆ.
ಚುನಾವಣೆಗೆ ಮುನ್ನ Amit Shah ಬಿಜೆಪಿ ಕಾರ್ಯಕರ್ತರಿಗೆ “ಮಮತಾ ಬ್ಯಾನರ್ಜಿಯನ್ನು ಅವರದೇ ಕೋಟೆಯಲ್ಲಿ ಸೋಲಿಸಿ” ಎಂದು ಕರೆ ನೀಡಿದ್ದರು. ಇದೀಗ ಸುವೇಂದು ಅಧಿಕಾರಿ ಆ ಸವಾಲನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ ಎಂದು ಬಿಜೆಪಿ ಪಾಳಯದಲ್ಲಿ ಸಂಭ್ರಮ ವ್ಯಕ್ತವಾಗಿದೆ.
ಸುವೇಂದು ಅಧಿಕಾರಿಗೆ ದಕ್ಷಿಣ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಮೊದಲಿನಿಂದ ರಾಜಕೀಯ ನೆಲೆ ಕಡಿಮೆ ಇತ್ತು. ಆದರೂ ಕ್ಷೇತ್ರದಲ್ಲಿ ಶೇಕಡಾ 63 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮಮತಾ ಬ್ಯಾನರ್ಜಿ ಕೇವಲ ಶೇಕಡಾ 30 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.
ಇನ್ನು ಹಲವು ಬೂತ್‌ಗಳಲ್ಲಿ ಮಮತಾ ಬ್ಯಾನರ್ಜಿ 50 ಮತಗಳ ಗಡಿ ದಾಟಲೂ ವಿಫಲರಾಗಿರುವುದು ಟಿಎಂಸಿ ಪಾಳಯಕ್ಕೆ ದೊಡ್ಡ ಆಘಾತವಾಗಿದೆ. 2021ರ ಉಪಚುನಾವಣೆಯಲ್ಲಿ ಏಳು ವಾರ್ಡ್‌ಗಳಲ್ಲೂ ಗೆದ್ದಿದ್ದ ದೀದಿ, ಈ ಬಾರಿ ತಮ್ಮ ಹಿಡಿತವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಅಂತಿಮವಾಗಿ ಮಮತಾ ಬ್ಯಾನರ್ಜಿ 58,812 ಮತಗಳನ್ನು ಪಡೆದರೆ, ಸುವೇಂದು ಅಧಿಕಾರಿ 73,917 ಮತಗಳನ್ನು ಪಡೆದು ಟಿಎಂಸಿ ಕೋಟೆಯನ್ನು ಧೂಳೀಪಟ ಮಾಡಿದ್ದಾರೆ.
ಚುನಾವಣೆ
ಜಿಬಿಎ ಚುನಾವಣೆಗೆ ಕೌಂಟ್‌ಡೌನ್ ಶುರು! ಜೂನ್‌ನಲ್ಲಿ ಡೇಟ್ ಫಿಕ್ಸ್
ಬೆಂಗಳೂರು: ಬಹುನಿರೀಕ್ಷಿತ Greater Bengaluru Authority (GBA) ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ G. A. Sangreshi ಸೂಚನೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ Maheshwar Rao ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಭೆಗೆ ಗೈರಾಗಿದ್ದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಎ ಸಂಗ್ರೇಶಿ, “ರಾಜ್ಯ ಚುನಾವಣಾ ಆಯೋಗ ಮತ್ತು ಜಿಬಿಎ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸುವುದು ಕಾನೂನುಬದ್ಧ ಪ್ರಕ್ರಿಯೆ. ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ದಿನಾಂಕ ನಿಗದಿ ಮಾತ್ರ ಬಾಕಿಯಿದೆ” ಎಂದು ತಿಳಿಸಿದರು.
ಜನಗಣತಿ, ಮನೆ ಸಮೀಕ್ಷೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆ ಸಮಯ ಪರಿಶೀಲಿಸಿ ದಿನಾಂಕ ಘೋಷಿಸುವಂತೆ ಜಿಬಿಎಗೆ ಸೂಚಿಸಲಾಗಿದೆ. ಆದರೆ ಜೂನ್ 30ರೊಳಗೆ ಚುನಾವಣೆ ದಿನಾಂಕ ನಿಗದಿಪಡಿಸಲೇಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಬೇಕಿರುವುದಾಗಿ ಆಯುಕ್ತರು ಹೇಳಿದರು.
ಇನ್ನೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು. ಚುನಾವಣಾ ಕಾರ್ಯಕ್ಕಾಗಿ RO, AERO ಮತ್ತು BLOಗಳ ನೇಮಕಾತಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚುನಾವಣೆ
‘ನೀವು ಸೋತಿಲ್ಲ, ಗೆದ್ದಿದ್ದೀರಿ’ – ಮಮತಾ ಭೇಟಿ ಬಳಿಕ ಅಖಿಲೇಶ್ ಯಾದವ್ ಹೇಳಿಕೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ Akhilesh Yadav ಕೋಲ್ಕತ್ತಾಗೆ ಭೇಟಿ ನೀಡಿ Mamata Banerjee ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಗುರುವಾರ ಕಾಲಿಘಾಟ್‌ನಲ್ಲಿರುವ ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಭೇಟಿಯ ವೇಳೆ ಅಖಿಲೇಶ್ ಯಾದವ್, “ನೀವು ಸೋತಿಲ್ಲ, ಗೆದ್ದಿದ್ದೀರಿ” ಎಂದು ಹೇಳಿ ಮಮತಾಗೆ ಸನ್ಮಾನ ಸಲ್ಲಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಬಂಗಾಳದಲ್ಲಿ ಚುನಾವಣೆಗಳನ್ನು ಉತ್ತರ ಪ್ರದೇಶ ಮಾದರಿಯಲ್ಲಿ ನಡೆಸಲಾಗಿದ್ದು, ಬೆದರಿಕೆ ಹಾಗೂ ಕುತಂತ್ರದ ರಾಜಕಾರಣ ಬಳಸಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ, ಚುನಾವಣಾ ಆಯೋಗ ಹಾಗೂ ಭೂಗತ ಶಕ್ತಿಗಳ ಸಂಚುಗಳಿಂದ ಚುನಾವಣೆ ಪ್ರಭಾವಿತವಾಗಿದೆ ಎಂದು ಆರೋಪಿಸಿದರು.
ಅಲ್ಲದೇ, ಮಮತಾ ಬ್ಯಾನರ್ಜಿ ಮತ್ತು Abhishek Banerjee ಅವರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಬಿಜೆಪಿ ಮಹಿಳಾ ವಿರೋಧಿ ಪಕ್ಷ ಎಂದು ಟೀಕಿಸಿದರು. ದೇಶದ ಪ್ರಜಾಪ್ರಭುತ್ವ ಶಕ್ತಿಗಳು ಒಂದಾಗಬೇಕೆಂದು ಕರೆ ನೀಡಿದರು.
ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ ಟಿಎಂಸಿ ಕೇವಲ 80 ಸ್ಥಾನಗಳಲ್ಲಿ ಜಯ ಸಾಧಿಸಿತು. ಬಿಜೆಪಿ 207 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ.
ಟಿಎಂಸಿ ಸೋಲಿನ ಬಳಿಕ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿ ಬೆಂಬಲಕ್ಕೆ ನಿಂತಿರುವುದು ಇದೀಗ ದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
