ದೇಶ
ಜೂನ್ 8 ರಂದು ಪ್ರಮಾಣ ವಚನ – ಮೋದಿಗೂ ಸಂಖ್ಯೆ 8ಕ್ಕೂ ಏನು ಸಂಬಂಧ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂನ್ 8 ರ ರಾತ್ರಿ 8 ಗಂಟೆಯ ವೇಳೆಗೆ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಮತ್ತು ಸಂಖ್ಯೆ 8ಕ್ಕೆ (Number 8) ಅವಿನಾಭಾವ ಸಂಬಂಧವಿದೆ. ಬಹುತೇಕ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯಕ್ರಮಗಳು 8 ರಂದೇ ಆರಂಭವಾಗಿತ್ತು. ಸಂಖ್ಯಾಶಾಸ್ತ್ರದಲ್ಲಿ 8ನೇ ಸಂಖ್ಯೆಯು ಶನಿ ಗ್ರಹವನ್ನು ಸೂಚಿಸಿದರೂ ಎಂಟನೇ ಸಂಖ್ಯೆಯು ರಾಜಯೋಗದ ಸಂಕೇತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ರಾಜ ರೀತಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ರೀತಿಯ ಮಂಗಳಕರ ಯೋಗ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಮೂಲಾಂಕ 8 ಆಗಿರುವಂತಹ ಜನರು ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತಾರೆ ಹಾಗೂ ಶನಿ ಕೂಡ ನ್ಯಾಯದ ಪ್ರಕಾರವಾಗಿ ಅವರ ಪರಿಶ್ರಮಕ್ಕೆ ತಕ್ಕಂತಹ ಪ್ರತಿಫಲವನ್ನು ಕರುಣಿಸುತ್ತಾನೆ. ಶನಿ ಉಚ್ಚಸ್ಥಾನದಲ್ಲಿದ್ದವರಿಗೆ ಯಶಸ್ಸು ತಡವಾಗಿ ಲಭಿಸುತ್ತದೆ. ಆದರೆ ಸಿಗುವ ಯಶಸ್ಸು ಬಹಳ ಶ್ರೇಷ್ಠ ಮಟ್ಟದಾಗಿರುತ್ತದೆ ಮತ್ತು ಶತ್ರುಗಳು ಇರುವುದಿಲ್ಲ. ಮೋದಿ ಸರ್ಕಾರದ ದೊಡ್ಡ ನಿರ್ಧಾರಗಳಲ್ಲಿ ಒಂದಾದ ನೋಟು ನಿಷೇಧವನ್ನು (Demonetisation) ನವೆಂಬರ್ 8 ರಂದು ರಾತ್ರಿ 8 ಗಂಟೆಗೆ ಘೋಷಿಸಲಾಗಿತ್ತು. ಸೆಪ್ಟೆಂಬರ್ 26, 2015 ರಂದು ಡಿಜಿಟಲ್ ಇಂಡಿಯಾ ಡ್ರೈವ್ ಅನ್ನು ಸಹ ಪ್ರಾರಂಭಿಸಿದರು. 2 ಮತ್ತು 6 ಸಂಖ್ಯೆಗಳನ್ನು ಕೂಡಿಸಿದರೆ 8 ಆಗುತ್ತದೆ.